ರಕ್ಷಣಾ ತಡೆಗೋಡೆ ನಿರ್ಮಾಣದ ಕಾಮಗಾರಿಗೆ ಚಾಲನೆ

೯೪ ಕೋಟಿ ರೂ. ವೆಚ್ಚದ ರಕ್ಷಣಾ ತಡೆಗೋಡೆ ನಿರ್ಮಾಣದ ಕಾಮಗಾರಿಗೆ ಲೋಕಸಭಾ ಸದಸ್ಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬುಧವಾರ ಭೂಮಿ ಪೂಜೆ ನೆರವೇರಿಸಿದರು.
೯೪ ಕೋಟಿ ರೂ. ವೆಚ್ಚದ ರಕ್ಷಣಾ ತಡೆಗೋಡೆ ನಿರ್ಮಾಣದ ಕಾಮಗಾರಿಗೆ ಲೋಕಸಭಾ ಸದಸ್ಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬುಧವಾರ ಭೂಮಿ ಪೂಜೆ ನೆರವೇರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ರಕ್ಷಣಾ ತಡೆಗೋಡೆ ನಿರ್ಮಾಣದ ಕಾಮಗಾರಿಗೆ ಚಾಲನೆ
  • ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೂಮಿಪೂಜೆ
ಮಡಿಕೇರಿ: ರಾಷ್ಟ್ರೀಯ ಹೆದ್ದಾರಿ ೨೭೫ರ ಇಬ್ಬನಿ ರೆಸಾರ್ಟ್ ಬಳಿಯಿಂದ ಸಂಪಾಜೆವರೆಗೆ ೨೧ ಕಡೆಗಳಲ್ಲಿ ಸುಮಾರು ೯೪ ಕೋಟಿ ರೂ. ವೆಚ್ಚದ ರಕ್ಷಣಾ ತಡೆಗೋಡೆ ನಿರ್ಮಾಣದ ಕಾಮಗಾರಿಗೆ ಲೋಕಸಭಾ ಸದಸ್ಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬುಧವಾರ ಭೂಮಿ ಪೂಜೆ ನೆರವೇರಿಸಿದರು.
ಮಡಿಕೇರಿ ತಾಲ್ಲೂಕಿನ ಮದೆನಾಡು ಬಳಿಯ ಕರ್ತೋಜಿ ಬಳಿ ರಕ್ಷಣಾ ತಡೆಗೋಡೆ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಸಂಸದರು, ಸ್ಥಳೀಯರ ಬೇಡಿಕೆಯಂತೆ ೨೧ ಕಡೆಗಳಲ್ಲಿ ರಕ್ಷಣಾ ತಡೆಗೋಡೆ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ರಕ್ಷಣಾ ತಡೆಗೋಡೆ ಕಾಮಗಾರಿಯು ೧೮ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಸಂಸದರು ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹಾಗೂ ಕೇಂದ್ರ ಭೂಸಾರಿಗೆ ಮಂತ್ರಾಲಯ ಸಚಿವರಾದ ನಿತಿನ್ ಗಡ್ಕರಿ ಅವರ ಪ್ರಯತ್ನದಿಂದ ರಾಷ್ಟ್ರದಲ್ಲಿ ಹೆದ್ದಾರಿಗಳು ಅಭಿವೃದ್ಧಿ ಹೊಂದುತ್ತಿವೆ. ರಾಷ್ಟ್ರದ ರಾಜದಾನಿ ನವದೆಹಲಿ, ಮುಂಬೈ, ಬೆಂಗಳೂರು, ಚೆನೈ, ಕೊಲ್ಕತ್ತಾ ಮತ್ತಿತ್ತರ ಕಡೆಗಳಲ್ಲಿ ಸಂಪರ್ಕ ರಸ್ತೆಯನ್ನಾಗಿ ಸರ್ಕಾರ ಕೈಗೊಂಡಿದೆ. ಹಾಗೆಯೇ ರೈಲ್ವೆ ಯೋಜನೆಗಳನ್ನು ವಿದ್ಯುದ್ದೀಕರಣ ಮಾಡಿ ಅಭಿವೃದ್ಧಿಗೊಳಿಸಲಾಗಿದೆ ಎಂದು ತಿಳಿಸಿದರು.
ರಾಷ್ಟ್ರದಲ್ಲಿ ಹಿಂದೆ ಕಡಿಮೆ ವಿಮಾನ ನಿಲ್ದಾಣಗಳು ಇದ್ದವು, ಈಗ ೧೫೦ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಅದರಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಸ್ಥಾಪಿಸಲಾಗಿದೆ. ಹೀಗೆ ಜಾಗತಿಕವಾಗಿ ರಾಷ್ಟ್ರ ಅಭಿವೃದ್ಧಿಯಲ್ಲಿ ಮೂರನೇ ಸ್ಥಾನ ಹೊಂದಿದೆ ಎಂದರು.
ಕೇಂದ್ರ ಸರ್ಕಾರದಿಂದ ಹಲವು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಯುವಜನರಿಗೆ ವೃತ್ತಿ ಕೌಶಲ್ಯ ತರಬೇತಿಯನ್ನು ನೀಡಿ, ಸ್ವ ಉದ್ಯೋಗ ಕೈಗೊಳ್ಳಲು ಹೆಚ್ಚಿನ ಒತ್ತು ನೀಡಲಾಗಿದೆ. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಪರಿಸರ ಶುಚಿತ್ವಕ್ಕೆ ಒತ್ತು ನೀಡುವ ಮೂಲಕ ಶೌಚಾಲಯ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಿದೆ ಎಂದು ಲೋಕಸಭಾ ಸದಸ್ಯರು ವಿವರಿಸಿದರು.
ಸರ್ಕಾರದಿಂದ ಕೊಡಗು ಜಿಲ್ಲೆಗೆ ಪರಿಸರ ಸಂರಕ್ಷಣೆ ಮತ್ತು ಪ್ರಾಕೃತಿಕ ಸಂಪತ್ತನ್ನು ಸಂರಕ್ಷಣೆ ಮಾಡುವಲ್ಲಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸುವಂತಾಗಬೇಕು ಎಂದು ಹೇಳಿದರು.
ಮಾಜಿ ಸಚಿವರಾದ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ಸಂಸದರು ಕರಿಮೆಣಸಿಗೆ ಸೆಸ್ ಜಾರಿಗೊಳಿಸುವುದನ್ನು ತಡೆದಿದ್ದಾರೆ ಎಂದು ಶ್ಲಾಘಿಸಿದರು. ತಡೆಗೋಡೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅಗತ್ಯ ಸಹಕಾರ ನೀಡಿದೆ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯರಾದ ಸುನಿಲ್ ಸುಬ್ರಮಣಿ, ಪ್ರಮುಖರಾದ ನಾಗೇಶ್ ಕುಂದಲ್ಪಾಡಿ, ರವಿ ಕುಶಾಲಪ್ಪ, ನಗರಸಭಾ ಅಧ್ಯಕ್ಷೆ ಪಿ.ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ಪ್ರಮುಖರಾದ ಉಮೇಶ್ ಸುಬ್ರಮಣಿ, ಕಾಂಗೀರ ಸತೀಶ್, ಪಿ.ಎಂ.ರವಿ, ಗೌತಮ್, ಸಜಿಲ್ ಕೃಷ್ಣ, ಪುಷ್ಪ, ಧನಂಜಯ ಅಗೋಳಿಕಜೆ, ಬೆಳ್ಳಿಯನ ಚಂದ್ರಪ್ರಕಾಶ್, ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಿ.ಎಚ್.ಗಿರೀಶ್, ಸಹಾಯಕ ಎಂಜಿನಿಯರ್ ಹನುಮಂತ ಇತರರು ಇದ್ದರು.
ಮಣ್ಣಿನ ಪರಿಸ್ಥಿತಿ ಅವಲೋಕಿಸಿ ಯೋಜನೆ
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಂಸದರು, ರಕ್ಷಣಾ ತಡೆಗೋಡೆ ನಿರ್ಮಾಣ ಸಂಬಂಧ ತಜ್ಞರು, ಇಲ್ಲಿನ ಸ್ಥಳೀಯ ಮಣ್ಣಿನ ಪರಿಸ್ಥಿತಿಯನ್ನು ಅವಲೋಕಿಸಿ ಯೋಜನೆ ರೂಪಿಸಿದ್ದು, ಆ ನಿಟ್ಟಿನಲ್ಲಿ ಕಾಮಗಾರಿ ನಡೆಯಲಿದೆ ಎಂದು ಪ್ರತಿಕ್ರಿಯಿಸಿದರು.
ರಸ್ತೆ ತಿರುವುಗಳ ಅಗಲೀಕರಣ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದರು, ಇದು ಕಷ್ಟಸಾಧ್ಯದ ಕೆಲಸವಾಗಿದ್ದು, ಪರಿಸರಕ್ಕೆ ಹಾನಿಯಾಗದಂತೆ ಮುಂದಿನ ಕ್ರಮವಹಿಸಲಾಗುವುದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net