ದ್ವಿತೀಯ ಪಿಯುಸಿಯ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಾಧಕ ವಿದ್ಯಾರ್ಥಿಗಳಿಗೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು. ಡಾ. ಅಶೋಕ್ ಸಂಗಪ್ಪ ಆಲೂರ, ಆರ್.ಕೆ. ನಾಗೇಂದ್ರ ಬಾಬು, ಡಾ. ಬಿ.ಡಿ. ಚೈತ್ರ, ವಿ.ಜಿ. ಲೋಕೇಶ್, ಕೆ.ಎಸ್. ಮೂರ್ತಿ ಮತ್ತಿತರರು ಇದ್ದರು.
Published on:
Copied
Follow Us
ಕುಶಾಲನಗರ:
ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡುವುದು, ಈ ನಾಡಿನ ನೆಲ, ಜಲ ಸಂಸ್ಕೃತಿ ಉಪಾಸನೆ ಇಲ್ಲಿನ ಪ್ರತಿಯೊಬ್ಬರ ಉಸಿರಾಗಬೇಕೆಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ್ ಸಂಗಪ್ಪ ಆಲೂರ ಹೇಳಿದರು. ಕುಶಾಲನಗರದ ಅನುಗ್ರಹ ಪದವಿ ಕಾಲೇಜಿನಲ್ಲಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆ ವತಿಯಿಂದ ದ್ವಿತೀಯ ಪಿಯುಸಿಯ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಾಧಕ ವಿದ್ಯಾರ್ಥಿಗಳಿಗೆ ಗುರುವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ಕನ್ನಡ ಭಾಷೆಯನ್ನು ಮಾತನಾಡುವುದು ಹೆಮ್ಮೆಯ ಸಂಗತಿಯಾಗಬೇಕು. ಇತರೇ ಭಾಷೆಗಳನ್ನು ಗೌರವಿಸಿ ನಮ್ಮ ತಾಯಿ ಭಾಷೆಯನ್ನು ಪೂಜಿಸಬೇಕು. ಕನ್ನಡ ಈ ನೆಲದ ಅಸ್ಮಿತೆ ಹಾಗೂ ಸಂಸ್ಕೃತಿ. ಕನ್ನಡದಲ್ಲಿ ಓದಿ ಪರಿಪೂರ್ಣವಾದ ಜೀವನ ನಡೆಸಿದ ಮಹನೀಯರು ನಮಗೆ ಆದರ್ಶರಾಗಬೇಕು. ನಮ್ಮಲ್ಲಿನ ವಿದ್ವತ್ತನ್ನು ಬಳಸಲು ಕನ್ನಡ ಪ್ರೇರಕವಾಗಬೇಕು. ಶಿಕ್ಷಣ ಹೊಟ್ಟೆಪಾಡಿನ ಸಾಧನವಾಗದೇ ನಮ್ಮನ್ನು ಎತ್ತರಕ್ಕೆ ಒಯ್ಯುವ ಸಾಧನವಾಗಬೇಕು. ಸಮಾಜ, ಕುಟುಂಬ, ಪರಿಸರಕ್ಕೆ ಪೂರಕವಾಗುವ ಶಿಕ್ಷಣ ನಮ್ಮದಾಗಬೇಕು. ವಿದ್ಯಾರ್ಥಿಗಳಿಗೆ ವೈದ್ಯಕೀಯ, ಇಂಜಿನಿಯರಿAಗ್ ಎರಡೇ ಆಯ್ಕೆಯಲ್ಲ. ಬಹಳಷ್ಟು ಉಪಯುಕ್ತ ಮಾಹಿತಿಗಳನ್ನು ಪಡೆದು ಸಾಧನೆ ತೋರಬೇಕೆಂದರು.
ಅನುಗ್ರಹ ಕಾಲೇಜಿನ ಧರ್ಮದರ್ಶಿ ಆರ್.ಕೆ. ನಾಗೇಂದ್ರ ಬಾಬು ಮಾತನಾಡಿ ಕನ್ನಡ ಭಾಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಮುಂದಿನ ಶಿಕ್ಷಣಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೂಕ್ತ ಧನಸಹಾಯದೊಂದಿಗೆ ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ. ಸಾಧನೆ ತೋರಿದ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಆ ಮಕ್ಕಳನ್ನು ಮೆರವಣಿಗೆ ಮೂಲಕ ಸತ್ಕರಿಸುವ ಕೆಲಸ ಸಾಮೂಹಿಕವಾಗಿ ನಡೆಯಬೇಕಿದೆ. ಕನ್ನಡ ಭಾಷೆಯಲ್ಲಿ ಅನುತ್ತೀರ್ಣರಾಗುವ ಮಕ್ಕಳಿಗೆ ಹಾಗೂ ಆ ಶಾಲೆಗಳ ಶಿಕ್ಷಕರುಗಳಿಗೆ ಸರ್ಕಾರ ಸೂಕ್ತ ತರಬೇತಿ ಮಾರ್ಗದರ್ಶನ ನೀಡುವ ಕೆಲಸವಾಗಬೇಕು. ಆದರೆ ಶಿಕ್ಷೆಯಿಲ್ಲದ ಶಿಕ್ಷಣದಿಂದಾಗಿ ಸಾಧಿಸುವ ಛಲ ವಿದ್ಯಾರ್ಥಿಗಳಲ್ಲಿ ಮಸುಕಾಗುತ್ತಿದೆ ಎಂದು ಹೇಳಿದರು.
ಕಾಲೇಜು ಪ್ರಾಂಶುಪಾಲೆ ಡಾ. ಬಿ.ಡಿ.ಚೈತ್ರ ಮಾತನಾಡಿ ಇಡೀ ವಿಶ್ವದಲ್ಲಿಯೇ ಅತ್ಯಂತ ಸುಂದರವಾಗಿರುವ ಕನ್ನಡ ಭಾಷೆಯನ್ನು ಬೆಳೆಸುವ ಹಾಗೂ ಗೌರವಿಸುವ ಕೆಲಸ ಇಂದಿನ ಯುವ ಜನಾಂಗದಿAದ ಆಗಬೇಕಿದೆ. ಹಾಗೆಯೇ ತಾಯಿ ಹಾಗೂ ತಾಯ್ನಾಡನ್ನು ಪೂಜಿಸುವಂತಾಗಬೇಕು ಎಂದರು.
ಸುಂಟಿಕೊಪ್ಪ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿ.ಜಿ. ಲೋಕೇಶ್ ಮಾತನಾಡಿ, ಕನ್ನಡ ಭಾಷೆಗಿರುವ ತಾಕತ್ತು ವಿಶ್ವದ ಬೇರಾವುದೇ ಭಾಷೆಗಳಿಗಿಲ್ಲ. ಕನ್ನಡದಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಗೌರವಿಸುವ ಕೆಲಸ ಕನ್ನಡ ಅಭಿಮಾನಿಗಳಿಗೆ ಹೆಮ್ಮೆಯ ಸಂಗತಿ ಎಂದರು.
ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕೆ.ಎಸ್. ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಭಾಷೆಯ ಮೇಲೆ ಯುವ ಜನಾಂಗ ಹೆಚ್ಚು ಸದಾಭಿಮಾನ ಮೂಡಿಸಲು ಪ್ರೇರಣೆಯಾಗುವ ಉದ್ದೇಶದಿಂದ ಕನ್ನಡದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಗೌರವಿಸಲಾಗುತ್ತಿದೆ ಎಂದರು.
ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿ ದರ್ಶನ್ ಕನ್ನಡ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.
ಕುಶಾಲನಗರ ತಹಸೀಲ್ದಾರ್ ಕಿರಣ್ ಗೌರಯ್ಯ, ಕಾಲೇಜಿನ ಧರ್ಮದರ್ಶಿಗಳಾದ ಶ್ಯಾಮಲಾ ನಾಗೇಂದ್ರ, ಚಂದ್ರಶೇಖರ್, ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ಪಾಣತ್ತಲೆ ಗಿರೀಶ್, ಕಾಲೇಜಿನ ಉಪಪ್ರಾಂಶುಪಾಲೆ ಮೇಘನಾ, ಕನ್ನಡ ಭಾಷಾ ಉಪನ್ಯಾಸಕಿ ಲೀಲಾಕುಮಾರಿ ತೊಡಿಕಾನ ಇದ್ದರು.