ದಕ್ಷಿಣ ಕೊಡಗಿನಲ್ಲಿ ಮುಂದುವರಿದ ಹುಲಿ ದಾಳಿ

ಪೊನ್ನಂಪೇಟೆ ಸಮೀಪದ ನಲ್ಲೂರು ಗ್ರಾಮದಲ್ಲಿ ಹಸುವಿನ ಮೇಲೆ ಹುಲಿ ದಾಳಿ ಮಾಡಿದ ಸ್ಥಳಕ್ಕೆ ಪರಿಶೀಲನೆ ಮಾಡಿದ ರೈತ ಸಂಘ ಅಧ್ಯಕ್ಷ ಮಧು ಸೋಮಯ್ಯ. ಸುಭಾಷ್, ಸುಜಯ್, ಭವಿಕುಮಾರ್, ಪವನ್, ಗಿರೀಶ್ ಇತರರಿದ್ದರು.
ಪೊನ್ನಂಪೇಟೆ ಸಮೀಪದ ನಲ್ಲೂರು ಗ್ರಾಮದಲ್ಲಿ ಹಸುವಿನ ಮೇಲೆ ಹುಲಿ ದಾಳಿ ಮಾಡಿದ ಸ್ಥಳಕ್ಕೆ ಪರಿಶೀಲನೆ ಮಾಡಿದ ರೈತ ಸಂಘ ಅಧ್ಯಕ್ಷ ಮಧು ಸೋಮಯ್ಯ. ಸುಭಾಷ್, ಸುಜಯ್, ಭವಿಕುಮಾರ್, ಪವನ್, ಗಿರೀಶ್ ಇತರರಿದ್ದರು.
Published on
ಪೊನ್ನಂಪೇಟೆ: ದಕ್ಷಿಣ ಕೊಡಗಿನಲ್ಲಿ ಜಾನುವಾರುಗಳ ಮೇಲೆ ಹುಲಿ ದಾಳಿ ಮುಂದುವರಿದಿದ್ದು, ಪೊನ್ನಪ್ಪಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ಲೂರು ಗ್ರಾಮದ ಕೊಕ್ಕಲೆಮಾಡ ದಾದಾ ಸೋಮಯ್ಯ ಎಂಬುವರಿಗೆ ಸೇರಿದ ಗಬ್ಬದ ಹಸುವಿನ ಮೇಲೆ ಶನಿವಾರ ಹುಲಿ ನಡೆಸಿ ಕೊಂದು ಹಾಕಿದೆ.
ಎಂದಿನಂತೆ ಹಸುವಿನ ಮಾಲೀಕ ದಾದಾ ಸೋಮಯ್ಯ ರಾಸುಗಳನ್ನು ಮೇಯಲು ಗದ್ದೆಗೆ ಹೊಡೆದುಕೊಂಡು ಹೋಗುತ್ತಿದ್ದ ಸಂದರ್ಭ ಏಕಾಏಕಿ ಹುಲಿ ದಾಳಿ ಮಾಡಲು ಮುಂದಾಗಿದೆ. ಈ ಸಂದರ್ಭ ದಾದಾ ಸೋಮಯ್ಯ ಅವರು ಜೋರಾಗಿ ಕಿರುಚಿಕೊಂಡು, ಕೈಯಲ್ಲಿದ್ದ ದೊಣ್ಣೆಯನ್ನು ಬೀಸಿ ತಪ್ಪಿಸಿಕೊಂಡಿದ್ದಾರೆ. ಸೋಮಯ್ಯ ಅವರ ಕಿರುಚಾಟದ ಶಬ್ದಕ್ಕೆ ಹೆದರಿದ ಹುಲಿ ಪಕ್ಕದಲ್ಲೇ ಇದ್ದ ಹಸುವಿನ ಮೇಲೆ ದಾಳಿ ಮಾಡಿದೆ.
ಘಟನೆ ಬಗ್ಗೆ ಮಾಹಿತಿ ತಿಳಿದ ಪೊನ್ನಂಪೇಟೆ ಅರಣ್ಯ ವಲಯ ಆರ್‌ಎಫ್‌ಒ ಗಂಗಾಧರ್, ಡಿಆರ್‌ಎಫ್‌ಒ ಕೆ.ಜಿ.ದಿವಾಕರ್ ಹಾಗೂ ಆರ್‌ಆರ್‌ಟಿ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಹುಲಿ ದಾಳಿಯಿಂದ ಹಸು ಮೃತಪಟ್ಟಿರುವುದು ಕಂಡುಬಂದಿದೆ.
ಬೆಳಗ್ಗೆ 11 ಗಂಟೆಯಿಂದಲೇ ಆರ್‌ಆರ್‌ಟಿ ಸಿಬ್ಬಂದಿ ಹುಲಿಯ ಹೆಜ್ಜೆ ಗುರುತು ಪತ್ತೆ ಹಚ್ಚಲು ಕೂಂಬಿಂಗ್ ಕಾರ್ಯಾಚರಣೆ ನಡೆಸಿದಾಗ ಹುಲಿಯ ಹೆಜ್ಜೆ ಗುರುತು ಕಂಡು ಬಂದಿದೆ.
ಹುಲಿಯ ಹೆಜ್ಜೆಯ ಗುರುತನ್ನು ಆಧರಿಸಿ ಹುಲಿಯ ಚಲನವಲನ ವೀಕ್ಷಿಸಲು ಸಿಸಿ ಕ್ಯಾಮರಾ ಹಾಗೂ ಹುಲಿ ಸೆರೆಗೆ ಬೋನು ಅಳವಡಿಸಿ ಹಸುವಿನ ಕಳೇಬರ ಇರಿಸಿ ಹುಲಿಯ ಸೆರೆಗೆ ಮುಂದಾಗಿದ್ದಾರೆ.
ವಿಷಯ ತಿಳಿದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ಹಾಗೂ ಪದಾಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕೂಡಲೇ ಹುಲಿಯನ್ನು ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ತಿತಿಮತಿ ಎಸಿಎಫ್ ಗೋಪಾಲ್ ಮಾತನಾಡಿ, ಈ ಹಿಂದೆ 2 ಹಸುಗಳನ್ನು ಹುಲಿ ಕೊಂದು ಹಾಕಿದ್ದ ಸಂದರ್ಭದಲ್ಲಿ ಕ್ಯಾಮರಾ ಇಟ್ಟು ಟ್ರಾಪಿಂಗ್ ಮಾಡಿದ್ದೆವು. ಇದರ ಬಗ್ಗೆ ಟೈಗರ್ ಸೆಲ್ ನವರು ಪ್ರತಿಕ್ರಿಯಿಸಿ 5ರಿಂದ 6 ವರ್ಷ ಪ್ರಾಯವಿರುವ ಗಂಡು ಹುಲಿಯು ನಾಗರಹೊಳೆಯ ಹುಲಿಯೆಂದು ತಿಳಿದು ಬಂದಿದೆ. ಹುಲಿ ಕಾರ್ಯಾಚರಣೆಗೆ ಸಿಬ್ಬಂದಿ ನೇಮಕ ಮಾಡಿದ್ದು ಬೋನು ಅಳವಡಿಸಲಾಗಿದೆ ಎಂದರು.
ಈ ಸಂದರ್ಭ ರೈತ ಸಂಘದ ಪ್ರಧಾನ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿ ಚಟ್ರುಮಾಡ ಸುಜಯ್ ಬೋಪಯ್ಯ, ವೀರಾಜಪೇಟೆ ತಾಲೂಕು ಅಧ್ಯಕ್ಷ ಬಾಚಮಾಡ ಭವಿ ಕುಮಾರ್, ಕುರ್ಚಿ ಗ್ರಾಮದ ಸಂಚಾಲಕ ಅಜ್ಜಮಾಡ ಪೂಣಚ್ಚ, ಪುಳ್ಳಂಗಡ ಪವನ್, ಪುಚ್ಚಿಮಾಡ ಸಂತೋಷ್, ತೀತರಮಾಡ ರಾಜ ಕರುಂಬಯ್ಯ, ಮಲಚೀರ ಗಿರೀಶ್, ಗ್ರಾಮಸ್ಥರಾದ ಬಲ್ಲಿಮಾಡ ಮಹೇಶ್, ಪೆಮ್ಮಣಮಾಡ ಪೊನ್ನಣ್ಣ, ಚೊಟ್ಟೆಯಂಡಮಾಡ ಲಿಖಿತ್, ಗಸ್ತು ಅರಣ್ಯಪಾಲಕ ಅಣ್ಣಯ್ಯ ಹಾಗೂ ಆರ್‌ಆರ್‌ಟಿ ಸಿಬ್ಬಂದಿ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net