ಗೆಲುವಿಗಾಗಿ ಹಗ್ಗ ಜಗ್ಗಲಿವೆ 26 ತಂಡಗಳು

ಚೀಯಕಪೂವಂಡ 5ನೇ ವರ್ಷದ ಕೊಡವ ಕೌಟುಂಬಿಕ ಕೇರ್ ಬಲಿ ನಮ್ಮೆಯಲ್ಲಿ ನಾಪೋಕ್ಲು ಕೊಡವಸಮಾಜ ಹಾಗೂ ಪೊಮ್ಮಕ್ಕಡ ಪರಿಷತ್ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ನಿರ್ದೇಶಕರು ಎಲ್ಲರೂ  ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ ಭಾಗವಹಿಸಿ ಪಂದ್ಯಾಟವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಚೀಯಕಪೂವಂಡ 5ನೇ ವರ್ಷದ ಕೊಡವ ಕೌಟುಂಬಿಕ ಕೇರ್ ಬಲಿ ನಮ್ಮೆಯಲ್ಲಿ ನಾಪೋಕ್ಲು ಕೊಡವಸಮಾಜ ಹಾಗೂ ಪೊಮ್ಮಕ್ಕಡ ಪರಿಷತ್ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ನಿರ್ದೇಶಕರು ಎಲ್ಲರೂ ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ ಭಾಗವಹಿಸಿ ಪಂದ್ಯಾಟವನ್ನು ಉದ್ಘಾಟಿಸಿ ಶುಭ ಹಾರೈಸಿದರು.
Published on
ನಾಪೋಕ್ಲು: ಸ್ಥಳೀಯ ಕೆಪಿಎಸ್ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಚೀಯಕಪೂವಂಡ 5ನೇ ವರ್ಷದ ಕೊಡವ ಕೌಟುಂಬಿಕ ಕೇರ್ ಬಲಿ ನಮ್ಮೆಯಲ್ಲಿ ಭಾನುವಾರ ಚೀಯಕಪೂವಂಡ ಕಪ್‌ಗೆ 26 ತಂಡಗಳು ಸೆಣಸಾಡಲಿವೆ.
ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಟೂರ್ನಿಯಲ್ಲಿ 295 ಕುಟುಂಬಗಳು ಪಾಲ್ಗೊಂಡಿದ್ದು, ಶುಕ್ರವಾರ 89 ಪಂದ್ಯಗಳು ನಡೆದಿದ್ದರೆ ಶನಿವಾರ 53 ತಂಡಗಳು ಭಾಗವಹಿಸಿದ್ದವು. 26 ತಂಡಗಳು ಭಾನುವಾರ ಸೆಣೆಸಾಡಲಿದ್ದು ಮಧ್ಯಾಹ್ನ ಫೈನಲ್ ಪಂದ್ಯ ನಡೆಯಲಿದೆ.
ಶನಿವಾರ ಜರುಗಿದ ಕೊಡವ ಕೌಟುಂಬಿಕ ಕೇರ್ ಬಲಿ ನಮ್ಮೆಯನ್ನು ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಪ್ರಮುಖರು ಪಂದ್ಯಗಳನ್ನು ಉದ್ಘಾಟಿಸಿದರು. ಇದರಲ್ಲಿ ನಾಪೋಕ್ಲು ಕೊಡವ ಸಮಾಜ ಹಾಗೂ ಪೊಮ್ಮಕ್ಕಡ ಪರಿಷತ್ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ನಿರ್ದೇಶಕರು ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ ಭಾಗವಹಿಸಿ ಪಂದ್ಯಾಟವನ್ನು ಉದ್ಘಾಟಿಸಿರುವುದು ವಿಶೇಷವಾಗಿತ್ತು.
ಕೊಡವಸಮಾಜದ ಅಧ್ಯಕ್ಷ ಮುಂಡಂಡ ನಾಣಯ್ಯ ಮಾತನಾಡಿ, ಕೊಡವ ಕೌಟುಂಬಿಕ ಕೇರ್ ಬಲಿ ನಮ್ಮೆಯನ್ನು ಅತ್ಯಂತ ಯಶಸ್ವಿಯಾಗಿ ಸಂಘಟಿಸಲಾಗುತ್ತಿದ್ದು ಅಪಾರ ಕ್ರೀಡಾಭಿಮಾನಿಗಳ ಮನ ಸೆಳೆದಿದೆ. ಚೀಯಕಪೂವಂಡ ಕುಟುಂಬಸ್ಥರು ನೇತೃತ್ವ ವಹಿಸಿದ್ದು ಹಗ್ಗ ಜಗ್ಗಾಟದ ಸ್ಪರ್ಧೆಯ ಕೀರ್ತಿ ರಾಜ್ಯ, ದೇಶದ ಮೂಲೆ ಮೂಲೆಗಳನ್ನು ತಲುಪಲಿ, ಕುಟುಂಬದ ಹೆಸರು ದಾಖಲೆ ನಿರ್ಮಿಸಲಿ ಎಂದು ಶುಭ ಹಾರೈಸಿದರು.
ಸಮಾರೋಪ ಸಮಾರಂಭ: ಭಾನುವಾರ ಮಧ್ಯಾಹ್ನ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಚೀಯಕಪೂವಂಡ ಕುಟುಂಬದ ಅಧ್ಯಕ್ಷ ಸಿ.ಎಂ.ಅಪ್ಪಚ್ಚು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚೀಯಕಪೂವಂಡ ಹಗ್ಗಜಗ್ಗಾಟ ಉತ್ಸವದ ಅಧ್ಯಕ್ಷ ಸಿ.ಕೆ.ಬೋಪಣ್ಣ, ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಕರ್ನಾಟಕ ಸರ್ಕಾರದ ಮುಖ್ಯ ವಿದ್ಯುತ್ ಅಧಿಕಾರಿ ತೀತಿರ ರೋಶನ್ ಅಪ್ಪಚ್ಚು, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ, ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥ ಶರತ್ ಪರಕೋತ್, ಕೊಡವ ಟಗ್ ಆಫ್ ವಾರ್ ಅಕಾಡೆಮಿ ಅಧ್ಯಕ್ಷ ಪೊನ್ನೊಲತಂಡ ಕಿರಣ್ ಪೊನ್ನಪ್ಪ, ಮುಂಡ್ಯೋಳಂಡ ಕುಟುಂಬದ ಅಧ್ಯಕ್ಷ ಎಂ.ಟಿ.ತಿಮ್ಮಯ್ಯ, ಚೀಯಕಪೂವಂಡ ಕುಟುಂಬದ ಹಿರಿಯ ಸಿ.ಎ.ಚಿಟ್ಟಿಯಪ್ಪ, ಉಪಸ್ಥಿತರಿರುವರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net