ಕಳಪೆ ಕಾಮಗಾರಿ ರಸ್ತೆ ಉದ್ಘಾಟನೆ ಸ್ಥಗಿತ

ಕುಶಾಲನಗರ ನಿಂಗೇಗೌಡ ಬಡಾವಣೆಯಲ್ಲಿ ಕಳಪೆ ಕಾಮಗಾರಿ ನಡೆದಿದೆ ಎನ್ನಲಾದ ರಸ್ತೆ
ಕುಶಾಲನಗರ ನಿಂಗೇಗೌಡ ಬಡಾವಣೆಯಲ್ಲಿ ಕಳಪೆ ಕಾಮಗಾರಿ ನಡೆದಿದೆ ಎನ್ನಲಾದ ರಸ್ತೆ
Published on

ಪ್ರಮುಖ ಮುಖ್ಯಾಂಶಗಳು

  • ರಸ್ತೆ ಉದ್ಘಾಟಿಸದೇ ತೆರಳಿದ ಡಾ. ಮಂತರ್ ಗೌಡ
  • ಮಡಿಕೇರಿ ಶಾಸಕ ಡಾ. ಮಂತರ್ ಗೌಡ
  • ಕಾಮಗಾರಿ ಬಿಲ್ ತಡೆಹಿಡಿಯಲು ಸೂಚನೆ
ಮಡಿಕೇರಿ
ಕಾಮಗಾರಿ ಕಳಪೆ ಆಗಿದೆ ಎನ್ನುವ ಕಾರಣದಿಂದ ನೂತನ ರಸ್ತೆಯನ್ನು ಉದ್ಘಾಟಿಸದೇ ಮರಳಿದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ನಿರ್ಧಾರ ಕೊಡಗಿನಲ್ಲಿ ಚರ್ಚೆ ಹುಟ್ಟುಹಾಕಿದೆ. ಕಳ್ಳಾಟ ಆಡುವ ಗುತ್ತಿಗೆದಾರರಿಗೆ ಈ ನಡೆ ಮೂಲಕ ಶಾಸಕರು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ತಮ್ಮ ವ್ಯಾಪ್ತಿಯಲ್ಲಿ ಕಳಪೆ ಕಾಮಗಾರಿ ನಡೆಯುತ್ತಿರುವುದು ಕಂಡು ಬಂದರೆ ತಡೆ ಹಿಡಿಯಿರಿ ಎಂದು ಕೂಡ ಸ್ಥಳೀಯರಿಗೆ ಡಾ. ಮಂತರ್ ಗೌಡ ಕರೆ ನೀಡಿದ್ದಾರೆ.
ಕುಶಾಲನಗರ ಪುರಸಭೆ ವ್ಯಾಪ್ತಿಯ ನಿಂಗೇಗೌಡ ಬಡಾವಣೆಯಲ್ಲಿ ಪುರಸಭೆಯ 15 ಹಣಕಾಸು ವಿಶೇಷ ಅನುದಾನದಲ್ಲಿ ನಿರ್ಮಿಸಲಾದ ನೂತನ ರಸ್ತೆಯ ಉದ್ಘಾಟನಾ ಸಮಾರಂಭ ಭಾನುವಾರ (ಫೆ.01) ನಿಗದಿ ಆಗಿತ್ತು. ವಿಧಾನಮಂಡಲ ಅಧಿವೇಶನದ ಬಿಡುವಿನ ಮಧ್ಯೆ ಸ್ವಕ್ಷೇತ್ರಕ್ಕೆ ಆಗಮಿಸಿದ್ದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಕ್ಷೇತ್ರದ ವಿವಿಧ ಭಾಗಗಳಲ್ಲಿ ನಿಗದಿಯಾಗಿದ್ದ ಕಾಮಗಾರಿಗಳ ಉದ್ಘಾಟನೆ, ಭೂಮಿ ಪೂಜೆ ನೆರವೇರಿಸಿ ಮಧ್ಯಾಹ್ನ ವೇಳೆಗೆ ಕುಶಾಲನಗರದ ನಿಂಗೇಗೌಡ ಬಡಾವಣೆಯ ನೂತನ ರಸ್ತೆ ಉದ್ಘಾಟನೆಗೆ ಆಗಮಿಸಿದ್ದರು. ಇನ್ನೇನು ರಸ್ತೆ ಉದ್ಘಾಟಿಸಬೇಕು ಎನ್ನುವಷ್ಟರಲ್ಲಿ ಇಲ್ಲಿ ನಡೆದಿರುವ ಕಳಪೆ ಕಾಮಗಾರಿಯನ್ನು ಸ್ಥಳೀಯರು ಶಾಸಕರ ಗಮನಕ್ಕೆ ತಂದಿದ್ದಾರೆ.
ಈ ಸಂದರ್ಭ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರು ಪರಿಶೀಲನೆ ನಡೆಸಿದಾಗ ಕಳಪೆ ಕಾಮಗಾರಿ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕೂಡಲೇ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಧಿಕಾರಿಗಳಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಧಿಕಾರಿಗಳು, ಗುತ್ತಿಗೆದಾರರು ರಸ್ತೆ ಕಾಮಗಾರಿ ಗುಣಮಟ್ಟದಿಂದ ನಡೆದಿದೆ ಎಂದು ಸಮರ್ಥಿಸಿಕೊಳ್ಳಲು ನೋಡಿದರೂ ಕಾಮಗಾರಿ ಕಳಪೆಯಾಗಿ ನಡೆದಿರುವುದು ಕಣ್ಣೆದುರಿಗೇ ಇದ್ದ ಕಾರಣ ಆ ರಸ್ತೆಯ ಕಾಮಗಾರಿ ಗುಣಮಟ್ಟದಿಂದ ನಡೆಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರಲ್ಲದೆ, ಅಲ್ಲಿಯ ತನಕ ಕಾಮಗಾರಿ ಬಿಲ್ ಮಂಜೂರು ಮಾಡದಂತೆಯೂ ಅಧಿಕಾರಿಗಳಿಗೆ ಸೂಚಿಸಿದರು. ರಸ್ತೆ ಕಾಮಗಾರಿ ಗುಣಮಟ್ಟದಿಂದ ನಡೆದಿರುವುದು ಖಾತರಿ ಆಗುವ ತನಕ ಉದ್ಘಾಟನೆ ನೆರವೇರಿಸುವುದಿಲ್ಲ ಎಂದು ಸ್ಥಳದಿಂದ ತೆರಳಿದರು.
ಆರಂಭದಿAದಲೂ ಎಲ್ಲಿಯೇ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರೂ ಗುಣಮಟ್ಟದಿಂದ ಕಾಮಗಾರಿ ನಡೆಸಿ ಎಂದು ಶಾಸಕರು ಗುತ್ತಿಗೆದಾರರಿಗೆ ಕಿವಿಮಾತು ಹೇಳುತ್ತಲೇ ಬಂದಿದ್ದಾರೆ. ಯಾವುದೇ ಕಾಮಗಾರಿಯಲ್ಲಿ ಗುಣಮಟ್ಟದಲ್ಲಿ ರಾಜಿ ಇಲ್ಲ ಎನ್ನವು ಸ್ಪಷ್ಟ ನಿಲುವನ್ನೂ ಪ್ರಕಟಿಸಿದ್ದರು. ಈ ಹಿಂದೆಯೂ ಕಳಪೆ ಕಾಮಗಾರಿ ಆರೋಪ ಕೇಳಿ ಬಂದಾಗಲೆಲ್ಲಾ ಗುತ್ತಿಗೆದಾರರು ಮತ್ತು ಅಧಿಕಾರಿಗಳ ಕಿವಿ ಹಿಂಡಿ ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಂಡಿದ್ದರು. ಇದೀಗ ಕುಶಾಲನಗರದ ನಿಂಗೇಗೌಡ ಬಡಾವಣೆ ಘಟನೆ ಮೂಲಕ ಕಳಪೆ ಕಾಮಗಾರಿ ನಡೆಸಿದರೆ ಏನಾಗುತ್ತದೆ ಎನ್ನುವ ಸಂದೇಶವನ್ನು ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ರವಾನಿಸುವ ಕೆಲಸ ಮಾಡಿದ್ದಾರೆ.
ತಮ್ಮ ವ್ಯಾಪ್ತಿಯಲ್ಲಿ ಕಾಮಗಾರಿಗಳು ನಡೆಯುವ ಸಂದರ್ಭ ಸ್ಥಳೀಯರ ಜವಾಬ್ದಾರಿಯನ್ನೂ ಈ ವೇಳೆ ಶಾಸಕರು ನೆನಪಿಸಿದ್ದಾರೆ. ರಸ್ತೆ ಅಥವಾ ಇತರ ಮೂಲಭೂತ ಸವಲತ್ತುಗಳ ಬಳಕೆದಾರರು ಸ್ಥಳೀಯರೇ ಆಗಿರುವುದರಿಂದ ಕಾಮಗಾರಿ ವೇಳೆ ಸ್ವಲ್ಪ ಮತುವರ್ಜಿ ವಹಿಸಿದರೆ ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಬಹುದು. ಒಂದು ವೇಳೆ ಕಳಪೆ ಕಾಮಗಾರಿ ನಡೆಯುತ್ತಿದೆ ಎಂದಾದರೆ ಅದನ್ನು ತಡೆಹಿಡಿಯಿರಿ ಎಂದು ಕೂಡ ಮನವಿ ಮಾಡಿದ್ದಾರೆ.
"

ನಾನು ತಾಂತ್ರಿಕ ಪರಿಣಿತ ಅಲ್ಲ. ಆದರೂ ರಸ್ತೆ ಕಾಮಗಾರಿ ಕಳಪೆಯಾಗಿ ನಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಸ್ಥಳೀಯರೂ ಈ ಸಂಬAಧ ದೂರು ನೀಡಿದ್ದಾರೆ. ಹಾಗಾಗಿ ಈ ಕಾಮಗಾರಿ ಒಪ್ಪಲು ಸಾಧ್ಯವಿಲ್ಲ. ಅಲ್ಲಿ ಗುಣಮಟ್ಟದ ಕೆಲಸ ಆಗಲೇಬೇಕು. ಈ ಸಂಬAಧ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆ ರಸ್ತೆಯ ಕಾಮಗಾರಿ ನಿಗದಿತ ಗುಣಮಟ್ಟದಲ್ಲಿ ನಡೆಯುವ ತನಕ ಅದರ ಉದ್ಘಾಟನೆ ಮಾಡುವುದಿಲ್ಲ. ಗುತ್ತಿಗೆದಾರರ ಬಿಲ್ ತಡೆಹಿಡಿಯುವಂತೆಯೂ ಸೂಚಿಸಲಾಗಿದೆ. ಇನ್ನು ಮುಂದೆ ಇಂಥ ಕಾಮಗಾರಿ ನನ್ನ ಕ್ಷೇತ್ರದಲ್ಲಿ ನಡೆಯಬಾರದು. ಗುತ್ತಿಗೆದಾರ ಯಾರೇ ಆಗಿದ್ದರೂ ಗುಣಮಟ್ಟದಲ್ಲಿ ರಾಜಿ ಇಲ್ಲ. ಕಳಪೆ ಕಾಮಗಾರಿ ಎಲ್ಲಿ ನಡೆಯುತ್ತಿದ್ದರೂ ಅದನ್ನು ಸ್ಥಳೀಯರು ತಡೆಹಿಡಿಯಬೇಕು.

"

ನಿಂಗೇಗೌಡ ಬಡಾವಣೆ ರಸ್ತೆ ಉದ್ಘಾಟನೆಗೆ ಆಗಮಿಸಿದ್ದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅಲ್ಲಿ ಕಳಪೆ ಕಾಮಗಾರಿ ಆಗಿರುವುದು ಮನಗಂಡು ಉದ್ಘಾಟನೆ ಮಾಡುವುದನ್ನು ನಿರಾಕರಿಸಿದ್ದಲ್ಲದೆ ಕಾಮಗಾರಿ ಬಿಲ್ ತಡೆಹಿಡಿಯಲಾಗುವುದು ಎಂದು ಘೋಷಿಸಿದ್ದಾರೆ. ಈ ಮೂಲಕ ತಮ್ಮ ಗೌರವ ಹಾಗೂ ಜನಪ್ರತಿನಿಧಿಯಾಗಿ ತಮ್ಮ ಜವಾಬ್ದಾರಿ ಕಾಪಾಡಿಕೊಂಡಿದ್ದಾರೆ. ಕೊಡಗಿನ ಯಾವುದೇ ಮೂಲೆಯಲ್ಲಿ ನಡೆಯುವ ಕಳಪೆ ಕಾಮಗಾರಿಗಳನ್ನು ಖುದ್ದಾಗಿ ವೀಕ್ಷಿಸಿ, ಸರ್ಕಾರದ ಗಮನಕ್ಕೆ ತರಲು ನಾವು ನಿರಂತರವಾಗಿ ಪ್ರಯತ್ನಿಸುತ್ತೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net