ವೀರಯೋಧ ದಿ. ಕೆ. ರಾಘವೇಂದ್ರ ಹೆಸರನ್ನು ಹಾರಂಗಿ ಆಟದ ಮೈದಾನಕ್ಕೆ ನಾಮಕರಣ ಮಾಡಲಾಯಿತು. ಡಾ. ಮಂತರ್ ಗೌಡ, ನೆಲ್ಲೂರು ಪೆರುಮಾಳ್ , ವಿ.ಪಿ. ಶಶಿಧರ್, ಸುರೇಶ್ ಬಾಬು ಮತ್ತಿತರರು ಇದ್ದರು.
Published on:
Copied
Follow Us
ಕುಶಾಲನಗರ:
ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಐಎಫ್)ಯಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭ ಮಾವೋವಾದಿ ಉಗ್ರರ ದಾಳಿಗೆ ಮೂರು ದಶಕಗಳ ಹಿಂದೆ ಬಲಿಯಾದ ಹಾರಂಗಿ ನಿವಾಸಿ ವೀರ ಯೋಧ ಕೆ. ರಾಘವೇಂದ್ರ ಹೆಸರನ್ನು ಹಾರಂಗಿ ಆಟದ ಮೈದಾನಕ್ಕೆ ಭಾನುವಾರ ನಾಮಕರಣ ಮಾಡಲಾಯಿತು.
ಭಾರತ ಸರ್ಕಾರ, ಕೇಂದ್ರ ಗೃಹ ಸಚಿವಾಲಯ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಐಎಫ್) ಧೀರ ಹೃದಯಿ ರಾಘವೇಂದ್ರ ಕೆ. ಹೆಸರಿನ ಆಟದ ಮೈದಾನವನ್ನು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮತ್ತು ಸಿಐಎಸ್‌ಐಎಫ್ ಡಿಐಜಿ ನೆಲ್ಲೂರು ಪೆರುಮಾಳ್ ಉದ್ಘಾಟಿಸಿದರು. ನಂತರ ವೀರಯೋಧನ ಭಾವಚಿತ್ರಕ್ಕೆ ಪುಷ್ಪ ಗುಚ್ಛವನ್ನು ಅರ್ಪಿಸುವ ಮೂಲಕ ಶಾಸಕರು ಹಾಗೂ ಅಧಿಕಾರಿಗಳು ಗೌರವ ಸಲ್ಲಿಸಿದರು. ಇದೇ ಸಂದರ್ಭ ಮೈದಾನದಲ್ಲಿ ಅಂಚಿನಲ್ಲಿ ಶಾಸಕರು ಗಿಡ ನೆಟ್ಟು ನೀರು ಹಾಕಿದರು.
ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಡಾ. ಮಂತರ್ ಗೌಡ, ಸ್ವಾತಂತ್ರ‍್ಯ ಹೋರಾಟಗಾರ ಕುಟುಂಬದಿAದ ಬಂದ
ರಾಘವೇಂದ್ರ ಅವರ ದೇಶ ಸೇವೆ ಶ್ಲಾಘನೀಯ. ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕು. ಇದು ಇತರೆ ಯುವ ಜನರಿಗೆ ಸ್ಪೂರ್ತಿಯಾಗಬೇಕು.
ರಾಘವೇಂದ್ರ ಹೆಸರನ್ನು ಮೈದಾನಕ್ಕೆ ನಾಮಕರಣ ಮಾಡಿರುವ ಕಾರ್ಯ ಶ್ಲಾಘನೀಯ. ಮೈದಾನ ಅಭಿವೃದ್ಧಿಗೆ ಶಾಸಕ ನಿಧಿಯಿಂದ 15 ಲಕ್ಷ ರೂ. ಅನುದಾನ ನೀಡಲಾಗುವುದು ಎಂದರಲ್ಲದೆ ಹಾರಂಗಿ ಬಸ್ ನಿಲ್ದಾಣಕ್ಕೆ ವೀರ ರಾಘವೇಂದ್ರ ಹೆಸರಿಡಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದರು. ಮೈದಾನ ಅಭಿವೃದ್ಧಿ ಹಾಗೂ ಗ್ಯಾಲರಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು. ಮೈದಾನದ ಅಂಚಿನಲ್ಲಿ ಗಿಡ ನೆಡಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಸಿಐಎಸ್‌ಐಎಫ್ ಡಿಐಜಿ ನೆಲ್ಲೂರು ಪೆರುಮಾಳ್ ಮಾತನಾಡಿ, ರಾಘವೇಂದ್ರ ಅವರ ದೇಶ ಸೇವೆ ಶ್ಲಾಘನೀಯ. ಹುತಾತ್ಮ ಯೋಧನ ಹೆಸರನ್ನು ಚಿರಸ್ಥಾಯಿಯಾಗಿಡಲು ಮೈದಾನಕ್ಕೆ ನಾಮಕರಣ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಇಲಾಖೆ ಶ್ಲಾಘಿಸುತ್ತದೆ ಎಂದರು.
ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮತ್ತು ರಾಘವೇಂದ್ರ ಸಹೋದರ ಸುರೇಶ್ ಬಾಬು ಮಾತನಾಡಿದರು. ಇದೇ ಸಂದರ್ಭ ಹುತಾತ್ಮ ಯೋಧ ರಾಘವೇಂದ್ರ ಅವರ ತಾಯಿ ಕಮಲಮ್ಮ ಹಾಗೂ ಸಿಐಎಸ್‌ಐಎಫ್ ಅಧಿಕಾರಿಗಳನ್ನು ಶಾಸಕ ಡಾ. ಮಂತರ್ ಗೌಡ ಸನ್ಮಾನಿಸಿ ಗೌರವಿಸಿದರು.
ಹಾರಂಗಿ ಅಣೆಕಟ್ಟೆ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಐ.ಕೆ. ಪುಟ್ಟಸ್ವಾಮಿ, ಕಿರಿಯ ಎಂಜಿನಿಯರ್ ಕಿರಣ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್, ಸಿಐಎಸ್‌ಐಎಫ್ ಮೈಸೂರು ಆರ್.ಎಂ.ಸಿ ವಿಭಾಗದ ಅಸಿಸ್ಟೆಂಟ್ ಕಮಾಂಡರ್
ಯೋಗೇಶ್ ಚಂದ್ರಮಿಶ್ರ, ಇನ್ಸ್ಪೆಕ್ಟರ್ ಆರ್.ಕೆ. ಗೌತಮ್, ಪಿಎಎಸ್‌ಐಗಳಾದ ರಾಹುಲ್, ಹರಿಕೃಷ್ಣ, ತರಬೇತಿ ಕೇಂದ್ರದ ಹೆಡ್ ಕಾನ್ಸ್ಟೇಬಲ್
ಬಿ.ಕೆ. ಗುರುಮೂರ್ತಿ ಹಾಗೂ 25 ಸಿಬ್ಬಂದಿ, ಕೂಡ್ಲೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಎಸ್‌ಐ ಎನ್.ರಾಮಚಂದ್ರ, ಹುತಾತ್ಮ ಯೋಧನ ಕುಟುಂಬಸ್ಥರಾದ ಕಮಲಮ್ಮ, ವಾಣಿ, ಅಶ್ವಥ್ ಹಾಗೂ ಗ್ರಾಮಸ್ಥರು ಈ ಸಂದರ್ಭ ಪಾಲ್ಗೊಂಡಿದ್ದರು.