ಟಿಸ್ಯೂ ಕಲ್ಚರ್‌ನಿಂದ ಹೊಸ ಕಾಫಿ ತಳಿ

ಟಿಸ್ಯೂ ಕಲ್ಚರ್ ತಂತ್ರಜ್ಞಾನದ ಮೂಲಕ ಅಭಿವೃದ್ಧಿಪಡಿಸಲಾದ ಕಾಫಿ ಗಿಡ
ಟಿಸ್ಯೂ ಕಲ್ಚರ್ ತಂತ್ರಜ್ಞಾನದ ಮೂಲಕ ಅಭಿವೃದ್ಧಿಪಡಿಸಲಾದ ಕಾಫಿ ಗಿಡ
Published on
ಮಡಿಕೇರಿ:
ಕಾಫಿ ಗಿಡಗಳ ಅಭಿವೃದ್ಧಿಗೂ ಟಿಸ್ಯೂ ಕಲ್ಚರ್ ತಂತ್ರಜ್ಞಾನದ ಬಳಕೆ ಈಗ ಸಾಧ್ಯವಾಗಿದೆ. ಕಾಫಿ ತಳಿಗಳ ಅಭಿವೃದ್ಧಿಗೆ ಇನ್ನು ಕೇವಲ ಬೀಜ ಮತ್ತು ಚಿಗುರುಗಳ ಮೂಲಕ ಮಾತ್ರ ನಡೆಯುತ್ತಿದ್ದ ಕಾಲ ಮುಗಿದಿದೆ. ಗಿಡದ ಒಂದು ಸಣ್ಣ ಎಲೆಯ ಭಾಗದಿಂದಲೇ ಸಾವಿರಾರು ಕಾಫಿ ಗಿಡಗಳನ್ನು ಉತ್ಪಾದಿಸುವ ಟಿಸ್ಯೂ ಕಲ್ಚರ್ ವಿಧಾನವನ್ನು ಚೆಟ್ಟಳ್ಳಿಯ ಕಾಫಿ ಸಂಶೋಧನಾ ಉಪ ಕೇಂದ್ರದಲ್ಲಿ ರೂಪಿಸಲಾಗಿದೆ.
ಕಾಫಿ ಬೆಳೆಗಾರರಿಗೆ ಸವಾಲಾಗಿ ಕಾಡುತ್ತಿರುವ ಹವಾಮಾನ ಬದಲಾವಣೆ, ಹೆಚ್ಚುತ್ತಿರುವ ತಾಪಮಾನ, ಅನಿಯಮಿತ ಮಳೆ, ಹೊಸ ರೋಗಗಳು ಹಾಗೂ ಕೀಟಗಳ ಹಾವಳಿ ಮತ್ತು ಇಳಿಮುಖವಾಗುತ್ತಿರುವ ಉತ್ಪಾದನೆ ಹೊಸ ಅನ್ವೇಷಣೆಗಳಿಗೆ ಪ್ರೇರಪಣೆ ನೀಡಿದೆ. ಈ ಹಿನ್ನೆಲೆಯಲ್ಲಿ ಹೆಚ್ಚು ಇಳುವರಿ ನೀಡುವ, ರೋಗ ನಿರೋಧಕ ಮತ್ತು ಹವಾಮಾನ ವೈಪರೀತ್ಯಗಳನ್ನು ತಡೆದುಕೊಳ್ಳಬಲ್ಲ ಹೊಸ ಕಾಫಿ ತಳಿಗಳನ್ನು ಅಭಿವೃದ್ಧಿಪಡಿಸುವ ಕಾರ್ಯಕ್ಕೆ ವಿಜ್ಞಾನಿಗಳು ಮುಂದಾಗಿದ್ದು, ಟಿಸ್ಯೂ ಕಲ್ಚರ್ ತಂತ್ರಜ್ಞಾನದ ಮೂಲಕ ಕಾಫಿ ಗಿಡ ಬೆಳೆಯುವಲ್ಲಿ ಯಶಸ್ವಿ ಆಗಿದ್ದಾರೆ.
ಬೀಜದಿಂದ ಬೆಳೆದ ಗಿಡಗಳಲ್ಲಿ ಗುಣಲಕ್ಷಣಗಳಲ್ಲಿ ವ್ಯತ್ಯಾಸ ಕಂಡುಬರುವ ಸಾಧ್ಯತೆ ಇದೆ. ರೋಗಪೀಡಿತವೂ ಆಗಬಹುದು. ಆದರೆ ಟಿಸ್ಯೂ ಕಲ್ಚರ್ ಮೂಲಕ ಉತ್ಪಾದನೆಯಾಗುವ ಗಿಡಗಳು ತಾಯಿ ಗಿಡದ ಎಲ್ಲಾ ಉತ್ತಮ ಗುಣಗಳನ್ನು ಉಳಿಸಿಕೊಳ್ಳುತ್ತವೆ. ಇದರಿಂದ ಸಮಾನ ಬೆಳವಣಿಗೆ, ಉತ್ತಮ ಇಳುವರಿ, ಉತ್ತಮ ಗುಣಮಟ್ಟದ ಕಾಫಿ ಬೀಜಗಳು ಹಾಗೂ ಗಿಡಗಳಿಗೆ ರೋಗ ನಿರೋಧಕ ಶಕ್ತಿ ದೊರೆಯುತ್ತದೆ.
ಟಿಸ್ಯೂ ಕಲ್ಚರ್ ಎನ್ನುವುದು ಸಸ್ಯದ ಒಂದು ಸಣ್ಣ ಜೀವಂತ ಭಾಗವಾದ ಎಲೆ, ಕಾಂಡ ಅಥವಾ ಮೊಗ್ಗನ್ನು ಸಂಪೂರ್ಣ ನೈರ್ಮಲ್ಯಯುತ ಪ್ರಯೋಗಾಲಯ ಪರಿಸರದಲ್ಲಿ ಪೋಷಕಾಂಶಯುಕ್ತ ಮಾಧ್ಯಮದಲ್ಲಿ ಬೆಳೆಸುವ ವೈಜ್ಞಾನಿಕ ವಿಧಾನವಾಗಿದೆ. ಈ ಕೋಶಗಳು ಕ್ರಮೇಣ ವೃದ್ಧಿಹೊಂದಿ ಸಂಪೂರ್ಣ ಗಿಡಗಳಾಗಿ ರೂಪುಗೊಳ್ಳುತ್ತವೆ.
ಟಿಸ್ಯೂ ಕಲ್ಚರ್ ಮೂಲಕ ಕಾಫಿ ಗಿಡಗಳ ಅಭಿವೃದ್ಧಿ ಯೋಜನೆಯನ್ನು ಮೊದಲಿಗೆ ಮೈಸೂರಿನ ಕಾಫಿ ಮಂಡಳಿ ಕೇಂದ್ರದಲ್ಲಿ ಆರಂಭಿಸಲಾಗಿತ್ತು. ಅಲ್ಲಿನ ಯಶಸ್ವಿ ಫಲಿತಾಂಶಗಳ ಹಿನ್ನೆಲೆಯಲ್ಲಿ 2025ರ ಮಾರ್ಚ್ ತಿಂಗಳಲ್ಲಿ ಚೆಟ್ಟಳ್ಳಿಗೆ ಸ್ಥಳಾಂತರಿಸಲಾಯಿತು. ಇಲ್ಲಿ ಅತ್ಯಾಧುನಿಕ ಪ್ರಯೋಗಾಲಯಗಳು, ನಿಯಂತ್ರಿತ ತಾಪಮಾನ ವ್ಯವಸ್ಥೆ ಹಾಗೂ ಸಸ್ಯ ಬೆಳವಣಿಗೆ ಕೊಠಡಿಗಳನ್ನು ಸ್ಥಾಪಿಸಲಾಗಿದ್ದು, ಸಂಶೋಧನೆಗೆ ಪೂರಕವಾದ ಈ ವಾತಾವರಣದಲ್ಲಿ ವಿಜ್ಞಾನಿಗಳು ಟಿಸ್ಯೂ ಕಲ್ಚರ್ ಕಾಫಿ ಗಿಡಗಳನ್ನು ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಾಂಪ್ರದಾಯಿಕ ವಿಧಾನಗಳಲ್ಲಿ ಗುಣಮಟ್ಟದ ಸಸಿಗಳ ಲಭ್ಯತೆ ಸೀಮಿತವಾಗಿರುವ ಕಾರಣ, ಟಿಸ್ಯೂ ಕಲ್ಚರ್ ತಂತ್ರಜ್ಞಾನ ಅತ್ಯುತ್ತಮ ತಳಿಗಳನ್ನು ವೇಗವಾಗಿ ಹೆಚ್ಚಿಸುವ ಅವಕಾಶ ಒದಗಿಸಿದೆ. ಪ್ರಸ್ತುತ ಟಿಸ್ಯೂ ಕಲ್ಚರ್ ಮೂಲಕ ಬೆಳೆಸಲಾದ ಕಾಫಿ ಸಸಿಗಳನ್ನು ಆಯ್ದ ಬೆಳೆಗಾರರು ಹಾಗೂ ಕಾಫಿ ಮಂಡಳಿಯ ವಿವಿಧ ಘಟಕಗಳಿಗೆ ಪ್ರಾಯೋಗಿಕವಾಗಿ ವಿತರಿಸಲಾಗಿದ್ದು, ಅವುಗಳ ಬೆಳವಣಿಗೆ, ಇಳುವರಿ ಸಾಮರ್ಥ್ಯ ಮತ್ತು ರೋಗ ನಿರೋಧಕತೆಯನ್ನು ವಿವಿಧ ಪರಿಸರಗಳಲ್ಲಿ ಪರೀಕ್ಷಿಸಲಾಗುತ್ತಿದೆ.
ಸಂಶೋಧನೆಯ ಜೊತೆಗೆ ಚೆಟ್ಟಳ್ಳಿ ಕೇಂದ್ರ ಜೈವಿಕ ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ತರಬೇತಿ ಹಾಗೂ ಇಂಟರ್ನ್ಶಿಪ್ ಕಾರ್ಯಕ್ರಮಗಳನ್ನೂ ನಡೆಸುತ್ತಿದೆ. ಇದರ ಮೂಲಕ ವಿದ್ಯಾರ್ಥಿಗಳು ಟಿಸ್ಯೂ ಕಲ್ಚರ್ ತಂತ್ರಜ್ಞಾನದ ಪ್ರಾಯೋಗಿಕ ಜ್ಞಾನವನ್ನು ಪಡೆಯುತ್ತಿದ್ದಾರೆ. ಸಾಂಪ್ರದಾಯಿಕ ಕಾಫಿ ಕೃಷಿಯೊಂದಿಗೆ ಆಧುನಿಕ ಜೈವಿಕ ತಂತ್ರಜ್ಞಾನವನ್ನು ಸಂಯೋಜಿಸುವ ಮೂಲಕ ಚೆಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರ ಕಾಫಿ ಕ್ಷೇತ್ರಕ್ಕೆ ಹೊಸ ದಿಕ್ಕು ನೀಡುತ್ತಿದೆ. ಒಂದು ಎಲೆಯಿಂದ ಸಾವಿರಾರು ಗುಣಮಟ್ಟದ ಸಸಿಗಳನ್ನು ಉತ್ಪಾದಿಸುವ ಸಾಮರ್ಥ್ಯ ಭವಿಷ್ಯದಲ್ಲಿ ಕಾಫಿ ಕೃಷಿಯ ಸ್ವರೂಪವನ್ನೇ ಬದಲಾಯಿಸಬಲ್ಲದು. ಹವಾಮಾನ ಬದಲಾವಣೆ ಹಾಗೂ ಉತ್ಪಾದನಾ ಸವಾಲುಗಳನ್ನು ಎದುರಿಸಲು ಇದು ಬೆಳೆಗಾರರಿಗೆ ಶಾಶ್ವತ ಪರಿಹಾರವಾಗುವ ನಿರೀಕ್ಷೆಯಿದೆ.
ಕೊಡಗು ಮತ್ತು ಭಾರತದ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಅತಿಯಾದ ಮಳೆ, ಹೆಚ್ಚುತ್ತಿರುವ ಉಷ್ಣಾಂಶ ಮತ್ತು ಹೊಸ ಕೀಟ-ರೋಗಗಳ ಪರಿಣಾಮ ಹೆಚ್ಚುತ್ತಿರುವುದರಿಂದ, ಇವುಗಳನ್ನು ಎದುರಿಸಬಲ್ಲ ಅರೇಬಿಕಾ ಮತ್ತು ರೋಬಸ್ಟಾ ತಳಿಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕಾಫಿ ಮಂಡಳಿಯು ಇತ್ತೀಚೆಗೆ ಬಿಡುಗಡೆ ಮಾಡಿರುವ ಸಿಸಿಆರ್‌ಐ ಶತಾಬ್ದಿ ಮತ್ತು ಸುರಕ್ಷಾ ಅರೇಬಿಕಾ ತಳಿಗಳು ಕೂಡ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿವೆ.
"

ಕಾಫಿ ಮಂಡಳಿಯ ಹವಾಮಾನ ಬದಲಾವಣೆ ಸಹಿಷ್ಣುತೆ ಮತ್ತು ಸಾಂಪ್ರದಾಯಿಕವಲ್ಲದ ತಳಿ ಅಭಿವೃದ್ಧಿಯ ಶ್ರೇಷ್ಠತಾ ಕೇಂದ್ರದಡಿ ಚೆಟ್ಟಳ್ಳಿಯ ಕಾಫಿ ಸಂಶೋಧನಾ ಉಪ ಕೇಂದ್ರದಲ್ಲಿ ಸ್ಥಾಪಿಸಲಾದ ಟಿಸ್ಯೂ ಕಲ್ಚರ್ ಮತ್ತು ಜೈವಿಕ ತಂತ್ರಜ್ಞಾನ ವಿಭಾಗ ಕಾಫಿ ಸಂಶೋಧನೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ.ಕೇಂದ್ರದ ಟಿಸ್ಯೂ ಕಲ್ಚರ್ ಕೇಂದ್ರ ಕಾಫಿ ತಳಿ ಅಭಿವೃದ್ಧಿಗೆ ಪೂರಕವಾಗಲಿದೆ. ಟಿಸ್ಯೂ ಕಲ್ಚರ್ ಮೂಲಕ ಬೆಳೆಸಲಾದ ಕಾಫಿ ಸಸಿಗಳನ್ನು ಆಯ್ದ ಬೆಳೆಗಾರರು ಹಾಗೂ ಕಾಫಿ ಮಂಡಳಿಯ ವಿವಿಧ ಘಟಕಗಳಿಗೆ ಪ್ರಾಯೋಗಿಕವಾಗಿ ವಿತರಿಸಲಾಗಿದೆ. ಅವುಗಳ ಬೆಳವಣಿಗೆ, ಇಳುವರಿ ಸಾಮರ್ಥ್ಯ ಮತ್ತು ರೋಗ ನಿರೋಧಕತೆಯನ್ನು ವಿವಿಧ ಪರಿಸರಗಳಲ್ಲಿ ಪರೀಕ್ಷಿಸಲಾಗುತ್ತಿದೆ.

— ಡಾ ಸಿ. ಬಾಬು, ಜಂಟಿ ನಿರ್ದೇಶಕ ಮತ್ತು ಕೇಂದ್ರದ ಮುಖ್ಯಸ್ಥ, ಕಾಫಿ ಉಪ ಸಂಶೋದನಾ ಕೇಂದ್ರ, ಚೆಟ್ಟಳ್ಳಿ
"

ಕಾಫಿ ಬೆಳೆಗಾರ ಪ್ರಸ್ತುತ ದಿನಗಳಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದಾನೆ. ಹವಾಮಾನ ಬದಲಾವಣೆ, ಹೆಚ್ಚುತ್ತಿರುವ ತಾಪಮಾನ, ಅನಿಯಮಿತ ಮಳೆ, ಹೊಸ ರೋಗಗಳು ಹಾಗೂ ಕೀಟಗಳ ಹಾವಳಿ ಮತ್ತು ಇಳಿಮುಖವಾಗುತ್ತಿರುವ ಉತ್ಪಾದನೆ ಕಾಫಿ ಬೆಳೆಗಾರರಿಗೆ ಸಾಕಷ್ಟು ಸಂಕಷ್ಟಗಳನ್ನು ತಂದೊಡ್ಡಿದೆ. ಈ ಹಿನ್ನೆಲೆಯಲ್ಲಿ ಟಿಸ್ಯೂ ಕಲ್ಚರ್ ತಂತ್ರಜ್ಞಾನ ವರದಾನವಾಗಿದ್ದು ಹೆಚ್ಚು ಇಳುವರಿ ನೀಡುವ, ರೋಗ ನಿರೋಧಕ ಮತ್ತು ಹವಾಮಾನ ವೈಪರೀತ್ಯಗಳನ್ನು ತಡೆದುಕೊಳ್ಳಬಲ್ಲ ಹೊಸ ಕಾಫಿ ಗಿಡಗಳು ಬೆಳೆಗಾರರಿಗೆ ವರದಾನವಾಗಲಿದೆ.

— ಪುತ್ತರಿರ ಕರುಣ್ ಕಾಳಯ್ಯ, ಕಾಫಿ ಬೆಳೆಗಾರ, ಚೆಟ್ಟಳ್ಳಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net