ಸಮಗ್ರ ಕೃಷಿಯಲ್ಲಿ ಯಶಸ್ಸು ಕಂಡ ತಾಯಿ, ಮಗ

 ಸೂರಜ್ ರವರು ಮಿಶ್ರ ವಾಣಿಜ್ಯ ಬೆಳೆ ಒಳಗೊಂಡ ಕಾಫಿತೋಟ.
ಸೂರಜ್ ರವರು ಮಿಶ್ರ ವಾಣಿಜ್ಯ ಬೆಳೆ ಒಳಗೊಂಡ ಕಾಫಿತೋಟ.
Published on

ಪ್ರಮುಖ ಮುಖ್ಯಾಂಶಗಳು

  • ವಾಣಿಜ್ಯ ಬೆಳೆಯೊಂದಿಗೆ ಆಹಾರ ಬೆಳೆಗೂ ಸಮಾನ ಮಹತ್ವ
  • ಬೇಸಾಯಕ್ಕೆ ಸಾವಯವ ಗೊಬ್ಬರ ಬಳಕೆ
ವಿರಾಜಪೇಟೆ : ವಾಣಿಜ್ಯ ಬೆಳೆಯೊಂದಿಗೆ ಆಹಾರ ಬೆಳೆಗಳನ್ನು ಬೆಳೆದು ಸೈ ಎನಿಸಿಕೊಂಡ ತಾಯಿ-ಮಗ ಸಮಗ್ರ ಕೃಷಿಯಲ್ಲಿ ಯಶಸ್ಸನ್ನು ಕಂಡಿದ್ದಾರೆ. ಬೇಟೊಳಿ ಗ್ರಾಮದ ಜೋಗಿ ಮುಕ್ಕಿ ನಿವಾಸಿ ಬಿ.ಪಿ. ಮಲ್ಲಿಕಾ ಹಾಗೂ ಬಿ.ಪಿ. ಸೂರಜ್ ಕಾಫಿ ತೋಟ ಹಾಗೂ ಗದ್ದೆಯಲ್ಲಿ ಮಿಶ್ರ ವಾಣಿಜ್ಯ ಬೆಳೆಯೊಂದಿಗೆ ಭತ್ತ ಹಾಗೂ ವಿವಿಧ ತರಕಾರಿಗಳನ್ನು ಬೆಳೆದು ಸಮೃದ್ಧ ಜೀವನ ಕಂಡುಕೊಂಡಿದ್ದಾರೆ.
ಯುವಜನರು ಕೃಷಿಯಿಂದ ವಿಮುಖರಾಗುತ್ತಿರುವ ದಿನಗಳಲ್ಲಿ ಕೃಷಿಯಲ್ಲಿ ವಿಶೇಷ ಆಸಕ್ತಿ ಹೊಂದಿ ತಾಯಿಯೊಂದಿಗೆ ಸೂರಜ್, ತಮ್ಮ ಖಾಲಿ ಬಿದ್ದಿದ್ದ ಭೂಮಿಯಲ್ಲಿ ಡ್ವಾರ್ಫ್ ತಳಿಯ ರೋಬಸ್ಟಾ ಕಾಫಿಗಿಡಗಳನ್ನು ಬೆಳೆಯುವುದರೊಂದಿಗೆ ಗಿಡಗಳ ನೆರಳಿಗೆಂದು ನೆಟ್ಟ ಗ್ಲಿರಿಸಿಡಿಯ, ಪೊಂಗರೆ ಗಿಡಗಳಲ್ಲಿ ವಿವಿಧ ತಳಿಯ ಕಾಲು ಮೆಣಸಿನ ಬಳ್ಳಿಗಳನ್ನು ಹಬ್ಬಿಸಿದ್ದಾರೆ.
ಕಾಫಿ ತೋಟದಲ್ಲಿ 50 ವರ್ಷ ಪೂರೈಸಿದ ಕಾಫಿ ಗಿಡಗಳಿದ್ದು, ಇವುಗಳೊಂದಿಗೆ ಹೊಸದಾಗಿ ಕಾಫಿ ಗಿಡಗಳನ್ನು ಸಹ ನಾಟಿ ಮಾಡಿದ್ದಾರೆ. ಅರಬಿ, ರೋಬಸ್ಟಾ, ಕಾವೇರಿ ತಳಿಯ ಕಾಫಿ ಗಿಡಗಳನ್ನು ಬೆಳೆಯುತ್ತಿದ್ದು, ಕಾಫಿ ತೋಟಗಳಲ್ಲಿ ಮಣ್ಣಿನ ಫಲವತ್ತತೆಯನ್ನು ಕಾಪಾಡಲು ವರ್ಷಕೊಮ್ಮೆ ಸಗಣಿ ಗೊಬ್ಬರವನ್ನು ಬಳಸುತ್ತಿದ್ದಾರೆ. ಕಾಫಿ ಬೆಳೆಯ ವಿವಿಧ ತಳಿಯ ಕರಿಮೆಣಸಿನ ಬಳ್ಳಿಗಳನ್ನು ನಾಟಿ ಮಾಡಿದ್ದು ಉತ್ತಮ ಪ್ರಮಾಣದಲ್ಲಿ ಫಸಲನ್ನು ಪಡೆಯುವುದರೊಂದಿಗೆ ತಳಿಯ ಅಭಿವೃದ್ಧಿ ಕಾರ್ಯವನ್ನು ಸಹ ಮಾಡುತ್ತಿದ್ದಾರೆ.
ತೋಟದ ಬದಿಗಳಲ್ಲಿ 15 ರಿಂದ 20 ಏಲಕ್ಕಿ ಗಿಡಗಳಿವೆ. ಅಲ್ಪ ಪ್ರಮಾಣದಲ್ಲಿ ಅಡಕೆ ಹಾಗೂ ತೆಂಗನ್ನು ಬೆಳೆದಿದ್ದಾರೆ. ಕೆಲವು ವರ್ಷಗಳಿಂದ ಹವಾಮಾನ ವೈಪರೀತ್ಯ ಕಾರಣದಿಂದಾಗಿ ಉತ್ತಮ ರೀತಿಯಲ್ಲಿ ಫಸಲು ಕಚ್ಚಿದರೂ ಬೆಳವಣಿಗೆಯ ಹಂತದಲ್ಲಿ ಉದುರಿ ಹಾಳಾಗುತ್ತಿದ್ದು ಅಲ್ಪ ಪ್ರಮಾಣದ ಆದಾಯ ಇದರಿಂದ ಕುಂಠಿತವಾಗುತ್ತಿದೆ. ಆದರೂ ತೋಟವನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುತ್ತಾ ಮಣ್ಣಿನ ಪರೀಕ್ಷೆ ಮಾಡಿಸುವ ಮೂಲಕಿ ಫಲವತ್ತತೆಯನ್ನು ಕಾಪಾಡಲು ಅಗತ್ಯ ಪೋಷಕಾಂಶಗಳನ್ನು ತೋಟಕ್ಕೆ ಒದಗಿಸುತ್ತಾ ಬರುತ್ತಿದ್ದಾರೆ.
ಭತ್ತದ ಗದ್ದೆಯಲ್ಲಿ ಬಿಳಿಯ, ಇಂಟಾನ್, ಬಿ.ಕೆ.ಬಿ ಹಾಗೂ ಇತ್ತೀಚಿನ ಹೊಸ ತಳಿಗಳಾದ ತನು , ತುಂಗ, ಆರ್.ಎನ್.ಆರ್. ಬೆಳೆಯುತ್ತಿದ್ದು ಭತ್ತ ಹಾಗೂ ಹುಲ್ಲನ್ನು ಮಾರುವುದರೊಂದಿಗೆ ಆದಾಯ ಗಳಿಸುತ್ತಿದ್ದಾರೆ. ಭೂಮಿಯ ಫಲವತ್ತತೆಯನ್ನು ಕಾಪಾಡಲು ಯಾವುದೇ ರಾಸಾಯನಿಕ ಹಾಗೂ ಕ್ರಿಮಿನಾಶಕವನ್ನು ಬಳಸದೆ ಸಂಪೂರ್ಣವಾಗಿ ಸಗಣಿ ಗೊಬ್ಬರ ಹಾಗೂ ಮರದಿಂದ ಉದುರಿದ ಎಲೆಗಳನ್ನು ಗೊಬ್ಬರವಾಗಿ ಪರಿವರ್ತಿಸುತ್ತಿದ್ದಾರೆ.
ತರಕಾರಿಗಳಿಂದ ಆದಾಯ: ವಾಣಿಜ್ಯ ಬೆಳೆಗಳೊಂದಿಗೆ ತರಕಾರಿ ಬೆಳೆಯನ್ನು ಬೆಳೆಯುತ್ತಾರೆ. ಭತ್ತದ ಕಟಾವು ಪೂರ್ಣಗೊಂಡ ನಂತರ ಗದ್ದೆಗಳಲ್ಲಿ ತರಕಾರಿ ಬೆಳೆಸುತ್ತಾರೆ. ಪ್ರಮುಖವಾಗಿ ಬದನೆ, ಮೆಣಸು, ಸೋರೆಕಾಯಿ , ಸಿಹಿಕುಂಬಳ, ಬೀನ್ಸ್, ಅಲಸಂದೆ, ಸೌತೆಕಾಯಿ ಬೆಳೆಯುತ್ತಿದ್ದು ಪ್ರತಿಯೊಂದಕ್ಕೂ ಸಾವಯವ ಗೊಬ್ಬರವನ್ನು ಪೂರೈಸುತ್ತಾರೆ. ಹನಿ ನೀರಾವರಿ ವ್ಯವಸ್ಥೆ ಮೂಲಕ ಬೆಳೆಗೆಳಿಗೆ ನೀರನ್ನು ಒದಗಿಸುತ್ತಾರೆ. ತರಕಾರಿಗಳನ್ನು ಸ್ಥಳೀಯ ಮಾರುಕಟ್ಟೆ ಹಾಗೂ ವಿರಾಜಪೇಟೆ ತರಕಾರಿ ಮಾರುಕಟ್ಟೆಗಳಲ್ಲಿ ಮಾರುತ್ತಾರೆ. ಪ್ರತಿ ತರಕಾರಿ ಬೀಜಗಳನ್ನು ಮುಂದಿನ ವರ್ಷಕ್ಕೆ ಉಳಿಸಿಕೊಂಡು ಬರುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net