ಆದಾಯದ ಆಸೆಗೆ ಸುರಕ್ಷತೆ ಕಡೆಗಣನೆ

ದುಬಾರೆ ಸಾಕಾನೆ ಶಿಬಿರದಲ್ಲಿ ಪುಂಡಾನೆಗಳನ್ನು ಇರುವ ಕ್ರಾಲ್
ದುಬಾರೆ ಸಾಕಾನೆ ಶಿಬಿರದಲ್ಲಿ ಪುಂಡಾನೆಗಳನ್ನು ಇರುವ ಕ್ರಾಲ್
Published on
ಮಡಿಕೇರಿ:
ಅದು ಪತಿ, ಪತ್ನಿ ಹಾಗೂ ಪುತ್ರಿಯನ್ನು ಒಳಗೊಂಡ ತಮಿಳುನಾಡಿನ ಪುಟ್ಟ ಕುಟುಂಬ. ರಜೆಯಲ್ಲಿ ಕೊಡಗು ಪ್ರವಾಸಕ್ಕೆಂದು ಬಂದಿದ್ದರು. ಸುಂದರ ನೆನಪುಗಳೊಂದಿಗೆ ಮರಳಬೇಕಿದ್ದವರು ಜೀವನದುದ್ದಕ್ಕೂ ಕಾಡುವ ನೋವಿನೊಂದಿಗೆ ವಾಪಸ್ ತೆರಳುವಂತಾಗಿದೆ. ದುಬಾರೆ ಸಾಕಾನೆ ಶಿಬಿರಕ್ಕೆ ಪ್ರವಾಸಿಗರನ್ನು ಸೆಳೆಯಲು ಮತ್ತು ಅವರಿಗೆ ದುಬಾರಿ ಶುಲ್ಕ ವಿಧಿಸಲು ತೋರಿಸುತ್ತಿರುವ ಆಸಕ್ತಿಯಲ್ಲಿ ಸ್ವಲ್ಪ ಭಾಗವನ್ನು ಸುರಕ್ಷತೆಯ ಕಡೆಗೂ ತೋರಿಸಿದ್ದಿದ್ದರೆ ಅಮೂಲ್ಯ ಜೀವ ಉಳಿಯುತ್ತಿತ್ತು ಎನ್ನುವುದು ಸ್ಥಳೀಯರ ಅಭಿಪ್ರಾಯ.
ಕುಶಾಲನಗರ ತಾಲೂಕು, ಕುಶಾಲನಗರ ಅರಣ್ಯ ವಲಯದ ವಲಯದ ನಂಜರಾಯಪಟ್ಟಣ ಗ್ರಾಮದಲ್ಲಿ ಇರುವ ದುಬಾರೆ ಸಾಕಾನೆ ಶಿಬಿರ ಅತ್ಯಂತ ಹಳೆಯ ಆನೆ ಶಿಬಿರ ಎನ್ನುವ ಹೆಗ್ಗಳಿಕೆ ಹೊಂದಿದೆ. ಈ ಶಿಬಿರಕ್ಕೆ ಶತಮಾನದ ಇತಿಹಾಸವಿದೆ. ಬ್ರಿಟಿಷರ ಆಳ್ವಿಕೆ ಸಂದರ್ಭ ಸೆರೆ ಹಿಡಿಯಲಾಗುತ್ತಿದ್ದ ಕಾಡಾನೆಗಳನ್ನು ಇಲ್ಲಿ ಪಳಗಿಸಿದ ನಂತರ ಬೇರೆ ಕಡೆಗೆ ವಿವಿಧ ಕೆಲಸಗಳಿಗಾಗಿ ಆನೆಗಳನ್ನು ರವಾನೆ ಮಾಡಲಾಗುತ್ತಿತ್ತು. ಕಾವೇರಿ ನದಿ ದಂಡೆಯಲ್ಲಿ ಈ ಸ್ಥಳ ಇರುವುದರಿಂದ ಪ್ರಾಕೃತಿಕವಾಗಿಯೂ ಆಕರ್ಷಣೀಯ ತಾಣವಾಗಿದೆ. ಹಾಗಾಗಿ ಪ್ರವಾಸಿಗರು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.
ಈಗಲೂ ರಾಜ್ಯದ ವಿವಿಧ ಭಾಗಗಳಲ್ಲಿ ಸೆರೆಹಿಡಿಯಲಾಗುವ ಪುಂಡಾನೆಗಳನ್ನು ದುಬಾರೆಗೆ ತಂದು ಕ್ರಾಲ್ ಒಳಗೆ ಇಟ್ಟು ಪಳಗಿಸುವ ಕೆಲಸ ನಡೆಯುತ್ತಿರುತ್ತದೆ. ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ಪೈಕಿ ಹೆಚ್ಚಿನ ಆನೆಗಳು ಇದೇ ಶಿಬಿರದಲ್ಲಿ ಇವೆ. ಆನೆಗಳಿಗೆ ಸ್ನಾನ ಮಾಡಿಸುವುದು, ಅವುಗಳಿಗೆ ಆಹಾರ ತಿನ್ನಿಸುವುದು, ಅವುಗಳ ಜತೆ ಫೋಟೋ ತೆಗೆದಿಕೊಳ್ಳುವುದು ಇಲ್ಲಿ ನಡೆಯುವ ಪ್ರಮುಖ ಚಟುವಟಿಕೆಗಳು. ಎಲ್ಲಾ ಚಟುವಟಿಕೆಗಳಿಗೂ ಅರಣ್ಯ ಇಲಾಖೆ ಪ್ರತ್ಯೇಕ ಶುಲ್ಕ ವಿಧಿಸುತ್ತದೆ. ಮೊದಲು ಇಲ್ಲಿ ಆನೆ ಸಫಾರಿ ಇತ್ತಾದರೂ ಕೆಲವು ವರ್ಷಗಳ ಹಿಂದೆ ಸ್ಥಗಿತಗೊಳಿಸಲಾಗಿದೆ.
ಒಂದು ಕಡೆ ಕ್ರಾಲ್ ಒಳಗೆ ಪುಂಡಾನೆಗಳು, ಮತ್ತೊಂದು ಕಡೆ ಬಿಂದಾಸ್ ಆಗಿ ಸುತ್ತಾಡುವ ಸಾಕಾನೆಗಳು, ರಾತ್ರಿಯಾದರೆ ಹೆಣ್ಣಾನೆಗಳನ್ನು ಅರಸಿ ಬರುವ ಕಾಡಾನೆಗಳು...ಹೀಗೆ ಒಂದು ರೀತಿಯಲ್ಲಿ ದುಬಾರೆ ಎಂದರೆ ಆನೆಗಳ ಸಾಮ್ರಾಜ್ಯ ಎಂದರೆ ತಪ್ಪಾಗುವುದಿಲ್ಲ. ಮದವೇರಿದ ಆನೆಗಳ ದಾಂಧಲೆಯೂ ಇಲ್ಲಿ ಸಾಮಾನ್ಯ. ಹಾಗಾಗಿ ಸಾರ್ವಜನಿಕರ ಪಾಲಿಗೆ ಇದೊಂದು ಅಪಾಯಕಾರಿ ಪ್ರದೇಶ ಎಂದೇ ಗುರುತಿಸಲಾಗಿದ್ದರೂ ಪ್ರವಾಸೋದ್ಯಮದ ನೆಪದಲ್ಲಿ ಆನೆ ಶಿಬಿರಕ್ಕೆ ಪ್ರವೇಶ ಕಲ್ಪಿಸುವುದು ಎಷ್ಟು ಸರಿ ಎನ್ನುವ ಪ್ರಶ್ನೆಗಳು ಇವೆ.
ಆನೆ ಬಹಳ ಬುದ್ಧಿವಂತ ಪ್ರಾಣಿ. ಆದರೆ ಅದು ಕಿರಿಕಿರಿ ಸಹಿಸುವುದಿಲ್ಲ. ಆನೆ ಆನೆಯ ವಿರುದ್ಧ, ಆನೆ ಮನುಷ್ಯರ ವಿರುದ್ಧ ತಿರುಗಿ ಬೀಳುವುದು ಸಾಮಾನ್ಯ. ಇಂಥ ಪರಿಸ್ಥಿತಿಯಲ್ಲಿ ಆನೆಗಳಿಗೆ ಸ್ನಾನ ಮಾಡಿಸುವುದು, ಅದರ ಮೈ ಸವರುವುದು, ಆನೆಗಳ ಬಹಳ ಸಮೀಪದಲ್ಲಿ ಪೋಟೋ ತೆಗೆಯಲು ಅನುವು ಮಾಡಿಕೊಡುವುದು ಎಷ್ಟು ಸರಿ ? ಪ್ರವಾಸಿಗರಿಗೆ ಆನೆ ಎಂದರೆ ಖುಷಿಯಾಗುತ್ತದೆ. ಮಾವುತ ಇದ್ದಾನೆ. ನಾವು ಮುಟ್ಟಬಹುದು ಎಂದು ತಿಳಿದುಕೊಳ್ಳುತ್ತಾರೆ. ಆದರೆ ಆನೆಗೆ ಯಾವಾಗ ಮನಪರಿವರ್ತನೆ ಆಗುತ್ತದೆ ? ಯಾವಾಗ ಕೋಪ ಬರುತ್ತದೆ ಎನ್ನುವುದು ಊಹಿಸಲೂ ಸಾಧ್ಯವಿಲ್ಲ. ಇಂಥ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಳ್ಳುವ ಆನೆಗಳು ಅಪಾಯಕಾರಿಯಾಗಿ ವರ್ತಿಸುತ್ತವೆ.
ದುಬಾರೆಯಲ್ಲಿ ಸೋಮವಾರದ ದುರ್ಘಟನೆ ನಂತರ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ವನ್ಯಜೀವಿಗಳಿಂದ ನಿರ್ದಿಷ್ಟ ಅಂತರ ಕಾಯ್ದುಕೊಳ್ಳಲು ಸಚಿವ ಈಶ್ವರ ಖಂಡ್ರೆ ಆದೇಶಿಸಿದ್ದಾರೆ. ದುಬಾರೆಯಲ್ಲಿ ಆನೆಗಳ ಹತ್ತಿರ ಹೋಗಲು ನಿರ್ಬಂಧ ವಿಧಿಸುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಆನೆಗಳ ಸೊಂಡಿಲು ಮುಟ್ಟುವುದು, ಪಕ್ಕದಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುವುದು, ಪ್ರವಾಸಿಗರಿಗೆ ಆನೆ ಮೈ ತೊಳೆಯಲು ಅವಕಾಶ ನೀಡುವುದು, ಅವರಿಂದ ಬೆಲ್ಲ, ಬಾಳೆಹಣ್ಣು ಇತ್ಯಾದಿ ಆಹಾರ ತಿನ್ನಿಸುವುದನ್ನು ನಿರ್ಬಂಧಿಸಲು ಕ್ರಮ ವಹಿಸುವಂತೆ ಮತ್ತು ವನ್ಯಜೀವಿಗಳಿಂದ ಪ್ರವಾಸಿಗರು ನಿರ್ದಿಷ್ಟ ಅಂತರ ಕಾಯ್ದುಕೊಳ್ಳುವಂತೆ ಕ್ರಮ ವಹಿಸುವಂತೆ ಸೂಚಿಸಿದ್ದಾರೆ. ಇಂಥ ಕ್ರಮಕ್ಕೆ ಒಂದು ದುರಂತದ ತನಕ ಕಾಯಬೇಕಾಯಿತಾ ಎನ್ನುವುದು ಸಾರ್ವಜನಿಕರ ಪ್ರಶ್ನೆ.
"

ದುಬಾರೆ ಸಾಕಾನೆ ಶಿಬಿರದಲ್ಲಿ ಇದೇ ಮೊದಲ ಸಲ ಇಂಥ ದುರಂತ ಸಂಭವಿಸಿದೆ. ಈ ಘಟನೆ ಆಗಬಾರದಿದ್ದು, ದುರದೃಷ್ಟವಶಾತ್ ಪ್ರವಾಸಿ ಮಹಿಳೆ ದುರ್ಮರಣಕ್ಕೆ ಈಡಾಗಿದ್ದಾರೆ. ಘಟನೆ ಸಂದರ್ಭ ಮೃತರ ಪತಿ ಒಂದು ಕೈಯಲ್ಲಿ ಮಗುವನ್ನು ಹಿಡಿದುಕೊಂಡು ಪತ್ನಿಯನ್ನು ರಕ್ಷಿಸಲು ದೊಡ್ಡ ಸಾಹಸ ಮಾಡಿದ್ದರು. ಇದು ನಮಗೆ ಎಚ್ಚರಿಕೆಯ ಗಂಟೆ. ಈ ಸಂಬAಧ ಇನ್ನು ಮುಂದೆ ಎಚ್ಚರಿಕೆ ವಹಿಸಲು ಒಂದು ಸಾವು ಸಂಭವಿಸಬೇಕಾಗಿದ್ದು ನೋವಿನ ವಿಷಯ.

— ಡಾ. ಮಂತರ್ ಗೌಡ, ಮಡಿಕೇರಿ ಶಾಸಕ
"

ರಿದಂತೆ ವನ್ಯಜೀವಿಗಳನ್ನು ಎಷ್ಟೇ ಪಳಗಿಸಿದ್ದರೂ ಪ್ರಾಣಿಗಳ ಸ್ವಭಾವ ಅರ್ಥ ಮಾಡಿಕೊಳ್ಳುವುದು ಕಷ್ಟಸಾಧ್ಯ. ಅವು ಯಾವಾಗ ಯಾವ ರೀತಿ ವರ್ತಿಸುತ್ತವೆ ಎಂದು ಊಹಿಸುವುದೂ ಕಷ್ಟ. ಹೀಗಾಗಿ ಆನೆಗಳ ಸೊಂಡಿಲು ಮುಟ್ಟುವುದು, ಪಕ್ಕದಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುವುದು, ಪ್ರವಾಸಿಗರಿಗೆ ಆನೆ ಮೈ ತೊಳೆಯಲು ಅವಕಾಶ ನೀಡುವುದು, ಅವರಿಂದ ಬೆಲ್ಲ, ಬಾಳೆಹಣ್ಣು ಇತ್ಯಾದಿ ಆಹಾರ ತಿನ್ನಿಸುವುದನ್ನು ನಿರ್ಬಂಧಿಸಲು ಕ್ರಮ ವಹಿಸುವಂತೆ ಮತ್ತು ವನ್ಯಜೀವಿಗಳಿಂದ ಪ್ರವಾಸಿಗರು ನಿರ್ದಿಷ್ಟ ಅಂತರ ಕಾಯ್ದುಕೊಳ್ಳುವಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

— ಈಶ್ವರ ಖಂಡ್ರೆ, ಅರಣ್ಯ ಸಚಿವ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net