ಬೀದಿನಾಯಿಗಳ ಹಾವಳಿಯಿಂದ ಜನರು ಹೈರಾಣ

ಕೂಡುಮಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ
ಕೂಡುಮಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ
Published on

ಪ್ರಮುಖ ಮುಖ್ಯಾಂಶಗಳು

  • ಕೂಡಲೇ ಕ್ರಮ ಕೈಗೊಳ್ಳುವಂತೆ ಸದಸ್ಯರ ಆಗ್ರಹ
  • ಕೂಡುಮಗಳೂರು ಗ್ರಾಮ ಪಂಚಾಯಿತಿ ಸಭೆಯಲ್ಲಿ ಗಂಭೀರ ಚರ್ಚೆ
ಕುಶಾಲನಗರ: ಕೂಡುಮಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿಯಿಂದ ಜನರು ಹೈರಾಣಾಗಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಸದಸ್ಯರು ಆಗ್ರಹಿಸಿದರು.
ಕೂಡುಮಗಳೂರು ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಭಾಸ್ಕರ್ ನಾಯಕ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಬಸವೇಶ್ವರ ಬಡಾವಣೆಯಲ್ಲಿ ಬೀದಿ ನಾಯಿಗಳಿಂದ ಇಬ್ಬರು ಕಡಿತಕ್ಕೊಳಗಾಗಿದ್ದು, ಎರಡು ಆಡುಗಳನ್ನು ಕಡಿದು ಕೊಂದ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಿದರು.
ಮುಂದಿನ ದಿನಗಳಲ್ಲಿ ಮಕ್ಕಳು, ಶಾಲಾ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದರೆ ಯಾರು ಹೊಣೆ ಎಂದು ಪ್ರಶ್ನಿಸಿದ ಸದಸ್ಯ ಕೆ.ಬಿ. ಶಂಶುದ್ಧೀನ್, ಸಾರ್ವಜನಿಕರ ಹಿತದೃಷ್ಟಿಯಿಂದ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಚಿಕ್ಕತ್ತೂರಿನಲ್ಲಿ ಅಕ್ರಮವಾಗಿ ನೆಲೆಸಿರುವವರಿಗೆ ನೀರಿನ ಸಂಪರ್ಕ ಒದಗಿಸುವಂತೆ ಸದಸ್ಯ ದಿನೇಶ್ ಆಗ್ರಹಿಸಿದರೆ, ಕಾನೂನು ರೀತಿಯಲ್ಲಿ ನೀರಿನ ಸಂಪರ್ಕ ಕಲ್ಪಿಸಲು ಸಾಧ್ಯವಾಗುವುದಿಲ್ಲ ಎಂದು ಪಿಡಿಒ ಸಂತೋಷ್ ಉತ್ತರಿಸಿದರು.
ಬಡವರಿಗೆ ನೀರಿನ ಸಂಪರ್ಕ ಕಲ್ಪಿಸಬೇಕು ಎಂದು ಹಿರಿಯ ಸದಸ್ಯರಾದ ಕೆ.ಕೆ. ಬೋಗಪ್ಪ, ಫಿಲೋಮಿನಾ, ಪಾರ್ವತಿ ಧರ್ಮಪ್ಪ ಧ್ವನಿಗೂಡಿಸಿದರು. ಕಾನೂನಾತ್ಮಕವಾಗಿ ಇದಕ್ಕೆ ಅವಕಾಶವಿಲ್ಲ ಎಂದು ಪಿಡಿಒ ಸ್ಪಷ್ಟಪಡಿಸಿದರು.
ಸುಂದರನಗರ ಬಸ್ ತಂಗುದಾಣದಲ್ಲಿ ಮದ್ಯದ ಬಾಟಲಿ ಇನ್ನಿತರ ಅನಗತ್ಯ ವಸ್ತುಗಳು ಬಿದ್ದಿರುತ್ತವೆ. ಮದ್ಯ ವ್ಯಸನಿಗಳು ಮದ್ಯ ಸೇವಿಸುವ ಸ್ಥಳವಾಗಿ ಸಾರ್ವಜನಿಕ ಸ್ಥಳ ಮಾರ್ಪಟ್ಟಿದೆ. ಮಹಿಳೆಯರು, ಮಕ್ಕಳು ತಂಗುದಾಣದಲ್ಲಿ ನಿಲ್ಲಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಬಸ್ ತಂಗುದಾಣವನ್ನು ಪಂಚಾಯಿತಿ ಮಳಿಗೆಯನ್ನಾಗಿ ಪರಿವರ್ತಿಸುವಂತೆ ಸದಸ್ಯ ಕೆ.ಬಿ.ಶಂಶುದ್ಧೀನ್ ಸಲಹೆ ನೀಡಿದರು.
ಇದಕ್ಕೆ ಸದಸ್ಯೆ ಆಶಾ ವೆಂಕಟೇಶ್ ಧ್ವನಿಗೂಡಿಸಿದರು. ಸುಂದರನಗರ ಅಕ್ರಮ ಕಟ್ಟಡದ ಬಗ್ಗೆ ಕೆ.ಬಿ.ಶಂಶುದ್ಧೀನ್ ಮಾಹಿತಿ ಪಡೆದರು. ಆದಷ್ಟು ಕಟ್ಟಡ ಪಂಚಾಯಿತಿ ಸುಪರ್ದಿಗೆ ಬರಲಿದೆ ಎಂದು ಪಿಡಿಒ ಮಾಹಿತಿ ನೀಡಿದರು.
ಬಸವನತ್ತೂರಿಗೆ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸುವಂತೆ ಸದಸ್ಯೆ ಫಿಲೋಮಿನಾ ಆಗ್ರಹಿಸಿದರು. ಇದಕ್ಕೆ ಸದಸ್ಯೆ ಗೌರಮ್ಮ, ಇಂದಿರಾ ರಮೇಶ್ ಸಹಮತ ವ್ಯಕ್ತಪಡಿಸಿದರು. ಹೊಲಿಗೆಯಂತ್ರದ ಫಲಾನುಭವಿಗಳ ಬಗ್ಗೆ, ಸೋಲಾರ್ ಬೀದಿ ದೀಪಗಳ ಬಗ್ಗೆ ಚರ್ಚೆ ನಡೆದವು.
ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿ ಮಮತಾ, ಅವಿನಾಶ್, ಪವಿತ್ರಾ, ಲೈನಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net