ಹಬ್ಬದ ಸಂಭ್ರಮವನ್ನು ತಮ್ಮವರೊಂದಿಗೆ ಮಾತ್ರವಲ್ಲದೆ, ಸಮಾಜದ ಹಿರಿಯರೊಂದಿಗೆ ಹಂಚಿಕೊಂಡು ಆಚರಿಸುವ ಮೂಲಕ ಮುತ್ತಪ್ಪ ಮಲಯಾಳಿ ಸಮಾಜ ಮಾನವೀಯತೆ ಸಂದೇಶ ಸಾರಿದೆ.
ಓಣಂ ಹಬ್ಬದ ಅಂಗವಾಗಿ ವಿರಾಜಪೇಟೆಯ ಮುತ್ತಪ್ಪ ಮಲಯಾಳಿ ಸಮಾಜದ ವತಿಯಿಂದ ಹೆಗ್ಗಳ ಗ್ರಾಮದಲ್ಲಿರುವ ಸ್ನೇಹ ಭವನ ವೃದ್ಧಾಶ್ರಮದ ನಿವಾಸಿಗಳಿಗೆ ಭಾನುವಾರ ಓಣಂ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ಸಮಾಜದ ಸದಸ್ಯರು ಆಶ್ರಮಕ್ಕೆ ಭೇಟಿ ನೀಡಿ, ವೃದ್ಧರ ಕುಶಲ ವಿಚಾರಿಸಿ, ಅವರಿಗೆ ಭೋಜನ ಬಡಿಸಿ ಹಬ್ಬದ ಸಂತಸವನ್ನು ಹಂಚಿಕೊಂಡಿದ್ದು ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಅಧ್ಯಕ್ಷ ಪಿ.ಜಿ. ಸುಮೇಶ್, ಕಳೆದ ನಾಲ್ಕು ವರ್ಷಗಳಿಂದ ಓಣಂ ಹಬ್ಬವನ್ನು ವೃದ್ಧರೊಂದಿಗೆ ಆಚರಿಸುತ್ತಿದ್ದೇವೆ. ಇದು ನಮ್ಮೆಲ್ಲರಿಗೆ ಆತ್ಮತೃಪ್ತಿ ನೀಡುವ ಸೇವೆಯಾಗಿದೆ ಎಂದರು.
ಹೆಗ್ಗಳ ಚರ್ಚ್‌ನ ಫಾದರ್ ಮ್ಯಾಥ್ಯೂ ಮಾತನಾಡಿ, ಮುತ್ತಪ್ಪ ಮಲಯಾಳಿ ಸಮಾಜದ ಸದಸ್ಯರು ವಿಭಿನ್ನ ಸೇವಾ ಕಾರ್ಯಗಳ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವುದು ಮಾದರಿಯಾಗಿದೆ ಎಂದರು. ಈ ರೀತಿಯ ಸೇವಾ ಕಾರ್ಯಗಳು ಇನ್ನಷ್ಟು ಹೆಚ್ಚಾಗಲಿ ಎಂದು ಅವರು ಹಾರೈಸಿದರು.
ಕಿಟ್ ವಿತರಣೆ: ಓಣಂ ಆಚರಣೆಯ ಅಂಗವಾಗಿ 46 ಬಡ ಕುಟುಂಬಗಳಿಗೆ ಓಣಂ ಕಿಟ್‌ಗಳನ್ನು ವಿತರಿಸಲಾಯಿತು. ಹಬ್ಬದ ಸಂದರ್ಭದಲ್ಲಿ ಅಗತ್ಯವಿರುವ ಧಾನ್ಯಗಳನ್ನು ನೀಡಿದ್ದು ಸೇವಾ ಕಾರ್ಯದ ಪ್ರತೀಕವಾಗಿತ್ತು.
ಸಮಾಜದ ಗೌರವಾಧ್ಯಕ್ಷ ಪದ್ಮನಾಭ, ಸಲಹೆಗಾರ ವಿಶ್ವನಾಥ್, ಸಹ ಕಾರ್ಯದರ್ಶಿ ರಂಜಿತ್, ನಿರ್ದೇಶಕರಾದ ಕೆ.ಆರ್. ಬಿಂದು ಸೇರಿದಂತೆ ಪದಾಧಿಕಾರಿಗಳು ಇದ್ದರು.