ಪಾಳು ಜಮೀನಿನಲ್ಲೀಗ ಸಮೃದ್ಧ ಫಸಲು

ಹೆರೂರು ಗ್ರಾಮದ ನಿವಾಸಿ ಮಂದೋಡಿ ಜಗನ್ನಾಥ್ ಮಾದರಿ ರೈತ
jagannath
ಮಂದೋಡಿ ಜಗನ್ನಾಥ್ ಅವರ ತೋಟದಲ್ಲಿ ಸಮೃದ್ಧವಾಗಿ ಬೆಳೆದಿರುವ ಕಾಫಿ ಗಿಡಗಳುagri
Published on: 

ವಿನ್ಸೆಂಟ್ ಸುಂಟಿಕೊಪ್ಪ ಕೃಷಿ ಕಾಯಕಕ್ಕೆ ಸಾಕಷ್ಟು ಸಮಯ ವಿನಿಯೋಗಿಸಿ, ಬಹುಬೆಳೆ ಪದ್ಧತಿ ಅನುಸರಿಸಿದ ಕೃಷಿಕರೊಬ್ಬರು ಲಾಭಗಳಿಕೆಯೊಂದಿಗೆ ಸಮೃದ್ಧ ಬದುಕು ಸಾಗಿಸುತ್ತಿದ್ದಾರೆ.

ಸುಂಟಿಕೊಪ್ಪ ಹೋಬಳಿ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆರೂರು ಗ್ರಾಮದ ನಿವಾಸಿ ಮಂದೋಡಿ ಜಗನ್ನಾಥ್ ಮುಖ್ಯ ಬೆಳೆಯೊಂದಿಗೆ ಉಪಬೆಳೆಗಳತ್ತಲೂ ಚಿತ್ತ ಹರಿಸಿದ್ದರಿಂದ ನಿರಂತರ ಲಾಭವನ್ನು ತಮ್ಮದಾಗಿಸಿಕೊಂಡಿದ್ದಾರೆ. ಪದವಿಪೂರ್ವ ಶಿಕ್ಷಣ ಮುಗಿಸುತ್ತಿದ್ದಂತೆ ಕೃಷಿಯತ್ತ ಮುಖ ಮಾಡಿದ ಜಗನ್ನಾಥ್, ಮತ್ತೆ ಹಿಂದಿರುಗಿ ನೋಡಲೇ ಇಲ್ಲ. ಅವರ ಶ್ರಮ, ಶ್ರದ್ಧೆ ಮತ್ತು ಸಮಯ ಪಾಲನೆಗಳೇ ಕೃಷಿ ರಂಗದಲ್ಲಿ ಸಾಧನೆ ಮಾಡಲು ಸಾಧಕವಾಗಿರುವುದು ಗಮನೀಯ ಸಂಗತಿ. ಇವರ ತಂದೆ ಅರಣ್ಯ ಇಲಾಖೆಯ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ಕೃಷಿ ಜಮೀನುಗಳು ಪಾಳು ಬಿದ್ದಿದ್ದವು. ಇದನ್ನು ಗಮನಿಸಿದ ಜಗನ್ನಾಥ್ ಅವರಿಗೆ ಗದ್ದೆ, ತೋಟದ ಮೇಲೆ ಒಲವು ಮೂಡಿತು. ಪಾಳು ಬಿದ್ದಿದ್ದ ಜಮೀನಿನಲ್ಲಿ ಸಾಕಷ್ಟು ಶ್ರಮ ಹಾಕಿದ ಅವರು, ಜೌಗು ಪ್ರದೇಶವನ್ನೂ ಹದಗೊಳಿಸಿಕೊಂಡು ಅದನ್ನೂ ಫಲವತ್ತಾದ ಬೆಳೆ ಬೆಳೆಯುವ ತಾಣವನ್ನಾಗಿ ಪರಿವರ್ತಿಸಿದರು. ಪಾಲಕರ ನೆರವಿನಿಂದಿಗೆ ವ್ಯವಸಾಯದಲ್ಲಿ ಸಂಪೂರ್ಣ ತೊಡಗಿಸಿಕೊಂಡ ಇವರಿಗೆ ಈಗ 35 ವರ್ಷಗಳ ಅನುಭವ ಪ್ರಾಪ್ತವಾಗಿದೆ. ಒಂದೇ ಬೆಳೆ ಅಥವಾ ವಾರ್ಷಿಕ ಫಸಲಿನ ಕೃಷಿ ಜೊತೆಗೆ ಅಲ್ಪಕಾಲದ ಬೆಳೆಗಳನ್ನೂ ಜಗನ್ನಾಥ್ ಬೆಳೆಯಲು ಆರಂಭಿಸಿದರು.

ಇದು ಅರ್ಥಿಕ ಅಭಿವೃದ್ಧಿಗೂ ಪೂರಕ ಎಂಬುದನ್ನು ಕಂಡುಕೊಂಡರು. ಇದಕ್ಕಾಗಿ ಹಗಲು ರಾತ್ರಿಯೆನ್ನದೆ ಶ್ರಮವಹಿಸಿ ದುಡಿದು ಯಶಸ್ಸು ಕಂಡರು. ಹಿರಿಯರಿಂದ ಬಳುವಳಿಯಾಗಿ ಬಂದ ಮೂರೂವರೆ ಎಕರೆ ಕೃಷಿ ಜಮೀನು ಹೊಂದಿರುವ ಜಗನ್ನಾಥ್,

ಕಾಫಿ, ಕರಿಮೆಣಸು, ಅಡಿಕೆ, ತೆಂಗು, ಬೆಣ್ಣೆಹಣ್ಣು, ಜಿಗುಜ್ಜೆ,ಕಿತ್ತಳೆ, ಸೀಬೇಕಾಯಿ, ಲಕ್ಷ್ಮಣಫಲ, ಸಪೋಟಾ, ಸೀತಾಫಲ, ಗರಂ ಮಸಾಲ ಚಕ್ಕೆ, ಜೌಷಧಕ್ಕೆ ಬಳಕೆಯಾಗುವ ಕಾಡು ನೆಲ್ಲಿಕಾಯಿ ಬೆಳೆಯುತ್ತಾರೆ. ಮನೆಗೆ ಬೇಕಾದ ತರಕಾರಿಗಳನ್ನೂ ತೋಟದಲ್ಲೇ ಬೆಳೆದುಕೊಳ್ಳುತ್ತಾರೆ. ಇದರೊಂದಿಗೆ ಇನ್ನಿತರ ಅಲ್ಪಕಾಲದ ಬೆಳೆಗಳ ಬಗ್ಗೆಯೂ ಜಗನ್ನಾಥರಿಗೆ ವಿಶೇಷ ಆಸಕ್ತಿ. ಹಾಗಾಗಿ ಜೋಳ, ಕೇನೆ, ಸಿಹಿಗೆಣಸು, ಕೆಸುವಿನಗೆಡ್ಡೆ, ತರಕಾರಿ ಹಾಗೂ ಉಪಬೆಳೆಯಾಗಿ ಶುಂಠಿ ಕೃಷಿ ನಿರ್ವಹಿಸುತ್ತಿದ್ದಾರೆ. ಪತ್ನಿ ಸೋನಿ ಮತ್ತು ಕುಟುಂಬದ ಎಲ್ಲರೂ ಕೃಷಿ ಕಾಯಕದಲ್ಲಿ ಸಹಕಾರ ನೀಡುತ್ತಾರೆ.

*

ಕ್ಯಾನ್ಸರ್ ರೋಗಕ್ಕೆ ಅವಶ್ಯಕವಾದ ಬಹುಬೇಡಿಕೆಯ ಸೀತಾಫಲವನ್ನೂ ಸಮೃದ್ಧವಾಗಿ ಬೆಳೆಯುತ್ತಿದ್ದಾರೆ. ಕ್ಯಾನ್ಸರ್ ರೋಗಿಗಳ ಕುಟುಂಬಸ್ಥರು ಬಂದು ಇವರಲ್ಲಿ ಹಣ್ಣು ಪಡೆದುಕೊಂಡು ಹೋಗುತ್ತಾರೆ. ಅದಕ್ಕೆ ಯಾವುದೇ ರೀತಿಯ ದರವನ್ನೂ ಪಡೆಯದ ಜಗನ್ನಾಥ್, ಇದನ್ನು ಸಮಾಜ ಸೇವೆಯ ಒಂದು ಭಾಗ ಎನ್ನುತ್ತಾರೆ.

*

ಹಕ್ಕಿ, ಪಕ್ಷಿಗಳ ತಾಣ: ತೋಟಗಳಲ್ಲಿ ಜಗನ್ನಾಥ್ ಅವರು ಹಲವಾರು ಹಣ್ಣಿನ ಗಿಡಗಳನ್ನು ಬೆಳೆಸಿರುವುದರಿಂದ ನೂರಾರು ಹಕ್ಕಿ, ಪಕ್ಷಿಗಳು ಬರುತ್ತವೆ. ಫಲಗಳನ್ನು ತಿನ್ನುತ್ತವೆ. ಇದರಿಂದ ಕೃಷಿ ಭೂಮಿಯ ಫಲತ್ತತೆ ಹೆಚ್ಚಿದೆ ಎನ್ನುತ್ತಾರೆ. ಕೃಷಿಯಲ್ಲಿ ಕೇವಲ ಆದಾಯಗಳಿಸುವತ್ತ ಮಾತ್ರ ಚಿಂತಿಸಬಾರದು. ಪರಿಸರ ಪ್ರೀತಿಯನ್ನೂ ರೂಢಿಸಿಕೊಳ್ಳಬೇಕು ಎಂದವರು ಅಭಿಪ್ರಾಯ ಪಡುತ್ತಾರೆ.

*

ಸಗಣಿಗೊಬ್ಬರ ಬಳಕೆ: ಕೇನೆ ಸಿಹಿಗೆಣಸು, ಕೆಸುವಿನಗೆಡ್ಡೆ, ಬಾಳೆ ಸೇರಿದಂತೆ ಕೆಲವು ತರಕಾರಿ ಬೆಳೆಗಳಿಗೆ ಸಗಣಿ ಗೊಬ್ಬರವನ್ನೇ ಜಗನ್ನಾಥ್ ಬಳಸುತ್ತಾರೆ. ಒಂದು ಲೋಡ್‌ಗೆ ರೂ.7ರಿಂದ 8 ಸಾವಿರದ ವರೆಗೆ ನೀಡಿ ಖರೀದಿ ಮಾಡುತ್ತಾರೆ. ಇದರಿಂದ ಫಸಲಿನ ಗುಣಮಟ್ಟವನ್ನು ಕಾಯ್ದುಕೊಳ್ಳಬಹುದು ಎಂದು ಇತರರಿಗೂ ಸಲಹೆ ನೀಡುತ್ತಾರೆ.

*

ದುಡಿಯಲು ನಾವೇ ಮುಂದಾಗಬೇಕು: ಇಂದಿನ ದಿನ ಮಾನಗಳಲ್ಲಿ ಕಾರ್ಮಿಕರ ಸಮಸ್ಯೆ ಎಲ್ಲೆ ಮೀರಿದೆ. ಹಾಗಾಗಿ ನಾವೇ ಕಾರ್ಮಿಕರಾಗಿ ದುಡಿಯಲೂ ಮುಂದಾಗಬೇಕು. ಆಗ ಮಾತ್ರ ಫಸಲು ಸುಲಲಿತವಾಗಿ ಬೆಳೆದು ಲಾಭ ತಂದುಕೊಡುತ್ತವೆ ಎನ್ನುತ್ತಾರೆ ಜಗನ್ನಾಥ್. ಪಾಲಕರಿಂದ ಬಳುವಳಿಯಾಗಿ ಪಡೆದ ಭೂಮಿಯನ್ನೇ ಲಾಭದಾಯಕ ಕೃಷಿ ರಂಗವನ್ನಾಗಿ ಮಾಡಿಕೊಂಡ ಇವರು ಐಟಿ ಬಿಟಿ ಕಂಪನಿಗಳ ಉದ್ಯೋಗಸ್ಥರಿಗಿಂತಲೂ ಅಧಿಕ ಲಾಭಗಳಿಸುತ್ತಿದ್ದಾರೆ. ನನ್ನ ಕಾಯಕ ಶ್ರಮಭರಿತವಾಗಿದ್ದರೂ ಆರೋಗ್ಯ ಪೂರ್ಣ ಬದುಕು ನೀಡಿದೆ ಎಂದು ಧನ್ಯತೆಯಿಂದ ನುಡಿಯುತ್ತಾರೆ.

*

ಸಾಂಪ್ರದಾಯಿಕ ಭತ್ತದ ಬೇಸಾಯ ಇಷ್ಟ :

ಭತ್ತ ಬೇಸಾಯದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುವ ಜಗನ್ನಾಥ್ ಅವರಿಗೆ ಸಾಂಪ್ರದಾಯಿಕ ನಾಟಿ ವಿಧಾನ ಇಷ್ಟ. ಹಿಂದಿನ ಕಾಲ ಘಟ್ಟದಲ್ಲಿ ಬೇಸಾಯಕ್ಕೆ ಬೇಕಾದ ಸೂಕ್ತ ಹವಾಮಾನ ಇತ್ತು. ಈಗ ವಾತಾವರಣದ ಏರುಪೇರುಗಳು ಮತ್ತು ಕಾಡಾನೆ ಸೇರಿದಂತೆ ವನ್ಯ ಪ್ರಾಣಿಗಳ ಹಾವಳಿ ಅಧಿಕ ನಷ್ಟವನ್ನು ಉಂಟುಮಾಡುತ್ತಿದೆ. ಸಂಕಟಗಳ ನಡುವೆಯೂ ಅನ್ನದಾತರು ಉತ್ಸಾಹ ಕಾಪಾಡಿಕೊಳ್ಳುವುದು ಸವಾಲಿನ ಕೆಲಸವಾಗಿದೆ ಎಂಬುದು ಇವರ ಅಭಿಮತ.

  • ಸಾಮಾನ್ಯವಾಗಿ ಒಂದೇ ಬೆಳೆ ಅಥವಾ ವಾರ್ಷಿಕ ಫಸಲನ್ನು ನಂಬಿದ ಸಂದರ್ಭದಲ್ಲಿ ಹವಾಮಾನ ವೈಪರಿತ್ಯ ಆಕಾಲಿಕ ಮಳೆ, ಕಾರ್ಮಿಕರ ಕೊರತೆ, ಇಳುವರಿ ಕಡಿತ, ಬೆಲೆಯ ಏರುಪೇರುಗಳು ನಷ್ಟವನ್ನು ಉಂಟುಮಾಡುತ್ತವೆ. ಕೃಷಿ ಕಾಯಕ ಎಂಬುದು ಅನೇಕ ಬಾರಿ ತೂಗುಯ್ಯಲೆಯಾಗುವ ಕಾರಣ ವ್ಯವಸಾಯಗಾರ ನೋವು ಉಣ್ಣಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅಲ್ಪಕಾಲದ ಬೆಳೆಗಳನ್ನು ಬೆಳೆಯುವ ಮೂಲಕ ಲಾಭ -ನಷ್ಟಗಳನ್ನು ಸರಿ ದೂಗಿಸಿಕೊಳ್ಳಬಹುದು.

  • ಜಗನ್ನಾಥ್ ಪ್ರಗತಿಪರ ಕೃಷಿಕ

ನನ್ನ ಪತಿ ಜಗನ್ನಾಥ್ ಅವರು ಕುಟುಂಬ ವರ್ಗಕ್ಕೆ ನೀಡುವ ಕಾಳಜಿಯನ್ನೇ ಕೃಷಿ ಚಟುವಟಿಕೆಗಳಿಗೂ ತೋರುತ್ತಾರೆ. ಹಗಲು ರಾತ್ರಿಯೆನ್ನದೆ ಕಾಯಕದಲ್ಲಿ ಮಗ್ನರಾಗಿರುತ್ತಾರೆ. ಅವರಿಗೆ ಕೃಷಿಯ ಬಗ್ಗೆ ಇರುವ ಆಸಕ್ತಿಯೇ ನಮ್ಮನ್ನೂ ಪ್ರೇರೇಪಿಸುತ್ತದೆ. ಅವರು ದಿನದ ಬಹುಪಾಲು ಸಮಯವನ್ನು ಕೃಷಿಕಾಯಕಕ್ಕೆ ಮೀಸಲಿರಿಸುತ್ತಾರೆ. ಇದರಿಂದ ಆದಾಯವೂ ಇಮ್ಮಡಿಯಾಗಿದೆ. ಕುಟುಂಬವೂ ಸುಖಮಯವಾಗಿದೆ.

ಸೋನು ಜಗನ್ನಾಥ್

ಗೃಹಿಣಿ

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net