ರೈತನಿಗೆ ಆದಾಯ ನೀಡಿದ ಮಿಶ್ರ ಬೆಳೆ

ವಿರಾಜಪೇಟೆ ತಾಲೂಕಿನ ಹೆಗ್ಗಳ ಗ್ರಾಮದ ರೈತ ಬಿ.ಬಿ.ಶಂಕರ ನಾರಾಯಣ ಅವರ ತೋಟದಲ್ಲಿ ಬೆಳೆದಿರುವ ಮಿಶ್ರ ವಾಣಿಜ್ಯ ಬೆಳೆ.
ವಿರಾಜಪೇಟೆ ತಾಲೂಕಿನ ಹೆಗ್ಗಳ ಗ್ರಾಮದ ರೈತ ಬಿ.ಬಿ.ಶಂಕರ ನಾರಾಯಣ ಅವರ ತೋಟದಲ್ಲಿ ಬೆಳೆದಿರುವ ಮಿಶ್ರ ವಾಣಿಜ್ಯ ಬೆಳೆ.
Published on

ಪ್ರಮುಖ ಮುಖ್ಯಾಂಶಗಳು

  • ಕೃಷಿಯನ್ನು ಲಾಭದಾಯಕ ಉದ್ಯಮವಾಗಿಸಿದ ಬಿ.ಬಿ.ಶಂಕರನಾರಾಯಣ
  • ಸರ್ಕಾರಿ ಕೆಲಸದಿಂದ ನಿವೃತ್ತಿಯಾದ ಬಳಿಕ ಪೂರ್ಣಪ್ರಮಾಣದಲ್ಲಿ ತೊಡಗಿದ ಕೃಷಿಕ
ವಿರಾಜಪೇಟೆ: ಪ್ರಮುಖ ವಾಣಿಜ್ಯ ಬೆಳೆ ಕಾಫಿಯೊಂದಿಗೆ ಮಿಶ್ರ ಬೆಳೆಗಳಿಗೂ ಆದ್ಯತೆ ನೀಡುವುದರ ಮೂಲಕ ವಿರಾಜಪೇಟೆ ತಾಲೂಕಿನ ಹೆಗ್ಗಳ ಗ್ರಾಮದ ರೈತ ಬಿ.ಬಿ.ಶಂಕರನಾರಾಯಣ ಕೃಷಿಯನ್ನು ಲಾಭದಾಯಕ ಉದ್ಯಮವಾಗಿ ಮಾಡಿಕೊಂಡಿದ್ದಾರೆ.
ಕೃಷಿಯಲ್ಲಿ ಸುಮಾರು 50 ವರ್ಷದ ಅನುಭವ ಹೊಂದಿರುವ ಅವರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸರ್ಕಾರಿ ಕೆಲಸದಿಂದ ನಿವೃತ್ತಿ ನಂತರ ಪೂರ್ಣ ಪ್ರಮಾಣದಲ್ಲಿ ಕೃಷಿಯಲ್ಲಿ ತೊಡಗಿದ್ದಾರೆ. ತಂದೆಗೆ ಬೆನ್ನೆಲುಬಾಗಿ ಪುತ್ರ ಬಿ.ಎಸ್.ಶರತ್ ಕೃಷ್ಣ ಅವರೂ ವ್ಯಾಸಂಗ ಪೂರ್ಣಗೊಳಿಸಿ ಸಂಪೂರ್ಣ ಕೃಷಿಯಲ್ಲಿ ತೊಡಗಿದ್ದಾರೆ. 6 ಎಕರೆ ತೋಟದಲ್ಲಿ ಕಾಫಿಯೊಂದಿಗೆ ಮಿಶ್ರ ಬೆಳೆಗೆ ಮಹತ್ವವನ್ನು ನೀಡಿದ್ದಾರೆ.
ತೋಟದಲ್ಲಿ ಮುಖ್ಯ ಆದಾಯದ ಬೆಳೆಯಾಗಿ ಕಾಫಿಯನ್ನು ಬೆಳೆಸಿದ್ದು ಅದರಲ್ಲಿ ಹೆಚ್ಚಿನ ಭಾಗ ರೋಬಾಸ್ಟಾ ಕಾಫಿ, ಅಲ್ಪ ಭಾಗ ಅರೇಬಿಕಾ ಕಾಫಿ ಬೆಳೆದಿದ್ದಾರೆ. ಸುಮಾರು ಒಂದು ಎಕರೆ ಖಾಲಿ ಸ್ಥಳದಲ್ಲಿ ಡಾರ್ಪ್ ತಳಿಯ ಕಾಫಿ ಗಿಡಗಳನ್ನು ಬೆಳೆಸಿದ್ದು ಅವುಗಳೂ ಉತ್ತಮ ಬೆಳವಣಿಗೆ ಕಂಡು ಫಸಲು ನೀಡುವ ಹಂತ ತಲುಪಿದೆ.
ಕಾಫಿ ತೋಟದಲ್ಲಿ ಮಿಶ್ರ ಬೆಳೆಯಾಗಿ ಕಾಳುಮೆಣಸು, ತೆಂಗು, ಲಿಂಬೆ, ಚಕೋತ, ಹಲಸು, ಮಾವು, ಪಪ್ಪಾಯ, ಅನಾನಸ್, ಬಟರ್‌ಫ್ರೂಟ್, ವಿವಿಧ ತಳಿಯ ಬಾಳೆ, ಕಿತ್ತಳೆ ಹಣ್ಣು ಬೆಳೆದಿದ್ದಾರೆ. ಇದರೊಂದಿಗೆ ಒಂದು ಎಕರೆ ಪ್ರದೇಶದಲ್ಲಿ ಹೊಸದಾಗಿ ಮೋಹಿತ್ ನಗರ್ ನಾಟಿ ತಳಿಯ ಅಡಿಕೆ ಗಿಡಗಳನ್ನು ನಾಲ್ಕು ವರ್ಷದ ಹಿಂದೆ ಹಾಕಿದ್ದು, ಫಸಲು ನೀಡುವ ಹಂತ ತಲುಪಿದೆ.
ಭತ್ತ, ತರಕಾರಿ ಬೆಳೆಯಲ್ಲೂ ಆಸಕ್ತಿ
ವಾಣಿಜ್ಯ ಬೆಳೆ ಜತೆಗೆ ಆಹಾರ ಬೆಳೆ ಕುರಿತು ಆಸಕ್ತಿ ಹೊಂದಿರುವ ಶಂಕರ ನಾರಾಯಣ ಗುರು ಎರಡು ಎಕರೆ ಜಾಗದಲ್ಲಿ ವಿವಿಧ ತಳಿಯ ಭತ್ತ ಬೆಳೆದಿದ್ದಾರೆ. ಬೇಸಿಗೆ ಕಾಲದಲ್ಲಿ ಭತ್ತದ ಬೆಳೆ ಕಟಾವಿನ ನಂತರ ಬದನೆ, ಪಾಲಸಂಡೆ ಬೀನ್ಸ್, ಸೋರೆಕಾಯಿ, ಸಿಹಿಕುಂಬಳ ಸೇರಿದಂತೆ ವಿವಿಧ ರೀತಿಯ ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಭತ್ತ ಹಾಗೂ ತರಕಾರಿ ಬೆಳೆಗಳು ಸಂಪೂರ್ಣ ಸಾವಯವವಾಗಿ ಬೆಳೆಯುವ ಅವರು ಮಣ್ಣಿನ ಫಲವತ್ತತೆಗೆ ಸಗಣಿ ಗೊಬ್ಬರ, ಜೀವಾಮೃತ, ಗ್ಲಿರಿಸಿಡಿಯಾದ ಸೊಪ್ಪನ್ನು ಬಳಸುತ್ತಾರೆ.
ಕೃಷಿಯಲ್ಲಿ ಮುಖ್ಯ ಬೆಳೆಗಳ ಜತೆಗೆ ಹೆಚ್ಚಿನ ವಸ್ತು ನೀಡಿ ಉಪ ಬೆಳೆಗಳನ್ನು ಸಮರ್ಪಕವಾಗಿ ಬೆಳೆಸಿದರೆ ವಾಣಿಜ್ಯ ಬೆಳೆಯು ಹೆಚ್ಚು ಲಾಭದಾಯಕವಾಗುತ್ತದೆ. ರೈತರು ಉತ್ತಮ ಲಾಭದೊಂದಿಗೆ ಸಮೃದ್ಧ ಬದುಕನ್ನು ಕಂಡುಕೊಳ್ಳಬಹುದು ಎನ್ನುವುದು ರೈತ ಬಿ.ಬಿ.ಶಂಕರನಾರಾಯಣ ಅವರ ಅಭಿಪ್ರಾಯವಾಗಿದೆ.
ಪ್ರಸ್ತುತ ಸಂದರ್ಭದಲ್ಲಿ ವಾಣಿಜ್ಯ ಬೆಳೆಗಳನ್ನು ಗಮನಿಸಿದರೆ ಅವುಗಳು ಹೆಚ್ಚು ಲಾಭದಾಯಕವಾಗಿವೆ. ಸರಿಯಾದ ಕೆಲಸ ಹಾಗೂ ಸಮರ್ಪಕ ನಿರ್ವಹಣೆ ಹಾಗೂ ಕಾಲಕ್ಕನುಗುಣವಾಗಿ ಉತ್ತಮ ರೀತಿಯ ಪೋಷಕಾಂಶಗಳನ್ನು ಒದಗಿಸಿಕೊಟ್ಟರೆ ಉತ್ತಮ ಫಸಲನ್ನು ಪಡೆಯಬಹುದು. ಮಣ್ಣಿನ ಫಲವತ್ತತೆಗೆ ಅನುಗುಣವಾಗಿ ಗಿಡಗಳಿಗೆ ಬೇಕಾದ ಅಂಶಗಳನ್ನು ಒದಗಿಸುತ್ತ ಬಂದರೆ ಫಸಲು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯಾಗುತ್ತದೆ.
ಬಿ.ಬಿ.ಶಂಕರನಾರಾಯಣ
ರೈತ, ಹೆಗ್ಗಳ
ವಾಣಿಜ್ಯ ಬೆಳೆಯಲ್ಲಿ ಕಾಫಿ ಜತೆಗೆ ಇತರ ಉಪ ಬೆಳೆಗಳನ್ನು ಸಮರ್ಪಕವಾಗಿ ಬೆಳೆಸಬೇಕು. ಇದರಿಂದ ಉಪ ಬೆಳೆಗಳಲ್ಲಿ ಬರುವ ಆದಾಯದ ಮೂಲಕ ತೋಟದ ನಿರ್ವಹಣೆಯನ್ನು ಮಾಡಿದರೆ ಕಾಫಿ ಬೆಳೆ ಮೂಲಕ ಬರುವ ಆದಾಯ ಸಂಪೂರ್ಣವಾಗಿ ಉಳಿದು ರೈತರಿಗೆ ಲಾಭದಾಯಕವಾಗುತ್ತದೆ. ಆದ್ದರಿಂದ ರೈತರು ಹೆಚ್ಚಾಗಿ ಮಿಶ್ರ ವಾಣಿಜ್ಯ ಬೆಳೆ ಬೆಳೆಯಬೇಕು ಹಾಗೂ ತಳಿಗಳ ಆಯ್ಕೆ ಸಮರ್ಪಕವಾಗಿರಬೇಕು.
ಬಿ.ಎಸ್.ಶರತ್‌ಕೃಷ್ಣ
ಯುವ ರೈತ, ಹೆಗ್ಗಳ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net