ಬ್ರಿಟಿಷರ ನೆಚ್ಚಿನ ತಾಣ ಪಾಲಿಬೆಟ್ಟ

ಪಾಲಿಬೆಟ್ಟ -ಕೊಡಗು ಜಿಲ್ಲೆಯ ಪ್ರಮುಖ ಪಟ್ಟಣ
ಪಾಲಿಬೆಟ್ಟ -ಕೊಡಗು ಜಿಲ್ಲೆಯ ಪ್ರಮುಖ ಪಟ್ಟಣ
Published on
ಸಿದ್ದಾಪುರ : ಪಾಲಿಬೆಟ್ಟ ಕೊಡಗು ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ಒಂದು ಐತಿಹಾಸಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಮಹತ್ವ ಹೊಂದಿದೆ. ಪಶ್ಚಿಮಘಟ್ಟಗಳ ಅರಣ್ಯ ಪ್ರದೇಶದ ಅಂಚಿನಲ್ಲಿರುವ ಪಾಲಿಬೆಟ್ಟ ಪ್ರಾಚೀನ ಕಾಲದಿಂದಲೇ ಕೃಷಿ, ವ್ಯಾಪಾರ ಹಾಗೂ ಧಾರ್ಮಿಕ ಚಟುವಟಿಕೆ ಕೇಂದ್ರವಾಗಿತ್ತು. ಪಾಲಿಬೆಟ್ಟ ಗ್ರಾಮಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಹಚ್ಚ ಹಸಿರಿನ ಬೆಟ್ಟಗಳು ಇದ್ದ ಗ್ರಾಮಕ್ಕೆ ಹಿಂದಿನ ಕಾಲದಲ್ಲಿ ‘ಪೊಲ್ಲಿಬೆಟ್ಟ’ ಎಂದು ಕರೆಯಲಾಗುತ್ತಿತ್ತು. ಕಾಲಕ್ರಮೇಣ ಪಾಲಿಬೆಟ್ಟವಾಗಿ ಗ್ರಾಮದ ಹೆಸರು ನಾಮಕರಣವಾಗಿದೆ
ಹಾಲೇರಿ ವಂಶದ ಕೊಡಗು ರಾಜರ ಆಳ್ವಿಕೆಯಲ್ಲಿ ಪಾಲಿಬೆಟ್ಟ ಮಹತ್ವ ಪಡೆದಿತ್ತು. ಈ ಅವಧಿಯಲ್ಲಿ ಕೃಷಿಗೆ ಉತ್ತೇಜನ ದೊರಕಿದ್ದು, ಗ್ರಾಮೀಣ ವ್ಯವಸ್ಥೆ ಗಟ್ಟಿಯಾಗಿ ರೂಪುಗೊಂಡಿತು. ಸ್ಥಳೀಯ ಸಂಪ್ರದಾಯಗಳು, ಉತ್ಸವಗಳು ಹಾಗೂ ಧಾರ್ಮಿಕ ಆಚರಣೆಗಳು ಈ ಕಾಲದಲ್ಲಿ ಬಲಿಷ್ಠವಾಗಿದ್ದವು.
1834ರಲ್ಲಿ ಕೊಡಗು ಬ್ರಿಟಿಷರ ವಶವಾದ ನಂತರ ಪಾಲಿಬೆಟ್ಟವೂ ವಸಾಹತು ಆಡಳಿತಕ್ಕೆ ಒಳಪಟ್ಟಿತು. ಅರಣ್ಯ ಕಾಯ್ದೆಗಳು, ಭೂ ತೆರಿಗೆ ವ್ಯವಸ್ಥೆ ಮತ್ತು ಕಾಫಿ ತೋಟಗಳ ವಿಸ್ತಾರದಿಂದ ಸ್ಥಳೀಯ ಜನರ ಜೀವನದಲ್ಲಿ ದೊಡ್ಡ ಬದಲಾವಣೆಗಳಾದವು. ಬ್ರಿಟಿಷರ ಕಠಿಣ ನಿಯಮಗಳಿಂದ ಜನರು ಸಂಕಷ್ಟ ಅನುಭವಿಸಿದರೂ ಸ್ವಾತಂತ್ರೃ ಚಳವಳಿಯ ಪ್ರಭಾವ ಪಾಲಿಬೆಟ್ಟದಲ್ಲೂ ಅಂದು ಕಂಡುಬಂದಿತು.
ಭಾರತ ಸ್ವಾತಂತ್ರೃ ಪಡೆದ ನಂತರ ಪಾಲಿಬೆಟ್ಟ ಗ್ರಾಮ ಅಭಿವೃದ್ಧಿಯ ಹಾದಿಗೆ ಪ್ರವೇಶಿಸಿತು. ಶಿಕ್ಷಣ, ರಸ್ತೆ, ವ್ಯಾಪಾರ ಮತ್ತು ಆಡಳಿತಾತ್ಮಕ ಸೌಲಭ್ಯಗಳು ಹೆಚ್ಚಿದವು. ಕೃಷಿಯ ಜತೆಗೆ ವ್ಯಾಪಾರ ಮತ್ತು ಸೇವಾ ಕ್ಷೇತ್ರಗಳೂ ಬೆಳವಣಿಗೆಯಾದವು.
ಇಂದು ಪಾಲಿಬೆಟ್ಟ ಒಂದು ಪ್ರಮುಖ ಪಟ್ಟಣವಾಗಿ ಬೆಳೆದಿದ್ದು, ತನ್ನ ಐತಿಹಾಸಿಕ ಹಿನ್ನೆಲೆ, ಸಾಂಸ್ಕೃತಿಕ ಪರಂಪರೆ ಮತ್ತು ಸಾಮಾಜಿಕ ಸೌಹಾರ್ದತೆಯಿಂದ ಗುರುತಿಸಿಕೊಂಡಿದೆ.
ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಕೊಡಗಿನ ಪ್ರಮುಖ ಪ್ರದೇಶ ಪಾಲಿಬೆಟ್ಟ ಗ್ರಾಮವಾಗಿತ್ತು. ಗ್ರಾಮವನ್ನು ಬ್ರಿಟಿಷರು ತಮ್ಮ ಕಪಿಮುಷ್ಟಿಯಲ್ಲಿರಿಸಿದ ನೆನಪುಗಳನ್ನು ಇಂದಿಗೂ ಇಲ್ಲಿ ಕಾಣಬಹುದು. ಅಂದು ಬ್ರಿಟಿಷ್ ದಂಪತಿ ಹೊರೇಸ್ ರಾಬಿನ್ಸ್ ಮತ್ತು ಅವರ ಪತ್ನಿ ಎಲಿಜಬೆತ್ ಲೀಫ್ 1883ರಲ್ಲಿ ಕೊಡಗಿಗೆ ಆಗಮಿಸುತ್ತಾರೆ. 1880ರ ದಶಕದ ಆರಂಭದಲ್ಲಿ ಶಸ್ತ್ರ ಚಿಕಿತ್ಸಕ ಮೇಜರ್ ಆಗಿ ಮಡಿಕೇರಿಯಲ್ಲಿ ಕೆಲಸ ಮಾಡಿದ ಅವರ ಹಿರಿಯ ಸಹೋದರ ಡಾ.ಮಾರ್ಕ್ ರಾಬಿನ್ಸ್ ಅವರು ಕಾಫಿ ಕೃಷಿ ಮಾಡಲು ಭೂಮಿಯನ್ನು ತೆಗೆದುಕೊಳ್ಳಲು ಹೊರೇಸ್ ಅವರನ್ನು ಪ್ರೋತ್ಸಾಹಿಸಿದರು. ಆಗ ಹೊರೇಸ್ ಪಾಲಿಬೆಟ್ಟದ ಬಳಿಯ ಕೈಮ ಬೆಟ್ಟ ಎಸ್ಟೇಟ್ ಅನ್ನು ಅಂದು ಖರೀದಿಸಿದರು. ಗಂಡ ಮತ್ತು ಹೆಂಡತಿ ಇಬ್ಬರೂ ತಮ್ಮ ಹೊಸ ಮನೆ ಮತ್ತು ಆಸ್ತಿಯನ್ನು ಹೊಂದಿದ್ದರು. ಇಂದಿಗೂ ಆ ಮನೆಯನ್ನು ಇಲ್ಲಿ ಕಾಣಬಹುದಾಗಿದೆ.
1886ರಲ್ಲಿ ಪಾಲಿಬೆಟ್ಟದಲ್ಲಿ ಪ್ರಾರಂಭವಾದ ಬಿದಿರಿನ ಕ್ಲಬ್‌ನಲ್ಲಿ ಬ್ರಿಟಿಷ್ ದಂಪತಿಯಾದ ಹೊರೇಸ್ ಮತ್ತು ಎಲಿಜಬೆತ್ ಅವರು ಸಕ್ರಿಯ ಸದಸ್ಯರಾಗಿದ್ದರು. ಆಗ ಕೊಡಗಿನಲ್ಲಿ ಕೆಲವು ಇಂಗ್ಲಿಷ್ ಕುಟುಂಬಗಳು ಮಾತ್ರ ವಾಸವಿದ್ದವು. ಅಂದಿನ ಕಾಲದಲ್ಲಿ ಪಾಲಿಬೆಟ್ಟ, ಮಡಿಕೇರಿ ಮತ್ತು ಬೇಲೂರಿನಲ್ಲಿ ಕ್ಲಬ್‌ಗಳ ಸದಸ್ಯರ ನಡುವೆ ಆಗಾಗ್ಗೆ ಟೆನಿಸ್ ಮತ್ತು ಕುದುರೆ ರೇಸಿಂಗ್ ಪಂದ್ಯಗಳು ನಡೆಯುತ್ತಿದ್ದವು.
ಅಂದಿನ ಕಾಲದಲ್ಲಿ ತೆಗೆದ ಹೊರೇಸ್ ರಾಬಿನ್ಸ್ ಮತ್ತು ಅವರ ಪತ್ನಿ ಎಲಿಜಬೆತ್ ಲೀಫ್ ಅವರ ಛಾಯಾಚಿತ್ರ ಇಂದಿಗೂ ಪಾಲಿಬೆಟ್ಟ ಬಿದಿರು ಕ್ಲಬ್‌ನಲ್ಲಿ ಇಡಲಾಗಿದೆ.
ಕೂಲಿ ಕಾರ್ಮಿಕರೇ ಹೆಚ್ಚು ವಾಸ:
ಈ ಗ್ರಾಮದಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಜನಾಂಗದವರು ಸಹಬಾಳ್ವೆ ನಡೆಸುತ್ತಿದ್ದಾರೆ. ಫೆಬ್ರುವರಿ ತಿಂಗಳಿನಲ್ಲಿ ಸರ್ವಧರ್ಮ ಸಮ್ಮೇಳನ ಹಾಗೂ ವಿವಿಧ ಕಾರ್ಯಕ್ರಮ ನಡೆಯುತ್ತದೆ ಹಾಗೂ ದಿ.ಕುಟ್ಟಂಡ ನಂದ ಉತ್ತಯ್ಯ ಹಾಗೂ ಗ್ರಾಮದ ಯುವಕರ ತಂಡ ಈ ಭಾಗದಲ್ಲಿ ಹಿಂದು ಧಾರ್ಮಿಕ ಕೇಂದ್ರ ಇಲ್ಲ ಎಂದು 1983ರಲ್ಲಿ ಸ್ಥಾಪಿಸಿದ ಪಾಲಿಬೆಟ್ಟ ಶ್ರೀಗಣಪತಿ ದೇವಾಲಯ ಕೂಡ ಇಲ್ಲಿದೆ.
ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿರುವ ಚರ್ಚ್ ಈ ಗ್ರಾಮದಲ್ಲಿದೆ. ಕನ್ನಡ, ಕೊಡವ, ಮಲಯಾಳಂ, ತಮಿಳು ಇಲ್ಲಿನ ಸ್ಥಳೀಯ ಪ್ರಮುಖ ಭಾಷೆಗಳು, ಕೂಲಿ ಕಾರ್ಮಿಕರೇ ಗ್ರಾಮದಲ್ಲಿ ಹೆಚ್ಚಾಗಿ ವಾಸ ಮಾಡುತ್ತಿದ್ದಾರೆ
ಹಿಂದಿನ ಕಾಲದಲ್ಲಿ ಪಾಲಿಬೆಟ್ಟದ ಪೆರುಂಬು ಬೆಟ್ಟ, ಕೋಟೆ ಬೆಟ್ಟ, ಗ್ರಾಮದಲ್ಲಿ ಸಿಗುವ ಸಾಂಬಾರ ಪದಾರ್ಥಗಳನ್ನು ಅಂದಿನ ಕಾಲದಲ್ಲಿ ಅಕ್ಕ ಪಕ್ಕದ ರಾಜ್ಯಗಳು ತಮ್ಮ ಎತ್ತಿನಗಾಡಿಗಳಲ್ಲಿ ಸರಕುಗಳನ್ನು ಸಾಗಿಸಿದರು. ಪಾಲಿಬೆಟ್ಟ ಗ್ರಾಮದಲ್ಲಿ ಅಂದು ಇಂದು ಎಲ್ಲರೂ ಸೌಹಾರ್ದತೆಯಿಂದ ಜೀವನ ನಡೆಸುತ್ತಿದ್ದಾರೆ.
ಸುಬೈರ್
ಪಾಲಿಬೆಟ್ಟ ನಿವಾಸಿ
ಪಶ್ಚಿಮಘಟ್ಟಗಳ ಅರಣ್ಯ ಹಾಗೂ ಬೆಟ್ಟ ಪ್ರದೇಶದ ಮಧ್ಯೆ ಇರುವ ಈ ಗ್ರಾಮವು ಕೃಷಿ, ಕಾಫಿ ತೋಟಗಳು ಮತ್ತು ವ್ಯಾಪಾರದ ದೃಷ್ಟಿಯಿಂದ ಮಹತ್ವ ಪಡೆದಿದೆ. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಪಾಲಿಬೆಟ್ಟ ಕಾಫಿ ತೋಟಗಾರಿಕೆಯ ಕೇಂದ್ರವಾಗಿತ್ತು. ವಿವಿಧ ಸಮುದಾಯಗಳ ಸೌಹಾರ್ದಯುತ ಬದುಕು, ಸಾಂಸ್ಕೃತಿಕ ಪರಂಪರೆ ಮತ್ತು ಐತಿಹಾಸಿಕ ಹಿನ್ನೆಲೆಯಿಂದ ವಿಶೇಷ ಸ್ಥಾನ ಹೊಂದಿದೆ.
ವಿಜು ಸುಬ್ರಮಣಿ
ಪಾಲಿಬೆಟ್ಟ ನಿವಾಸಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net