

ಪ್ರಮುಖ ಮುಖ್ಯಾಂಶಗಳು
ಸಿ .ಕೆ. ಜಾಫರ್ ಷರೀಫ್ ರೈಲ್ವೇ ಮಂತ್ರಿಯಾಗಿದ್ದಾಗ ಕುಶಾಲನಗರಕ್ಕೆ ರೈಲ್ವೇ ಸಂಪರ್ಕ ಯೋಜನೆ ಜನ್ಮ ತಾಳಿತ್ತು. ಕೆ.ಎಚ್. ಮುನಿಯಪ್ಪ ರೈಲ್ವೇ ಮಂತ್ರಿಯಾಗಿದ್ದಾಗ ಈ ಯೋಜನೆಗೆ ಪೂರಕ ವೇಗ ದೊರೆತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕೇವಲ ರಾಜಕೀಯ ಕಾರಣಗಳಿಗೋಸ್ಕರ ಇದು ನೆನೆಗುದಿಗೆ ಬಿದ್ದು ಯೋಜನೆಯೇ ತಳ ಕಂಡಿದೆ. ಪಕ್ಷ ಭೇದವಿರದೇ ಇದಕ್ಕಾಗಿ ಪ್ರಯತ್ನಿಸಿದ್ದಲ್ಲಿ ಈ ಯೋಜನೆ ಕಾರ್ಯಗತವಾಗುತ್ತಿತ್ತು.
ಮೈಸೂರು-ಕುಶಾಲನಗರ ರೈಲ್ವೆ ಮಾರ್ಗ ಸೇರಿದಂತೆ ಹಲವು ಯೋಜನೆಗಳಿಗೆ ಅಗತ್ಯವಿರುವ ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ. ಸರ್ಕಾರದ ಬಳಿ ಹಣ ಇಲ್ಲ ಎನ್ನುವ ಕಾರಣ ನೀಡಿ ಯೋಜನೆಯನ್ನು ವಿಳಂಬ ಮಾಡಲಾಗುತ್ತಿದೆ. ಇದರಿಂದಾಗಿಯೇ ಮೈಸೂರು-ಕುಶಾಲನಗರ ರೈಲ್ವೆ ಮಾರ್ಗ ನಿರ್ಮಾಣ ಯೋಜನೆ ಸ್ಥಗಿತಗೊಳ್ಳುವಂತಾಗಿದೆ. ಆದರೆ ಯೊಜನೆ ರದ್ದಾಗಿಲ್ಲ. ರೈಲ್ವೇ ಇಲಾಖೆ ಮಾನದಂಡಗಳ ಪ್ರಕಾರ ಮೈಸೂರು-ಕುಶಾಲನಗರ ರೈಲ್ವೆ ಮಾರ್ಗ ಲಾಭದಾಯಕ ಅಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಇಲ್ಲಿ ಲಾಭಕ್ಕಿಂತ ಸಾಮಾಜಿಕ ದೃಷ್ಟಿಕೋನವೂ ಮುಖ್ಯವಾಗಿದ್ದು ವಿಷಯವನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಿ ಯೋಜನೆಗೆ ಮರುಜೀವ ಕೊಡಲಾಗುವುದು. ಈ ಯೋಜನೆಯಲ್ಲಿ ರೈಲು ಕುಶಾಲನಗರ ತನಕ ಮಾತ್ರ ಬರುವುದರಿಂದ ಕೊಡಗಿನ ಪರಿಸರದ ಮೇಲೆ ಯಾವುದೇ ಹಾನಿ ಆಗುವುದಿಲ್ಲ.
ಸೂಕ್ತ ಆದಾಯ ಬರುವುದಿಲ್ಲ ಎನ್ನುವ ಕಾರಣಕ್ಕೆ ಮೈಸೂರು-ಕುಶಾಲನಗರ ರೈಲ್ವೇ ಯೋಜನೆ ರದ್ದಾಗಿದೆ. ರೈಲ್ವೇ ಅಧಿಕಾರಿಗಳೇ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಭೂಸ್ವಾಧೀನ ಪ್ರಕ್ರಿಯೆ ನಡೆಯದ್ದರಿಂದ ಯೋಜನೆ ರದ್ದಾಗಿದೆ ಎನ್ನುವುದು ಸರಿಯಲ್ಲ. 87 ಕಿಮೀ ಉದ್ದದ ಈ ರೈಲ್ವೇ ಯೋಜನೆಗಾಗಿ 1,379 ಎಕರೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಈಗಾಗಲೇ ಪೂರ್ಣಗೊಳಿಸಿದೆ.
ಮೈಸೂರು-ಕುಶಾಲನಗರ ರೈಲ್ವೇ ಮಾರ್ಗ ನಿರ್ಮಾಣ ಯೋಜನೆ ರದ್ದಾಗಿರುವುದೇ ಉತ್ತಮ. ಈ ಯೋಜನೆಯಿಂದ ಪರಿಸರಕ್ಕೆ ಹಾನಿ ಇಲ್ಲ ಎಂದು ಹೇಳುತ್ತಾರೆ. ಆದರೆ ಕೊಡಗಿನ ಸಾಮಾಜಿಕ ವ್ಯವಸ್ಥೆ ಮೇಲೆ ದೊಡ್ಡ ಪ್ರಮಾಣದಲ್ಲಿ ದುಷ್ಪರಿಣಾಮ ಬೀರಲಿದೆ. ಅಕ್ರಮ ವಲಸಿಗರು ದೊಡ್ಡ ಪ್ರಮಾಣದಲ್ಲಿ ಜಿಲ್ಲೆಗೆ ಬರಲಿದ್ದಾರೆ. ಬಸ್, ಲಾರಿ ಸೇರಿದಂತೆ ರಸ್ತೆ ಸಾರಿಗೆ ವ್ಯವಸ್ಥೆ ಚೆನ್ನಾಗಿದ್ದು, ಎಲ್ಲಾ ಕಡೆಗೂ ಸುಲಭ ಸಂಪರ್ಕ ಇರುವುದರಿಂದ ರೈಲ್ವೇಯಂಥ ದುಬಾರಿ ವೆಚ್ಚದ ಯೋಜನೆ ಕೊಡಗಿಗೆ ಬೇಕಿಲ್ಲ. ಈ ಹಣವನ್ನು ಬೇರೆ ಅಭಿವೃದ್ಧಿ ಕಾರ್ಯಕ್ಕೆ ವಿನಿಯೋಗಿಸಲಿ. ಯೋಜನೆ ಶಾಶ್ವತವಾಗಿ ರದ್ದಾಗಲಿ.