ಎಮ್ಮೆಮಾಡು ಹಝ್ರತ್ ಸೂಫಿ ಶಹೀದ್ ಮತ್ತು ಸಯ್ಯುದ್ ಹಸನ್ ಸಖಾಫ್ ಹಳ್ರಮಿ ಹೆಸರಿನಲ್ಲಿ ನಡೆಯುವ ಇತಿಹಾಸ ಪ್ರಸಿದ್ಧ ಮಖಾಂ ಉರುಸ್ ಅಂಗವಾಗಿ ಆಯೋಜಿಸಲಾಗಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅವರು ಮಾತನಾಡಿದರು.
Published on:
Copied
Follow Us
ನಾಪೋಕ್ಲು:ಎಲ್ಲ ಧರ್ಮಗಳು ಶಾಂತಿ, ಪ್ರೀತಿ, ಸೌಹಾರ್ದತೆಯನ್ನು ಪ್ರತಿಪಾದಿಸುತ್ತವೆ. ಶಾಂತಿ, ಸೌಹಾರ್ದತೆಯ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಸಲಹೆ ನೀಡಿದರು.
ಸಮೀಪದ ಎಮ್ಮೆಮಾಡು ಹಝ್ರತ್ ಸೂಫಿ ಶಹೀದ್ ಮತ್ತು ಸಯ್ಯುದ್ ಹಸನ್ ಸಖಾಫ್ ಹಳ್ರಮಿ ಹೆಸರಿನಲ್ಲಿ ಪ್ರತಿವರ್ಷ ನಡೆಯುವ ಇತಿಹಾಸ ಪ್ರಸಿದ್ಧ ಮಖಾಂ ಉರೂಸ್ ಅಂಗವಾಗಿ ಆಯೋಜಿಸಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಶಾಂತಿ ಪ್ರತಿಪಾದಿಸಿದ ಸೂಫಿ ಸಂತರ ನಾಡಿನಲ್ಲಿ ಇಂದು ಉರುಸ್ ಸಮಾರಂಭವನ್ನು ಆಯೋಜಿಸಲಾಗುತ್ತಿದೆ. ಯಾವ ಧರ್ಮವು ದ್ವೇಷವನ್ನು ಪ್ರತಿಪಾದಿಸಿಲ್ಲ, ದ್ವೇಷದಿಂದ ಏನನ್ನೂ ಸಾಧಿಸಲಾಗದು. ಸಮಾಜದಲ್ಲಿ ಶಾಂತಿ ಸೌಹಾರ್ದತೆ ಸಮಾನತೆಯನ್ನು ತರುವ ಕೆಲಸವಾಗಬೇಕಿದೆ, ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಎಲ್ಲರೂ ಬಾಳಬೇಕು ಎಂದರು.
ಸಂವಿಧಾನದ ಆಶಯಗಳನ್ನು ಮನಪೂರ್ವಕವಾಗಿ ಒಪ್ಪಿ ಸ್ವೀಕಾರ ಮಾಡಬೇಕು. ಕೇವಲ ಮಾತುಗಳಿಗೆ, ಗೋಷ್ಠಿಗೆ, ಕಾರ್ಯಕ್ರಮಗಳಿಗೆ ಸಂವಿಧಾನದ ತತ್ವಗಳು ಸೀಮಿತವಾಗಬಾರದು ಎಂದರು.
ರಾಜ್ಯದೆಲ್ಲೆಡೆ ಅಭಿವೃದ್ಧಿ ಕೆಲಸಗಳಾಗುತ್ತಿವೆ. ವಿರಾಜಪೇಟೆ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ರಾಜ್ಯ ಸರ್ಕಾರ ಮಾಡಿದೆ. ಯಾವುದೇ ರೀತಿಯ ತಾರತಮ್ಯ ಮಾಡದೆ ಸೌಹಾರ್ದ ಸಮಾಜ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದ್ದು ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.