ಕೇಳುವರಿಲ್ಲ ಹಾಡಿವಾಸಿಗಳ ಪಾಡು

ದುಬಾರೆ ಗಿರಿಜನ ಹಾಡಿ ನಿವಾಸಿಗಳು ವಾಸ ಮಾಡುವ ಜೋಪಡಿ
ದುಬಾರೆ ಗಿರಿಜನ ಹಾಡಿ ನಿವಾಸಿಗಳು ವಾಸ ಮಾಡುವ ಜೋಪಡಿ
Published on

ಪ್ರಮುಖ ಮುಖ್ಯಾಂಶಗಳು

  • ದುಬಾರೆ ಗಿರಿಜನ ಹಾಡಿಯಲ್ಲಿ ಸಮಸ್ಯೆ
  • ಮೂಲಭೂತ ಸೌಕರ್ಯ ವಂಚಿತ ಹಾಡಿ
  • ತೂಗು ಸೇತುವೆಗೆ ಒತ್ತಾಯ
ಮಡಿಕೇರಿ:
ವಿಶ್ವಪ್ರಸಿದ್ಧ ಪ್ರವಾಸಿತಾಣ ದುಬಾರೆ ಸಾಕಾನೆ ಶಿಬಿರಕ್ಕೆ ಹೊಂದಿಕೊAಡAತಿರುವ ದುಬಾರೆ ಗಿರಿಜನ ಹಾಡಿಯ ನಿವಾಸಿಗಳು ಇನ್ನು ಕೂಡ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿ ಬದುಕುತ್ತಿದ್ದಾರೆ. ಸರಿಯಾದ ರಸ್ತೆ, ಮನೆ, ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲದೆ ಇಲ್ಲಿಯ ನಿವಾಸಿಗಳದ್ದು ಸಂಕಷ್ಟದ ಬದುಕಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳ ಭರವಸೆಗಳು ಭರವಸೆಗಳಾಗಿಯೇ ಉಳಿದಿವೆ.
ದುಬಾರೆ ಸಾಕಾನೆ ಶಿಬಿರಕ್ಕೆ ಪ್ರತಿದಿನವೂ ಭೇಟಿ ನೀಡುವ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುವ ಆನೆಗಳನ್ನು ತಮ್ಮ ಕೈಯಲ್ಲಿನ ಅಂಕುಶದಿAದ ನಿಯಂತ್ರಿಸುತ್ತಾ ಹೀರೋಗಳಂತೆ ಕಾಣಿಸಿಕೊಳ್ಳುವ ಮಾವುತರ ಕುಟುಂಬಗಳು ಸೇರಿದಂತೆ ದುಬಾರೆ ಗಿರಿಜನ ಹಾಡಿಯ ಸುಮಾರು 180 ಕುಟುಂಬಗಳು ಮುಖ್ಯವಾಹಿನಿಯಿಂದ ದೂರವೇ ಉಳಿದಿರುವಂತೆ ಕಂಡುಬರುತ್ತದೆ. ಪಕ್ಕದಲ್ಲೇ ಇರುವ ಐಶಾರಾಮಿ ರೆಸಾರ್ಟ್ನಲ್ಲಿ ಝಗಮಗಿಸುವ ವಿದ್ಯುತ್ ಬೆಳಕಿದ್ದರೆ ಹಾಡಿಯ ಗುಡಿಸಲುಗಳಿಂದ ಚಿಮಣಿ ದೀಪದ ಬೆಳಕು ಮೆಲ್ಲನೇ ಇಣುಕುತ್ತದೆ.
ಇಲ್ಲೊಂದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೆ. ಒಬ್ಬರು ಕಾಯಂ ಶಿಕ್ಷಕರು, ಇಬ್ಬರು ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿದ್ದಾರೆ. ಇಲ್ಲಿನ ಮಕ್ಕಳಿಗಾಗಿ ದಾನಿಗಳು ಕಂಪ್ಯೂಟರ್ ಕೊಟ್ಟಿದ್ದಾರೆ. ಆದರೆ ಶಾಲೆಗೆ ವಿದ್ಯುತ್ ಸಂಪರ್ಕವೇ ಇಲ್ಲ. ಶಾಲೆಯ ಸುತ್ತಲೂ ಆವರಣ ಗೋಡೆಯೂ ಇಲ್ಲದಿರುವುದರಿಂದ ಬೇಲಿ ಹಾಕಿಕೊಳ್ಳಲಾಗಿದೆ. ಇಲ್ಲಿರುವ ಕಾಡು ದನಗಳು ಈ ಬೇಲಿ ಹಾರಿ ರಾತ್ರಿ ವೇಳೆ ಶಾಲಾ ಆವರಣದಲ್ಲೇ ಮಲಗಿಕೊಳ್ಳುತ್ತವೆ. ಶಿಕ್ಷಕರು, ಅಡುಗೆಯವರು, ಮಕ್ಕಳು ಬೆಳಗ್ಗೆ ಬಂದು ಇಲ್ಲಿ ಸಗಣಿ ಎತ್ತುವ ಸ್ಥಿತಿ ಇದೆ.
ಉತ್ತಮವಾದ ಅಂಗನವಾಡಿ ಕಟ್ಟಡವೇನೋ ಇಲ್ಲಿ ಇದೆ. ಆದರೆ ಅಂಗನವಾಡಿ ಶಿಕ್ಷಕಿ ನಿವೃತ್ತರಾಗಿ 2 ವರ್ಷ ಆದರೂ ಬೇರೆ ನೇಮಕಾತಿ ನಡೆದಿಲ್ಲ. ಸಹಾಯಕಿಯೂ ಇಲ್ಲ. ಹಾಗಾಗಿ ಅಂಗನವಾಡಿಗೆ ಬಂದು ಮೂಲ ಶಿಕ್ಷಣ ಪಡೆಯಬೇಕಿದ್ದ ಹಾಡಿಯ ಮಕ್ಕಳು ಜೋಪಡಿಗಳಲ್ಲೇ ಕಾಲ ಕಳೆಯುವಂತೆ ಆಗಿದೆ. ಸರ್ಕಾರದ ಪೌಷ್ಠಿಕ ಆಹಾರ ಶಾಲೆ ಮುಖಾಂತರ ವಿತರಿಸಲಾಗುತ್ತಿದ್ದರೂ ಅದು ಕೂಡ ಸರಿಯಾಗಿ ಫಲಾನುಭವಿಗಳಿಗೆ ದೊರಕದಿರುವ ಬಗ್ಗೆ ದೂರುಗಳಿವೆ.
ಹಾಡಿಯ ಜನರು ಪೇಟೆ, ಆಸ್ಪತ್ರೆ ಮತ್ತಿತರ ಕೆಲಸಗಳಿಗೆ ಕಾವೇರಿ ನದಿಯನ್ನು ದಾಟಬೇಕು. ಬೇಸಿಗೆಯಲ್ಲಿ ನೀರು ಕಡಿಮೆ ಇರುವುದರಿಂದ ನದಿಯಲ್ಲಿರುವ ಕಲ್ಲುಗಳ ಮೂಲಕ ಮತ್ತೊಂದು ಬದಿಗೆ ಹೋಗಬಹುದು. ಮಳೆಗಾಲದಲ್ಲಿ ನದಿ ತುಂಬಿ ಹರಿಯುವುದರಿಂದ ಅಪಾಯಕಾರಿ ಪರಿಸ್ಥಿತಿಯಲ್ಲಿ ದೋಣಿ ಮೂಲಕ ದಾಟಬೇಕು. ಮೀಸಲು ಅರಣ್ಯದೊಳಗೆ ರಸ್ತೆ ಮೂಲಕ 10 ಕಿಮೀ ಕ್ರಮಿಸಿದರೆ ಮಾಲ್ದಾರೆಗೆ ತಲುಪಬಹುದು. ಪಡಿತರ ಇಲ್ಲಿಂದಲೇ ತರಬೇಕು. ಆದರೆ ಈ ರಸ್ತೆ ಕಚ್ಚಾ ರಸ್ತೆಯಾಗಿದ್ದು ಸಂಪೂರ್ಣ ಹದಗೆಟ್ಟಿದೆ.
ಹಾಡಿಯಲ್ಲಿರುವ ಬಹುತೇಕ ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲ. ಹಿಂದೊಮ್ಮೆ ಸೋಲಾರ್ ವಿದ್ಯುತ್ ವ್ಯವಸ್ಥೆ ಮಾಡಿದ್ದರೂ ನಿರ್ವಹಣೆ ಕೊರತೆಯಿಂದ ಅವುಗಳು ಹಾಳಾಗಿವೆ. ಈಗ ಕೆಲವು ಮನೆಗಳಿಗೆ ಮಾತ್ರ ವಿದ್ಯುತ್ ಬೆಳಕಿನ ಭಾಗ್ಯ ಸಿಕ್ಕಿದೆ. ಹೆಚ್ಚಿನವರಿಗೆ ರೇಷನ್ ಕಾರ್ಡ್, ಆಧಾರ್ ಕಾಡ್ ಇಲ್ಲದಿರುವುದರಿಂದ ಸರ್ಕಾರಿ ಸವಲತ್ತುಗಳನ್ನು ಪಡೆದುಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ. ಮತ್ತೆ ಕೆಲವರು ಸರ್ಕಾರದ ಪೌಷ್ಠಿಕ ಆಹಾರ ಯೋಜನೆಯಿಂದಲೂ ವಂಚಿತರಾಗಿದ್ದಾರೆ.
ಇಲ್ಲಿಯ ಸಮಸ್ಯೆಗಳ ಬಗ್ಗೆ ಸಂಬAಧಿಸಿದ ಇಲಾಖೆಗಳ ಗಮನ ಸೆಳೆಯುವ ಪ್ರಯತ್ನ ಮಾಡಲಾಗಿದ್ದು, ಆದಷ್ಟು ಶೀಘ್ರ ಪರಿಹಾರ ಸಿಗುವ ನಿರೀಕ್ಷೆಯಲ್ಲಿ ಸ್ಥಳೀಯರು ಇದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net