ಶಿಸ್ತುಬದ್ಧವಾಗಿ ಗೌರಿ ಗಣೇಶ ವಿಸರ್ಜನೋತ್ಸವ ಆಚರಿಸಿ

 ಗೌರಿ ಗಣೇಶ ವಿಸರ್ಜನೋತ್ಸವ ಸಮಿತಿಗಳೊಂದಿಗಿನ ಪೊಲೀಸರ ಸಲಹಾ ಸಭೆಯಲ್ಲಿ ಶಿವರಾಜ್ ಆರ್.ಮದೋಳ್ ಮಾತನಾಡಿದರು. ಕಾಳೇಗೌಡ, ನವೀನ್ ಇದ್ದರು.
ಗೌರಿ ಗಣೇಶ ವಿಸರ್ಜನೋತ್ಸವ ಸಮಿತಿಗಳೊಂದಿಗಿನ ಪೊಲೀಸರ ಸಲಹಾ ಸಭೆಯಲ್ಲಿ ಶಿವರಾಜ್ ಆರ್.ಮದೋಳ್ ಮಾತನಾಡಿದರು. ಕಾಳೇಗೌಡ, ನವೀನ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಿಸ್ತುಬದ್ಧವಾಗಿ ಗೌರಿ ಗಣೇಶ ವಿಸರ್ಜನೋತ್ಸವ ಆಚರಿಸಿ
  • ಗೌರಿ-ಗಣೇಶ ವಿಸರ್ಜನೋತ್ಸವ ಆಚರಣಾ ಸಮಿತಿಗಳ ಸಭೆಯಲ್ಲಿ ಶಿವರಾಜ್ ಆರ್.ಮದೋಳ್

ಗೋಣಿಕೊಪ್ಪ: ಗೌರಿ ಗಣೇಶ ವಿಸರ್ಜನೋತ್ಸವವನ್ನು ಯಾವುದೇ ಧರ್ಮ, ಸಮುದಾಯ ಅಥವಾ ವ್ಯಕ್ತಿಯ ಭಾವನೆಗಳಿಗೆ ಧಕ್ಕೆಯಾಗದಂತೆ, ಕಾನೂನುಬದ್ಧವಾಗಿ ಹಾಗೂ ಶಿಸ್ತುಬದ್ಧವಾಗಿ ಆಚರಿಸಬೇಕು ಎಂದು ಗೋಣಿಕೊಪ್ಪ ವೃತ್ತ ನಿರೀಕ್ಷಕ ಶಿವರಾಜ್.ಆರ್.ಮದೋಳ್ ತಿಳಿಸಿದರು.

ಗೋಣಿಕೊಪ್ಪದಲ್ಲಿ ಖಾಸಗಿ ಸಭಾಂಗಣದಲ್ಲಿ ಆಯೋಜಿಸಿದ್ದ ಗೋಣಿಕೊಪ್ಪ, ಪೊನ್ನಂಪೇಟೆ, ತಿತಿಮತಿ ಹಾಗೂ ದೇವರಪುರ ವ್ಯಾಪ್ತಿಯ ಗೌರಿ-ಗಣೇಶ ವಿಸರ್ಜನೋತ್ಸವ ಆಚರಣಾ ಸಮಿತಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಗಣೇಶ ವಿಸರ್ಜನೋತ್ಸವವನ್ನು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ನಡೆಸಬೇಕು. ನಿಯಮ ಉಲ್ಲಂಘಿಸಿದರೆ ಒಂದು ದಿನದ ಅಬ್ಬರಕ್ಕಾಗಿ ಕಾನೂನು ಕ್ರಮ ಹಾಗೂ ದಂಡವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವಿಸರ್ಜನಾ ಮೆರವಣಿಗೆಯಲ್ಲಿ ಸೂಕ್ತ ಭದ್ರತೆ, ಬೆಳಕಿನ ವ್ಯವಸ್ಥೆ, ಸಮಯ ಪಾಲನೆ, ಸಂಚಾರ ನಿಯಂತ್ರಣ ಹಾಗೂ ಶಬ್ದಮಾಲಿನ್ಯ ಉಂಟಾಗದಂತೆ ಸಮಿತಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ, ಸಾಮಾಜಿಕ ಜವಾಬ್ದಾರಿಯೊಂದಿಗೆ ಎಲ್ಲರೂ ಸಹಕರಿಸಿದರೆ ಹಬ್ಬವು ಶಾಂತಿಯುತವಾಗಿ ಹಾಗೂ ಯಶಸ್ವಿಯಾಗಿ ನೆರವೇರುತ್ತದೆ ಎಂದು ಹೇಳಿದರು.
ಕಳೆದ ವರ್ಷ ಗೋಣಿಕೊಪ್ಪ ಸಮಿತಿಗಳು ಒಂದೇ ದಿನ ಆಚರಿಸುವ ಮೂಲಕ ಸಾರ್ವಜನಿಕರ ಆಕರ್ಷಣೆಗೆ ಒಳಗಾಯಿತು. ಅದೇ ರೀತಿ ಈ ವರ್ಷವೂ ಮುಂದುವರೆದರೆ ಸೂಕ್ತ ವ್ಯವಸ್ಥೆಯಾಗಲಿದೆ. ಹಬ್ಬದ ಯಶಸ್ವಿ ಹಾಗೂ ಶಾಂತಿಯುತ ಆಚರಣೆಗೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.
ಗೋಣಿಕೊಪ್ಪ ಪೊಲೀಸ್ ಠಾಣಾಧಿಕಾರಿ ಕಾಳೇಗೌಡ ಮಾತನಾಡಿ, ತಮ್ಮ ಸಮಿತಿಗಳು ಹಬ್ಬದ ಪ್ರಯುಕ್ತ ಮುಂಜಾಗ್ರತ ಕ್ರಮ ಕೈಗೊಳ್ಳುವುದು ಉತ್ತಮ. ಮದ್ಯಪಾನ ಮಾಡಿ ಗಲಾಟೆಗಳೆ ಎಬ್ಬಿಸದಂತೆ ಎಚ್ಚರಿಕೆ ವಹಿಸುವುದು ಸಮಿತಿ ಪದಾಧಿಕಾರಿಗಳ ಜವಾಬ್ದಾರಿ ಎಂದು ಸಲಹೆ ನೀಡಿದರು.
ಗೋಣಿಕೊಪ್ಪ ಗಣೇಶೋತ್ಸವ ಆಚರಣಾ ಸಮಿತಿಗಳ ಅಧ್ಯಕ್ಷ ಜಗದೀಶ್ ಜೋಡುಬೀಟಿ ಮಾತನಾಡಿ, ಗೋಣಿಕೊಪ್ಪದಲ್ಲಿ ಇರುವ ಎಲ್ಲಾ ಸಮಿತಿಗಳು ಒಂದೇ ದಿನ ವಿಸರ್ಜನೆ ಉತ್ಸವ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಅದರಂತೆ ಕಾನೂನು ಪಾಲನೆಯೊಂದಿಗೆ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗದಂತೆ ಉತ್ತಮ ರೀತಿಯಲ್ಲಿ ನಡೆಸಲು ಎಲ್ಲಾ ಸಮಿತಿಗಳು ಬದ್ಧವಾಗಿವೆ ಎಂದು ಮಾಹಿತಿ ನೀಡಿದರು.
ಪೊನ್ನಂಪೇಟೆ ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕೊಳೆರ ದಯಾ ಚಂಗಪ್ಪ ಮಾತನಾಡಿ, ಸಮಯವನ್ನು ಉಳಿಸುವ ನಿಟ್ಟಿನಲ್ಲಿ ಹಗಲಿನಲ್ಲಿಯೇ ವಿಸರ್ಜನೋತ್ಸವಕ್ಕೆ ಕ್ರಮ ಕೈಗೊಳ್ಳುವ ವ್ಯವಸ್ಥೆಯನ್ನು ಇತರ ಉಪಸಮಿತಿಗಳಿಗೂ ಮಾಡಿಕೊಡುವ ನಿಟ್ಟಿನಲ್ಲಿ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪೊನ್ನಂಪೇಟೆ ಠಾಣಾಧಿಕಾರಿ ನವೀನ್ ಮತ್ತು ಗಣೇಶೋತ್ಸವ ಆಚರಣಾ ಸಮಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳು, ಪದಾಧಿಕಾರಿಗಳು, ಸಭೆಯಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net