ಮಠ-ಮಂದಿರಗಳು ಅಂತರಂಗ ಶುದ್ದಿಯ ಆಲಯಗಳು

ಹೊಸಪಟ್ಟಣ ಗ್ರಾಮದಲ್ಲಿ ನಡೆದ ಶ್ರೀ ಬಸವೇಶ್ವರ ಹಾಗೂ ಕನ್ನಂಬಾಡಮ್ಮ ದೇವರ ವಾರ್ಷಿಕ ಪೂಜೋತ್ಸವ ಸಂದರ್ಭ ಗಂಗಾಸ್ನಾನಕ್ಕಾಗಿ ಭಕ್ತರು ಕಾವೇರಿ ನದಿಗೆ ತೆರಳಿದರು.
ಹೊಸಪಟ್ಟಣ ಗ್ರಾಮದಲ್ಲಿ ನಡೆದ ಶ್ರೀ ಬಸವೇಶ್ವರ ಹಾಗೂ ಕನ್ನಂಬಾಡಮ್ಮ ದೇವರ ವಾರ್ಷಿಕ ಪೂಜೋತ್ಸವ ಸಂದರ್ಭ ಗಂಗಾಸ್ನಾನಕ್ಕಾಗಿ ಭಕ್ತರು ಕಾವೇರಿ ನದಿಗೆ ತೆರಳಿದರು.
Published on
ಕುಶಾಲನಗರ: ದೇವಾಲಯ ಹಾಗೂ ಮಠ ಮಂದಿರಗಳು ಮನುಷ್ಯನ ಅಂತರಂಗ ಶುದ್ದಿಯ ಆಲಯಗಳು ಎಂದು ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಮಂಗಳವಾರ ಹೊಸಪಟ್ಟಣ ಗ್ರಾಮದಲ್ಲಿ ನಡೆದ ಶ್ರೀ ಬಸವೇಶ್ವರ ಹಾಗೂ ಕನ್ನಂಬಾಡಮ್ಮ ದೇವರ ವಾರ್ಷಿಕ ಪೂಜೋತ್ಸವದಲ್ಲಿ ಭಾಗಿಯಾಗಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.
ಮನುಷ್ಯ ಏನೆಲ್ಲ ಗಳಿಸಿದರೂ ಕೂಡ ಮಾನಸಿಕ ಶಾಂತಿ ನೆಮ್ಮದಿ ಪಡೆಯಲು ದೇವಾಲಯಗಳಿಗೆ ಬರಬೇಕಿದೆ. ಪೂರ್ವಜರು ಆಚರಿಸಿಕೊಂಡು ಬಂದ ಗ್ರಾಮೀಣ ಹಬ್ಬಗಳು, ದೇವರ ಪೂಜೋತ್ಸವಗಳನ್ನು ಮುಂದಿನ ಪೀಳಿಗೆಗೂ ಜತನದಿಂದ ಒಯ್ಯುವುದೇ ಭಾರತೀಯ ಸಂಸ್ಕೃತಿಯ ಸೌಂದರ್ಯ ಎಂದು ಶ್ರೀಗಳು ಹೇಳಿದರು.
ಸೋಮವಾರ ಸಂಜೆಯಿಂದ ಆರಂಭವಾದ ದೇವತಾ ಪೂಜೋತ್ಸವ ಮಂಗಳವಾರ ಮಧ್ಯಾಹ್ನ ಸಮಾಪ್ತಿಗೊಂಡಿತು. ಮಂಗಳವಾರ ಬೆಳಗ್ಗೆ ವಾದ್ಯಮೇಳ, ಅಲಂಕೃತ ದೇವರುಗಳ ಪಲ್ಲಕ್ಕಿಯೊಂದಿಗೆ ಗ್ರಾಮದ ಕಾವೇರಿ ನದಿಗೆ ತೆರಳಿ ಗಂಗಾ ಸ್ನಾನ ನೆರವೇರಿಸಲಾಯಿತು. ಇದೇ ಸಂದರ್ಭ ಹೊಳೆನರಸೀಪುರ ತಾಲೂಕಿನ ಉದ್ದೂರು ಗ್ರಾಮದ ವೀರಗಾಸೆ ಕಲಾವಿದರಾದ ರವಿಕುಮಾರ ತಂಡದಿಂದ ಆಕರ್ಷಕವಾದ ವೀರಭದ್ರ ನೃತ್ಯ ಭಕ್ತರನ್ನು ಆಕರ್ಷಿಸಿತು.
ಬಳಿಕ ಮಧ್ಯಾಹ್ನ 12 ಗಂಟೆಗೆ ದೇವಾಲಯದ ಮುಂಬದಿ ಅಳವಡಿಸಿದ್ದ ಕೊಂಡೋತ್ಸವದ ಪೂಜೆಯ ಬಳಿಕ ದೇವತಾ ಮೂರ್ತಿಗಳ ಉತ್ಸವಗಳನ್ನು ಹೊತ್ತ ಭಕ್ತರು ಬರಿಗಾಲಲ್ಲಿ ಕೆಂಡ ತುಳಿದು ಭಕ್ತಿ ಸಮರ್ಪಿಸಿದರು.
ನಂತರ ಮಹಾಮಂಗಳಾರತಿಯೊಂದಿಗೆ ಪ್ರಸಾದ ಹಾಗೂ ಅನ್ನಸಂತರ್ಪಣೆ ನಡೆಯಿತು. ಮೈಸೂರಿನ ಕೆ.ಎಸ್.ದಿನೇಶ್ ಶಾಸ್ತ್ರಿ ನೇತೃತ್ವದ ತಂಡ ದೇವಾಲಯದ ಧಾರ್ಮಿಕ ವಿಧಿಗಳನ್ನು ನಡೆಸಿತು.
ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷೆ ಪೂರ್ಣಿಮಾ ಶಿವಕುಮಾರ್, ಉಪಾಧ್ಯಕ್ಷ ಅಯ್ಯಂಡ್ರ ಜಯಾನಂದ, ಕಾರ್ಯದರ್ಶಿ ತೇಜಸ್, ಖಜಾಂಚಿ ಸುಖೇಶ್, ಅರ್ಚಕ ಎಸ್.ಎಸ್.ಜಯರಾಜು, ನಿರ್ದೇಶಕರಾದ ತುಂತಜ್ಜಿರ ಡಾಲೇಶ್, ನೈಯೇಣಿರ ನವೀನ್ ಕುಮಾರ್, ಎಸ್.ಎಸ್.ಚಂದ್ರಶೇಖರ್, ಎಚ್.ಆರ್.ಶಿವಕುಮಾರ್, ಎಚ್.ವಿ.ಚಂದ್ರು, ಮಾಡಂಬಿ ಷಣ್ಮುಖ, ಎಂ.ಆರ್.ಮಹೇಶ್, ಶಿವಕುಮಾರ್ ಮೊದಲಾದವರಿದ್ದರು.
ಹೆಜ್ಜೇನು ದಾಳಿಯಿಂದ ಓಡಿದ ಭಕ್ತರು: ಗಂಗಾ ಪೂಜೆ ಸಂದರ್ಭ ಕಾವೇರಿ ನದಿ ದಡದಲ್ಲಿ ದಿಢೀರನೆ ಪ್ರತ್ಯಕ್ಷಗೊಂಡ ಹೆಜ್ಜೇನು ಹಿಂಡು ಭಕ್ತರಿಗೆ ಕಚ್ಚಿ ಗಾಯಗೊಳಿಸಿತು.
ಅದೃಷ್ಟವಶಾತ್ ಯಾರಿಗೂ ತೀವ್ರತರವಾದ ಗಾಯವಾಗಿಲ್ಲ. ಹೆಜ್ಜೇನು ಹಿಂಡು ಕಂಡೊಡನೆ ಭಕ್ತರು ಓಡಿ ಹೋಗಿ ಪಾರಾದರು ಎಂದು ದೇವಾಲಯ ಸಮಿತಿ ಕಾರ್ಯದರ್ಶಿ ತೇಜಸ್ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net