ಪೊನ್ನಂಪೇಟೆ ಸಮೀಪದ ಹಾತೂರಿನಲ್ಲಿ ಡಾಂಬರ್ ಹಾಗೂ ಸಿಮೆಂಟ್ ಮಿಕ್ಸಿಂಗ್ ಘಟಕದ ವಿರುದ್ಧ ಪ್ರತಿಭಟನೆ ನಡೆಸಿದ ಸಂದರ್ಭ ಸಬ್ ಇನ್ಸ್ಪೆಕ್ಟರ್ ಪ್ರದೀಪ್, ಗುಮ್ಮಟ್ಟೀರ ಕಿಲನ್ ಗಣಪತಿ, ದರ್ಶನ್, ವಾಸು,ಶ್ರೀಮಂತ್,ವಿಶು, ಸುಜಿತ್ ಹಾಗೂ ಇತರರಿದ್ದರು.
ಹಾತೂರು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಗುಮ್ಮಟ್ಟಿರ ದರ್ಶನ್ ನಂಜಪ್ಪ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುಮ್ಮಟ್ಟಿರ ಕಿಲ್ಲನ್ ಗಣಪತಿ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಡಾಂಬರು ಸಾಧಿಸುತ್ತಿದ್ದ ಲಾರಿಗಳನ್ನು ತಡೆದು ಅಡಗಟ್ಟಿ ಕುಂದ ಬಿ ಶೆಟ್ಟಿಗೇರಿ ಮುಖ್ಯ ರಸ್ತೆಯಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಶನಿವಾರ ಬೆಳಿಗ್ಗೆ 8.30 ಗಂಟೆಯಿಂದ ಮಧ್ಯಾಹ್ನ 12:00ವರೆಗೆ ಪ್ರತಿಭಟನೆ ನಡೆಸಿದರು. ರಸ್ತೆ ಸಂಚಾರ ತಡೆಯಿಂದ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗಲಿದೆ ಎಂದು ಸ್ಥಳಕ್ಕೆ ಆಗಮಿಸಿದ ಗೋಣಿಕೊಪ್ಪ ಠಾಣಾ ಸಬ್ ಇನ್ಸ್ಪೆಕ್ಟರ್ ಪ್ರದೀಪ್ ಅವರು ಪ್ರತಿಭಟನಾಕಾರರ ಮನವೊಲಿಸಿದ ನಂತರ ಪ್ರತಿಭಟನೆಯನ್ನು ಕೈ ಬಿಡಲಾಯಿತು.
ಈ ಸಂದರ್ಭ ಸ್ಥಳೀಯರಾದ ತೀತಮಾಡ ಸುಜಿತ್ ಮಾತನಾಡಿ ಮೂರು ಡಾಂಬರ್ ಹಾಗೂ ಒಂದು ಸಿಮೆಂಟ್ ಮಿಕ್ಸಿಂಗ್ ಘಟಕದಿಂದ ಗ್ರಾಮಸ್ಥರ ಆರೋಗ್ಯ ಹಾಳಾಗುತ್ತಿದೆ ಹಾಗೂ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದರು. ಗ್ರಾಮ ಸಭೆಯಲ್ಲಿ ಈ ಹಿಂದೆ ಗ್ರಾಮಸ್ಥರ ವಿರೋಧದ ಹಿನ್ನೆಲೆಯಲ್ಲಿ ಘಟಕಗಳ ಪರವಾನಗಿ ನವೀಕರಣ ಮಾಡಿದಂತೆ ನಿರ್ಣಯ ತೆಗೆದುಕೊಳ್ಳಲಾಗಿದ್ದರೂ ಕೂಡಾ ಘಟಕಗಳ ಪರವಾನಗಿ ನವೀಕರಣ ಮಾಡಲು ಹಾತೂರು ಗ್ರಾಮ ಪಂಚಾಯಿತಿ ಎನ್ ಓ ಸಿ ನೀಡಿಲ್ಲ. ಹೀಗಿದ್ದರೂ ಡಾಂಬರ್ ಹಾಗೂ ಸಿಮೆಂಟ್ ಮಿಕ್ಸಿಂಗ್ ಘಟಕಗಳನ್ನು ನಡೆಸಲಾಗುತ್ತಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಜನವರಿ 11ರಂದು ಗೋಣಿಕೊಪ್ಪ ಠಾಣೆಗೆ ಹಾಗೂ ವಿರಾಜಪೇಟೆ ತಹಸೀಲ್ದಾರ್ ಕಚೇರಿಗೆ ದೂರು ಸಲ್ಲಿಸಲು ನಿರ್ಧರಿಸಿದ್ದಾರೆ. ತಾಲೂಕು ಆಡಳಿತ ಮಿಕ್ಸಿಂಗ್ ಘಟಕ ಮುಚ್ಚಲು ಕ್ರಮ ಕೈಗೊಳ್ಳಲಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ. ಡಾಂಬರ್ ಮಿಕ್ಸಿಂಗ್ ಘಟಕಕ್ಕೆ ಅನುಮತಿ ಪಡೆದುಕೊಂಡಿದ್ದೇನೆ, ಪರಿಸರ ಮಾಲಿನ್ಯ ಆಗುತ್ತಿಲ್ಲ, ಘಟಕವನ್ನು ಮುಂದುವರಿಸುತ್ತೇನೆ ಎಂದು ಸ್ಥಳಕ್ಕೆ ಆಗಮಿಸಿದ ಗುತ್ತಿಗೆದಾರ ಪ್ರತಿಭಟನಗಾರರಿಗೆ ಹೇಳಿದ್ದಾರೆ ಎನ್ನಲಾಗಿದೆ. ನಿಮಗೆ ಘಟಕ ಮುಂದುವರಿಸುವುದು ಮುಖ್ಯ ಆದರೆ ಗ್ರಾಮಸ್ಥರ ಆರೋಗ್ಯ ಮುಖ್ಯ ಆಗುವುದಿಲ್ಲವೇ ಎಂದು ಪ್ರತಿಭಟನೆಯಲ್ಲಿದ್ದ ಮಹಿಳೆಯರು ಪ್ರಶ್ನಿಸಿದ್ದರು ಎನ್ನಲಾಗಿದೆ.
ಈ ಸಂದರ್ಭ ಪ್ರಮುಖರಾದ ತೀತಮಾಡ ವಾಸು ಗಣಪತಿ, ತೀತಮಾಡ ಶಿವಮಣಿ ಕರುಂ ಬಯ್ಯ, ಚೇಮಿರ ಮೇದಪ್ಪ, ತೀತಮಾಡ ಸುಜಿತ್, ಅಯ್ಯಪ್ಪ, ಶ್ರೀಮಂತ್ ಮುತ್ತಣ್ಣ, ಪೂವಣ್ಣ, ಬೋಪಯ್ಯ ,ವಿಶು, ಪ್ರಕಾಶ್ ಹಾಗೂ ಇತರರಿದ್ದರು.