ಜೇನು ಕೃಷಿಗೆ ಸಿಹಿಯಾದ ಪ್ರಧಾನಿ ಮನ್ ಕಿ ಬಾತ್

ಜೇನು ಹುಳುಗಳು ಸಂಗ್ರಹಿಸಿರುವ ಜೇನು
ಜೇನು ಹುಳುಗಳು ಸಂಗ್ರಹಿಸಿರುವ ಜೇನು
Published on

ಪ್ರಮುಖ ಮುಖ್ಯಾಂಶಗಳು

  • ಪ್ರಧಾನಿ ಮನ್ ಕಿ ಬಾತ್‌ನಲ್ಲಿ ಕರ್ನಾಟಕದ ಜೇನು ಪ್ರಸ್ತಾಪ
  • ಕೊಡಗಿನ ಜೇನು ಕೃಷಿಕರಲ್ಲಿ ಪುಳಕ
  • ಪ್ರಧಾನಿ ಮಾತಿನಿಂದ ಹುರುಪಿನ ಟಾನಿಕ್
ಕರ್ನಾಟಕದ ಜೇನಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರದ (ನ.30) ತಮ್ಮ ಮನ್ ಕಿ ಬಾತ್‌ನಲ್ಲಿ ಪ್ರಸ್ತಾಪ ಮಾಡಿರುವುದರಿಂದ ಕೊಡಗಿನ ಜೇನು ಕೃಷಿಕರಿಗೂ ಉತ್ತೇಜನ ಸಿಕ್ಕಂತಾಗಿದೆ. ವಿಶೇಷ ಸ್ವಾಧ, ಪರಿಮಳ ಹಾಗೂ ಔಷಧೀಯ ಗುಣಗಳಿಂದ ದೇಶ, ವಿದೇಶದಲ್ಲೂ ಪ್ರಸಿದ್ಧಿ ಪಡೆದಿರುವ ಕೊಡಗಿನ ಜೇನಿಗೆ ಈಗ ಮೊದಲಿನ ವೈಭವ ಇಲ್ಲವಾದರೂ ಅಲ್ಲಲ್ಲಿ ಕೆಲ ಕೃಷಿಕರು ಸ್ಥಳೀಯ ಜೇನಿನ ಹೆಸರು ಉಳಿಸುವ ಕೆಲಸ ಮಾಡುತ್ತಿದ್ದಾರೆ. ಇಂಥವರಿಗೆ ಪ್ರಧಾನಿ ಮಾತಿನಿಂದ ಹುರುಪಿನ ಟಾನಿಕ್ ಸಿಕ್ಕಂತಾಗಿದೆ.
ಮೊದಲೆಲ್ಲ ಕೊಡಗು ಎಂದ ಕೂಡಲೇ ಥಟ್ ಎಂದು ಜೇನು ಮತ್ತು ಕಿತ್ತಳೆ ಕಣ್ಣು ಮುಂದೆ ಬರುತ್ತಿತ್ತು ಎಂದು ಈಗಲೂ ಹಿರಿಯರು ನೆನಪಿಸಿಕೊಳ್ಳುತ್ತಾರೆ. ಆದರೆ ಭೌಗೋಳಿಕ ಮಾನ್ಯತೆ ಪಡೆದಿರುವ ಕೊಡಗಿನ ಕಿತ್ತಳೆ ಇತ್ತೀಚಿನ ವರ್ಷಗಳಲ್ಲಿ ಅವನತಿಯ ಹಾದಿ ಹಿಡಿದಿದೆ. ಕೊಡಗಿನ ಜೇನು ಕೂಡ ಇದೇ ಪರಿಸ್ಥಿತಿ ಎದುರಿಸುವಂತಾಗಿದೆ. 90ರ ದಶಕದಲ್ಲಿ ಜೇನುಹುಳುಗಳ ಲಾರ್ವಾಗಳಿಗೆ ತಗುಲಿದ ಥಾಯಿಸಾಕ್ ಬ್ರೂಡ್ ಮಾರಣಾಂತಿಕ ಕಾಯಿಲೆ ಕೊಡಗಿನ ಜೇನು ಕÊಷಿಗೆ ದೊಡ್ಡ ಹೊಡೆತವನ್ನೇ ನೀಡಿತು. ಶೇ.95ರಷ್ಟು ಜೇನು ಕುಟುಂಬಗಳು ನಾಶವಾಗಿದ್ದವು. ನಂತರ ಕÊಷಿಕರ ಸತತ ಪ್ರಯತ್ನ, ಹೊಸ ಹೊಸ ತಳಿಗಳ ಪ್ರಯೋಗ, ಅಧಿಕಾರಿಗಳು, ತಜ್ಞರ ಮಾರ್ಗದರ್ಶನದಿಂದ ಜೇನು ಕÊಷಿ ಅಲ್ಪ ಪ್ರಮಾಣದಲ್ಲಿ ಚೇತರಿಕೆ ಕಾಣುತ್ತಿದೆ.
ತೋಟಗಾರಿಕೆ ಇಲಾಖೆ ಮಾಹಿತಿ ಪ್ರಕಾರ ಪ್ರಸ್ತುತ ಜಿಲ್ಲೆಯಲ್ಲಿ ಸುಮಾರು 14,200 ಜೇನು ಕೃಷಿಕರು ಇದ್ದು, 60,500 ಪೆಟ್ಟಿಗೆಗಳು ಇವೆ. ವಾರ್ಷಿಕವಾಗಿ ಅಂದಾಜು 16 ಕೋಟಿ ರೂ. ಮೌಲ್ಯದ 1.71 ಲಕ್ಷ ಕೆಜಿ ಜೇನು ಉತ್ಪಾದನೆ ಆಗುತ್ತಿದೆ. ಮಾರಕ ಕಾಯಿಲೆಯಿಂದಾಗಿ ಒಂದೊಮ್ಮೆ ಸಂಪೂರ್ಣ ನಾಶವಾಗಿದ್ದ ಜೇನು ಕೃಷಿ ಈಗ ನಿಧಾನಕ್ಕೆ ಲಯಕ್ಕೆ ಮರಳುವ ಲಕ್ಷಣಗಳು ಕಾಣಿಸುತ್ತಿದೆ. ಜೇನು ಪೆಟ್ಟಿಗೆÀಗಳಿಗೆ ಬೇಡಿಕೆ ಪ್ರತಿ ವರ್ಷವೂ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದೆ. ವ್ಯಯಕ್ತಿಕ ಮಾತ್ರವಲ್ಲದೆ ಅರಣ್ಯ ಇಲಾಖೆ ಸೇರಿದಂತೆ ವಿವಿಧ ಕಡೆಗಳಿಂದ ವರ್ಷಕ್ಕೆ ಸುಮಾರು 2 ಸಾವಿರ ಜೇನು ಪೆಟ್ಟಿಗೆಗಳು ಖರೀದಿ ಆಗುತ್ತಿದೆ.
ಜೇನು ಕೃಷಿಕರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರೋತ್ಸಾಹ ಕೊಡುತ್ತಿವೆ. ಸ್ಟಾö್ಯಂಡ್ ಸೇರಿ ಸುಮಾರು 4.5 ಸಾವಿರ ಬೆಲೆಯ ಜೇನು ಪಟ್ಟಿಗೆಯನ್ನು ತೋಟಗಾರಿಕೆ ಇಲಾಖೆ ಮೂಲಕ ಶೇ. 75ರಷ್ಟು ಸಬ್ಸಿಡಿಯಲ್ಲಿ ಕೃಷಿಕರಿಗೆ ಕೊಡಲಾಗುತ್ತಿದೆ. ಒಂದು ಜೇನು ಕುಟುಂಬದ ಬೆಲೆ ಸುಮಾರು 2 ಸಾವಿರ ರೂ.ಗಳಿದ್ದು, ಇದಕ್ಕೂ ಇಲಾಖೆಯ ಸಬ್ಸಿಡಿ ಇದೆ. ಕೇಂದ್ರ ಸರ್ಕಾರವೂ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ ಮೂಲಕ ಅಗತ್ಯ ನೆರವು ಕೊಡುತ್ತಿದೆ. ಅತಿ ಚಿಕ್ಕ, ಚಿಕ್ಕ ಹಾಗೂ ಮಧ್ಯಮ ಕೈಗಾರಿಕೆ ಯೋಜನೆ ಅಡಿಯಲ್ಲಿ ಜೇನು ಸಂಸ್ಕರಣೆ, ಉಪ ಉತ್ಪನ್ನಗಳ ತಯಾರಿಕೆಗೆ ಬೇಕಾದ ಘಟಕ ಸ್ಥಾಪನೆಗೆ ಸಹಾಯ ಸಿಗುತ್ತಿದೆ.
ಭಾಗಮಂಡಲದಲ್ಲಿ ರಾಜ್ಯದ ಏಕೈಕ ಜೇನು ಕÊಷಿ ತರಬೇತಿ ಕೇಂದ್ರ ಇದೆ. ಇಲ್ಲಿ ಮೂರು ತಿಂಗಳ ತರಬೇತಿ ಕೊಡಲಾಗುತ್ತದೆ. ರಾಜ್ಯದ ವಿವಿಧ ಭಾಗಗಳ ಆಸಕ್ತರಿಗೆ ಇಲ್ಲಿ ಜೇನು ಕÊಷಿ ತರಬೇತಿ ಕೊಡಲಾಗುತ್ತದೆ. ಇಲ್ಲಿ ತರಬೇತಿ ಪಡೆಯುವ ಮೂಲಕ ಯುವಕರ ಸ್ವಾವಲಂಬಿಗಳಾಗಿ ಜೇನು ಸಾಕಾಣಿಕೆ ಮಾಡಬಹುದಾಗಿದೆ. ಸರ್ಟಿಫಿಕೇಟ್ ಕೂಡ ಸಿಗುವುದರಿಂದ ಸಾಲ ಮತ್ತಿತರ ಸರ್ಕಾರಿ ಪ್ರಯೋಜನಗಳನ್ನೂ ಪಡೆದುಕೊಳ್ಳಲು ಅನುಕೂಲವಾಗಿದೆ. ಇದರ ಜತೆಗೆ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕೆ ಪ್ರಾಯೋಗಿಕ ಕೇಂದ್ರ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಕೂಡ ಅಲ್ಪಕಾಲದ ತರಬೇತಿ ಕಾರ್ಯಕ್ರಮಗಳು ನಡೆಯುತ್ತಿರುತ್ತದೆ.
======
ಬಾಕ್ಸ್:
ಕೊಡಗಿನಲ್ಲಿ ಭತ್ತದ ಕೃಷಿ ಉತ್ತುಂಗದಲ್ಲಿ ಇದ್ದ ಸಮಯದಲ್ಲಿ ಇಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಉತ್ಪಾದನೆ ಆಗುತ್ತಿದ್ದ ಜೇನಿಗೆ ಭಾರಿ ಬೇಡಿಕೆ ಇರುತ್ತಿತ್ತು. ಭತ್ತದ ಹೂವಿನ ಮಕರಂದದಿAದ ತಯಾರಾಗುವ ಈ ಜೇನು ತುಂಬಾ ಗಟ್ಟಿ ಮಾತ್ರವಲ್ಲದೆ ವಿಶೇಷ ರುಚಿ ಹೊಂದಿರುತ್ತದೆ. ಎಷ್ಟು ದೀರ್ಘ ಕಾಲ ಇಟ್ಟರೂ ಕೆಡುವುದಿಲ್ಲ ಎನ್ನುವ ಹೆಗ್ಗಳಿಕೆಯೂ ಇದೆ. ಬ್ರಹ್ಮಗಿರಿ, ಪುಷ್ಪಗಿರಿ ಹಾಗೂ ತಡಿಯಂಡಮೋಳ್ ಬೆಟ್ಟ ಶ್ರೇಣಿಯ ಭಾಗಮಂಡಲ, ತಲಕಾವೇರಿ, ನಾಪೋಕ್ಲು, ಕಕ್ಕಬ್ಬೆ, ಶಾಂತಳ್ಳಿ, ಮುಕ್ಕೋಡ್ಲು ಭಾಗದ ಜೇನು ತುಪ್ಪವೂ ಇದರ ಔಷಧೀಯ ಗುಣ, ಸ್ವಾಧ, ರುಚಿಯಿಂದ ಹೆಸರು ಮಾಡಿದೆ. ಆದರೆ ಈಗಿನ ಮಾರುಕಟ್ಟೆ ತಂತ್ರಕ್ಕೆ ಅನುಗುಣವಾಗಿ ಈ ಜೇನು ತುಪ್ಪ ಬ್ರಾö್ಯಂಡ್ ಆಗದ ಕಾರಣ ಇನ್ನೂ ತೆರೆಮರೆಯಲ್ಲೇ ಉಳಿದುಕೊಂಡಿದೆ. ಪ್ರಧಾನಿ ಮನ್ ಕಿ ಬಾತ್‌ನಲ್ಲಿ ಉಲ್ಲೇಖವಾದ ತುಮಕೂರು ಮತ್ತು ಪುತ್ತೂರಿನ ಜೇನುಗಳಂತೆ ಕೊಡಗಿನ ಜೇನು ಕೂಡ ಬ್ರಾö್ಯಂಡ್ ಮೂಲಕ ಗುರುತಿಸಿಕೊಂಡರೆ ಸಹಜವಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಪಡೆದುಕೊಳ್ಳಲಿದೆ ಎನ್ನುವುದು ಪ್ರಗತಿಪರ ಕೃಷಿಕರ ಮಾತು.
ಕೊಡಗು ಸಿ ರಾಜ್ಯ ಆಗಿದ್ದ ಸಂದರ್ಭದಲ್ಲಿ ಇಲ್ಲಿ ಪ್ರತ್ಯೇಕ ಜೇನು ಕÊಷಿ ವಿಭಾಗ ಕಾರ್ಯ ನಿರ್ವಹಿಸುತ್ತಿತ್ತು. ನಂತರದ ದಿನಗಳಲ್ಲಿ ಕೈಗಾರಿಕಾ ಇಲಾಖೆಯೊಂದಿಗೆ ಜೇನು ವಿಭಾಗ ಗುರುತಿಸಿಕೊಂಡಿತು. 2011ರಲ್ಲಿ ತೋಟಗಾರಿಕಾ ಇಲಾಖೆಯೊಂದಿಗೆ ವಿಲೀನಗೊಂಡಿತು. ಜೇನು ಕÊಷಿ ವಿಭಾಗÀಕ್ಕೆ ಜಿಲ್ಲೆಯಾದ್ಯಂತ 42 ಏಕರೆಯಷ್ಟು ಭೂಮಿ ಇದೆ. ಮಡಿಕೇರಿ ತಾಲೂಕಿನಲ್ಲಿ ಭಾಗಮಂಡಲ, ಗಾಳಿಬೀಡು, ಕೋರಂಗಾಲ, ಕೋಪಟ್ಟಿ, ಕರಿಕೆ, ಪೊನ್ನಂಪೇಟೆ ತಾಲೂಕಿನಲ್ಲಿ ಬಿ. ಶೆಟ್ಟಿಗೇರಿ, ಕೆದಮಳ್ಳೂರು ಬಿರುನಾಣಿ, ಸೋಮವಾರಪೇಟೆ ತಾಲೂಕಿನಲ್ಲಿ ಮಾದಾಪುರ, ಜಕ್ಕನಹಳ್ಳಿ ಹಾಗೂ ಶಾಂತಳ್ಳಿಯಲ್ಲಿ ಮಧುವನ ಇದೆ. ಹನಿಪಾರ್ಕ್ ಹಾಗೂ ತರಬೇತಿ ಕೇಂದ್ರಗಳೂ ಇವೆ. ಸೂಕ್ತ ರೀತಿಯಲ್ಲಿ ಸರ್ಕಾರದ ಪ್ರೋತ್ಸಾಹ ಸಿಕ್ಕಿದರೆ ಜೇನು ಕೃಷಿಯನ್ನು ಕೊಡಗಿನಲ್ಲಿ ಮತ್ತೆ ವೈಭವದ ಹಳಿಗೆ ತರಬಹುದು ಎನ್ನುವ ಅಭಿಪ್ರಾಯಗಳು ಸ್ಥಳೀಯರಿಂದ ವ್ಯಕ್ತ ಆಗುತ್ತಿದೆ.
"

ಕರ್ನಾಟಕದ ಜೇನಿನ ಬಗ್ಗೆ ಪ್ರಸ್ತಾಪಿಸಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್‌ನಲ್ಲಿ ಮಾತನಾಡಿರುವುದು ಕೊಡಗಿನ ಜೇನು ಕೃಷಿಕರಿಗೂ ಉತ್ತೇಜನ ನೀಡಿದಂತಾಗಿದೆ. ಇಲ್ಲಿಯ ಪುಷ್ಪಗಿರಿ, ಬ್ರಹ್ಮಗಿರಿ, ತಡಿಯಂಡಮೋಳ್ ಬೆಟ್ಟ ಶ್ರೇಣಿಯಲ್ಲಿ ಉತ್ಪಾದನೆಯಾಗುವ ಜೇನು ತುಪ್ಪ ಅತ್ಯುತ್ತಮ ಗುಣಮಟ್ಟದಿಂದ ಕೂಡಿದ್ದು, ಔಷಧೀಯ ಅಂಶಗಳನ್ನೂ ಒಳಗೊಂಡಿದೆ. ಜಿಲ್ಲೆಯಲ್ಲಿ ಜೇನು ಕೃಷಿ ಉತ್ತೇಜನಕ್ಕೆ ಸರ್ಕಾರಿದಂದ ಎಲ್ಲಾ ರೀತಿಯ ಪ್ರೋತ್ಸಾಹ ಕೊಡಲಾಗುತ್ತಿದೆ. ಜೇನು ಪಟ್ಟಿಗೆ ಖರೀದಿಗೆ ಶೇ. 75ರಷ್ಟು ಸಹಾಯಧನ ಇದೆ.

"

ಕೊಡಗಿನಲ್ಲಿ ಜೇನು ಕೃಷಿಕರು ಸಂಕಷ್ಟದಲ್ಲಿ ಇದ್ದಾರೆ. ಬದಲಾಗುತ್ತಿರುವ ಹವಾಮಾನ ಜೇನು ಕೃಷಿ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಿದೆ. ಕೃಷಿಯಲ್ಲಿ ಯಥೇಚ್ಚವಾಗಿ ಬಳಕೆ ಆಗುತ್ತಿರುವ ರಾಸಾಯನಿಕಗಳು, ಕೀಟನಾಶಕ, ಕಳೆನಾಶಕಗಳು ಜೇನು ನೊಣಗಳಿಗೆ ಮಾರಕವಾಗಿದೆ. ಈ ಎಲ್ಲಾ ಸವಾಲುಗಳನ್ನು ಎದುರಿಸಿಯೂ ಕೊಡಗಿನಲ್ಲಿ ಜೇನು ಕೃಷಿಕರು ಶ್ರಮಹಿಸಿ ಜೇನು ಸಾಕಾಣಿಕೆ ಮಾಡುವ ಮೂಲಕ ಆದಾಯದ ಮೂಲವೊಂದನ್ನು ಹುಡುಕಿಕೊಂಡಿದ್ದಾರೆ.

"

ಕರ್ನಾಟಕದ ಜೇನಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್‌ಕಿ ಬಾತ್‌ನಲ್ಲಿ ಪ್ರಸ್ತಾಪಿಸಿರುವುದು ಖುಷಿ ತಂದಿದೆ. ಕೊಡಗಿನ ಜೇನು ಅದರಲ್ಲೂ ಭಾಗಮಂಡಲದ ಜೇನು ವಿಶೇಷ ಗುಣಲಕ್ಷಣಗಳಿಂದ ತನ್ನದೇ ಆದ ಗ್ರಾಹಕರನ್ನು ಹೊಂದಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ನಮ್ಮ ಊರಿನ ಜೇನು ತುಪ್ಪದ ಬಗ್ಗೆಯೂ ಅವರಿಂದ ಮಾತುಗಳನ್ನು ಕೇಳಲು ಕಾತುರರಾಗಿದ್ದೇವೆ. ಸರ್ಕಾರದ ಯೋಜನೆಗಳು ಜೇನು ಕೃಷಿಕರಿಗೆ ಸರಿಯಾಗಿ ತಲುಪುವಂತಾಗಬೇಕು. ಸಿರಕಜೆ ಲೋಕಪ್ರಕಾಶ್, ಜೇನು ಕÊಷಿಕ ತಲಕಾವೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net