ಟೈ ಬ್ರೇಕರ್‌ನಲ್ಲಿ ಕಾಂಡಂಡ ತಂಡಕ್ಕೆ ಮೂಕಳಮಾಡ ವಿರುದ್ಧ ಗೆಲುವು

ನಾಪೋಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಚೇನಂಡ  ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಬುಧವಾರದ ಪಂದ್ಯದ ದೃಶ್ಯ.
ನಾಪೋಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಚೇನಂಡ ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಬುಧವಾರದ ಪಂದ್ಯದ ದೃಶ್ಯ.
Published on
ನಾಪೋಕ್ಲು: ಇಲ್ಲಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಚೇನಂಡ ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಬುಧವಾರದ ಪಂದ್ಯಗಳಲ್ಲಿ ಕಾಂಡಂಡ ಮತ್ತು ಮೂಕಳಮಾಡ ತಂಡಗಳು ಬಿರುಸಿನ ಆಟದಿಂದ ವೀಕ್ಷಕರಲ್ಲಿ ಕುತೂಹಲ ಕೆರಳಿಸಿದರೂ ಪಂದ್ಯದಲ್ಲಿ ಎರಡು ತಂಡಗಳು ತಲಾ ಮೂರು ಗೋಲು ಗಳಿಸಿದವು. ಬಳಿಕ ಗೆಲುವಿಗಾಗಿ ಟೈ ಬ್ರೇಕರ್ ಮೊರೆ ಹೋಗಬೇಕಾಯಿತು. ಟೈ ಬ್ರೇಕರ್‌ನಲ್ಲಿ ಕಾಂಡಂಡ, ಮೂಕಳಮಾಡ ವಿರುದ್ಧ 4-3ರಿಂದ ಗೆಲುವು ಸಾಧಿಸಿತು.
ಬೋವ್ವೇರಿಯಂಡ, ಕುಂಡ್ಯೋಳಂಡ ವಿರುದ್ಧ 4-2ರಿಂದ, ಅಮಣಿಚಂಡ, ಮುರುವಂಡ ವಿರುದ್ಧ 2-1ರಿಂದ, ಸಣ್ಣುವಂಡ ಕುಪ್ಪಂಡವಿರುದ್ಧ 4-2ರಿಂದ, ಮೇಚಿಯಂಡ ಅಪ್ಪನೆರವಂಡ ವಿರುದ್ದ 1-0ಯಿಂದ , ಚೌರಿರ (ಹೊದ್ದೂರು) ಪುಲ್ಲಂಗಡ ವಿರುದ್ಧ 1-0ಯಿಂದ, ಕೂತಂಡ ಬಲಚಂಡ ವಿರುದ್ಧ 3-0ಯಿಂದ, ಬಿದ್ದಾಟಂಡ ಡ ನೆರವಂಡ ವಿರುದ್ಧ 5-3ರಿಂದ ಗೆಲುವು ಸಾಧಿಸಿದವು.
ಒಟ್ಟು 383 ಕುಟುಂಬಗಳ ಪೈಕಿ 321 ಕುಟುಂಬಗಳು ಪಂದ್ಯಾವಳಿಯಿಂದ ನಿರ್ಗಮಿಸಿವೆ. ಎರಡು ಮೈದಾನಗಳಲ್ಲಿ 62 ಕುಟುಂಬಗಳು ಇದೀಗ ಸ್ಪರ್ಧಿಸುತ್ತಿದ್ದು ಪಂದ್ಯಗಳು ವೀಕ್ಷಕರ ಮನ ಸೆಳೆಯುತ್ತಿವೆ.
ಪಂದ್ಯಾವಳಿಯಲ್ಲಿ ಪಾಲ್ಗೊಂಡು ಸೋತು ನಿರ್ಗಮಿಸುತ್ತಿರುವ ಪ್ರತಿ ತಂಡಕ್ಕೆ ಚೇನಂಡ ಕುಟುಂಬದ ವಿಶೇಷ ಪಾಪುಲಿ ಸ್ಮರಣೆಯೊಂದಿಗೆ ವಿಶೇಷ ಕೊಡುಗೆಯಾಗಿ ಚೆಂಬದುಡಿಯನ್ನು ನೀಡಲಾಗುತ್ತಿದೆ. ಪ್ರತಿ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮನಾಗಿ ಆಯ್ಕೆಯಾಗುವ ಆಟಗಾರನಿಗೆ ಜಿಲ್ಲೆಯ ಒಲಿಂಪಿಯನ್‌ಗಳು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವವರು, ಚೇನಂಡ ಕುಟುಂಬದ ಅಧ್ಯಕ್ಷರು, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷರು ಸೇರಿದಂತೆ 16 ಮಂದಿ ಸಹಿ ಮಾಡಿರುವ ಹಾಕಿ ಸ್ಟಿಕ್ ಅನ್ನು ಕೊಡುಗೆಯಾಗಿ ನೀಡಲಾಗುತ್ತಿದೆ. ಅಂತಿಮ ಹಂತ ತಲುಪಿದ ಅರವತ್ತ ನಾಲ್ಕು ಕುಟುಂಬಗಳಿಗೆ ಚಂಬದುಡಿ ವಿತರಣೆ ಮಾಡಲಾಗುತ್ತಿದ್ದು, ಇದಕ್ಕೆ ಜನಪದ ತಜ್ಞರಾದ ಬೊಟ್ಟೋಳಂಡ ಕಾಶಿ ಅಚ್ಚಯ್ಯ ಸೇರಿದಂತೆ ಇನ್ನಿತರರು ಚಾಲನೆ ನೀಡಿದರು. ಸೋಮವಾರದಿಂದ ಪರಾಜಿತ ತಂಡಗಳಿಗೆ ದುಡಿ ನೀಡಲಾಗುತ್ತಿದೆ.
ಚೇನಂಡ ಕಪ್ ವಿಜೇತ ಕುಟುಂಬಕ್ಕೆ ಮೂರು ಲಕ್ಷ ರೂ. ನಗದು ಬಹುಮಾನ ಹಾಗೂ ಟ್ರೋಫಿ, ರನ್ನರ್ಸ್ ಅಪ್ ತಂಡಕ್ಕೆ 2 ಲಕ್ಷ ರೂ. ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಗುವುದು. ಮೂರು ಮತ್ತು ನಾಲ್ಕನೇ ಸ್ಥಾನ ಪಡೆದ ತಂಡಗಳಿಗೆ ತಲಾ ಒಂದು ಲಕ್ಷ ರೂ. ಸೇರಿ ಒಟ್ಟು ಏಳು ಲಕ್ಷ ರೂ. ನಗದು ಬಹುಮಾನ ನೀಡಲಾಗುವುದು. ಜತೆಗೆ ಕೊಡವ ಹಾಕಿ ಅಕಾಡೆಮಿಯ ಒಂದು ಕೆಜಿ ತೂಕದ ಬೆಳ್ಳಿಯ ರೋಲಿಂಗ್ ಟ್ರೋಫಿ ಸೇರಿದಂತೆ ಪ್ರಯೋಜಕರಿಂದ ವಿವಿಧ ಬಹುಮಾನಗಳು ಲಭಿಸಲಿವೆ.
ಮಹಿಳಾ ಹಾಕಿ ವಿಜೇತ ತಂಡಕ್ಕೆ 2 ಲಕ್ಷ ರೂ. ನಗದು ಹಾಗೂ ರನ್ನರ್ ಅಪ್ ತಂಡಕ್ಕೆ ಒಂದು ಲಕ್ಷ ರೂ. ನಗದು ಲಭಿಸಲಿದೆ. ಭಾರತ ಹಾಕಿ ತಂಡಕ್ಕೆ ಆಡಿದ ಪ್ರಥಮ ಕೊಡವ ಮಹಿಳೆ ಪಾಂಡಂಡ ಪುಷ್ಪ ಸುಬ್ಬಯ್ಯ ಬಹುಮಾನ ಪ್ರಾಯೋಜಿಸುತ್ತಿದ್ದಾರೆ. ಮಹಿಳಾ ಹಾಕಿ ಉತ್ಸವ ಏಪ್ರಿಲ್ 25ರಿಂದ ಆರಂಭಗೊಳ್ಳಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net