ಮಾಸಾಂತ್ಯಕ್ಕೆ ಕೊಡಗಿಗೂ ಮುಂಗಾರು ಪ್ರವೇಶ

ಕೊಡಗಿನಲ್ಲಿ ಈ ವರ್ಷದ ಮಳೆಗಾಲ ಎದುರಿಸಲು ಸಿದ್ಧತೆ ನಡೆಸಿರುವ ಪೊಲೀಸ್ ಇಲಾಖೆ. ಎಸ್.ಪಿ. ಆರ್.ಎನ್. ಬಿಂದುಮಣಿ ಮತ್ತು ಅಧಿಕಾರಿಗಳು ಇದ್ದರು.
ಕೊಡಗಿನಲ್ಲಿ ಈ ವರ್ಷದ ಮಳೆಗಾಲ ಎದುರಿಸಲು ಸಿದ್ಧತೆ ನಡೆಸಿರುವ ಪೊಲೀಸ್ ಇಲಾಖೆ. ಎಸ್.ಪಿ. ಆರ್.ಎನ್. ಬಿಂದುಮಣಿ ಮತ್ತು ಅಧಿಕಾರಿಗಳು ಇದ್ದರು.
Published on
ಮಡಿಕೇರಿ:
ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಈ ತಿಂಗಳ ಮಧ್ಯಭಾಗದಲ್ಲಿ ಮುಂಗಾರು ಮಾರುತ ಅಂಡೋಮಾನ್-ನಿಕೋಬಾರ್ ಪ್ರವೇಶ ಮಾಡಲಿದ್ದು, ಮೇ ಕೊನೆಯ ವಾರ ಅಥವಾ ಜೂನ್ ಮೊದಲ ವಾರದಲ್ಲಿ ಕೊಡಗು ಸೇರಿದಂತೆ ರಾಜ್ಯದೆಲ್ಲೆಡೆ ವ್ಯಾಪಿಸುವ ಸಾಧ್ಯತೆ ಇದೆ. ಈ ಬೆನ್ನಲ್ಲೇ ಜಿಲ್ಲೆಯಲ್ಲಿ ಮತ್ತೊಂದು ಮಳೆಗಾಲ ಆರಂಭದ ಸೂಚನೆಗಳು ಕಂಡುಬರುತ್ತಿದ್ದು ಮಳೆಗಾಲ ಎದುರಿಸಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಕೃಷಿ ಇಲಾಖೆ ಸೇರಿದಂತೆ ಸಂಬAಧಿಸಿದ ಇಲಾಖೆಗಳು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳತ್ತಿವೆ.
ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಕೊಡಗಿನಲ್ಲಿ ಶುರುವಾಗುವ ಮಳೆಗಾಲ ಜುಲೈ, ಆಗಸ್ಟ್ ತಿಂಗಳಿನಲ್ಲಿ ಮತ್ತಷ್ಟು ಬಿರುಸು ಪಡೆದುಕೊಳ್ಳುತ್ತದೆ. 2018, 2019 ಹಾಗೂ 2020ರಲ್ಲಿ ಆಗಸ್ಟ್ ತಿಂಗಳಿನಲ್ಲೇ ಕೊಡಗಿನಲ್ಲಿ ಪ್ರಾಕÊತಿಕ ವಿಕೋಪ ಸಂಭವಿಸಿತ್ತು. 2018ರಲ್ಲಿ ಹಿಂದೆAದೂ ನೋಡಿರದಂತಹ ರೀತಿಯಲ್ಲಿ ಜಿಲ್ಲೆಯ ವಿವಿಧೆಡೆಗಳಲ್ಲಿ ಬೆಟ್ಟ ಕುಸಿದು ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿತ್ತು. 2019ರಲ್ಲಿ ಮೇಘಸ್ಫೋಟದ ರೀತಿಯಲ್ಲಿ ಮಳೆ ಸುರಿದು ನದಿಗಳಲ್ಲಿ ಪ್ರವಾಹ ಉಂಟಾಗಿ ಸಾಕಷ್ಟು ಮಂದಿ ಬೀದಿಗೆ ಬಿದ್ದಿದ್ದರು. 2020ರಲ್ಲೂ ಬಹುತೇಕ ಇದೇ ಪರಿಸ್ಥಿತಿ ಪುನರಾವರ್ತನೆ ಆಗಿತ್ತು. ಈ ಮೂರು ವರ್ಷಗಳಲ್ಲಿ ಭಾರೀ ಹಾನಿ ಆಗಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮಳೆಗಾಲವನ್ನು ಆತಂಕದಿAದಲೇ ಎದುರು ನೋಡುವ ಪರಿಸ್ಥಿತಿ ಇದೆ.
2018ರ ಕುಂಭದ್ರೋಣ ಮಳೆ ಮತ್ತು ಪ್ರಾಕೃತಿಕ ವಿಕೋಪದಿಂದ ಉಂಟಾದ ಭಾರಿ ನಷ್ಟದಿಂದಾಗಿ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ನಂತರದ ವರ್ಷಗಳಲ್ಲಿ ಮಳೆಗಾಲ ಆರಂಭಕ್ಕೂ ಮೊದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಾ ಬಂದಿದೆ. ಹಾಗಾಗಿ ಹಾನಿಯ ಪ್ರಮಾಣ ಗಣನೀಯವಾಗಿ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ. ಆ ಸಂದರ್ಭದಲ್ಲಿ ಕಲಿತ ಪಾಠಗಳು ಅಪಾಯ ತಡೆಗಟ್ಟಲು ಈಗ ಮಾರ್ಗದರ್ಶನ ನೀಡುತ್ತಿವೆ. ಜನಸಾಮಾನ್ಯರು ಕೂಡ ಅಧಿಕಾರಿಗಳ ಜತೆ ಕೈ ಜೋಡಿಸಿದರೆ ಮಳೆಗಾಲದಲ್ಲಿ ಸುರಕ್ಷತೆ ಕಷ್ಟವೇನಲ್ಲ.
"

ಮಳೆಗಾಲ ಎದುರಿಸಲು ಜನಸಾಮಾನ್ಯರು ಮುಂಚಿತ ಸಿದ್ಧತೆ ಮಾಡಿಕೊಳ್ಳುವುದು ಅತ್ಯಗತ್ಯ. ಮನೆಗಳ ಛಾವಣಿ, ಚರಂಡಿ ಮತ್ತು ವಿದ್ಯುತ್ ಸಂಪರ್ಕಗಳನ್ನು ಪರಿಶೀಲಿಸಿ ದುರಸ್ತಿ ಮಾಡಬೇಕು. ಕುಡಿಯುವ ನೀರನ್ನು ಶುದ್ಧವಾಗಿಟ್ಟುಕೊಂಡು, ಜ್ವರ, ಡೆಂಘೀ, ವೈರಲ್ ಸೋಂಕುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಗ್ರಾಮೀಣ ಭಾಗದ ಜನರು ಭೂಕುಸಿತ ಹಾಗೂ ಪ್ರವಾಹ ಪ್ರದೇಶಗಳಲ್ಲಿ ಜಾಗ್ರತೆ ಪಾಲಿಸಬೇಕು. ವಾಹನ ಸವಾರರು ಮಳೆಗಾಲದ ರಸ್ತೆ ಅಪಾಯಗಳನ್ನು ಗಮನಿಸಿ ಸುರಕ್ಷಿತ ಚಾಲನೆ ಮಾಡಬೇಕು. ಅಗತ್ಯ ಆಹಾರ, ಔಷಧಿ ಮತ್ತು ತುರ್ತು ಸಂಪರ್ಕ ಸಂಖ್ಯೆಗಳನ್ನು ಇಟ್ಟುಕೊಳ್ಳುವುದು ಉತ್ತಮ. ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸಬೇಕು.

— ಎ.ಜೆ. ಕೃಷ್ಣಪ್ಪ, ಕೃಷಿಕ, ದೊಡ್ಡತೋಳೂರು ಗ್ರಾಮ

"

ಮುಂಗಾರು ಎದುರಿಸಲು ಸ್ಥಳೀಯ ಆಡಳಿತ ಹಾಗೂ ಜಿಲ್ಲಾಡಳಿತ ಅಗತ್ಯ ತಯಾರಿ ಮಾಡಬೇಕಿದೆ. ಕೃಷಿ ಇಲಾಖೆಯಿಂದ ರೈತರಿಗೆ ಅಗತ್ಯವಿರುವ ಸಲಕರಣೆಗಳು ಹಾಗೂ ಬಿತ್ತನೆ ಬೀಜದ ವ್ಯವಸ್ಥೆ ಆಗಬೇಕು. ರಸ್ತೆ ದುರಸ್ತಿ, ಚರಂಡಿ ವ್ಯವಸ್ಥೆ ಸಮರ್ಪಕವಾಗಿರಬೇಕು. ಜನ ಸಾಮಾನ್ಯರು ಮಳೆಗಾಲದಲ್ಲಿ ಎಚ್ಚರಿಕೆಯನ್ನು ವಹಿಸಿ ಸಿದ್ಧತೆ ಮಾಡಿಕೊಳ್ಳಬೇಕು. ಅನಾಹುತಗಳು ಸಂಭವಿಸದAತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.

— ಮೀನಾಕ್ಷಿ, ಗೃಹಿಣಿ, ಕೆದಮುಳ್ಳೂರು, ವಿರಾಜಪೇಟೆ.

"

ಜಿಲ್ಲೆಯ ಕೃಷಿಕರಿಗೆ ಪೂರಕವಾಗಿ ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆಯ ಸಿದ್ಧತೆ ಹಾಗೂ ಸಹಕಾರಕ್ಕೆ ಕೃಷಿಕರು, ಜನಸಾಮಾನ್ಯರು ಕೈಜೋಡಿಸಬೇಕು. ಈ ಬಾರಿ ಬೇಸಿಗೆಯಲ್ಲೂ ಹಲವಾರು ಕಡೆ ಮಳೆ ಆಗಾಗ ಸುರಿಯುತ್ತಿದ್ದು ಭೂಮಿಯಲ್ಲಿ ಸಾಕಷ್ಟು ತೇವಾಂಶವಿದೆ. ಮುಂಗಾರು ಎದುರಾಗುತ್ತಿದ್ದಂತೆ ಮಳೆ ಬಿರುಸುಗೊಂಡಾಗ ಭೂಮಿಯ ಮಣ್ಣು ಇನ್ನೂ ಮೆದುವಾಗುತ್ತದೆ. ಆದ್ದರಿಂದ ಕೃಷಿ ಹಾಗೂ ಆಧುನಿಕತೆಯ ಭರಾಟೆಯಲ್ಲಿ ಎತ್ತರದ ಪ್ರದೇಶಗಳಿಂದ ಮಣ್ಣು ಸಡಿಲಗೊಳಿಸುವ ಯಾವುದೇ ಕೆಲಸ ಮಾಡಬಾರದು. ಇದು ಮಳೆಗಾಲದಲ್ಲಿ ಭೂ ಕುಸಿತಕ್ಕೆ ನೇರ ಕಾರಣವಾಗುತ್ತದೆ.

— ನಡುವಟ್ಟಿರ ಸುಮಾ ಪ್ರಕಾಶ್, ಶಿಕ್ಷಕಿ, ಬಿ. ಬಾಡಗ

"

ಕೊಡಗಿನಲ್ಲಿ ಮುಂಗಾರು ಎದುರಿಸಲು ಪೊಲೀಸ್ ಇಲಾಖೆಯಿಂದಲೂ ಸಿದ್ಧತೆ ನಡೆಸಲಾಗಿದೆ. ಮುಂಗಾರಿನ ವೇಳೆ ವಿಪತ್ತಿನ ಸನ್ನಿವೇಶ ಎದುರಿಸಲು ಪೊಲೀಸ್ ಮಟ್ಟದಲ್ಲಿ ಈಗಾಗಲೇ ಒಂದು ಸಭೆ ನಡೆಸಿ ಸಲಹೆ, ಸೂಚನೆ ನೀಡಲಾಗಿದೆ. ಒಂದು ಅಣಕು ಕಾರ್ಯಾಚರಣೆಯನ್ನೂ ನಡೆಸಲಾಗಿದೆ. ಇದೇ ರೀತಿಯ ಇನ್ನೊಂದು ಕಾರ್ಯಾಚರಣೆ ಕೂಡ ನಡೆಸಲಾಗುವುದು.

— ಆರ್.ಎನ್. ಬಿಂದುಮಣಿ, ಕೊಡಗು ಎಸ್‌ಪಿ

"

ಮಳೆಗಾಲಕ್ಕಾಗಿ ನಮ್ಮ ಇಲಾಖೆ ಕಡೆಯಿಂದಲೂ ಸಿದ್ಧತೆಗಳನ್ನು ನಡೆಸಲಾಗಿದೆ. ಜಿಲ್ಲೆಯಲ್ಲಿ ಅಗತ್ಯ ಪ್ರಮಾಣದಲ್ಲಿ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ. ಬೇಡಿಕೆಯಂತೆ ರಸಗೊಬ್ಬರ ಪೂರೈಕೆ ಮಾಡಲಾಗುತ್ತಿದೆ. ಯೂರಿಯಾ, ಡಿಐಪಿ, ಎಂಒಪಿ, ಕಾಂಪ್ಲೆಕ್ಸ್ ಸೇರಿದಂತೆ ಎಲ್ಲಾ ರೀತಿಯ ರಸಗೊಬ್ಬರ ತರಿಸಿಕೊಳ್ಳಲಾಗಿದೆ. ಪ್ರಸಕ್ತ ಸಾಲಿನಲ್ಲಿ 2,453 ಮೆಟ್ರಿಕ್ ಟನ್ ರಸಗೊಬ್ಬರ ಪೂರೈಕೆಯಾಗಿದ್ದು, ಇದುವರೆಗೆ 40,971 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯವಿದ್ದು, ಇದರಲ್ಲಿ 2,189 ರಸಗೊಬ್ಬರ ವಿತರಿಸಲಾಗಿದೆ.

— ಚಂದ್ರಶೇಖರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ, ಕೊಡಗು


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net