ರಾಜಪೇಟೆ: ಭವ್ಯ ಪರಂಪರೆ, ವಿವಿಧತೆಯಲ್ಲಿ ಏಕತೆ ಕಂಡ ಅಪ್ಪಟ ಜಾನಪದ ಸೊಗಡಿನ ಭಾಷೆ ಕನ್ನಡ. ಇತರ ಭಾಷೆಗಳನ್ನು ಗೌರವಿಸಿ ತಾಯಿ ಭಾಷೆ ಕನ್ನಡವನ್ನು ಧೀಮಂತಗೊಳಿಸುವ ಪ್ರಯತ್ನ ನಿರಂತರವಾಗಿ ಸಾಗಲಿ ಎಂದು ಕೊಡಗು ವಿವಿ ಕುಲಪತಿ ಡಾ.ಅಶೋಕ ಸಂಗಪ್ಪ ಆಲೂರ ಹೇಳಿದರು.
ಸೇಂಟ್ ಆನ್ಸ್ ಪದವಿ ಕಾಲೇಜು ಕನ್ನಡ ಭಾಷಾ ವಿಭಾಗ, ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಮತ್ತು ವಿರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕಾಲೇಜು ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಗುರುವಾರ ‘ನುಡಿ ನಡೆ ಯುವಜನರ ಕಡೆ’ ಶೀರ್ಷಿಕೆಯಡಿ ಏರ್ಪಡಿಸಿದ್ದ ನುಡಿ ಉತ್ಸವ, ಅಂತರ್ ತರಗತಿ ಕನ್ನಡ ಗಾಯನ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ಧೀಮಂತ ಸಂಸ್ಕೃತಿ ಹೊಂದಿರುವ ಕನ್ನಡ ಭಾಷೆಯನ್ನು ಪಾಲಕರು ಮನೆಯಿಂದ, ಶಿಕ್ಷಕರು ವಿದ್ಯಾಲಯದಿಂದ ತಿಳಿಯಪಡಿಸುವಂತಾಗಬೇಕು. ಕನ್ನಡ ಭಾಷೆಯಲ್ಲಿ ಪಾಂಡಿತ್ಯ ಪಡೆದ ಹಲವು ವಿದ್ವಾಂಸರು ಧೀಮಂತ ಸಾಹಿತ್ಯ ರಚಿಸಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ ಕನ್ನಡವಾಗಿದೆ. ಕನ್ನಡ ಭಾಷೆ ಮೇಲೆ ಹಲವು ಭಾಷೆಗಳ ಪ್ರಭಾವದಿಂದಾಗಿ ವಾಕ್ಯ ಬಳಕೆ ಮಾಡುವ ಸಂದರ್ಭ ಒಂದು ಕನ್ನಡ ಪದವಾದರೆ ಇತರ ಭಾಷೆಗಳ ಬಳಕೆ ಅಧಿಕವಾಗಿ ಬಳಕೆಯಾಗುತ್ತಿರುವುದು ಕಳವಳಕಾರಿ ಸಂಗತಿ ಎಂದರು.
ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಪ್ರಸ್ತುತ ನುಡಿ ಗೀತಗಾಯನ ಸ್ಪರ್ಧೆಯು ವಿಶೇಷವಾಗಿ ಯುವ ಸಮುದಾಯವನ್ನು ಪ್ರೇರೇಪಿಸುವ ಕಾರ್ಯಕ್ರಮವಾಗಿದೆ. ನಾಡು, ನುಡಿ, ಸಂಸ್ಕೃತಿ, ಜನಪದ ಉಳಿಯಬೇಕು. ಈ ನಿಟ್ಟಿನಲ್ಲಿ ಯುವ ಪೀಳಿಗೆ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಬೇಕಿದೆ ಎಂದು ಕರೆ ನೀಡಿದರು.
ಸೇಂಟ್ ಆನ್ಸ್ ಪದವಿ ಕಾಲೇಜಿನ ಕನ್ನಡ ಭಾಷಾ ವಿಭಾಗದ ಮುಖ್ಯಸ್ಥ ಮತ್ತು ಕೊಡಗು ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಅರ್ಜುನ್ ಮೌರ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಲು ಆಡಳಿತ, ಕಲಿಕೆ ಹಾಗೂ ಪ್ರಚಲಿತ ವಿದ್ಯಮಾನಗಳಲ್ಲಿ ಕನ್ನಡ ಭಾಷೆಯನ್ನು ಬಲಿಷ್ಠಗೊಳಿಸಲು ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ಪ್ರಯತ್ನದ ಅಂಗವಾಗಿ ನುಡಿಗೀತಗಾಯನ ಸ್ಪರ್ಧೆ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಎಲ್ಲ ಕಾಲೇಜುಗಳಲ್ಲಿ ಅಂತರ್ ತರಗತಿ ಗೀತ ಗಾಯನ ಸ್ಪರ್ಧೆ ನಡೆಸಲಾಗುತ್ತಿದೆ. ಕನ್ನಡ ರಾಜ್ಯೋತ್ಸವ ಆಚರಣೆಗಳು ತಿಂಗಳಿಗೆ ಸೀಮಿತವಾಗಿರದೆ ನಿರಂತರವಾಗಿ ಸಾಗುವ ಉದ್ದೇಶ ಹೊಂದಿರುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ನುರಿತ ಕಲೆ ಅರಿತ ತೀರ್ಪುಗಾರರಿಂದ ಸ್ಪರ್ಧೆಯ ತೀರ್ಪು ನೀಡಲಾಗುತ್ತಿದ್ದು ಮುಂದೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ನೀಡಲಾಗುತ್ತದೆ. ಚಾಲನೆ ಕಾರ್ಯಕ್ರಮದಲ್ಲಿ ಆರಂಭದಲ್ಲಿ 10 ತಂಡಗಳು ಭಾಗವಹಿಸಲಿದೆ. ಜಾನಪದ, ಕರ್ನಾಟಿಕ್ ಮತ್ತು ಶಾಸ್ತ್ರೀಯ ಸಂಗೀತ ಕನ್ನಡ ಭಾಷಾ ಆಧಾರಿತ ಗುಂಪು ಗಾಯನ ಸ್ಪರ್ಧೆ ಆಯೋಜಿಸಲಾಗಿದೆ ಎಂದು ವಿವರಿಸಿದರು.
ವಿರಾಜಪೇಟೆ ತಾಲೂಕು ಕಸಾಪ ಅಧ್ಯಕ್ಷ ಡಿ.ಪಿ.ರಾಜೇಶ್ ಪದ್ಮನಾಭ, ನುಡಿ ಉತ್ಸವ ಸಮಿತಿ ಸಂಚಾಲಕರಾದ ಅಬ್ದುಲ್ ರೆಹಮಾನ್, ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಐಕ್ಯುಎಸಿ ಸಂಯೋಜಕರಾದ ಬಿ.ಡಿ.ಹೇಮಾ ಮಾತನಾಡಿದರು.
ವೇದಿಕೆಯಲ್ಲಿ ಪದವಿ ಕಾಲೇಜಿನ ಎಲ್ಲ ವಿಭಾಗಗಳ ತಂಡ ಮತ್ತು ಎಂ.ಕಾಂ. ಸ್ನಾತಕೋತ್ತರ ಪದವಿ ವಿಭಾಗದ 10 ತಂಡಗಳ ವಿದ್ಯಾರ್ಥಿಗಳು ನುಡಿ ಗೀತಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕೊಡಗಿನ ಜಾನಪದ ಕಲೆಗಳಾದ ಪರೆಯ ಕಳಿ ಮತ್ತು ಉಮ್ಮತ್ತಾಟ್ ಪ್ರದರ್ಶನ ವಿದ್ಯಾರ್ಥಿಗಳಿಂದ ಮೂಡಿಬಂತು. ಚಿತ್ರಕಲಾ ಶಿಕ್ಷಕರಾದ ಬಸವರಾಜ ಬಡಿಗೇರ್ ಮತ್ತು ಶಾಸ್ತ್ರೀಯ ಸಂಗೀತ ಕಲಾವಿದರಾದ ಚಂದ್ರಶೇಖರ್ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.