ಗೋಣಿಕೊಪ್ಪ: ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಪ್ರತಿಯೊಬ್ಬ ನಾಗರಿಕ ಕಾನೂನಿನ ಬಗ್ಗೆ ಕನಿಷ್ಠ ಮಟ್ಟದ ಅರಿವು ಹೊಂದುವುದು ಅಗತ್ಯ ಎಂದು ಗೋಣಿಕೊಪ್ಪ ಪೊಲೀಸ್ ಠಾಣೆಯ ಠಾಣಾಧಿಕಾರಿ ಕಾಳೇಗೌಡ ಹೇಳಿದರು.
ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಕೈಕೇರಿ ಗ್ರಾಮದಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಕಳ್ಳತನ, ಅಕ್ರಮ ಚಟುವಟಿಕೆ, ಸೈಬರ್ ಅಪರಾಧದಿಂದ ದೂರವಿರುವುದರ ಜತೆಗೆ ಸಂಚಾರ ನಿಯಮಗಳ ಪಾಲನೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಪೋಕ್ಸೋ ಬಗ್ಗೆ ಅರಿವು ಹೊಂದಬೇಕು ಎಂದು ಹೇಳಿದರು.
ಸಂಶಯಾಸ್ಪದ ವ್ಯಕ್ತಿಗಳು ಅಥವಾ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹದಂತಹ ಪ್ರಕರಣಗಳನ್ನು ಮುಚ್ಚಿಡದೆ ಸಂಬಂಧಿಸಿದ ಇಲಾಖೆ ಅಥವಾ ಪೊಲೀಸರಿಗೆ ತಿಳಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಹೇಳಿದರು.
ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದರ ಜತೆಗೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಬೇಕು. ವಾಹನ ಚಾಲನೆ ವೇಳೆ ಮೊಬೈಲ್ ಫೋನ್ ಬಳಕೆ ಮಾಡಬಾರದು. ಅಲ್ಲದೆ ಮದ್ಯಪಾನ ಮಾಡಿ ವಾಹನ ಚಲಾಯಿಸುವುದನ್ನು ಸಂಪೂರ್ಣವಾಗಿ ತ್ಯಜಿಸಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಸಾರ್ವಜನಿಕರ ಸಮಸ್ಯೆ ಮತ್ತು ಅಹವಾಲುಗಳನ್ನು ಆಲಿಸಿ ಮಾತನಾಡಿದ ಕಾಳೇಗೌಡ, ಪೊಲೀಸ್ ಇಲಾಖೆ ಸದಾ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಲಿದ್ದು, ಯಾವುದೇ ಸಮಸ್ಯೆ ಎದುರಾದರೂ ನಿರ್ಭಯವಾಗಿ ಪೊಲೀಸರನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.
ಅಪರಾಧ ವಿಭಾಗದ ಉಪನಿರೀಕ್ಷಕ ವೆಂಕಟೇಶ್, ಗ್ರಾಮದ ಪ್ರಮುಖರಾದ ಕುಪ್ಪಂಡ ಗಿರೀಶ್ ಪೂವಣ್ಣ, ಚೀಯಕ್‌ಪೂವಂಡ ಸುಬ್ರಮಣಿ, ಸಾಬು, ಜಮ್ಮಡ ಹ್ಯಾರಿ, ಜಮ್ಮಡ ನಾಣಯ್ಯ, ಜಮ್ಮಡ ನಿಖಿಲ್ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.