ಮಡಿಕೇರಿ:
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸರ್ಕಾರಿ ಶುಶ್ರೂಷಾ ಕಾಲೇಜಿನಲ್ಲಿ ಶುಕ್ರವಾರ (ಮೇ 15) ಮತ್ತು ಶನಿವಾರ (ಮೇ 16) ಎರಡು ದಿನಗಳ ಕಾಲ ಉಪಶಮನ ಆರೈಕೆ ಕಾರ್ಯಗಾರ ನಡೆಯಿತು. ಗಂಭೀರ ಅಥವಾ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ನೋವು, ರೋಗಲಕ್ಷಣಗಳು ಮತ್ತು ಒತ್ತಡವನ್ನು ನಿವಾರಿಸುವ ಮೂಲಕ ಅವರ ಕುಟುಂಬದ ಜೀವನ ಗುಣಮಟ್ಟವನ್ನು ಸುಧಾರಿಸುವ ಮುಖ್ಯ ಉದ್ದೇಶದಿಂದ ಈ ಕಾರ್ಯಾಗಾರವನ್ನು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕ ಡಾ. ಎ.ಜೆ. ಲೋಕೇಶ್ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿತ್ತು.
ಶುಕ್ರವಾರ ನಡೆದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಾಂಶುಪಾಲ ಡಾ. ವಿಶಾಲ್ ಕುಮಾರ್ ಮಾತನಾಡಿ ಮುಂದಿನ ದಿನಗಳಲ್ಲಿ ನರ್ಸಿಂಗ್ ಕಾಲೇಜಿನಿಂದ ಇದೇ ತರದ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲು ಪ್ರೇರೇಪಣೆ ನೀಡಿದಂತಾಗಿದೆ ಎಂದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಲೈಡ್ ಹೆಲ್ತ್ ಸೈನ್ಸ್ ಪ್ರಾಂಶುಪಾಲ ಡಾ. ನರಸಿಂಹ ರೈ ಮಾತನಾಡಿ ಇಂತಹ ಕಾರ್ಯಗಾರಗಳಿಂದ ಹೆಚ್ಚಿನ ವಿಷಯಗಳನ್ನು ಗ್ರಹಿಸಿ ರೋಗಿಗಳಿಗೆ ಉತ್ತಮ ಗುಣಮಟ್ಟದ ಉಪಶಮನ ಆರೈಕೆ ನೀಡುವುದರ ಜೊತೆಗೆ ರೋಗಿಗಳ ಕುಟುಂಬದವರನ್ನು ಸಹ ಆರೈಕೆಯಲ್ಲಿ ಜತೆಗೂಡಿಸಿಕೊಳ್ಳಬಹುದೆಂದು ತಿಳಿಸಿದರು
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಕಾಡೆಮಿಕ್ ರಿಜಿಸ್ಟ್ರಾರ್ ಡಾ. ರವಿಕಿರಣ್ ಕಿಶನ್ ಮಾತನಾಡಿ ಇಂತಹ ವಿವಿಧ ವಿಷಯಗಳ ಬಗ್ಗೆ ನಡೆಯುವ ಕಾರ್ಯಗಾರಗಳಿಂದ ಸಮಾಜದಲ್ಲಿ ಉಪಶಮನ ಆರೈಕೆ ನೀಡುವಲ್ಲಿ ಇಂದಿನ ಯುವ ಪೀಳಿಗೆಗೆ ಭದ್ರ ಬುನಾದಿ ಹಾಕಬಹುದೆಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸರ್ಕಾರಿ ಶುಶ್ರೂಷಾ ಕಾಲೇಜಿನ ಪ್ರಾಂಶುಪಾಲರಾದ ಎ.ಕೆ. ಮಂಜುಳಾ ಉಪಶಮನ ಆರೈಕೆ ಕಾರ್ಯಾಗಾರದ ಮಹತ್ವವನ್ನು ವಿವರಿಸಿದರು.
ಮಣಿಪಾಲದ ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್‌ನ ಸಹಾಯಕ ಪ್ರಾಧ್ಯಾಪಕಿ ಡಾ. ರಾಧಿಕಾ ಆರ್. ಪೈ ಮತ್ತು ಪ್ರಾಧ್ಯಾಪÀಕಿ ಡಾ. ಮಾಲತಿ ಜಿ ನಾಯಕ್ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಎರಡು ದಿನಗಳು ವಿಧ್ಯಾರ್ಥಿಗಳಿಗೆ ಉಪಶಮನ ಆರೈಕೆ ಬಗ್ಗೆ ಸಂಕ್ಷಿಪ್ತವಾಗಿ ವಿಷಯ ಮಂಡಿಸಿದರು.
ಸರ್ಕಾರಿ ಶುಶ್ರೂಷಾ ಕಾಲೇಜಿನ ಸಹ ಪ್ರಾಧ್ಯಾಪಕ ಕೆ.ಪಿ. ಗುರುಪಾದ, ಮುಖ್ಯ ಆಡಳಿತಾಧಿಕಾರಿ ಕೆ.ಎಂ. ರೋಹಿಣಿ, ಸರ್ಕಾರಿ ಶುಶ್ರೂಷಾ ಕಾಲೇಜಿನ ಬೋಧಕ ವೃಂದ, ಆಸ್ಪತ್ರೆಯ ಸಿಬ್ಬಂದಿ, ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು ಇದ್ದರು.