ಕಾರ್ಮಿಕರ ನೆಲೆಬೀಡು ಮಾರ್ಗೊಲ್ಲಿ

ಮಳೆಗಾಲದಲ್ಲಿ ಮಾರ್ಗೊಲ್ಲಿ ಗ್ರಾಮಕ್ಕೆ ತೆರಳುವ ರಸ್ತೆ ಯ ನೋಟ.
ಮಳೆಗಾಲದಲ್ಲಿ ಮಾರ್ಗೊಲ್ಲಿ ಗ್ರಾಮಕ್ಕೆ ತೆರಳುವ ರಸ್ತೆ ಯ ನೋಟ.
Published on

ಪ್ರಮುಖ ಮುಖ್ಯಾಂಶಗಳು

  • ಹಸಿರು ಕಾಫಿ ತೋಟಗಳು, ಬೆಟ್ಟಗುಡ್ಡಗಳು, ಪ್ರಕೃತಿಯ ಸೊಬಗು ಬೆಸೆದಿರುವ ಹಳ್ಳಿ
  • ಬಹುಭಾಷಾ, ಸಂಸ್ಕೃತಿಯ ಗ್ರಾಮವಾಗಿ ರೂಪು
ಸಿದ್ದಾಪುರ: ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮಾರ್ಗೊಲ್ಲಿ ಗ್ರಾಮವು ಕೊಡಗಿನ ಕಾಫಿ ಸಂಸ್ಕೃತಿಯ ಜೀವಂತ ಪ್ರತಿಬಿಂಬವಾಗಿ ಗುರುತಿಸಿಕೊಂಡಿದೆ. ಹಸಿರು ಕಾಫಿ ತೋಟಗಳು, ಬೆಟ್ಟಗುಡ್ಡಗಳು, ಮಳೆಗಾಲದ ಮಂಜು ಹಾಗೂ ಪ್ರಕೃತಿಯ ಸೊಬಗಿನ ನಡುವೆ ಬೆಸೆದಿರುವ ಈ ಗ್ರಾಮವು ಕಾರ್ಮಿಕರ ಬದುಕು, ಶಿಕ್ಷಣದ ಇತಿಹಾಸ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ಕ್ರೀಡಾ ಚಟುವಟಿಕೆಗಳ ಮೂಲಕ ವಿಶಿಷ್ಟ ಸ್ಥಾನ ಪಡೆದಿದೆ.
ಟಾಟಾ ಕಾಫಿ ಎಸ್ಟೇಟ್ ಸೇರಿದಂತೆ ಹಲವು ದೊಡ್ಡ ಹಾಗೂ ಸಣ್ಣ ಕಾಫಿ ತೋಟಗಳ ನಡುವೆ ಬೆಳೆದಿರುವ ಮಾರ್ಗೊಲ್ಲಿ ಗ್ರಾಮವು ಹಲವು ದಶಕಗಳಿಂದ ಕಾರ್ಮಿಕರ ಜೀವನದ ಕೇಂದ್ರವಾಗಿದೆ. ಕಾಫಿ ಉದ್ಯಮದ ಬೆಳವಣಿಗೆಯೊಂದಿಗೆ ಗ್ರಾಮವೂ ಅಭಿವೃದ್ಧಿ ಹೊಂದಿದ್ದು, ಇಂದು ಮಾಲ್ದಾರೆ ಗ್ರಾಮ ಪಂಚಾಯಿತಿಯ ಪ್ರಮುಖ ವಸತಿ ಪ್ರದೇಶಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.
ಮಾರ್ಗೊಲ್ಲಿ ಹೆಸರಿನ ಹಿಂದೆ ರೋಚಕ ಇತಿಹಾಸವಿದೆ. ಸುಮಾರು 1850ರ ಇಸವಿಯಲ್ಲಿ ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ ಈ ಎಸ್ಟೇಟ್ ಸ್ಥಾಪನೆಯಾಯಿತು. ಸ್ಕಾಟ್‌ಲ್ಯಾಂಡ್ ಮೂಲದ ಪ್ಲಾಂಟರ್‌ಗಳು ಕೊಡಗಿನ ಕಾಫಿ ಕೃಷಿಯ ಅಪಾರ ಸಾಧ್ಯತೆಗಳನ್ನು ಕಂಡು ಇಲ್ಲಿ ತೋಟಗಳನ್ನು ಅಭಿವೃದ್ಧಿಪಡಿಸಿದರು. ಆರಂಭಿಕ ಮಾಲೀಕರಾಗಿದ್ದ ಮಾರ್ಕೊ ಮತ್ತು ಅವರ ಪತ್ನಿ ಲಿಲ್ಲಿ ಅವರ ಹೆಸರನ್ನು ಸಂಯೋಜಿಸಿ ಮಾರ್ಗೊಲ್ಲಿ ಎಂದು ನಾಮಕರಣ ಮಾಡಲಾಯಿತು ಎನ್ನುವುದು ಸ್ಥಳೀಯವಾಗಿ ಪ್ರಸಿದ್ಧವಾಗಿರುವ ಕಥೆ. ಈ ಹೆಸರು ಕಾಲಕ್ರಮೇಣ ಮಾರ್ಗೊಲ್ಲಿ ಎಂಬ ರೂಪ ಪಡೆದಿದ್ದು, ಇಂದಿಗೂ ಆ ಪ್ರೇಮಕಥೆಯ ನೆನಪನ್ನು ಉಳಿಸಿಕೊಂಡಿದೆ.
ಕಾಫಿ, ಕರಿಮೆಣಸು ಪ್ರಮುಖ ಬೆಳೆ
ಸ್ವಾತಂತ್ರ್ಯಾನಂತರ ಈ ಐತಿಹಾಸಿಕ ತೋಟಗಳು ಭಾರತೀಯ ಸಂಸ್ಥೆಗಳ ಒಡೆತನಕ್ಕೆ ಬಂದವು. ಪ್ರಸ್ತುತ ಟಾಟಾ ಕಾಫಿ ಸಮೂಹದ ಪ್ರಮುಖ ಎಸ್ಟೇಟ್‌ಗಳಲ್ಲಿ ಒಂದಾಗಿರುವ ಈಗಿನ ನ್ಯೂ ಮಾರ್ಗೊಲ್ಲಿ ಎಸ್ಟೇಟ್‌ನಲ್ಲಿ ರೋಬಸ್ಟಾ ಮತ್ತು ಅರೇಬಿಕಾ ತಳಿಯ ಕಾಫಿಯೊಂದಿಗೆ ಕರಿಮೆಣಸಿನ ಬೆಳೆಯನ್ನೂ ಆಧುನಿಕ ಕೃಷಿ ಪದ್ಧತಿಗಳ ಮೂಲಕ ಬೆಳೆಯಲಾಗುತ್ತಿದೆ.
ಗ್ರಾಮದ ಆರ್ಥಿಕತೆಯ ಬೆನ್ನೆಲುಬು ಕಾಫಿ ಉದ್ಯಮವೇ ಆಗಿದೆ. ಟಾಟಾ ಕಾಫಿ ಸೇರಿದಂತೆ ವಿವಿಧ ಎಸ್ಟೇಟ್‌ಗಳಲ್ಲಿ ನೂರಾರು ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ತಮಿಳುನಾಡು, ಕೇರಳ ಹಾಗೂ ಕರ್ನಾಟಕದ ವಿವಿಧ ಭಾಗಗಳಿಂದ ಉದ್ಯೋಗ ಅರಸಿ ಬಂದ ಕಾರ್ಮಿಕರು ಇಲ್ಲಿ ನೆಲೆಸಿದ್ದು, ಅವರ ಕುಟುಂಬಗಳು ಹಾಗೂ ಮುಂದಿನ ಪೀಳಿಗೆಗಳು ಗ್ರಾಮ ಜೀವನದ ಅವಿಭಾಜ್ಯ ಅಂಗವಾಗಿವೆ. ಇದರಿಂದಾಗಿ ಮಾರ್ಗೊಲ್ಲಿ ಬಹುಭಾಷಾ ಹಾಗೂ ಬಹುಸಂಸ್ಕೃತಿಯ ಗ್ರಾಮವಾಗಿ ರೂಪುಗೊಂಡಿದೆ. ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳು ಇಲ್ಲಿ ಸಾಮಾನ್ಯವಾಗಿ ಕೇಳಿಬರುತ್ತವೆ.
ಕುಟುಂಬದ ಆರ್ಥಿಕ ಸ್ಥಿತಿಗೆ ಮಹತ್ವದ ಕೊಡುಗೆ
ಕಾರ್ಮಿಕರ ಪರಿಶ್ರಮವೇ ಈ ಭಾಗದ ಅಭಿವೃದ್ಧಿಯ ಪ್ರಮುಖ ಶಕ್ತಿ. ಬೆಳಗ್ಗಿನಿಂದಲೇ ತೋಟಗಳಿಗೆ ತೆರಳುವ ಕಾರ್ಮಿಕರು ಕಾಫಿ, ಕರಿಮೆಣಸು ಹಾಗೂ ಇತರ ತೋಟಗಾರಿಕಾ ಬೆಳೆಗಳ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಕಾಫಿ ಕೊಯ್ಲಿನ ಅವಧಿಯಲ್ಲಿ ಗ್ರಾಮದಲ್ಲಿ ವಿಶೇಷ ಚಟುವಟಿಕೆ ಕಂಡುಬರುತ್ತದೆ. ಮಹಿಳೆಯರು ಕೂಡ ಪುರುಷರೊಂದಿಗೆ ಸಮಾನವಾಗಿ ದುಡಿಯುತ್ತಿದ್ದು, ಕುಟುಂಬದ ಆರ್ಥಿಕ ಸ್ಥಿತಿಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ.
ಸರ್ಕಾರಿ ಶಾಲೆ ಆರಂಭವಾದ ಹೆಗ್ಗಳಿಕೆ
ಶಿಕ್ಷಣ ಕ್ಷೇತ್ರದಲ್ಲಿಯೂ ಮಾರ್ಗೊಲ್ಲಿಗೆ ವಿಶಿಷ್ಟ ಇತಿಹಾಸವಿದೆ. ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ಸರ್ಕಾರಿ ಶಾಲೆ ಆರಂಭವಾದ ಗ್ರಾಮ ಎಂಬ ಹೆಗ್ಗಳಿಕೆ ಇದಕ್ಕಿದೆ. ಒಂದು ಕಾಲದಲ್ಲಿ ಸುತ್ತಮುತ್ತಲಿನ ಅನೇಕ ಗ್ರಾಮಗಳ ಮಕ್ಕಳು ಇಲ್ಲಿಯೇ ಶಿಕ್ಷಣ ಪಡೆಯುತ್ತಿದ್ದರು. ಗ್ರಾಮೀಣ ಭಾಗದ ಮಕ್ಕಳಿಗೆ ವಿದ್ಯೆಯ ಬೆಳಕು ನೀಡಿದ ಈ ಶಾಲೆ ಹಲವು ವರ್ಷಗಳ ಕಾಲ ಯಶಸ್ವಿಯಾಗಿ ಕಾರ್ಯನಿರ್ವಹಿಸಿತು. ಆದರೆ ವಿದ್ಯಾರ್ಥಿಗಳ ಸಂಖ್ಯೆ ಕುಸಿತ ಹಾಗೂ ಆಡಳಿತಾತ್ಮಕ ಕಾರಣಗಳಿಂದ ಶಾಲೆ ಮುಚ್ಚಲ್ಪಟ್ಟಿತು. ಶಾಲೆ ಮುಚ್ಚಿರುವುದು ಗ್ರಾಮಸ್ಥರಿಗೆ ಬೇಸರ ತಂದಿದ್ದರೂ, ಶಿಕ್ಷಣದ ಬಗ್ಗೆ ಇರುವ ಆಸಕ್ತಿ ಕಡಿಮೆಯಾಗಿಲ್ಲ. ಪ್ರಸ್ತುತ ಮಕ್ಕಳು ಮಾಲ್ದಾರೆ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಉತ್ತಮ ಭವಿಷ್ಯದ ಕನಸು ಕಾಣುತ್ತಿದ್ದಾರೆ.
ಗ್ರಾಮದಲ್ಲಿ ಉಪ ಆರೋಗ್ಯ ಕೇಂದ್ರ, ಅಂಗನವಾಡಿ ಕೇಂದ್ರ ಹಾಗೂ ಸಾರ್ವಜನಿಕ ವಿತರಣಾ ವ್ಯವಸ್ಥೆಯ ನ್ಯಾಯಬೆಲೆ ಅಂಗಡಿ ಕಾರ್ಯನಿರ್ವಹಿಸುತ್ತಿದೆ. ಇವು ಗ್ರಾಮಸ್ಥರ ಆರೋಗ್ಯ, ಪೌಷ್ಟಿಕತೆ ಮತ್ತು ಆಹಾರ ಭದ್ರತೆಗೆ ನೆರವಾಗುತ್ತಿದೆ.
ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ ಕಾರ್ ರ‌್ಯಾಲಿ
ಮಾರ್ಗೊಲ್ಲಿಯ ಮತ್ತೊಂದು ವಿಶೇಷ ಆಕರ್ಷಣೆ ಎಂದರೆ ಪ್ರತಿವರ್ಷ ನಡೆಯುವ ಇಂಡಿಯನ್ ಕಾರ್ ರ‌್ಯಾಲಿ. ಕೊಡಗಿನ ಕಾಫಿ ತೋಟಗಳ ನಡುವೆ ಹಾದು ಹೋಗುವ ಮಣ್ಣಿನ ರಸ್ತೆಗಳು ಹಾಗೂ ಸವಾಲಿನ ತಿರುವುಗಳು ಸ್ಪರ್ಧಿಗಳಿಗೆ ರೋಚಕ ಅನುಭವ ನೀಡುತ್ತವೆ. ರ‌್ಯಾಲಿ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಿಂದ ಚಾಲಕರು, ತಾಂತ್ರಿಕ ಸಿಬ್ಬಂದಿ ಹಾಗೂ ಪ್ರವಾಸಿಗರು ಆಗಮಿಸುತ್ತಾರೆ. ಕಾಫಿ ತೋಟಗಳ ಮಧ್ಯೆ ವೇಗವಾಗಿ ಚಲಿಸುವ ರ‌್ಯಾಲಿ ಕಾರುಗಳ ದೃಶ್ಯ ಸಾವಿರಾರು ಜನರನ್ನು ಆಕರ್ಷಿಸುತ್ತದೆ. ಈ ಕ್ರೀಡಾ ಚಟುವಟಿಕೆಯ ಮೂಲಕ ಮಾರ್ಗೊಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ.
ಮಳೆಗಾಲದಲ್ಲಿ ಸೆಳೆಯಲಿದೆ ಪ್ರಕೃತಿ
ಮಳೆಗಾಲದಲ್ಲಿ ಗ್ರಾಮದ ಸೌಂದರ್ಯ ಮತ್ತಷ್ಟು ಮೆರೆಯುತ್ತದೆ. ಹಸಿರು ಕಾಫಿ ತೋಟಗಳು, ಮಂಜಿನ ಹೊದಿಕೆ, ತಂಪಾದ ವಾತಾವರಣ ಹಾಗೂ ಪಕ್ಷಿಗಳ ಕಲರವ ಪ್ರಕೃತಿ ಪ್ರಿಯರನ್ನು ಸೆಳೆಯುತ್ತದೆ.
ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೊದಲ ಸರ್ಕಾರಿ ಶಾಲೆ ಆರಂಭವಾದ ಗ್ರಾಮ ಎಂಬ ಹೆಗ್ಗಳಿಕೆ ಮಾರ್ಗೊಲ್ಲಿಗಿದೆ. ಪ್ರತಿವರ್ಷ ನಡೆಯುವ ಇಂಡಿಯನ್ ಕಾರ್ ರ‌್ಯಾಲಿಯಿಂದ ಗ್ರಾಮಕ್ಕೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದರೆ ಮಾರ್ಗೊಲ್ಲಿ ಮಾದರಿ ಗ್ರಾಮವಾಗಿ ಬೆಳೆಯುವ ಸಾಮರ್ಥ್ಯ ಹೊಂದಿದೆ
ಮಣಿ
ಗ್ರಾಮಸ್ಥ, ಕಾರ್ಮಿಕ ಮುಖಂಡ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net