ಸಾಕಮ್ಮ ಕೊಡುಗೆ ಶಾಶ್ವತಗೊಳಿಸಲು ರಸ್ತೆಗೆ ಹೆಸರಿಡಿ

Sakamma
Sakamma
Published on

ಡಾಲ್ಫಿನ್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಬಿ.ಆರ್.ಮಹೇಶ್ ಒತ್ತಾಯ

ಸೋಮವಾರಪೇಟೆ: ರಾಜ್ಯದ ಪ್ರಥಮ ಮಹಿಳಾ ಉದ್ಯಮಿ ಹಾಗೂ ದಾನಿಗಳಾಗಿ ಗುರುತಿಸಿಕೊಂಡಿರುವ ಸೋಮವಾರಪೇಟೆಯ ದೊಡ್ಡಮನೆ ಸಾಕಮ್ಮ ಅವರ ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಅವರ ಹೆಸರಿನಲ್ಲಿ ಸ್ಮರಣೀಯ ಯೋಜನೆಗಳನ್ನು ಕೈಗೊಳ್ಳಲು ಡಾಲ್ಫಿನ್ಸ್ ಸ್ಪೋರ್ಟ್ಸ್ ಕ್ಲಬ್ ತೀರ್ಮಾನಿಸಿದೆ ಎಂದು ಕ್ಲಬ್ ಅಧ್ಯಕ್ಷ ಬಿ.ಆರ್.ಮಹೇಶ್ ತಿಳಿಸಿದ್ದಾರೆ.
ಡಿ.ಸಾಕಮ್ಮ ಅವರ ಸಾಧನೆ ಹಾಗೂ ಸಮಾಜಮುಖಿ ಸೇವೆಗಳ ಕುರಿತು ಇಂದಿನ ಯುವಜನತೆಗೆ ಸಮರ್ಪಕ ಮಾಹಿತಿ ಇಲ್ಲದಿರುವುದು ಬೇಸರದ ಸಂಗತಿ. ಹಿಂದೆ ಬಸವೇಶ್ವರ ರಸ್ತೆಯಲ್ಲಿದ್ದ ಅವರ ಬಂಗಲೆಗೆ ಜನರು ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದರು. ಆದರೆ ಈಗ ಆ ಅವಕಾಶ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಪಟ್ಟಣದ ಪ್ರಮುಖ ರಸ್ತೆಗೆ ಅವರ ಹೆಸರಿಡುವ ಮೂಲಕ ಅವರ ನೆನಪನ್ನು ಶಾಶ್ವತಗೊಳಿಸುವ ಅಗತ್ಯವಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇದರ ಜತೆಗೆ ಸೂಕ್ತ ಸ್ಥಳದಲ್ಲಿ ಡಿ.ಸಾಕಮ್ಮ ಅವರ ಪ್ರತಿಮೆ ಪ್ರತಿಷ್ಠಾಪನೆ ಮಾಡುವ ಉದ್ದೇಶ ಹೊಂದಿದ್ದು, ಈ ಕಾರ್ಯಕ್ಕೆ ಶಾಸಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಕ್ಲಬ್ ಸಲಹೆಗಾರ ಕೆ.ಎಸ್.ಪ್ರಕಾಶ್ ಮಾತನಾಡಿ, ಡಾಲ್ಫಿನ್ಸ್ ಸ್ಪೋರ್ಟ್ಸ್ ಕ್ಲಬ್ ಕೇವಲ ಕ್ರೀಡಾ ಕ್ಷೇತ್ರದಲ್ಲಷ್ಟೇ ಅಲ್ಲದೆ ಸಾಮಾಜಿಕ ಚಟುವಟಿಕೆಯಲ್ಲಿಯೂ ತೊಡಗಿಸಿಕೊಂಡಿದೆ ಎಂದರು.
ಹಾಕಿ ಕ್ರೀಡೆಯಲ್ಲಿ ಅನೇಕ ಪ್ರತಿಭೆಗಳಿಗೆ ತರಬೇತಿ ನೀಡಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿದ ಕ್ಲಬ್, ಸಮಾಜದ ಸಾಧಕರನ್ನು ಗುರುತಿಸುವ ಕಾರ್ಯವನ್ನೂ ಮಾಡುತ್ತಿದೆ ಎಂದು ಹೇಳಿದರು. ರಸ್ತೆಗೆ ನಾಮಕರಣ ಮತ್ತು ಪ್ರತಿಮೆ ಸ್ಥಾಪನೆಗೆ ಸ್ಥಳ ಕಲ್ಪಿಸುವ ಕುರಿತು ಶಾಸಕರು ಮತ್ತು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕ್ಲಬ್ ಪ್ರಧಾನ ಕಾರ್ಯದರ್ಶಿ ಬಿ.ಎನ್.ಮಂಜುನಾಥ್, ಸದಸ್ಯ ಮಿಲನ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net