ಶೋಷಿತ ಸಮಾಜಕ್ಕೆ ಉತ್ತಮ ಶಿಕ್ಷಣ ಅವಶ್ಯ

ಸಿದ್ದಾಪುರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀ ನಾರಾಯಣ ಗುರುಗಳ 172ನೇ ಜಯಂತಿ ಕಾರ್ಯಕ್ರಮ ಉದ್ಘಾಟನೆ ಸಂದರ್ಭ ಅರಮೇರಿ ಕಳಂಚೇರಿ ಮಠದ ಶ್ರೀಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ವಿರಾಜಪೇಟೆ ಶಾಸಕ  ಎ.ಎಸ್. ಪೊನ್ನಣ್ಣ, ವಿಧಾನಸಭೆ ಮಾಜಿ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ಎಸ್‌ಎನ್‌ಡಿಪಿ ಕೊಡಗು ಯೂನಿಯನ್ ಅಧ್ಯಕ್ಷ ವಿ.ಕೆ. ಲೋಕೇಶ್ ಇತರರು ಇದ್ದರು.
ಸಿದ್ದಾಪುರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀ ನಾರಾಯಣ ಗುರುಗಳ 172ನೇ ಜಯಂತಿ ಕಾರ್ಯಕ್ರಮ ಉದ್ಘಾಟನೆ ಸಂದರ್ಭ ಅರಮೇರಿ ಕಳಂಚೇರಿ ಮಠದ ಶ್ರೀಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ವಿಧಾನಸಭೆ ಮಾಜಿ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ಎಸ್‌ಎನ್‌ಡಿಪಿ ಕೊಡಗು ಯೂನಿಯನ್ ಅಧ್ಯಕ್ಷ ವಿ.ಕೆ. ಲೋಕೇಶ್ ಇತರರು ಇದ್ದರು.
Published on

ಸಿದ್ದಾಪುರ :

ಶ್ರೀನಾರಾಯಣ ಗುರುಗಳ ಸಂದೇಶಗಳನ್ನು ಅಳವಡಿಸಿಕೊಂಡು ಸಮಾಜವನ್ನು ಬಲಿಷ್ಠಗೊಳಿಸಬೇಕು ಎಂದು ಅರಮೇರಿ ಕಳಂಚೇರಿ ಮಠದ ಶ್ರೀಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಸಿದ್ದಾಪುರದಲ್ಲಿ ಶುಕ್ರವಾರ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ ( ಎಸ್‌ಎನ್‌ಡಿಪಿ) ಸಂಘಟನೆ ಹಮ್ಮಿಕೊಂಡಿದ್ದ ನಾರಾಯಣ ಗುರುಗಳ 172ನೇ ಜಯಂತಿ ಕಾರ್ಯಕ್ರಮದಲ್ಲಿ ಸಂದೇಶ ನೀಡಿದರು. ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ. ಹಾಗಾಗಿ ಶೋಷಿತ ಸಮಾಜಕ್ಕೆ ಉತ್ತಮ ಶಿಕ್ಷಣ ಅತ್ಯವಶ್ಯಕ ಎಂಬುದನ್ನು ನಾರಾಯಣ ಗುರುಗಳು ತಮ್ಮ ಸಂದೇಶದಲ್ಲಿ ಸಾರಿದ್ದಾರೆ. ಅವರ ಆದರ್ಶಗಳೊಂದಿಗೆ ನಮ್ಮೆಲ್ಲರ ಬದುಕು ಅರಳಬೇಕು ಎಂದರು.
ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಮಾತನಾಡಿ, ಮಾನವೀಯ ಮೌಲ್ಯಗಳೊಂದಿಗೆ ಬದುಕಬೇಕೆಂಬ ನಾರಾಯಣ ಗುರುಗಳ ತತ್ವಗಳು ಮೌಢ್ಯಗಳ ನಿರ್ಮೂಲನೆಗೆ ಸಹಕಾರಿಯಾಗಿವೆ ಎಂದರು. ಕೊಡಗಿನ ವಿವಿಧ ಸಮುದಾಯಗಳು ಜಿಲ್ಲೆಗೆ ತಮ್ಮದೇ ಆದ ಕೊಡುಗೆ ನೀಡಿವೆ.
ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಬೆಂಬಲವಾಗಿವೆ ಎಂದರು. ನಾರಾಯಣ ಗುರುಗಳ ಮೌಲ್ಯಗಳು ಹಾಗೂ ಆದರ್ಶಗಳು ಕೇವಲ ಜಯಂತಿ ಆಚರಣೆಗೆ ಸೀಮಿತವಾಗದೇ ದೈನಂದಿನ ಜೀವನದಲ್ಲಿ ಅಳವಡಿಕೆಯಾಗಬೇಕು ಎಂದು ಪೊನ್ನಣ್ಣ ಹೇಳಿದರು.
ವಿಧಾನಸಭೆ ಮಾಜಿ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಮಾತನಾಡಿ, ನಾರಾಯಣ ಗುರುಗಳು ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತರಲ್ಲ. ಅವರ ಸಂದೇಶಗಳು ವಿಶ್ವದ ಎಲ್ಲರಿಗೂ ಅನ್ವಯ ಎಂದರು.
ಗುರುಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದರು. ಎಸ್‌ಎನ್‌ಡಿಪಿ ಕೊಡಗು ಯೂನಿಯನ್ ಅಧ್ಯಕ್ಷ ವಿ.ಕೆ. ಲೋಕೇಶ್ ಮಾತನಾಡಿ, ಸಂಘಟನೆಯು ಕೊಡಗು ಜಿಲ್ಲೆಯಲ್ಲಿ ಎಲ್ಲ ಸಮುದಾಯಗಳನ್ನು ಸಮನ್ವಯ ಮಾಡುವಲ್ಲಿ ಸಕ್ರಿಯವಾಗಿದೆ ಎಂದರು.ಮುಖಂಡರಾದ ಚಿರಿಯಪಂಡ ಸುರೇಶ್, ಹರಪಳ್ಳಿ ರವೀಂದ್ರ, ಎಡಿಕೇರಿ ಪ್ರಸನ್ನ ಹಾಗೂ ವಿ.ಎಂ. ವಿಜಯನ್ ಮಾತನಾಡಿದರು
ಸಾಂಸ್ಕೃತಿಕ ಮೆರುಗು:
ಕಾರ್ಯಕ್ರಮಕ್ಕೆ ಮುನ್ನ ನಡೆದ ಮೆರವಣಿಗೆಗೆ ಕುಶಾಲನಗರದ ಜ್ಞಾನ ಗಂಗಾ ಶಾಲೆಯ ವ್ಯವಸ್ಥಾಪಕ ನಿರ್ದೇಶಕ ಸುಧೀರ್ ಮತ್ತು ಚೇಂಬರ್ ಆಫ್ ಕಾಮರ್ಸ್ ಮಾಜಿ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಚಾಲನೆ ನೀಡಿದರು. ಅಲಂಕೃತ ಮಂಟಪದಲ್ಲಿ ನಾರಾಯಣ ಗುರುಗಳ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಕೇರಳದ ಚಂಡೆ ವಾದ್ಯಮೇಳ ಹಾಗೂ ಕರ್ನಾಟಕದ ಡೊಳ್ಳುಕುಣಿತದೊಂದಿಗೆ ಮೆರವಣಿಗೆ ಮಾಡಲಾಯಿತು. ಜಿಲ್ಲೆಯ ವಿವಿಧ ಶಾಖೆಗಳಿಂದ ಆಗಮಿಸಿದ್ದ ಮಹಿಳೆಯರು ಹಾಗೂ ಪುರುಷರು ಕೇರಳದ ಸಾಂಪ್ರದಾಯಿಕ ಉಡುಗೆ ತೊಟ್ಟು ಮೆರವಣಿಗೆಯಲ್ಲಿ ಗಮನ ಸೆಳೆದರು. ವಿವಿಧ ರಂಗದ ಪ್ರಮುಖರು ಮತ್ತು ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಂತರ ಓಣಂ ಸದ್ಯ ಹಾಗೂ ಕೇರಳದ ಕಣ್ಣೂರಿನ ಹರಿಶ್ರೀ ತಂಡದ ರಸಮಂಜರಿ ರಂಜಿಸಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net