ಮಡಿಕೇರಿ: ಕೊಡಗು ಜಿಲ್ಲೆಯ ಸಾರ್ವಜನಿಕರ ಅನುಕೂಲಕ್ಕಾಗಿ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪ್ರಯತ್ನದಿಂದ ಕೇಂದ್ರ ವಿದೇಶಾಂಗ ಸಚಿವಾಲಯ ಸಹಕಾರದಲ್ಲಿ ಪಾಸ್‌ಪೋರ್ಟ್ ಮೇಳಕ್ಕೆ ಬುಧವಾರ ಚಾಲನೆ ದೊರೆಯಿತು.
ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸದಸ್ಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪಾಸ್‌ಪೋರ್ಟ್ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ಕೊಡಗು ಜಿಲ್ಲೆಯ ಜನರು ಪಾಸ್‌ಪೋರ್ಟ್‌ಗಾಗಿ ದೂರದ ಊರಿಗೆ ಹೋಗುತ್ತಿದ್ದರು. ಆ ನಿಟ್ಟಿನಲ್ಲಿ ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡಿಕೊಂಡ ಹಿನ್ನೆಲೆ ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಅವರು ಮೂರು ದಿನಗಳ ಕಾಲ ಪಾಸ್‌ಪೋರ್ಟ್ ಮೇಳ ಹಮ್ಮಿಕೊಂಡಿದ್ದು, ಈಗಾಗಲೇ ನೋಂದಣಿ ಮಾಡಿರುವವರು ಇದರ ಪ್ರಯೋಜನವನ್ನು ಪಡೆಯುವಂತೆ ಕೋರಿದರು.
ಕಳೆದ ಬಾರಿ ನವದೆಹಲಿಗೆ ತೆರಳಿದಾಗ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿಗಳಾದ ಪ್ರಿಯಾ ರಂಗನಾಥನ್ ಅವರನ್ನು ಭೇಟಿ ಮಾಡಿ, ಕೊಡಗು ಜಿಲ್ಲೆಯಲ್ಲಿ ಪಾಸ್‌ಪೋರ್ಟ್ ಮೇಳ ಆಯೋಜಿಸಲು ಮನವಿ ಸಲ್ಲಿಸಿದೆ. ಇದಕ್ಕೆ ಸ್ಪಂದಿಸಿರುವ ಹಿರಿಯ ಅಧಿಕಾರಿಗಳು, ಬೆಂಗಳೂರು ಪಾಸ್‌ಪೋರ್ಟ್ ಕಚೇರಿಗೆ ಸೂಚನೆ ನೀಡಿ ಪಾಸ್‌ಪೋರ್ಟ್ ಮೇಳ ಆಯೋಜಿಸಲು ಕ್ರಮ ಕೈಗೊಂಡಿದ್ದಾರೆ ಎಂದು ಸಂಸದರು ವಿವರಿಸಿದರು.
ಕೊಡಗು ಜಿಲ್ಲೆಯ ನಾಗರಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಸದ ಯದುವೀರ್ ಒಡೆಯರ್ ಹೇಳಿದರು.
ಈ ಸಂದರ್ಭ ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ನಗರಸಭೆ ಸದಸ್ಯರು, ಪಾರ್ಸ್ ಪೋರ್ಟ್ ಮೇಳದ ಅಧಿಕಾರಿಗಳು ಇತರರು ಇದ್ದರು.