ಸಾವಿನ ಮುಂದೆ ರಾಜಕೀಯ ಬೇಡ

ಟಾಟುಮೊಣ್ಣಪ್ಪ
ಟಾಟುಮೊಣ್ಣಪ್ಪ
Published on
ಗೋಣಿಕೊಪ್ಪಲು:
ಸಾವಿನ ಮುಂದೆ ರಾಜಕೀಯ ನಡೆಸುವುದು ಬಿಜೆಪಿಯ ಮನೋವಿಕಾರತೆಯಗಿದೆ ಎಂದು ಕಾಂಗ್ರೆಸ್ ವಕ್ತಾರ ಆಪಟ್ಟೀರ ಟಾಟು ಮೊಣ್ಣಪ್ಪ ಹೇಳಿದ್ದಾರೆ. ಕೊಡಗಿನಲ್ಲಿ ಆನೆ ದಾಳಿ ಪ್ರಕರಣಗಳನ್ನು ಖಂಡಿಸಿ ಬಿಜೆಪಿ ಶುಕ್ರವಾರ ಮಡಿಕೇರಿಯಲ್ಲಿ ನಡೆಸಿದ ಪ್ರತಿಭಟನೆ ಬಗ್ಗೆ ಮಾತನಾಡಿದ ಅವರು ಬಿಜೆಪಿಯವರು ಕೊಡಗಿನ ಜ್ವಲಂತ ಸಮಸ್ಯೆಗಳಿಗೆ ಪಕ್ಷಭೇದ ಮರೆತು ಸ್ಪಂದಿಸುವ ಮನೋಭಾವ ವೃದ್ಧಿಸಿಕೊಳ್ಳಲಿ. ವಿನಾಕಾರಣ ಆಪಾದನೆಗಳನ್ನು ಮುಂದಿಟ್ಟುಕೊAಡು ಪ್ರತಿಭಟನೆ ನಡೆಸುವುದು ಸಾಧನೆಯಲ್ಲ. ಕಳೆದ 20 ವರ್ಷಗಳ ಬಿಜೆಪಿ ಆಡಳಿತದಲ್ಲಿ ಕೊಡಗಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಇಂದಿಗೂ ಮಾನವ ಮತ್ತು ವನ್ಯಜೀವಿ ಸಂಘರ್ಷ ನಿರಂತರವಾಗಿ ನಡೆಯುತ್ತಿದೆ. ಬಿಜೆಪಿ ಆಡಳಿತದಲ್ಲಿ ಬಗೆಹರಿಸಲಾಗದ ಸಮಸ್ಯೆಯನ್ನು ಕಳೆದ ಮೂರು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಶಾಸಕರುಗಳು ಬಗೆಹರಿಸಬೇಕು ಎಂಬ ನಿರೀಕ್ಷೆ ಹೊಂದುವುದು ಮೂರ್ಖತನವಾಗಿದೆ ಎಂದು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಅರಣ್ಯ ನೀತಿಯ ನಡುವೆ ಕೊಡಗಿನಲ್ಲಿ ಹುಲಿ ಹಿಡಿಯಲು ಮತ್ತು ಆನೆ ಸೆರೆ ಹಿಡಿದು ಸ್ಥಳಾಂತರ ಮಾಡಲು ಶಾಸಕ ಪೊನ್ನಣ್ಣ ಸಫಲತೆಯ ಕಾರ್ಯ ಮುಂದುವರಿಸಿದ್ದಾರೆ. ವನ್ಯಪ್ರಾಣಿ ಮತ್ತು ಮಾನವ ಸಂಘರ್ಷದ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಶಾಶ್ವತ ಪರಿಹಾರ ಕ್ರಮಕ್ಕೆ ಆಲೋಚನಪರರಾಗಿ ಹಲವು ಯೋಜನೆ ತಂದಿದ್ದಾರೆ. ರೈಲ್ವೆ ಬ್ಯಾರಿಕೆಡ್ ಅಳವಡಿಕೆಗೆ 20 ಕೋಟಿ ರೂ. ಅನುದಾನ ತಂದು ಕಾಮಗಾರಿಗೆ ಚಾಲನೆ ನೀಡಿದ್ದಾರೆ. ತಕ್ಷಣವೇ ಹುಲಿಗಳನ್ನು ಹಿಡಿಯಲು ಮತ್ತು ಆನೆಗಳನ್ನು ಸೆರೆ ಹಿಡಿಯಲು ಕ್ರಮ ಕೈಗೊಂಡಿದ್ದಾರೆ. ಜತೆಗೆ ವನ್ಯ ಪ್ರಾಣಿಗಳ ಹಾವಳಿಯಿಂದ ಎದುರಾದ ಸಾವು ನೋವುಗಳಿಗೆ ಪರಿಹಾರವನ್ನು ತಕ್ಷಣ ಒದಗಿಸಲು ಸಹ ಜಾಗೃತ ಹೆಜ್ಜೆಗಳನ್ನು ಇಟ್ಟಿದ್ದಾರೆ. ತಕ್ಷಣದ ಹೋರಾಟದಿಂದ ಯಾವುದೇ ಪ್ರತಿಫಲ ಇರುವುದಿಲ್ಲ. ಕೊಡಗಿನ ಸಮಸ್ಯೆಗಳನ್ನು ಬಗೆಹರಿಸುವ ಚಿಂತನೆ ಇದ್ದಲ್ಲಿ ಮತ್ತು ಕೊಡಗಿನ ಜನರ ಬಗ್ಗೆ ಕಾಳಜಿ ಇದ್ದಲ್ಲಿ ಪಕ್ಷಭೇದ ಮರೆತು ಸಮಸ್ಯೆ ಪರಿಹಾರಕ್ಕೆ ಕೈಜೋಡಿಸಲು ಬಿಜೆಪಿ ಕೈಜೋಡಿಸಲಿ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಕೊಲ್ಲೀರ ಬೋಪಣ್ಣ ಮಾತನಾಡಿ, ಶಾಸಕರ ವಿರುದ್ಧ ಪ್ರತಿಭಟನೆ, ಧಿಕ್ಕಾರ ಕೂಗುವುದು ಸರಿಯಾದ ವಿಚಾರವಲ್ಲ, ಶಾಸಕರಿಗೆ ಇರುವಷ್ಟೇ ಜವಾಬ್ದಾರಿ ಬಿಜೆಪಿಯ ಸಂಸದರಿಗೆ ಇರುತ್ತದೆ ಎನ್ನುವುದನ್ನು ಅರಿತುಕೊಳ್ಳಬೇಕು. ಜತೆಗೆ ಮಾಜಿ ಶಾಸಕರಿಗೂ ಈ ಜವಾಬ್ದಾರಿ ಇದೆ. ಆರೋಪಗಳನ್ನ ಮಾಡುತ್ತ ಪ್ರತಿಭಟನೆ ನಡೆಸುವುದರಲ್ಲಿ ಕೊಡಗಿನ ಸಮಸ್ಯೆ ಬಗೆಹರಿಯುವುದಿಲ್ಲ ಎಂದರು.
ಗೋಣಿಕೊಪ್ಪ ಗ್ರಾ.ಪಂ. ಅಧ್ಯಕ್ಷ ಕುಲ್ಲಚಂಡ ಪ್ರಮೋದ್‌ಗಣಪತಿ, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣೀರ ಹರೀಶ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಎ.ಜೆ. ಬಾಬು ಸುದ್ದಿಗೋಷ್ಠಿಯಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net