ನದಿ ಮಾಲಿನ್ಯ ತಡೆಗೆ ಕ್ರಮ ವಹಿಸಿ

ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ನದಿಗೆ ಚರಂಡಿ ನೀರು ಸೇರಿ  ಮಲಿನ.
ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ನದಿಗೆ ಚರಂಡಿ ನೀರು ಸೇರಿ ಮಲಿನ.
Published on
ಕುಶಾಲನಗರ: ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ನದಿಗೆ ಚರಂಡಿ ನೀರು ಸೇರಿ
ಮಲಿನವಾಗುತ್ತಿದ್ದು, ಇದನ್ನು ತಡೆಗಟ್ಟಲು ಎಲ್ಲರೂ ಸಹಕರಿಸಬೇಕು ಎಂದು ಸಂಸದ ಯದುವೀರ್ ಸೂಚಿಸಿದ್ದಾರೆ.
ನದಿ ಮಾಲಿನ್ಯದ ವಿರುದ್ಧ ತುರ್ತು ಕ್ರಮ ಕೈಗೊಳ್ಳುವ ಕುರಿತು ನುರಿತ ತಾಂತ್ರಿಕ ತಜ್ಞರ ಸಮಿತಿ ರಚಿಸಿ ತುರ್ತಾಗಿ ಅಗತ್ಯ ಕ್ರಮ ವಹಿಸಬೇಕು. ಈ ನಿಟ್ಟಿನಲ್ಲಿ ಕೊಡಗು ಜಿಲ್ಲಾಧಿಕಾರಿ, ಕುಶಾಲನಗರ ತಹಸೀಲ್ದಾರ್ ಮತ್ತು ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಹಂತದಲ್ಲಿ ಸಮಿತಿ ರಚಿಸಿ, ಮಾಲಿನ್ಯ ತಡೆಗೆ ಕ್ರಮವಹಿಸಿರುವ ಬಗ್ಗೆ ವರದಿಯನ್ನು ಸಂಸದರ ಕಚೇರಿಗೆ ಸಲ್ಲಿಸಲು ಸೂಚಿಸಿದ್ದಾರೆ.
ದಕ್ಷಿಣ ಭಾರತದ ಜೀವನಾಡಿ ಹಾಗೂ ಕೋಟ್ಯಂತರ ಜನರ ಜೀವನಾಧಾರವಾಗಿರುವ ಪವಿತ್ರ ಕಾವೇರಿ ನದಿಯು ತನ್ನ ಉಗಮ ಸ್ಥಾನದ ಕೊಡಗು ಜಿಲ್ಲೆಯಲ್ಲಿಯೇ ತೀವ್ರವಾಗಿ ಕಲುಷಿತಗೊಳ್ಳುತ್ತಿರುವುದು ಅತ್ಯಂತ ವಿಷಾದನೀಯ ಎಂದು ಸಂಸದರು ಹೇಳಿದ್ದಾರೆ. ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಸಮರ್ಪಕ ಒಳಚರಂಡಿ ವ್ಯವಸ್ಥೆ ಪೂರ್ಣಗೊಳ್ಳದ ಕಾರಣ, ಅನೇಕ ವಾಣಿಜ್ಯ ಸಂಕೀರ್ಣಗಳು ಮತ್ತು ಮನೆಗಳ ಕೊಳಚೆ ನೀರು ಹಾಗೂ ಕೈಗಾರಿಕೆಯ ರಾಸಾಯನಿಕಯುಕ್ತ ನೀರು ನೇರವಾಗಿ ನದಿಗೆ ಹರಿಯುತ್ತಿದೆ. ಇದು ನದಿಯಲ್ಲಿ ನೊರೆ ರೂಪದಲ್ಲಿ ಕಾಣಿಸಿಕೊಂಡಿದೆ. ಇದರಿಂದ ಸಾರ್ವಜನಿಕರಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿರುವ ದೂರುಬಂದಿದೆ. ರಾಜ್ಯ ಮಾನವ ಹಕ್ಕುಗಳ ಆಯೋಗವು ಈ ಬಗ್ಗೆ ವರದಿ ಕೇಳಿದೆ. ಹಾಗಾಗಿ ಸಂಬಂಧಿಸಿದ ಅಧಿಕಾರಿಗಳು ವರದಿ ನೀಡಲು ಕ್ರಮ ವಹಿಸಬೇಕು ಎಂದು ಸಂಸದರು ಆದೇಶದಲ್ಲಿ ಸೂಚಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net