ಕಾಳು ಮೆಣಸು ಬೆಳೆ ಸೊಗಸು

ಕಾಫಿ ತೋಟಗಳ ಮಧ್ಯೆ ಉಪಬೆಳೆಯಾಗಿ ಬೆಳೆದಿರುವ ಕಾಳುಮೆಣಸು ಬಳ್ಳಿಗಳು
ಕಾಫಿ ತೋಟಗಳ ಮಧ್ಯೆ ಉಪಬೆಳೆಯಾಗಿ ಬೆಳೆದಿರುವ ಕಾಳುಮೆಣಸು ಬಳ್ಳಿಗಳು
Published on
ಮಡಿಕೇರಿ:
ಕೊಡಗಿನಲ್ಲಿ ಸಾಮಾನ್ಯವಾಗಿ ಕಾಫಿ ಜತೆಯಲ್ಲಿ ಮಿಶ್ರಬೆಳೆಯಾಗಿ ಬೆಳೆಯುವ ಕಾಳು ಮೆಣಸು ಉತ್ಪಾದನೆ ಈ ಬಾರಿ ಹೆಚ್ಚಾಗುವ ಸಾಧ್ಯತೆ ಇದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ರಾಜ್ಯ ಸಚಿವ ಜಿತಿನ್ ಪ್ರಸಾದ್ ಈ ಮಾಹಿತಿ ನೀಡಿದ್ದಾರೆ. ಕಾಳು ಮೆಣಸು ಜಿಲ್ಲೆಯಲ್ಲಿ ಉಪ ಬೆಳೆ ಆದರೂ ವರ್ಷದಿಂದ ವರ್ಷಕ್ಕೆ ವಿಸ್ತಾರ ಆಗುತ್ತಿರುವ ಬೆಳೆ ಬೆಳೆಯುವ ಪ್ರದೇಶ, ಸಮರ್ಪಕ ಪೋಷಕಾಂಶ ನಿರ್ವಹಣೆ, ವೈಜ್ಞಾನಿಕ ಕೃಷಿ ಪದ್ಧತಿ ಅನುಸರಣೆ ಮತ್ತಿತರ ಕಾರಣಗಳಿಂದ ಕಾಳು ಮೆಣಸು ಉತ್ಪಾದನೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ.
ಕೊಡಗಿನಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿ ಕಾಫಿ ಬೆಳೆಯಲಾಗುತ್ತದೆ. ಜಿಲ್ಲೆಯಲ್ಲಿ ಸುಮಾರು 1,19,700 ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ತೋಟ ಹರಡಿದೆ. ರಾಜ್ಯದಲ್ಲಿ ಉತ್ಪಾದನೆ ಆಗುವ ಕಾಫಿ ಪೈಕಿ ಶೇ. 50ರಷ್ಟು ಪ್ರಮಾಣದ ಕಾಫಿ ಕೊಡಗಿನಲ್ಲೇ ಉತ್ಪಾದನೆ ಆಗುತ್ತಿದ್ದು, ವಾರ್ಷಿಕವಾಗಿ ಸುಮಾರು 1,10,730 ಮೆಟ್ರಿಕ್ ಟನ್ ಕಾಫಿ ಇಲ್ಲಿ ಬೆಳೆಯಲಾಗುತ್ತದೆ. ಕಾಫಿ ಹೆಚ್ಚು ನಿರ್ವಹಣೆಯನ್ನು ಬಯಸುವ ಕೃಷಿಯಾಗಿದ್ದು ಪ್ರಸ್ತುತ ಒಳ್ಳೆಯ ದರ ಇದ್ದರೂ ಸಾಮಾನ್ಯವಾಗಿ ಕಾಫಿ ಬೆಲೆಯಲ್ಲಿ ಸ್ಥಿರತೆ ಇರುವುದಿಲ್ಲ. ಹಾಗಾಗಿ ಕೃಷಿಕರು ಕಾಫಿ ಜತೆಯಲ್ಲಿ ಮಿಶ್ರಬೆಳೆಯಾಗಿ ಕಾಳು ಮೆಣಸು ಬೆಳೆಗೆ ಆದ್ಯತೆ ಕೊಡುತ್ತಾರೆ.
ಜಿಲ್ಲೆಯಲ್ಲಿ ಸುಮಾರು 40-50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಾಳುಮೆಣಸು ಬೆಳೆಯಲಾಗುತ್ತಿದೆ. ಕೊಡಗಿನಲ್ಲಿ ವಾರ್ಷಿಕವಾಗಿ 3,300 ಮೆಟ್ರಿಕ್ ಟನ್ ಕಾಳು ಮೆಣಸು ಉತ್ಪಾದನೆ ಆಗುತ್ತಿದ್ದು, ರಾಜ್ಯದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಕಾಳುಮೆಣಸು ಬೆಳೆಯುವ ಜಿಲ್ಲೆ ಎನ್ನುವ ಹೆಗ್ಗಳಿಕೆಗೆ ಕೊಡಗು ಪಾತ್ರವಾಗಿದೆ. ಸರಿಯಾಗಿ ಒಣಗಿಸಿದ ಕಾಳು ಮೆಣಸು ಎಷ್ಟು ಸಮಯ ಬೇಕಾದರೂ ಸಂಗ್ರಹಿಸಿ ಇಟ್ಟುಕೊಳ್ಳಬಹುದಾಗಿದ್ದು ಬೆಳೆಗಾರನ ಆಪತ್ಕಾಲದ ಅಗತ್ಯತೆಗೆ ತಕ್ಕಂತೆ ಬಳಸಿಕೊಳ್ಳಬಹುದಾಗಿದ್ದರಿಂದ ಇದನ್ನು ಕಪ್ಪು ಬಂಗಾರ ಅಥವಾ ಬೆಳೆಗಾರನ ಎಟಿಎಂ ಎಂದು ಕೂಡ ಕರೆಯಲಾಗುತ್ತದೆ.
ಕಾಫಿ ದರ ಕುಸಿತದಂಥ ಸಂದರ್ಭಗಳಲ್ಲಿ ಬೆಳೆಗಾರರನ್ನು ಕಾಪಾಡಿಕೊಂಡು ಬಂದಿದ್ದೇ ಕಾಳು ಮೆಣಸು. ಕಾಫಿ ತೋಟ ನಿರ್ವಹಣೆ, ಕುಟುಂಬದ ನಿರ್ವಹಣೆಗೆ ಕಾಳು ಮೆಣಸಿನಿಂದ ಬಂದ ಆದಾಯ ಕೃಷಿಕರ ಕೈ ಹಿಡಿಯುತ್ತಾ ಬಂದಿದೆ. ಹಾಗಾಗಿಯೇ ಕಾಫಿ ತೋಟದಲ್ಲಿ ಉ¥ Àಬೆಳೆಯಾಗಿ ಕಾಳು ಮೆಣಸು ಬೆಳೆಯುತ್ತಿದ್ದರೂ ಬೆಳೆಗಾರ ಇದನ್ನು ನಿರ್ಲಕ್ಷö್ಯ ಮಾಡಿಲ್ಲ. ಕಾಫಿಯಂತೇ ಕಾಳುಮೆಣಸಿನಲ್ಲೂ ವೈಜ್ಞಾನಿಕ ಕೃಷಿ ಪದ್ಧತಿ, ಪೋಷಕಾಂಶಗಳ ಉತ್ತಮ ನಿರ್ವಹಣೆ, ರೋಗ ನಿರ್ವಹಣೆ ಹಾಗೂ ಸರಿಯಾದ ರೀತಿಯಲ್ಲಿ ನೆರಳು ಮತ್ತು ನೀರಿನ ನಿರ್ವಹಣೆ ಮಾಡಿಕೊಂಡು ಬರುತ್ತಿರುವುದಲ್ಲದೆ ಬೆಳೆ ಬೆಳೆಯುವ ಪ್ರದೇಶವನ್ನು ವಿಸ್ತರಿಸಿರುವುದರಿಂದಲೂ ಕಾಳು ಮೆಣಸು ಉತ್ಪಾದನೆ ಪ್ರಮಾಣ ಹೆಚ್ಚಾಗಿದೆ.
2 ದಿನಗಳ ಹಿಂದೆ ಲೋಕಸಭೆಯಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೊಡಗಿನಲ್ಲಿ ಕಾಳುಮೆಣಸು ಉತ್ಪಾದನೆಯ ಸ್ಥಿತಿ, ರಫ್ತಿನ ಪರಿಣಾಮ, ರೈತರಿಗೆ ಬೆಂಬಲ ಮತ್ತು ಕನಿಷ್ಠ ಆಮದು ಬೆಲೆಯ ಪರಿಷ್ಕರಣೆ ಬಗ್ಗೆ ಸರ್ಕಾರಕ್ಕೆ ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ರಾಜ್ಯ ಸಚಿವ ಜಿತಿನ್ ಪ್ರಸಾದ ಕಳೆದ ವರ್ಷಕ್ಕೆ ಹೋಲಿಸಿದರೆ 2025-26ರಲ್ಲಿ ಕೊಡಗಿನಲ್ಲಿ ಕಾಳುಮೆಣಸು ಉತ್ಪಾದನೆ ಸುಮಾರು ಶೇ. 16 ರಷ್ಟು ಹೆಚ್ಚಾಗಬಹುದು ಎಂದು ಮಾಹಿತಿ ನೀಡಿದ್ದಾರೆ.
ಭಾರತದ ಕಾಳುಮೆಣಸು ರಫ್ತು ಪ್ರಮಾಣ ಶೇ.14.72ರಷ್ಟು ಹೆಚ್ಚಾಗಿ 101.45 ಮಿಲಿಯನ್ ಡಾಲರ್ ತಲುಪಿದೆ ಮತ್ತು ಎಸ್‌ಪಿಐಸಿಇಡಿ ಯೋಜನೆ ಕಾಳುಮೆಣಸು ಬೆಳೆಗಾರರಿಗೆ ಉಪಕರಣಗಳು, ತರಬೇತಿ ಮತ್ತು ಮಾರುಕಟ್ಟೆ ಸಂಪರ್ಕಗಳೊAದಿಗೆ ಬೆಂಬಲ ನೀಡುತ್ತಿದೆ. ದೇಶೀಯ ರೈತರನ್ನು ರಕ್ಷಿಸಲು ಕಾಳುಮೆಣಸು ಆಮದಿಗೆ ಪ್ರತಿ ಕೆಜಿಗೆ 500 ರೂ. ಕನಿಷ್ಠ ಆಮದು ಬೆಲೆ ಜಾರಿಯಲ್ಲಿದೆ ಎಂದು ಸಚಿವರು ತಿಳಿಸಿರುವುದಾಗಿ ಯದುವೀರ್ ಹೇಳಿದ್ದರು.
ಕೊಡಗಿನಲ್ಲಿ ಕಾಳುಮೆಣಸು ಉತ್ತಮವಾಗಿ ಬೆಳೆಯಲು ಇಲ್ಲಿನ ಹವಾಮಾನವೂ ಕಾರಣವಾಗಿದೆ. ಕಾಫಿ ತೋಟಗಳಲ್ಲಿರುವ ಸಿಲ್ವರ್ ಮರ ಅಥವಾ ಇತರೆ ಕಾಡಿನ ಮರಗಳ ಮೇಲೆ ಕಾಳುಮೆಣಸಿನ ಬಳ್ಳಿಗಳನ್ನು ಹಬ್ಬಿಸಲಾಗುತ್ತದೆ. ಅಡಿಕೆ ಮರಗಳಿಗೂ ಬಳ್ಳಿಗಳನ್ನು ಹಬ್ಬಿಸಲಾಗುತ್ತದೆ. ಇಲ್ಲಿ ಬೆಳೆಯುವ ಕಾಳುಮೆಣಸು ಗಾತ್ರದಲ್ಲಿ ದೊಡ್ಡದಾಗಿದ್ದು ಉತ್ತಮ ರುಚಿ ಮತ್ತು ಅಧಿಕ ಸಾಂದ್ರತೆಯ ಎಣ್ಣೆ ಅಂಶ ಹೊಂದಿರುವುದರಿAದ ಸಹಜವಾಗಿ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಹೊಂದಿದೆ.
ಪನ್ನಿಯೂರು-1, ಕರಿಮುಂಡ, ಉದಿರುಕೋಟೆ ಮತ್ತು ಇತ್ತೀಚೆಗೆ ಜನಪ್ರಿಯವಾಗಿರುವ ಸೈಲೆಂಟಿ ವ್ಯಾಲಿ ತಳಿಯ ಕಾಳುಮೆಣಸು ಕೊಡಗಿನಲ್ಲಿ ಹೆಚ್ಚಾಗಿ ಬೆಳೆಸಲಾಗುತ್ತದೆ. ಸಾಮಾನ್ಯವಾಗಿ ಜನವರಿ ತಿಂಗಳಿನಿAದ ಮಾರ್ಚ್ ಅಂತ್ಯದವರೆಗೆ ಕಾಳುಮೆಣಸಿನ ಕೊಯ್ಲು ಕಾರ್ಯ ನಡೆಯುತ್ತದೆ. ಸೊರಗು ರೋಗ ನಿಯಂತ್ರಣ ಕಾಳುಮೆಣಸು ಬೆಳೆಗಾರರ ಪಾಲಿಗೆ ದೊಡ್ಡ ಸವಾಲಾಗಿದೆ. ಭಾರತೀಯ ಸಾಂಬಾರ ಮಂಡಳಿ ಮಾಹಿತಿ ಪ್ರಕಾರ ಮಾರ್ಚ್ 11ರಂದು ಕಾಳುಮೆಣಸು ಮಾರುಕಟ್ಟೆ ದರ ಕೆಜಿಗೆ 696-716ರ ತನಕ ಇದೆ.
"

ಕೊಡಗಿನಲ್ಲಿ ಕಾಳುಮೆಣಸು ಉತ್ಪಾದನೆ ಪ್ರಮಾಣ ಹೆಚ್ಚಳ ಆಗುತ್ತಿರುವ ಬಗ್ಗೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ರಾಜ್ಯ ಸಚಿವ ಜಿತಿನ್ ಪ್ರಸಾದ್ ಮಾಹಿತಿ ನೀಡಿದ್ದಾರೆ. 2025-26ರಲ್ಲಿ ಕೊಡಗಿನಲ್ಲಿ ಕಾಳುಮೆಣಸು ಉತ್ಪಾದನೆ ಸುಮಾರು ಶೇ. 16ರಷ್ಟು ಹೆಚ್ಚಾಗಬಹುದು. ದೇಶೀಯ ರೈತರನ್ನು ರಕ್ಷಿಸಲು ಕಾಳುಮೆಣಸು ಆಮದಿಗೆ ಪ್ರತಿ ಕೆಜಿಗೆ ಕನಿಷ್ಠ 500 ರೂ. ಆಮದು ಬೆಲೆ ಜಾರಿಯಲ್ಲಿದೆ. ಭಾರತದ ಕಾಳುಮೆಣಸು ರಫ್ತು ಶೇ.14.72ರಷ್ಟು ಹೆಚ್ಚಾಗಿದ್ದು 101.45 ಮಿಲಿಯನ್ ಡಾಲರ್ ಮೌಲ್ಯ ತಲುಪಿದೆ ಎಂದು ಸಚಿವರು ತಿಳಿಸಿದ್ದಾರೆ.

"

ಕಾಳುಮೆಣಸು ಸೇರಿದಂತೆ ಸಾಂಬಾರ ಬೆಳೆಗಳು ಹೆಚ್ಚಿನ ಮೌಲ್ಯದ ಮತ್ತು ಉತ್ತಮ ಆದಾಯ ನೀಡುವ ಬೆಳೆಗಳಾಗಿವೆ. ಉತ್ತಮ ಕೃಷಿ ಪದ್ಧತಿ ಅಳವಡಿಕೆ, ಆಧುನಿಕ ತಂತ್ರಜ್ಞಾನಗಳ ಬಳಕೆಯ ಮೂಲಕ ಹೆಚ್ಚಿನ ಉತ್ಪಾದನೆಯ ಗುರಿ ಮುಟ್ಟಬಹುದು. ಕೃಷಿಕರ ಆದಾಯ ಹೆಚ್ಚಳಕ್ಕೂ ಇದು ಸಾಧ್ಯವಾಗಲಿದೆ. ತಜ್ಞರ ಸಲಹೆ, ಮಾರ್ಗದರ್ಶನದೊಂದಿಗೆ ಕೃಷಿಕರು ಸಾಂಬಾರ ಬೆಳೆಗಳನ್ನು ಉತ್ತಮವಾಗಿ ಬೆಳೆಯಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net