ಬಾಂಗ್ಲಾ ವಲಸಿಗರನ್ನು ಗಡಿಪಾರು ಮಾಡಿ

ಮುಖಂಡ ಕುಕ್ಕೇರ ಅಜಿತ್ ಒತ್ತಾಯ
ಸೋಮವಾರಪೇಟೆ
ಸೋಮವಾರಪೇಟೆ ಖಾಸಗಿ ಬಸ್ ನಿಲ್ದಾಣದಲ್ಲಿ ಕೊಡಗು ಸುರಕ್ಷಾ ಆಂದೋಲನ ಸಮಿತಿಯಿಂದ ಆಯೋಜಿಸಿದ್ದ ಜನಜಾಗೃತಿ ಆಂದೋಲನ ಸಭೆಯಲ್ಲಿ ಹಿಂದು ಜಾಗರಣಾ ವೇದಿಕೆಯ ಪ್ರಾಂತ ಪ್ರಮುಖ್ ಕುಕ್ಕೇರ ಅಜಿತ್ ಮಾತನಾಡಿದರು. ಅಪ್ಪಚ್ಚು ರಂಜನ್, ಮೇದಪ್ಪ, ಸುಭಾಷ್ ಇತರರು ಇದ್ದರು.ಸೋಮವಾರಪೇಟೆ
Published on: 

ಸೋಮವಾರಪೇಟೆ: ಕೊಡಗಿನಲ್ಲಿ ಅಕ್ರಮವಾಗಿ ಬೀಡುಬಿಟ್ಟಿರುವ ಬಾಂಗ್ಲಾ ವಲಸಿಗರನ್ನು ಪತ್ತೆಹಚ್ಚಿ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಕೊಡಗು ಸುರಕ್ಷಾ ಆಂದೋಲನ ಸಮಿತಿಯಿಂದ ಪಟ್ಟಣದಲ್ಲಿ ಸೋಮವಾರ ಜನಜಾಗೃತಿ ಆಂದೋಲನ ಆಯೋಜಿಸಲಾಗಿತ್ತು.

ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಹಿಂದು ಜಾಗರಣಾ ವೇದಿಕೆಯ ಪ್ರಾಂತ ಪ್ರಮುಖ ಕುಕ್ಕೇರ ಅಜಿತ್, ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಆಡಳಿತ ಬಿಗಿಗೊಳಿಸಿದ ನಂತರ ಅಲ್ಲಿ ನೆಲೆಸಿದ್ದ ಬಾಂಗ್ಲಾ ವಲಸಿಗರು ಕರ್ನಾಟಕ ಸೇರಿ ಇತರ ರಾಜ್ಯಗಳಿಗೆ ಆಗಮಿಸುತ್ತಿದ್ದಾರೆ. ಕಾರ್ಮಿಕರ ಸೋಗಿನಲ್ಲಿ ಬಾಂಗ್ಲಾದವರು ಆಗಮಿಸುತ್ತಿದ್ದು, ಇದು ಭವಿಷ್ಯದಲ್ಲಿ ದೇಶದ ಆಂತರಿಕ ಭದ್ರತೆಗೆ ಸಮಸ್ಯೆ ಆಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಅಸ್ಸಾಂ, ಬಿಹಾರ, ಒರಿಸ್ಸಾ, ಪಶ್ಚಿಮ ಬಂಗಾಳ ಸೇರಿದಂತೆ ಇತರ ಜಿಲ್ಲೆಗಳ ನಾಗರಿಕರು ಕಾರ್ಮಿಕರಾಗಿ ಆಗಮಿಸಿದರೆ ನಮ್ಮದೇನೂ ಅಭ್ಯಂತರ ಇಲ್ಲ. ಆದರೆ ನೆರೆಯ ರಾಜ್ಯದ ಹೆಸರು ಹೇಳಿಕೊಂಡು ಬಾಂಗ್ಲಾದವರು ಕೊಡಗಿನಲ್ಲಿ ಬೀಡು ಬಿಡುತ್ತಿದ್ದಾರೆ ಎಂದು ದೂರಿದರು.

ಪೊಲೀಸ್ ಇಲಾಖೆ ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆಹಚ್ಚಿ ಗಡಿಪಾರು ಮಾಡಬೇಕು. ಅವರಿಗೆ ಆಧಾರ್ ಸೇರಿದಂತೆ ಇನ್ನಿತರ ದಾಖಲೆ ಮಾಡಿಕೊಡುವ ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಜಿತ್ ಆಗ್ರಹಿಸಿದರು.

ಮಾಜಿ ಸಚಿವ ಅಪ್ಪಚ್ಚು ರಂಜನ್ ಮಾತನಾಡಿ, ಬಾಂಗ್ಲಾ ವಲಸಿಗರ ವಿರುದ್ಧ ತೋಟ ಮಾಲೀಕರು ಜಾಗೃತೆ ವಹಿಸಬೇಕು. ಅಕ್ರಮ ನುಸುಳುಕೋರರ ಬಗ್ಗೆ ಮಾಹಿತಿಯಿದ್ದಲ್ಲಿ ಪೊಲೀಸ್ ಇಲಾಖೆಗೆ ತಿಳಿಸಬೇಕು. ಕೊಡಗಿನ ಸುರಕ್ಷತೆ ನಮ್ಮೆಲ್ಲರ ಜವಾಬ್ದಾರಿ ಎಂಬುದನ್ನು ಮರೆಯಬಾರದು ಎಂದರು. ಈ ಸಂದರ್ಭ ಮಾಜಿ ಎಂಎಲ್‌ಸಿ ಎಸ್.ಜಿ.ಮೇದಪ್ಪ, ಹಿಂದುಪರ ಸಂಘಟನೆಗಳ ಮುಖಂಡರಾದ ಸುಭಾಷ್ ತಿಮ್ಮಯ್ಯ, ಬೋಜೇಗೌಡ, ಎಂ.ಬಿ.ಉಮೇಶ್, ದರ್ಶನ್ ಜೋಯಪ್ಪ, ಮಾದಾಪುರ ಸುನಿಲ್, ವಿನು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net