ಗೋಣಿಕೊಪ್ಪಲು ಕಾವೇರಿ ಕಾಲೇಜು ಎನ್‌ಸಿಸಿ ವತಿಯಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನ್ಮದಿನಾಚರಣೆ ಆಚರಿಸಲಾಯಿತು. ಡಾ.ಕಾಳಿಮಾಡ ಶಿವಪ್ಪ, ಪ್ರಾಂಶುಪಾಲ ಎಂ.ಬಿ ಕಾವೇರಿಯಪ್ಪ, ಬೊಟ್ಟಂಗಡ ಜಪ್ಪು, ಟಾಟಾ ಕಾಫಿ ಮ್ಯಾನೇಜರ್ ಚೆಪ್ಪುಡಿರ ಅಯ್ಯಪ್ಪ, ಎನ್‌ಸಿಸಿ ಅಧಿಕಾರಿಗಳಾದ ಡಾ.ಲೆಫ್ಟಿನೆಂಟ್ ಎಂ.ಆರ್.ಆಕ್ರಂ, ಲೆಫ್ಟಿನೆಂಟ್ ಐ.ಡಿ.ಲೇಪಾಕ್ಷಿ, ಕಚೇರಿ ಅಧೀಕ್ಷಕಿ ಟಿ.ಕೆ.ಲತಾ, ಕ್ಯಾಂಪಸ್ ಮ್ಯಾನೇಜರ್ ಮಿನ್ನಂಡ ಜೋಯಪ್ಪ, ಸಿಬ್ಬಂದಿ ಹಾಗೂ ಎನ್‌ಸಿಸಿ ಕೆಡೆಟ್‌ಗಳು ಇದ್ದರು.
Published on:
Copied
Follow Us
ಪೊನ್ನಂಪೇಟೆ: ಗೋಣಿಕೊಪ್ಪಲು ಕಾವೇರಿ ಕಾಲೇಜು ಆವರಣದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಜೋಡಿ ಪ್ರತಿಮೆಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೋಣಿಕೊಪ್ಪಲು ಕಾವೇರಿ ಕಾಲೇಜು ಎನ್‌ಸಿಸಿ ಘಟಕದ ವತಿಯಿಂದ ಬುಧವಾರ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಜನ್ಮದಿನ ಆಚರಿಸಲಾಯಿತು.
ಹಿರಿಯ ವೈದ್ಯರಾದ ಡಾ.ಕಾಳಿಮಾಡ ಶಿವಪ್ಪ ಮಾತನಾಡಿ, ಕಾವೇರಿ ಮಣ್ಣಿನಲ್ಲಿ ಜನಿಸಿದ ಕಾರ್ಯಪ್ಪ ಅವರು ಭಾರತೀಯ ಸೇನೆಯ ಪ್ರಥಮ ಮಹಾದಂಡನಾಯಕರಾಗಿ ಕೊಡಗಿನ ಕೀರ್ತಿಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದರು. ಭಾರತೀಯ ಸೇನೆಯಲ್ಲಿ ಶಿಸ್ತನ್ನು ಮೂಡಿಸಿದ ಮಹಾನುಭಾವ ಕಾರ್ಯಪ್ಪ. ಮಾತೃಭಕ್ತಿ, ಪಿತೃ ಭಕ್ತಿ, ಗುರುಭಕ್ತಿ, ದೇಶಭಕ್ತಿ, ದೈವಭಕ್ತಿಯ ಜತೆಗೆ ಶಿಸ್ತು, ಸಮಯಪಾಲನೆಗೆ ಅತ್ಯಂತ ಮಹತ್ವ ನೀಡುತ್ತಿದ್ದರು. ಇಂದಿನ ಯುವ ಪೀಳಿಗೆ ಕಾರ್ಯಪ್ಪ ಅವರ ಆದರ್ಶ ಪಾಲನೆ ಮಾಡುವ ಮೂಲಕ ದೇಶಪ್ರೇಮ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾವೇರಿ ಕಾಲೇಜು ಪ್ರಾಂಶುಪಾಲ ಡಾ.ಎಂ.ಬಿ.ಕಾವೇರಿಯಪ್ಪ ಮಾತನಾಡಿ, ಅಪ್ರತಿಮ ದೇಶಪ್ರೇಮಿಯಾಗಿದ್ದ ಕಾರ್ಯಪ್ಪ ಅವರ ಬದುಕಿನ ರೀತಿ ಇಂದಿನ ಯುವಜನತೆಗೆ ದಾರಿದೀಪ. ತಮ್ಮ ಕುಟುಂಬಕ್ಕಿಂತಲೂ ಹೆಚ್ಚಾಗಿ ದೇಶ, ದೇಶದ ಸೈನಿಕರನ್ನು ಪ್ರೀತಿಸುತಿದ್ದ ಅವರ ನಡೆ ನುಡಿ, ಕಾರ್ಯಕ್ಷಮತೆ ಹೃದಯ ವೈಶಾಲ್ಯ, ಅವರು ಹಿರಿಯರಿಗೆ ಕೊಡುತ್ತಿದ್ದ ಗೌರವ ಎಲ್ಲವೂ ಅಜರಾಮರ. ಇಂದಿನ ಯುವಜನತೆ ಹೆಚ್ಚು ಹೆಚ್ಚು ಸೈನ್ಯಕ್ಕೆ ಸೇರುವ ಮೂಲಕ ದೇಶ ಸೇವೆಯಲ್ಲಿ ತೊಡಗಿಸಿಕೊಂಡು ಕಾರ್ಯಪ್ಪ ಅವರ ಹಾದಿಯಲ್ಲಿ ನಡೆಯುವಂತಾಗಲಿ ಎಂದು ಆಶಿಸಿದರು.
ಕಾವೇರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಸ್.ಎಸ್.ಮಾದಯ್ಯ ಮಾತನಾಡಿ, ವಿದ್ಯಾರ್ಥಿಗಳು ಕಾರ್ಯಪ್ಪ ಅವರ ಜೀವನ ಚರಿತ್ರೆ ಓದುವ ಮೂಲಕ, ಶಿಸ್ತುಬದ್ದ ಜೀವನ ರೂಪಿಸಿಕೊಂಡು, ಉತ್ತಮ ನಾಗರಿಕರಾಗಿ ಬದುಕು ಕಟ್ಟಿಕೊಳ್ಳಬೇಕು ಎಂದರು.
ಈ ಸಂದರ್ಭ ನಿವೃತ್ತ ಸೈನಿಕ ಬೊಟ್ಟಂಗಡ ಜಪ್ಪು, ಟಾಟಾ ಕಾಫಿ ಮ್ಯಾನೇಜರ್ ಚೆಪ್ಪುಡಿರ ಅಯ್ಯಪ್ಪ, ಎನ್‌ಸಿಸಿ ಅಧಿಕಾರಿಗಳಾದ ಡಾ.ಲೆಫ್ಟಿನೆಂಟ್ ಎಂ.ಆರ್.ಆಕ್ರಂ, ಲೆಫ್ಟಿನೆಂಟ್ ಐ.ಡಿ.ಲೇಪಾಕ್ಷಿ, ಕಚೇರಿ ಅಧೀಕ್ಷಕಿ ಟಿ.ಕೆ.ಲತಾ, ಕ್ಯಾಂಪಸ್ ಮ್ಯಾನೇಜರ್ ಮಿನ್ನಂಡ ಜೋಯಪ್ಪ, ಸಿಬ್ಬಂದಿ ಹಾಗೂ ಎನ್‌ಸಿಸಿ ಕೆಡೆಟ್‌ಗಳು ಇದ್ದರು.