ಗ್ರಾಮೀಣ ಕೃಷಿ ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯಿಸಲು ಕೆಸರು ಗದ್ದೆ ಕ್ರೀಡಾಕೂಟ ಸಹಕಾರಿ
ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಮಕ್ಕಳು ಹಗ್ಗಜಗ್ಗಾಟದಲ್ಲಿ ಪಾಲ್ಗೊಂಡಿದ್ದರು.
Published on:
Copied
Follow Us
ಕುಶಾಲನಗರ:
ರೈತರ ಕೃಷಿ ಜೀವನ ಹಾಗೂ ಗ್ರಾಮೀಣ ಕೃಷಿ ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯಿಸಲು ಮತ್ತು ಅವರಲ್ಲಿ ಕ್ರೀಡಾ ಮನೋಭಾವನೆ ಬೆಳೆಸಲು ಕೆಸರು ಗದ್ದೆ ಕ್ರೀಡಾಕೂಟ ಸಹಕಾರಿ ಎಂದು ಕುಶಾಲನಗರ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಎನ್. ಪವನ್ ಕುಮಾರ್ ಹೇಳಿದರು. ಕುಶಾಲನಗರ ಸಮೀಪದ ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಕುಶಾಲನಗರ ಲಯನ್ಸ್ ಕ್ಲಬ್, ಶಾಲೆಯ ಇಕೋ ಕ್ಲಬ್ ಹಾಗೂ ಎನ್.ಎಸ್.ಎಸ್. ಘಟಕದ ಜಂಟಿ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ಸೋಮವಾರ ಆಯೋಜಿಸಲಾಗಿದ್ದ ಕೆಸರುಗದ್ದೆ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಕೆಸರು ಗದ್ದೆ ಕ್ರೀಡಾಕೂಟಗಳ ಮುಖಾಂತರ ಮಕ್ಕಳಿಗೆ ಕೃಷಿ ಪಾಠದ ಬಗ್ಗೆ ಜ್ಞಾನ ಹೆಚ್ಚುವುದರ ಜತೆಗೆ ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹವೂ ಸಿಗುತ್ತದೆ ಎಂದು ಹೇಳಿದರು.
ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಕೆ. ಗೋಪಾಲಕೃಷ್ಣ ಮಾತನಾಡಿ, ವಿದ್ಯಾರ್ಥಿಗಳಿಗೆ ಕೃಷಿ ಬದುಕು ಮತ್ತು ದೇಶದ ಕೃಷಿ ಪದ್ಧತಿಯನ್ನು ಅರ್ಥ ಮಾಡಿಸುವ ದಿಸೆಯಲ್ಲಿ ಈ ಕ್ರೀಡಾಕೂಟ ಸಂಘಟಿಸಲಾಗಿದ್ದು, ಲಯನ್ಸ್ ಕ್ಲಬ್ ಉತ್ತಮ ಬೆಂಬಲ ನೀಡಿದೆ ಎಂದು ಹೇಳಿದರು.
ಜಿಲ್ಲಾ ಲಯನ್ಸ್ ಕ್ಲಬ್ ಗ್ಲೋಬಲ್ ಸರ್ವಿಸ್ ವಿಭಾಗದ ಚೀಫ್ ಕೋರ್ಡಿನೇಟರ್ ಸುಮಾನ್ ಬಾಲಚಂದ್ರ ಮಾತನಾಡಿ, ಈ ಕ್ರೀಡೆಯು ಮಕ್ಕಳಲ್ಲಿ ಪರಸ್ಪರ ಭ್ರಾತೃತ್ವ ಬೆಳೆಸಲು ನೆರವಾಗಲಿದೆ ಎಂದರು. ಮಾಜಿ ಅಧ್ಯಕ್ಷ ಟಿ.ಕೆ. ರಾಜಶೇಖರ್ ಮಾತನಾಡಿ, ವಿದ್ಯಾರ್ಥಿಗಳು ಮಣ್ಣಿನೊಂದಿಗೆ ಸಂಪರ್ಕ ಬೆಳೆಸಿಕೊಂಡು ಕೃಷಿ ಅನುಭವ ಪಡೆಯಬೇಕು ಎಂದು ಹೇಳಿದರು.
ಕಳೆದ 5 ವರ್ಷಗಳಿಂದ ಈ ಕ್ರೀಡಾಕೂಟ ನಡೆಸಿಕೊಂಡು ಬರಲಾಗುತ್ತಿದ್ದು, ಇದು ಮಕ್ಕಳ ಕಲಿಕೆಗೆ ಪೂರಕವಾಗಿದೆ ಎಂದು ಗದ್ದೆಯ ಮಾಲೀಕರಾದ ಪ್ರಗತಿಪರ ರೈತ ಕೆ.ಎಸ್. ರಾಜಾಚಾರಿ ತಿಳಿಸಿದರು.
ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಟಿ. ದಯಾನಂದ ಪ್ರಕಾಶ್, ಗ್ರಾಮ ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಸಿ. ಜವರೇಗೌಡ, ದೈಹಿಕ ಶಿಕ್ಷಣ ಶಿಕ್ಷಕಿ ಕೆ.ಟಿ. ಸೌಮ್ಯ ಹಾಗೂ ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ನಾರಾಯಣ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಎನ್. ಪವನ್ ಕುಮಾರ್ ಮತ್ತು ವೀಣಾ ಪವನ್ ಕುಮಾರ್ ನಗದು ಬಹುಮಾನ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಕ್ರೀಡಾಕೂಟಕ್ಕೆ ಗದ್ದೆ ಮಾಡಿಕೊಟ್ಟ ಪ್ರಗತಿಪರ ರೈತ ಕೆ.ಎಸ್. ರಾಜಾಚಾರಿ ಅವರನ್ನು ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಟ್ರಸ್ಟ್ ಅಧ್ಯಕ್ಷ ಡಾ. ಪ್ರವೀಣ್ ದೇವರಗುಂಡ ಸೋಮಪ್ಪ, ಉಪಾಧ್ಯಕ್ಷ ನಿತಿನ್ ಗುಪ್ತ, ಕಾರ್ಯದರ್ಶಿ ಕಿರಣ್ ಗೌಡ, ಕೋಶಾಧಿಕಾರಿ ಡಾ. ರಾಘವೇಂದ್ರ, ಪದಾಧಿಕಾರಿಗಳಾದ ನವ್ಯ ಹಾಗೂ ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಗ್ರಾಮದ ಪ್ರಗತಿಪರ ರೈತ ಕೆ.ಎಸ್. ರಾಜಾಚಾರಿ ಅವರ ಬತ್ತದ ಗದ್ದೆಯಲ್ಲಿ ಆಯೋಜಿಸಲಾಗಿದ್ದ ಈ ಕ್ರೀಡಾಕೂಟದಲ್ಲಿ ಶಾಲಾ ಮಕ್ಕಳು ಕೆಸರುಗದ್ದೆಗೆ ಇಳಿದು, ಒಬ್ಬರ ಮೇಲೊಬ್ಬರು ಕೆಸರು ಎರಚಾಡುತ್ತಾ ಕುಣಿದು ಕುಪ್ಪಳಿಸಿದರು. ಓಟದ ಸ್ಪರ್ಧೆ, ಹಗ್ಗ ಜಗ್ಗಾಟ, ಬೊಗಸೆಯಿಂದ ಲೋಟಕ್ಕೆ ನೀರು ತುಂಬುವ ಸ್ಪರ್ಧೆ ಸೇರಿದಂತೆ ಹಲವು ಗ್ರಾಮೀಣ ಆಟಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ಕ್ರೀಡಾ ಉತ್ಸಾಹ ಮೆರೆದರು.