ಕಾವೇರಿ ಮಾತೆಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ
ವಿರಾಜಪೇಟೆ: ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ 1979ನೇ ಸಾಲಿನಲ್ಲಿ ಬಿ.ಎ ವ್ಯಾಸಂಗ ಪೂರ್ಣಗೊಳಿಸಿದ ಹಳೆಯ ವಿದ್ಯಾರ್ಥಿಗಳ ಆರನೇ ವರ್ಷದ ಸಮ್ಮಿಲನ ಕಾರ್ಯಕ್ರಮ ಭಾನುವಾರ ಅತ್ತೂರಿನಲ್ಲಿರುವ ದಿ ಬಾರ್ನ್ ರೆಸಾರ್ಟ್‌ನಲ್ಲಿ ನಡೆಯಿತು.
ಅಮ್ಮಾಟಂಡ ರತಿ, ಬೇಬಿ ರೈ, ವಾಟೇರಿರ ಪುಷ್ಪಾ ಮತ್ತು ಕೊಟ್ರಮಾಡ ಸಾವಿತ್ರಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೆಳಗ್ಗಿನಿಂದಲೇ ಅತಿ ಉತ್ಸಾಹದಿಂದ ಪಾಲ್ಗೊಂಡಿದ್ದ ಹಳೇ ವಿದ್ಯಾರ್ಥಿಗಳು ಹಲವಾರು ರೀತಿಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಭಾಗವಹಿಸಿ ಬಹುಮಾನಗಳನ್ನು ಗಳಿಸುವುದರ ಮೂಲಕ ತಮ್ಮ ಕಾಲೇಜು ದಿನಗಳನ್ನು ಸಂತಸದಿಂದಲೇ ಮೆಲುಕು ಹಾಕಿದರು.
ಕಾವೇರಿ ಕಾಲೇಜು ಅಲುಮ್ನಿ ಅಸೋಸಿಯೇಷನ್ ಕಟ್ಟಡಕ್ಕೆ 6.25 ರೂ.ಗಳನ್ನು ತಮ್ಮ ಬ್ಯಾಚಿನಿಂದ ನೀಡುವಂತೆ ತೀರ್ಮಾನಿದರು. ಚೋನಿರ ದಿನಕರ್ ಮತ್ತು ಪಳಂಗಂಡ ವಾಣಿ ಚೆಂಗಪ್ಪ ಆರು ವರ್ಷಗಳಿಂದ ಸಮ್ಮಿಲನ ಕಾರ್ಯಕ್ರಮ ಸಾಗಿ ಬಂದ ಹಾದಿಯನ್ನು ಕುರಿತು ವಿವರಣೆ ನೀಡಿದರು. ಗುಮ್ಮಟೀರ ಗಂಗಮ್ಮ ವಾರ್ಷಿಕ ವರದಿ ಓದಿದರು. ಮಲ್ಲೆಂಗಡ ಮಧು ಕುಶಾಲಪ್ಪ ಲೆಕ್ಕಪತ್ರ ವರದಿ ಓದಿದರು. ಮಧ್ಯಾಹ್ನದ ಬೋಜನದ ನಂತರ ಮಲ್ಲೆಂಗಡ ಮಧು ಕುಶಾಲಪ್ಪ , ನಾಮೇರ ರವಿ ದೇವಯ್ಯ ಮತ್ತು ಪಳಂಗಂಡ ವಾಣಿಚಂಗಪ್ಪ ಅವರ ಉಪಸ್ಥಿತಿಯಲ್ಲಿ ಮನರಂಜನಾ ಕಾರ್ಯಕ್ರಮ ನಡೆಯಿತು.
ಮೊದಲಿಗೆ 1979ನೇ ಬ್ಯಾಚ್‌ನ ವಿದ್ಯಾರ್ಥಿಯಾಗಿದ್ದ ಕಾವೇರಿ ಕಾಲೇಜಿನ ನಿವೃತ್ತ ಪ್ರೊ ತಿರುನಲ್ಲಿಮಾಡ ದೇವಯ್ಯ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು. ಹಾಗೆಯೇ ವಾಲಗತಾಟ್ ಕಾರ್ಯಕ್ರಮ, ಕವನ ಓದುವುದು, ಕೊಡವ ಕ್ವಿಜ್, ಜೋಕ್ಸ್, ಹಳೆಯ ಕೊಡವ, ಹಿಂದಿ, ಕನ್ನಡ ಹಾಡುಗಳನ್ನು ಪ್ರಸ್ತುತಪಡಿಸಿದರು.