ಸಂಭ್ರಮದಿಂದ ಜರುಗಿದ ಕೈಮುಡಿಕೆ ಪುತ್ತರಿ ಕೋಲ್ ಮಂದ್

ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಪುತ್ತರಿ ಕೋಲ್ ಮಂದ್ ನಮ್ಮೆಯಲ್ಲಿ ಬಾಚಿರಣಿಯಂಡ ಅಪ್ಪಣ್ಣ ಮತ್ತು ಬಾಚಿರಣಿಯಂಡ ರಾಣು ಅಪ್ಪಣ್ಣಅವರಿಗೆ ಗ್ರಾಮಸ್ಥರಿಂದ ಸನ್ಮಾನ.
ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಪುತ್ತರಿ ಕೋಲ್ ಮಂದ್ ನಮ್ಮೆಯಲ್ಲಿ ಬಾಚಿರಣಿಯಂಡ ಅಪ್ಪಣ್ಣ ಮತ್ತು ಬಾಚಿರಣಿಯಂಡ ರಾಣು ಅಪ್ಪಣ್ಣಅವರಿಗೆ ಗ್ರಾಮಸ್ಥರಿಂದ ಸನ್ಮಾನ.
Published on
ಪೊನ್ನಂಪೇಟೆ: ಸಮೀಪದ ಬೊಟ್ಟಿಯತ್ ನಾಡ್, ಕುತ್ತ್‌ನಾಡ್ ಹಾಗೂ ಬೇರಳಿನಾಡ್ ಈ ಮೂರು ನಾಡುಗಳು ಒಂದೆಡೆ ಸೇರಿ ನಡೆಸುವ ಇತಿಹಾಸ ಪ್ರಸಿದ್ಧ ‘ಕೈಮುಡಿಕೆ ಪುತ್ತರಿ ಕೋಲ್ ಮಂದ್’ ಕುಂದಾ ಸಮೀಪದ ಕೈಮುಡಿಕೆ ಕೋಲ್ ಮಂದ್‌ನಲ್ಲಿ ಭಾನುವಾರ ತಕ್ಕ ಮುಖ್ಯಸ್ಥರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ ಅವರ ಮುಂದಾಳತ್ವದಲ್ಲಿ ಸಂಭ್ರಮದಿಂದ ನಡೆಯಿತು.
ಮೂರು ನಾಡಿನ ತಕ್ಕ್ ಮುಖ್ಯಸ್ಥರು ಮೂರು ಕಡೆಯಿಂದ ಪಟ್ಟು ಹಿಡಿದು ಓಡಿ ಬಂದು ಮಂದ್ ಮಧ್ಯಭಾಗದಲ್ಲಿರುವ ಆಲದ ಮರಕ್ಕೆ ಕೋಲು ಬಾರಿಸಿ ನಂತರ ಮೂರು ನಾಡಿನವರು ಒಟ್ಟಾಗಿ ಸೇರಿ ಪುತ್ತರಿ ಕೋಲು ಹೊಡೆಯುವ ಮೂಲಕ ಮಂದ್‌ಗೆ ಚಾಲನೆ ನೀಡಲಾಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಸಾಹಿತಿ ಬಾಚಿರಣಿಯಂಡ ಅಪ್ಪಣ್ಣ ಹಾಗೂ ಅಖಿಲ ಕೊಡವ ಸಮಾಜ ಪೊಮ್ಮಕಡ ಪರಿಷತ್ ಅಧ್ಯಕ್ಷೆ ಬಾಚಿರಣಿಯಂಡ ರಾಣು ಅಪ್ಪಣ್ಣ ಅವರನ್ನು ಬೊಟ್ಟಿಯತ್‌ನಾಡ್, ಕುತ್ತ್‌ನಾಡ್ ಹಾಗೂ ಬೇರಳಿನಾಡ್‌ಗಳ ತಕ್ಕ ಮುಖ್ಯಸ್ಥರು ಮೂರು ನಾಡಿನ ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾಚಿರಣಿಯಂಡ ಅಪ್ಪಣ್ಣ, ಈ ಸಡಗರ ಸಂಭ್ರಮ ಹಬ್ಬದ ವಾತಾವರಣ ನೋಡಿದರೇ ತಮ್ಮ ಬಾಲ್ಯದ ದಿನಗಳು ನೆನಪಾಗುವುದಲ್ಲದೆ ಹಲವಾರು ವರ್ಷಗಳ ಕಾಲ ಮಂದ್ ಮಾನಿಯಲ್ಲಿ ಆಡಿದ ಸಂಭ್ರಮ ನೆನಪಾಗುತ್ತದೆ. ಹಿಂದಿನ ಕಾಲದಲ್ಲಿ ಹಲವಾರು ಮಂದ್ ಇದ್ದರೂ ಬೊಟ್ಟಿಯತ್ ನಾಡಿನ ಕೈ ಮುಡಿಕೆ ಕೋಲ್ ಮಂದ್ ಬಹಳ ಪ್ರಸಿದ್ಧಿ ಪಡೆದಿತ್ತು. 54 ವರ್ಷಗಳ ಹಿಂದೆ ಈ ಮಂದ್‌ಗೆ ಭೇಟಿ ನೀಡಿದ್ದೆ. ಅಲ್ಲದೆ ಕಳೆದ 28 ವರ್ಷಗಳ ಹಿಂದೆ ಈ ಜಾಗಕ್ಕೆ ಭೇಟಿ ನೀಡಿ ಇದರ ಇತಿಹಾಸದ ಬಗ್ಗೆ ಅಧ್ಯಯನ ನಡೆಸಿದ್ದೆವು. ಇಂದಿನ ಕೊಡವ ಸಂಸ್ಕೃತಿ ಆಚಾರ ವಿಚಾರವನ್ನು ಬೆಳೆಸುವಲ್ಲಿ ಈ ಮಂದ್ ಶ್ರಮಿಸುತ್ತಿದೆ. ಕೊಡಗಿನಲ್ಲಿರುವ ಹಲವಾರು ಮಂದ್ ಅಭಿವೃದ್ಧಿ ಕಾಣದೆ ಮುಚ್ಚಿಹೋಗಿವೆ. ಆದರೆ ಹಿಂದಿನ ಕಾಲದಂತೆಯೇ ಸಂಭ್ರಮದಿಂದ ಸಡಗರದಿಂದ ಕಾರ್ಯನಿರ್ವಹಿಸುತ್ತಿರುವ ಕೈಮುಡಿಕೆ ಮಂದ್ ಗಮನಿಸಿದರೆ ಕೊಡವರ ಸಂಸ್ಕೃತಿ, ಆಚಾರ ವಿಚಾರ ಉತ್ತುಂಗಕ್ಕೆ ತಲುಪುವುದರಲ್ಲಿ ಸಂಶಯವಿಲ್ಲ ಎಂದರು.
ರಾಣು ಅಪ್ಪಣ್ಣ ಮಾತನಾಡಿ, ಕೊಡಗಿನ ಆಚಾರ, ವಿಚಾರ, ಪದ್ಧತಿ, ಪರಂಪರೆ ಉಳಿಸಿ ಬೆಳೆಸಿ ಕಿರಿಯರಿಗೆ ತಿಳಿವಳಿಕೆ ನೀಡಿರುವುದು ನಮ್ಮ ಹಿರಿಯರು. ಹಲವಾರು ಮಂದ್ ಮಾನಿಗಳು ಮುಚ್ಚಿ ಹೋಗಿರುವ ಸಂದರ್ಭದಲ್ಲಿಯೂ ಈ ಕೈಮುಡಿಕೆ ಮಂದ್ ಕಂಬದಂತೆ ನಿಂತು ಕೊಡವರ ಆಚಾರ ವಿಚಾರವನ್ನು ಬೆಳೆಸುತ್ತಾ ಬಂದಿದೆ. ಇಷ್ಟು ವರ್ಷದವರೆಗೂ ಆಚಾರ ವಿಚಾರವನ್ನು ಪ್ರೋತ್ಸಾಹಿಸಿ ಬೆಳೆಸಿ ಕೈಮುಡಿಕೆ ಮಂದ್ ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಚಾರ. ಈ ನಾಡಿನ ಜನರ ಸೇವೆಯನ್ನು ಮೆಚ್ಚುವಂಥದ್ದು ಎಂದರು.
ಬೊಟ್ಟಿಯತ್ ನಾಡ್ ಹಾಗೂ ಮೂಂದ್ ನಾಡ್ ತಕ್ಕ ಅಡ್ಡಂಡ ಪ್ರಕಾಶ್ ಕುಶಾಲಪ್ಪ ಮಾತನಾಡಿ, ಹಿಂದಿನ ಕಾಲದಲ್ಲಿ ಮಂದ್ ಹಾಗೂ ಮುಂದ್ ಎಂಬ ಎರಡು ಪ್ರಾಮುಖ್ಯ ಸ್ಥಳಗಳಿದ್ದವು. ಮಂದ್‌ನಲ್ಲಿ ಊರು ಕೇರಿಯ ವ್ಯಾಜ್ಯಗಳು ಬಗೆಹರಿಯದಿದ್ದರೆ ಮುಂದ್‌ನಲ್ಲಿ ಕುಟುಂಬದ ವ್ಯಾಜ್ಯಗಳು ಬಗೆಹರಿಯುತ್ತಿದ್ದವು. ಈ ಮಂದ್ ಮೂರು ನಾಡಿಗೆ ಸೇರಿರುವ ಜಾಗವಾಗಿದ್ದು ಇಲ್ಲಿ ವೀರ ಸೇನಾನಿಗಳಾದ ಕೋಡಂದೇರ ಕಾರ್ಯಪ್ಪ ಮತ್ತು ತಿಮ್ಮಯ್ಯ ಅವರು ಕೋಲಾಟ ಆಡಿದ್ದು ನಾಡಿನ ಜನತೆಗೆ ಹೆಮ್ಮೆಯ ವಿಚಾರವಾಗಿದೆ ಎಂದರು.
ಪೊನ್ನಂಪೇಟೆ ಕೊಡವ ಪೊಮ್ಮಕಡ ಕೂಟ, ಕಾವೇರಿ ಕಾಲೇಜ್ ಪೊಮ್ಮಕ್ಕಡ ಕೂಟ ಹಾಗೂ ಕುತ್ತ್ ನಾಡ್ ಪೊಮ್ಮಕ್ಕ ಕೂಟ, ಲಯನ್ಸ್ ಶಾಲಾ ಮಕ್ಕಳಿಂದ ಹಾಗೂ ಪೊಳೆಮಾಡ್ ಈಶ್ವರ ತಂಡದವರಿಂದ ಉಮ್ಮತಾಟ್, ಬೇರಳಿನಾಡ್ ಹಾಗೂ ಅಪ್ಪಚ್ಚ ಕವಿ ಮಕ್ಕಳಿನಿಂದ ಬಾಳೋ ಪಾಟ್, ಮೂಂದ್ ನಾಡ್ ಹಾಗೂ ಬೇಗೂರು ಪೊಳೆಮಾಡ್ ಈಶ್ವರ ತಂಡದಿಂದ ಕೋಲಾಟ, ಬೇರಳಿನಾಡ್‌ನ ಬಾಬಾ ಹಾಗೂ ಮೂಕಚಂಡ ಈರಪ್ಪ ಅವರಿಂದ ಪರೆ ಕಳಿ, ಕಾವೇರಿ ಕಾಲೇಜ್ ಮಕ್ಕಳ ತಂಡದಿಂದ ಕತ್ತಿಯಾಟ್ ನಡೆಯಿತು.
ಈ ಸಂದರ್ಭ ಬೇರಳಿನಾಡ್ ತಕ್ಕ ಮಳುವಂಡ ಭುವೇಶ್ ದೇವಯ್ಯ, ಹಳ್ಳಿಗಟ್ಟ್ ಊರು ತಕ್ಕ ಚಮ್ಮಟೀರ ಪ್ರವೀಣ್ ಉತ್ತಪ್ಪ, ಅರವತೋಕ್ಲು ಊರು ತಕ್ಕ ಕಡ್ಯಾಮಾಡ ಮೊತಿ ಅಪ್ಪಚ್ಚು, ಕುಂದ ಊರು ತಕ್ಕ ಕೋಡಂದೆರ ಸುಬ್ಬಯ್ಯ, ಇಚೂರು ಊರು ತಕ್ಕ ತೀತಮಾಡ ಉಮೇಶ್, ಮುಗುಟಗೇರಿ ಊರು ತಕ್ಕ ಮನೆಯಪಂಡ ಬೆಳ್ಯಪ್ಪ, ಬೇರಳಿನಾಡಿನ ತಕ್ಕ ಅಪ್ಪಂಡೆರಂಡ ಅಶೋಕ್, ಮೂಂದ್ ನಾಡ್ ರ ಗ್ರಾಮಸ್ಥರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net