ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ

ಗೌರಿಕೆರೆ ಸಮೀಪ ಶಾಲಿನಿ ಎಂಬುವವರ ಮನೆಯ ತಡೆಗೋಡೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿದ ಎಂಎಲ್ಸಿ ಸುಜಾ ಕುಶಾಲಪ್ಪ ಫರಿಶೀಲನೆ ನಡೆಸಿದರು.
ಗೌರಿಕೆರೆ ಸಮೀಪ ಶಾಲಿನಿ ಎಂಬುವವರ ಮನೆಯ ತಡೆಗೋಡೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿದ ಎಂಎಲ್ಸಿ ಸುಜಾ ಕುಶಾಲಪ್ಪ ಫರಿಶೀಲನೆ ನಡೆಸಿದರು.
Published on
ವಿರಾಜಪೇಟೆ: ಸಮೀಪದ ಗೌರಿಕೆರೆ ಪ್ರದೇಶದಲ್ಲಿ ತಡೆಗೋಡೆ ಕುಸಿತದಿಂದ ಮನೆಗೆ ಹಾನಿಯಾದ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಘಟನೆ ನಡೆದು 20 ದಿನಗಳಾದರೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಂ.ಪಿ. ಸುಜಾ ಕುಶಾಲಪ್ಪ ಅವರು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪುರಸಭೆ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಸಂಬಂಧಪಟ್ಟ ಇಲಾಖೆಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಖಾಸಗಿ ವ್ಯಕ್ತಿಯೊಬ್ಬರು ತಮ್ಮ ಜಾಗದಲ್ಲಿ ಅಕ್ರಮ ಕಾಮಗಾರಿ ನಡೆಸಿದ್ದಾರೆ. ಮನೆಯ ಮಾಲೀಕರಾದ ಶಾಲಿನಿ ಅವರು ಊರಿನಲ್ಲಿ ಇಲ್ಲದ ಸಂದರ್ಭ ಈ ರೀತಿ ಕಾಮಗಾರಿ ಮಾಡಿ ತಡೆಗೋಡೆ ಕುಸಿಯುವಂತೆ ಮಾಡಿದ್ದಾರೆ. ಕಾಮಗಾರಿಯ ಪರಿಣಾಮ, ಪಕ್ಕದಲ್ಲಿರುವ ನಿವಾಸಿ ಶಾಲಿನಿ ಅವರ ಮನೆಯ ಹಿಂಭಾಗದ ತಡೆಗೋಡೆ ಕುಸಿದು ಮನೆಗೆ ಹಾನಿಯಾಗಿದೆ.
ಘಟನೆ ಬಳಿಕ ಸಂತ್ರಸ್ತರಾದ ದಿ.ಸುಕುಮಾರ್ ಅವರ ಪತ್ನಿ ಶಾಲಿನಿ ವಿರಾಜಪೇಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಆದರೆ ಪುರಸಭೆ ಅಧಿಕಾರಿಗಳು ಹಾಗೂ ಅಭಿಯಂತರರು ಸ್ಥಳಕ್ಕೆ ಬಾರದಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಕಾಮಗಾರಿಯಿಂದಾಗಿ ತಡೆಗೋಡೆ ಸಂಪೂರ್ಣವಾಗಿ ಕುಸಿದಿದ್ದು, ಮನೆಯ ಹಿಂಭಾಗ ಅಪಾಯಕ್ಕೆ ಸಿಲುಕಿದೆ. ಪರವಾನಗಿ ತೆಗೆದುಕೊಳ್ಳದೆ ಸ್ಥಳದ ಮಾಲೀಕರು ಅಕ್ರಮವಾಗಿ ಯಂತ್ರಗಳ ಮೂಲಕ ಬರೆಕೊರೆದ ಪರಿಣಾಮ ಸ್ಥಳದಲ್ಲಿ ನೀರು ತುಂಬಿಕೊಂಡು ಕೆರೆಯಾಗಿ ಮಾರ್ಪಾಡಾಗಿದೆ. ಮನೆಯ ತಡೆಗೋಡೆ ಕುಸಿದು ಮಣ್ಣು ಸಡಿಲಗೊಂಡಿದೆ. ಇನ್ನೂ ಹೆಚ್ಚು ಮಳೆಯಾದಲ್ಲಿ ಮನೆ ಸಂಪೂರ್ಣವಾಗಿ ಕುಸಿದು ಬೀಳಲಿದೆ. ಇದರಿಂದ ಜೀವಹಾನಿ ಸಂಭವಿಸುವುದು ಖಚಿತ. ಅಕ್ಕಪಕ್ಕ ಹಲವು ಮನೆಗಳಿದ್ದು, ಅವುಗಳಿಗೂ ಸಮಸ್ಯೆಯಾಗಲಿದೆ.
ಎಂಎಲ್ಸಿ ಸುಜಾ ಕುಶಾಲಪ್ಪ ಮಾತನಾಡಿ, ಮುಂದಿನ ದಿನಗಳಲ್ಲಿ ಮಳೆ ಜೋರಾಗಿ ಬಂದರೆ ಅಪಾಯ ಕಟ್ಟಿಟ್ಟ ಬುತ್ತಿ. ಮನೆಯ ಮಾಲೀಕರು 6 ತಿಂಗಳು ಊರಿನಲ್ಲಿ ಇಲ್ಲದ ಸಂದರ್ಭದಲ್ಲಿ ಅಕ್ರಮವಾಗಿ ಬಂಡೆಗಳನ್ನು ಸ್ಫೋಟಿಸಿದ್ದಾರೆ. ಇದರಿಂದ ಎರಡು ಮನೆಗಳಿಗೆ ಹಾನಿಯಾಗಿದೆ. ಮನೆಯ ಮಾಲೀಕರು ದೂರು ನೀಡಿದರೂ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿಲ್ಲ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆಮಾಡಿ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದರು.
ಈ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ತಕ್ಷಣ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸುವಂತೆ ಮತ್ತು ವಿರಾಜಪೇಟೆ ತಹಸೀಲ್ದಾರ್ ಅವರಿಗೆ ಸಂತ್ರಸ್ತ ಕುಟುಂಬದ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿ ಕ್ರಮಕ್ಕೆ ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಚಾಮಿ ಗ್ರೂಪ್‌ನ ಸುರೇಶ್, ಪ್ರದೀಪ್ ರೈ, ಗೌರಿಕೆರೆ ನಿವಾಸಿ ಸಂತೋಷ್, ವಿರಾಜಪೇಟೆ ಮಂಡಲ ಅಧ್ಯಕ್ಷ ಸುವೀನ್ ಗಣಪತಿ, ಬಿಜೆಪಿಯ ಹಿರಿಯ ಮುಖಂಡ ಪಟ್ರಪಂಡ ರಘು ನಾಣಯ್ಯ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net