ನಾಪೋಕ್ಲು: ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯಕ್ಕಾಗಿ ಉತ್ತಮ ಶಿಕ್ಷಣವನ್ನು ಪಡೆಯಬೇಕು ಎಂದು ಉದ್ಯಮಿ ಬನ್ಸಿರಾಜ್ ಕುಶಾಲಪ್ಪ ಕರೆ ನೀಡಿದರು.
ಇಲ್ಲಿನ ಕೊಡವ ಸಮಾಜದಲ್ಲಿ ಗುರುವಾರ ಆಯೋಜಿಸಲಾಗಿದ್ದ ಅಂಕುರ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕೇವಲ ತಂತ್ರಜ್ಞಾನಕ್ಕೆ ಒಳಗಾಗದೆ ಪುಸ್ತಕದಿಂದಲೂ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ಅಂಕುರ್ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಕೆಟೋಳಿರ ರತ್ನಾ ಚರ್ಮಣ ಮಾತನಾಡಿ, ವಿದ್ಯಾರ್ಥಿಗಳು ನಡೆದು ಬಂದ ಹಾದಿ ಮತ್ತು ಅವರು ಮಾಡಿರುವ ಸಾಧನೆಯ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಪ್ರತಿಯೊಬ್ಬ ವಿದ್ಯಾರ್ಥಿಯು ಜೀವನದಲ್ಲಿ ಉತ್ತಮ ಸಾಧನೆಯನ್ನು ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
ಶಾಲೆಯ ವಿದ್ಯಾರ್ಥಿ ನಾಯಕ ಯೋಹನ್ ಮುತ್ತಣ್ಣ ಮಾತನಾಡಿ, ಶಾಲೆಯು ನಮಗೆ ಉತ್ತಮ ಶಿಕ್ಷಣವನ್ನು ನೀಡಿದೆ. ಎಂದಿಗೂ ನಾವು ಶಾಲೆಯನ್ನು ಮರೆಯುವಂತಿಲ್ಲ ಎಂದರು.
ಶಾಲೆಯ ನಾಯಕಿ ಅನನ್ಯಾ ಅಯ್ಯಪ್ಪ ಮಾತನಾಡಿ, ಶಾಲೆಯು ಒಂದು ದೇವಸ್ಥಾನವಿದ್ದಂತೆ. ಪ್ರತಿಯೊಬ್ಬರೂ ನಮ್ಮ ಜೀವನವನ್ನು ಇಲ್ಲಿಂದಲೇ ರೂಪಿಸಿಕೊಳ್ಳಬಹುದು. ಶಾಲೆಯ ಅನೇಕ ಒಳ್ಳೆಯ ಗುಣಗಳನ್ನು ಕಲಿಸಿಕೊಟ್ಟಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಗಾನ್ಯಾ ಸುಬ್ಬಯ್ಯ, ಮುಷಿದ , ಸೋಮಣ್ಣ, ಯೋಗರಾಜ್, ತಾನ್ಯಾ ತಂಗಮ್ಮ, ತೀರ್ಥ, ಸಿಂಚನಾ ಶಾಲೆಯ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.
ಅಂಕುರ್ ಪಬ್ಲಿಕ್ ಶಾಲೆ ಅಧ್ಯಕ್ಷ ಕೆಟೋಳಿರ ರಾಜ ಚರ್ಮಣ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಕರುಂಬಯ್ಯ, ವಿನಿ ಕರುಂಬಯ್ಯ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ, ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲಕರು, ಶಿಕ್ಷಕರು ಪಾಲ್ಗೊಂಡಿದ್ದರು.