ಮಾರುಕಟ್ಟೆ ತಾಣದಲ್ಲಿ ಗೌಣವಾದ ಅಭಿವೃದ್ಧಿ

ಭಾನುವಾರ ಸಂತೆ ನಂತರ ಸೋಮವಾರ ಸುಂಟಿಕೊಪ್ಪ ಮಾರುಕಟ್ಟೆಯ ಸ್ಥಿತಿ
ಭಾನುವಾರ ಸಂತೆ ನಂತರ ಸೋಮವಾರ ಸುಂಟಿಕೊಪ್ಪ ಮಾರುಕಟ್ಟೆಯ ಸ್ಥಿತಿ
Published on
ಮಡಿಕೇರಿ:
ಸ್ವಚ್ಛ ಕೊಡಗು ಎನ್ನುವ ಘೋಷಣೆಗೆ ವಿರುದ್ಧವಾಗಿ ಜಿಲ್ಲೆಯ ಪ್ರಮುಖ ನಗರ ಮತ್ತು ಪಟ್ಟಣಗಳಲ್ಲಿರುವ ಸ್ಥಳೀಯ ಮಾರುಕಟ್ಟೆಗಳು ಸೂಕ್ತ ನಿರ್ವಹಣೆಯಿಲ್ಲದೆ ನಲುಗುತ್ತಿವೆ. ಸಾರ್ವಜನಿಕರು ಹಾಗೂ ವ್ಯಾಪಾರಿಗಳು ಇದರಿಂದಾಗಿ ತೀವ್ರ ತೊಂದರೆ ಎದುರಿಸುವಂತಾಗಿದೆ. ಮಾರುಕಟ್ಟೆ ಪ್ರದೇಶಗಳಿಗೆ ಕಾಲಿಡುತ್ತಿದ್ದಂತೆ ದುರ್ವಾಸನೆ ಮೂಗಿಗೆ ಬಡಿಯುತ್ತದೆ. ಇಲ್ಲಿ ಉತ್ಪತ್ತಿಯಾಗುವ ತರಕಾರಿ, ಹಣ್ಣು-ಹಂಪಲು ಹಾಗೂ ಮಾಂಸದ ತ್ಯಾಜ್ಯಗಳನ್ನು ಸರಿಯಾದ ಸಮಯಕ್ಕೆ ತೆರವುಗೊಳಿಸುತ್ತಿಲ್ಲ. ತ್ಯಾಜ್ಯದ ರಾಶಿಗಳು ದಿನಗಟ್ಟಲೆ ಒಂದೇ ಕಡೆ ಬಿದ್ದಿರುವುದರಿಂದ, ಮಳೆಗಾಲದಲ್ಲಂತೂ ಪರಿಸ್ಥಿತಿ ಇನ್ನೂ ಹದಗೆಟ್ಟಿರುತ್ತದೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ, ಕಲುಷಿತ ನೀರು ರಸ್ತೆಯ ಮೇಲೆಯೇ ಹರಿಯುತ್ತಿದ್ದು ನೈರ್ಮಲ್ಯ ಸಂಪೂರ್ಣವಾಗಿ ಹಳಿ ತಪ್ಪಿದೆ
ತೆರೆದ ಚರಂಡಿಗಳು ಮತ್ತು ಸಾಲು ಸಾಲಾಗಿ ಬಿದ್ದಿರುವ ಕಸದ ರಾಶಿಗಳು ಸೊಳ್ಳೆ, ನೊಣ ಹಾಗೂ ಬೀದಿ ನಾಯಿಗಳ ಆವಾಸಸ್ಥಾನಗಳಾಗಿ ಮಾರ್ಪಟ್ಟಿವೆ. ಇದರಿಂದಾಗಿ ಡೆಂಗ್ಯೂ, ಮಲೇರಿಯಾದಂತಹ ರೋಗಗಳು ಹರಡುವ ಭೀತಿ ಎದುರಾಗಿದೆ. ಮಾರುಕಟ್ಟೆಗೆ ಬರುವ ಸಾರ್ವಜನಿಕರು ಮತ್ತು ವ್ಯಾಪಾರಿಗಳು ಆರೋಗ್ಯದ ಬಗ್ಗೆ ಆತಂಕ ಪಡುವ ಸ್ಥಿತಿ ಇದೆ. ಬಹುತೇಕ ಮಾರುಕಟ್ಟೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರು ಹಾಗೂ ಸುಸಜ್ಜಿತ ಶೌಚಾಲಯಗಳಿಲ್ಲದೆ ಪರದಾಡುವಂತಾಗಿದೆ.
ಮಾರುಕಟ್ಟೆ ತ್ಯಾಜ್ಯವನ್ನು ಸಂತೆ ಮುಗಿದ ಕೂಡಲೇ ವೈಜ್ಞಾನಿಕವಾಗಿ ತೆರವುಗೊಳಿಸಬೇಕು. ಸುಸಜ್ಜಿತ ಶೌಚಾಲಯ ಮತ್ತು ಕುಡಿಯುವ ನೀರು, ವ್ಯಾಪಾರಿಗಳು ಮತ್ತು ಸಾರ್ವಜನಿಕರಿಗಾಗಿ ನೈರ್ಮಲ್ಯಯುತ ಮೂಲಸೌಕರ್ಯ ಒದಗಿಸಬೇಕು. ಕಲುಷಿತ ನೀರು ನಿಲ್ಲದಂತೆ ಚರಂಡಿಗಳನ್ನು ದುರಸ್ತಿಗೊಳಿಸಿ ಕೀಟನಾಶಕ ಸಿಂಪಡಿಸಬೇಕು. ವ್ಯಾಪಾರಿಗಳಿಗೆ ಹವಾಮಾನ ವೈಪರೀತ್ಯದಿಂದ ರಕ್ಷಣೆ ನೀಡುವ ಸೌಲಭ್ಯಗಳನ್ನು ಕಲ್ಪಿಸಬೇಕು ಎನ್ನುವ ಬೇಡಿಕೆಗಳಿವೆ..
"

ನಗರಗಳು ಉನ್ನತೀಕರಣಗೊಂಡAತೆ ಅಲ್ಲಿಯ ಸೌಲಭ್ಯಗಳು ಕೂಡ ಮೇಲ್ದರ್ಜೆಗೇರಬೇಕು. ಅದರಂತೆ ಜಿಲ್ಲೆಯ ಮಾರುಕಟ್ಟೆಗಳು ಕೂಡ ಸುಧಾರಣೆಗೊಂಡು ಸ್ವಚ್ಛತೆಯೆಡೆ ಗಮನಹರಿಸಬೇಕು. ಮಾರುಕಟ್ಟೆಗಳಲ್ಲಿ ತ್ಯಾಜ್ಯ ವಸ್ತುಗಳು ವಿಲೇವಾರಿಯಾಗದೆ ಅಲ್ಲೇ ಉಳಿದುಕೊಂಡರೆ ಕೊಳೆತು ನಾರುವುದು ಸಹಜ. ಅದರೊಂದಿಗೆ ಮಳೆ ಬಂದರೆ ಇನ್ನಷ್ಟು ತೊಂದರೆಯಾಗುವುದು ತಿಳಿದ ವಿಷಯವೇ. ಆಯಾ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತ್ ಮತ್ತು ಪುರಸಭೆಗಳು ಈ ಬಗ್ಗೆ ಗಮನ ಹರಿಸಿ ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕು. ಜನಸಾಮಾನ್ಯರು, ವ್ಯಾಪಾರಸ್ಥರು ಕೂಡ ಇದನ್ನರಿತು ಸಾಮಾನ್ಯ ಜ್ಞಾನದೊಂದಿಗೆ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು.

— ಕುಶ ಬೊಳ್ಳುಮಾನಿ, ಪ್ರಗತಿಪರ ಕೃಷಿಕ, ಬಲ್ಲಮಾವಟಿ

"

ಜಿಲ್ಲೆಯ ಮಾರುಕಟ್ಟೆಗಳಲ್ಲಿ ಸ್ವಚ್ಛತೆ ಎಂಬುದು ಇಂದು ದೊಡ್ಡ ಸಮಸ್ಯೆಯಾಗಿದೆ. ಸ್ವಲ್ಪ ಮಳೆ ಬಂದರೂ ಕೆಸರು, ನೀರು ನಿಂತು ಗ್ರಾಹಕರು ಹಾಗೂ ವ್ಯಾಪಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ವ್ಯಾಪಾರಕ್ಕೂ ಹಿನ್ನಡೆಯಾಗುತ್ತಿದೆ. ಸ್ಥಳೀಯ ಸಂಸ್ಥೆಗಳು ನಿಯಮಿತವಾಗಿ ಸ್ವಚ್ಛತೆ ಕಾಪಾಡಿ, ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡಬೇಕು. ಮಾರುಕಟ್ಟೆಗಳು ಸ್ವಚ್ಛವಾಗಿದ್ದರೆ ಸಾರ್ವಜನಿಕರ ಆರೋಗ್ಯವೂ ಸುರಕ್ಷಿತವಾಗಿರುತ್ತದೆ ಮತ್ತು ವ್ಯಾಪಾರ ವಹಿವಾಟು ಕೂಡ ಸುಗಮವಾಗಿ ನಡೆಯುತ್ತದೆ.

— ಗೋಪಾಲಕೃಷ್ಣ, ಕಾಫಿ ಬೆಳೆಗಾರ, ದೊಡ್ಡಹಣಕೋಡು ಗ್ರಾಮ

"

ಜಿಲ್ಲೆಯಾದ್ಯಂತ ಎಲ್ಲಾ ಮಾರುಕಟ್ಟೆಗಳೂ ಕಸದ ಗುಂಡಿಗಳಾಗಿವೆ. ಮಳೆಗಾಲದಲ್ಲಂತೂ ಮಾರುಕಟ್ಟೆಗಳಿಗೆ ತೆರಳುವುದಕ್ಕೆ ಹರಸಾಹಸ ಪಡಬೇಕು. ಈಗಿನ ಮಳೆ ಮತ್ತು ಬಿಸಿಲಿನ ವಾತಾವರಣ ರೋಗ ಹರಡಲು ಸಹಕಾರಿ ಆಗಿದೆ. ಗ್ರಾಹಕರ ಸಂಕಟ ಕೇಳುವವರು ಯಾರು ಇಲ್ಲವೆಂಬುದು ಬೇಸರದ ಸಂಗತಿ. ಸಂಬAಧಪಟ್ಟ ಇಲಾಖೆಗಳು ಈಗಲಾದರೂ ಎಚ್ಚರವಾಗಬೇಕು. ರೋಗಗಳು ಬಂದ ಮೇಲೆ ಸ್ವಚ್ಛತೆಗೆ ಇಳಿಯುವದಕ್ಕಿಂತ ಈಗಲೇ ಶುಚಿತ್ವಕ್ಕೆ ಆದ್ಯತೆ ಕೊಟ್ಟರೆ ಜನರ ಆರೋಗ್ಯ ರಕ್ಷಣೆ ಆಗುತ್ತದೆ.

— ಭಾಗ್ಯಶ್ರೀ, ಶಿಕ್ಷಕಿ, ಹಾಕತ್ತೂರು

"

ಕೊಳೆತ ಹಣ್ಣು, ತರಕಾರಿಗಳು ಹಾಗೂ ಇನ್ನಿತರ ತ್ಯಾಜ್ಯ ಕಸಗಳನ್ನು ಸೂಕ್ತ ಸಮಯಕ್ಕೆ ಸರಿಯಾಗಿ ವಿಲೇವಾರಿ ಮಾಡದೆ ಮಾರುಕಟ್ಟೆ ಸ್ಥಳಗಳಲ್ಲಿ ಸಾರ್ವಜನಿಕರು ಕಿರಿ ಕಿರಿ ಅನುಭವಿಸುವಂತಾಗಿದೆ. ಜಿಲ್ಲೆಯ ಎಲ್ಲಾ ಮಾರುಕಟ್ಟೆಗಳಲ್ಲೂ ಸಂತೆ ಮುಗಿದ ಮೇಲೆ ಇದೇ ಸ್ಥಿತಿ ಇರುತ್ತದೆ. ಮುಂದಿನ ವಾರ ಸಂತೆಯ ದಿನವೂ ಸ್ವಚ್ಛಗೊಳಿಸಿರುವುದಿಲ್ಲ. ಇಂಥ ಪರಿಸ್ಥಿತಿಗಳಿಂದ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

— ಗಾಯತ್ರಿ ಕುಂಜಿಲನ, ಉಪನ್ಯಾಸಕಿ

"

ಜಿಲ್ಲೆಯ ಪ್ರಮುಖ ಮಾರುಕಟ್ಟೆಗಳಲ್ಲಿ ಸರಿಯಾದ ಮೂಲಭೂತ ವ್ಯವಸ್ಥೆಗಳ ಕೊರತೆಯಿದೆ. ಸರಾಗವಾಗಿ ನೀರು ಹರಿದು ಹೋಗಲು ಒಳಚರಂಡಿ ವ್ಯವಸ್ಥೆ ಇಲ್ಲ. ಸೂಕ್ತವಾದ ಛಾವಣಿಯೂ ಎಲ್ಲಿಯೂ ಕಂಡುಬರುವುದಿಲ್ಲ. ಮಡಿಕೇ ರಿ ಮಾರುಕಟ್ಟೆಗೆ ಇತ್ತೀಚೆಗೆ ಭೇಟಿಕೊಟ್ಟಿದ್ದ ಉಪಲೋಕಾಯುಕ್ತರೇ ಅಲ್ಲಿನ ಅವ್ಯವಸ್ಥೆ ಕಂಡು ನಗರಸಭೆ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇಂಥ ಪರಿಸ್ಥಿತಿಯಲ್ಲಿ ವಾರವಿಡೀ ದುಡಿದು ದಣಿದ ಗ್ರಾಹಕರು ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಲೇ ಬೇಕಾದ ವಸ್ತುಗಳನ್ನು ಕೊಳ್ಳುವಂತಾಗಿದೆ

— ಜೀವ್‌ಮಞಂಡ್ರ, ನಾಲ್ಕುನಾಡು

"

ಇಂದಿನ ದಿನಗಳ ಬೇಡಿಕೆಗಳಿಗೆ ಅನುಗುಣವಾಗಿ ಮಾರುಕಟ್ಟೆಗಳನ್ನು ಆಧುನೀಕರಣ ಮಾಡಬೇಕಿದೆ. ಸುಂಟಿಕೊಪ್ಪದಲ್ಲಿ ಈ ಸಂಬAಧ ಸ್ಥಳೀಯರ ಜತೆ ಮೊದಲು ಸುತ್ತಿನ ಚರ್ಚೆ ನಡೆಸಲಾಗಿದೆ. ಇದೇ ರೀತಿಯಲ್ಲಿ ಎಲ್ಲಾ ಕಡೆಗಳಲ್ಲೂ ಆದರೆ ಸಮಸ್ಯೆಗೆ ಮುಕ್ತಿ ಕಾಣಬಹುದು. ಸದ್ಯದ ಸ್ಥಿತಿಯಲ್ಲಿ ಮಾರುಕಟ್ಟೆಗಳ ಸ್ವಚ್ಛತೆಗೆ ಆದ್ಯತೆ ಕೊಡುವಂತೆ ಸಂಬAಧಿಸಿದವರಿಗೆ ಸೂಚನೆ ನೀಡಲಾಗುವುದು. ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಸೂಕ್ತ ಸೌಲಭ್ಯಕೊಡುವುದಕ್ಕೆ ಆದ್ಯತೆ ಕೊಡಲಾಗುವುದು.

— ಡಾ. ಮಂತರ್ ಗೌಡ, ಮಡಿಕೇರಿ ಶಾಸಕ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net