ಇತಿಹಾಸದ ಪುಟ ಸೇರಲಿರುವ ಪುರಾತನ ಸೇತುವೆ

ಕಬ್ಬಿಣ ಸೇತುವೆಯನ್ನು ಕಟ್ಟರ್ ಮತ್ತು ಏರ್ ಕಂಪ್ರೆಷರ್‌ನಿಂದ ತುಂಡರಿಸುತ್ತಿರುವುದು.
ಕಬ್ಬಿಣ ಸೇತುವೆಯನ್ನು ಕಟ್ಟರ್ ಮತ್ತು ಏರ್ ಕಂಪ್ರೆಷರ್‌ನಿಂದ ತುಂಡರಿಸುತ್ತಿರುವುದು.
Published on
ಹಿರಿಕರ ರವಿ ಸೋಮವಾರಪೇಟೆ:
ಚೋರನ ಹೊಳೆಗೆ ಐಗೂರು ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ನಿರ್ಮಾಣವಾಗಿದ್ದ ಬ್ರಿಟಿಷ್‌ರ ಕಾಲದ ಸೇತುವೆಯನ್ನು ಈಗ ಒಡೆಯಲಾಗಿದೆ. ಒಂದುವರೆ ಶತಮಾನಕ್ಕೂ ಮೀರಿ ನಾಗರಿಕ ಸೇವೆ ನೀಡಿದ್ದ ಸೇತುವೆ ಇತಿಹಾಸದ ಪುಟಗಳಿಗೆ ಸೇರಲಿದೆ. ಈ ನಿರ್ಮಿತಿ ಇನ್ನು ಕೇವಲ ನೆನಪಗಾಗಿ ಉಳಿದಿದೆ.
1837ರಲ್ಲಿ ಗಾರೆ ಮತ್ತು ಕಲ್ಲು ಚಪ್ಪಡಿಗಳಿಂದ ನಿರ್ಮಿತವಾದ ಸೇತುವೆಯು ಅನೇಕ ಊರುಗಳಿಗೆ ಸಂಪರ್ಕ ಬೆಸೆದಿತ್ತು. ಅವಧಿ ಮೀರಿದ ಅನೇಕ ನಿರ್ಮಿತಿಗಳಂತೆಯೇ ಈ ಸೇತುವೆಯೂ ಶಿಥಿಲಾವಸ್ಥೆಯತ್ತ ಸಾಗಿದ ಸಲುವಾಗಿ ಮತ್ತು ಈಗಿನ ಕಾಲದ ವಾಹನಗಳ ಸಂಚಾರ ದಟ್ಟಣೆಗೆ ಕಿರಿದಾಯಿತು ಎನ್ನುವ ಕಾರಣದಿಂದ ಈ ಸ್ಥಳದಲ್ಲಿ ಹೊಸ ಸೇತುವೆ ನಿರ್ಮಾಣ ಅನಿವಾರ್ಯವಾಗಿದೆ. ಕೊಡಗು ಪ್ರಾಂತ್ಯದಲ್ಲಿ ಬ್ರಿಟಿಷ್ ಅಧಿಕಾರಿಯಾಗಿದ್ದ ಲಾರ್ಡ್ ಲೂಯಿಸ್ ಆಡಳಿತಾವಧಿಯಲ್ಲಿ ಕಟ್ಟಿದ ಸೇತುವೆ ಅಂದಿನ ತಾಂತ್ರಿಕ ವೈಶಿಷ್ಟ್ಯಗಳನ್ನು ಗಮನಿಸಿದರೆ ಅದು ಆ ಕಾಲದ ಒಂದು ಮಹತ್ವದ ಸಾಧನೆಯಾಗಿತ್ತು. ಒಂದೇ ವಾಹನ ಒಂದು ಸಲ ಏಕ ಮುಖ ಸಂಚಾರ ಮಾಡ ಬಹುದಾದಷ್ಟು ಮಾತ್ರ ಅಗಲ ಇತ್ತು.
ನಿಧಾನಗತಿಯ ವಾಹನ ಸಂಚಾರಕ್ಕೆ ಅನುವಾಗಿ ಇಷ್ಟು ವರ್ಷ ಸೇವೆ ನೀಡಿತ್ತು. ಸುತ್ತಮುತ್ತಲ ಗ್ರಾಮಸ್ಥರ, ಸಂಚಾರಿಗಳ, ಚಾಲಕರ ಭಾವನಾತ್ಮಕ ಕೊಂಡಿಯಾಗಿದ್ದ ಈ ಸೇತುವೆಯಲ್ಲಿ ಕಲ್ಲು ಮತ್ತು ಕಬ್ಬಿಣದ ಸರಳುಗಳ ಜೋಡಣೆ ಬಿರುಕು ಹಲವು ವರ್ಷಗಳ ಹಿಂದೆಯೇ ಕಂಡುಬಂದಿತ್ತು. ಯಾವುದೇ ಅಪಾಯ ಸಂಭವಿಸಬಾರದು ಎಂಬ ಮುನ್ನೆಚ್ಚರಿಕೆಯಿಂದ ತೆರವು ಅನಿವಾರ್ಯವಾಗಿದೆ. ಸಾರ್ವಜನಿಕರ ಬೇಡಿಕೆ ಮೇರೆಗೆ ಕಾಮಗಾರಿಗೆ 10 ಕೋಟಿ ರೂ. ಅನುದಾನ ತಂದ ಶಾಸಕ ಡಾ.ಮಂತರ್‌ಗೌಡ, ಕಾಮಗಾರಿಗೆ ಇತ್ತೀಚೆಗೆ ಚಾಲನೆ ನೀಡಿದ್ದಾರೆ. ಹಳೇ ಸೇತುವೆ ತೆರವು ಕಾರ್ಯ ಶೇ.90ರಷ್ಟು ಮುಗಿದಿದ್ದು, ನೂತನ ಸೇತುವೆ ಕಾಮಗಾರಿ ಶೀಘ್ರವೇ ಪ್ರಾರಂಭವಾಗಲಿದೆ. ಇದೀಗ ಕೇವಲ ಪಿಲ್ಲರ್‌ಗಳನ್ನು ಒಡೆದು ತೆಗೆಯುವುದು ಮಾತ್ರ ಬಾಕಿ ಉಳಿದಿದೆ.
ಉಳಿಸಿಕೊಳ್ಳಬೇಕಿತ್ತು:
1837ರಲ್ಲಿ ನಿರ್ಮಾಣಗೊಂಡಿದ್ದರೂ ಸೇತುವೆಗೆ ಅಳಡಿಸಲಾಗಿದ್ದ ಕಬ್ಬಿಣದ ಸಾಮಗ್ರಿಗಳು ಇನ್ನೂ ತುಕ್ಕು ಹಿಡಿಯದೇ ಬಲಿಷ್ಠವಾಗಿರುವುದು ಕಂಡುಬಂದಿದೆ. ಭೇತ್ರಿ, ಹರದೂರು, ಬಲಮುರಿ, ಮಾದಾಪುರ, ಹಟ್ಟಿಹೊಳೆ, ಕೂಡಿಗೆ ಸೇರಿದಂತೆ ಜಿಲ್ಲೆಯಲ್ಲಿ ಇದುವರೆಗೆ ನಿರ್ಮಾಣಗೊಂಡ ನೂತನ ಸೇತುವೆಯ ಬಳಿ ಹಳೆಯ ಸೇತುವೆಯನ್ನೂ ಉಳಿಸಿಕೊಳ್ಳಲಾಗಿದೆ. ಆದರೆ ಐಗೂರು ಹಳೆಯ ಸೇತುವೆಯನ್ನು ಸಂಪೂರ್ಣ ಕೆಡವಿ ನೂತನವಾಗಿ ನಿರ್ಮಿಸುತ್ತಿದೆ. ಹಳೆಯ ಸೇತುವೆ ಳಿಸಿಕೊಳ್ಳಬಹುದಿತ್ತು ಎಂದು ಈ ಭಾಗದ ಹಿರಿಯರು ಮನದಾಳದ ಭಾವನೆ ವ್ಯಕ್ತಪಡಿಸಿದ್ದರು. ಆದರೆ ಅಕ್ಕ ಪಕ್ಕದ ಪರ್ಯಾಯ ಮಾರ್ಗ ವಾಹನ ಸಂಚಾರ ಮತ್ತು ಸೇತುವೆ ನಿರ್ಮಾಣಕ್ಕೆ ಯೋಗ್ಯವಾಗಿಲ್ಲದ ಕಾರಣ ಭಾವನೆಗಳನ್ನು ದೂರ ಇರಿಸಿ ವಾಸ್ತವದ ಉಪಯೋಗವನ್ನು ಮಾತ್ರ ಪರಿಣತರು ಪರಿಗಣಿಸಿದ್ದಾರೆ. ಕೆಲವೇ ತಿಂಗಳಿನಲ್ಲಿ ಇಲ್ಲಿ ಹೊಸ ಸೇತುವೆ ಮೇಲೆ ವಾಹನ ಸಂಚಾರ ನಡೆಯಲಿದೆ.
6 ತಿಂಗಳೊಳಗೆ ಕಾಮಗಾರಿ ಪೂರ್ಣ:
ಸೋಮವಾರಪೇಟೆ ಪಟ್ಟಣದ ಕಕ್ಕೆಹೊಳೆ ಸೇತುವೆ ಮತ್ತು ಐಗೂರು ಕಬ್ಬಿಣ ಸೇತುವೆ ಶಿಥಿಲ ಗೊಂಡಿರುವ ಬಗ್ಗೆ ವಿಶೇಷ ಗಮನ ಹರಿಸಿ ಲೋಕೋಪಯೋಗಿ ಇಲಾಖೆ ಸಚಿವರೊಂದಿಗೆ ಚರ್ಚಿಸಿದೆ. ಅವರು ವಿಶೇಷ ಅನುದಾನ ಬಿಡುಗಡೆ ಮಾಡಿಸಿಕೊಟ್ಟಿದ್ದಾರೆ. ಕಕ್ಕೆಹೊಳೆ ಸೇತುವೆ ಈಗಾಗಲೇ ಲೋಕಾರ್ಪಣೆಯಾಗಿದೆ. ಕಬ್ಬಿಣ ಸೇತುವೆ ಕಾಮಗಾರಿ ಮುಂದಿನ 6 ತಿಂಗಳೊಳಗೆ ಪೂರ್ಣಗೊಳ್ಳಲಿದೆ. ಎಂಬ ಭರವಸೆ ಇದೆ ಎನ್ನುತ್ತಾರೆ ಶಾಸಕ ಡಾ.ಮಂತರ್‌ಗೌಡ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net