ತಾಲೂಕಿನ ಕೆಲವು ರೈತರು ಹಳೆಯ ಕಾಲದಿಂದ ಬಂದ ಬಿಕೆಬಿ, ಇಂಟಾನ್, ಬಿಳಿಯಾ, ದೊಡ್ಡಿ, ರಾಶಿ, ಕ್ಯಾತರೆ ದೊಡ್ಡಿ, ಸಣ್ಣ ಜೀರಿಗೆಯಂತಹ ದೀರ್ಘಾವಧಿ ತಳಿಯ ಭತ್ತದ ಸಸಿ ಮಡಿಯನ್ನು ಜೂನ್‌ನಲ್ಲಿ ತಯಾರಿಸಿ ಈ ಸಮಯದಲ್ಲಿ ನಾಟಿ ಕಾರ್ಯ ಆರಂಭಿಸುತ್ತಿದ್ದರು. ಆದರೆ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಬಹುತೇಕ ರೈತರಿಗೆ ಸಸಿಮಡಿ ಮಾಡಲು ಸಾಧ್ಯವಾಗಿಲ್ಲ. ಜುಲೈ ಅಂತ್ಯವಾಗುತ್ತಿದ್ದರೂ ಉರಿಬಿಸಿಲು ಮುಂದುವರಿದಿದ್ದು ಗದ್ದೆಗಳಲ್ಲಿ ಸಂಗ್ರಹವಾಗಿದ್ದ ನೀರೂ ಸಹ ಬತ್ತಿ ಹೋಗುತ್ತಿದೆ. ಜಲಮೂಲಗಳಲ್ಲೂ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ತಾಲೂಕಿನ ಕೆಲವು ಕಡೆಗಳಲ್ಲಿ ನೀರಿನ ತೇವಾಂಶ ಉಳಿದಿರುವ ಕೃಷಿ ಭೂಮಿಗಳಲ್ಲಿ ಮಾತ್ರ ಉಳುಮೆ, ಗದ್ದೆ ಸಿದ್ಧತೆ ಹಾಗೂ ಸಸಿಮಡಿ ಕಾರ್ಯಗಳು ನಡೆಯುತ್ತಿದೆ. ಮಳೆ ಸಮರ್ಪಕವಾಗಿ ಸುರಿಯದಿದ್ದರೆ ದೀರ್ಘಾವಧಿ ತಳಿಗಳ ನಾಟಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಇದರಿಂದ ಇಳುವರಿ ಕುಸಿತವಾಗುವ ಆತಂಕವೂ ಎದುರಾಗಿದೆ.