ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಮ್ಯಾರಥಾನ್ ಕಾರ್ಯಕ್ರಮವನ್ನು ಡಾ.ಸನತ್ ಕುಮಾರ್, ವಿಸ್ಮಯಾ ಚಕ್ರವರ್ತಿ ಉದ್ಘಾಟಿಸಿದರು. ಡಾ.ಸುನಿಲ್, ಶಾಂತಿ, ಜ್ಯೋತಿ ಸೋಮಯ್ಯ ಇತರರಿದ್ದರು.
ಮಡಿಕೇರಿ: ಯುವಜನರಲ್ಲಿ ಎಚ್‌ಐವಿ/ಏಡ್ಸ್ ಕುರಿತು ಜಾಗೃತಿ ಮೂಡಿಸಲು ಮ್ಯಾರಥಾನ್‌ನಂತಹ ಕ್ರೀಡಾ ಚಟುವಟಿಕೆಗಳು ಪರಿಣಾಮಕಾರಿ ಮಾಧ್ಯಮವಾಗಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಸನತ್ ಕುಮಾರ್ ಹೇಳಿದರು.
ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ತೀವ್ರಗೊಳಿಸಿದ ಐಇಸಿ ಅಭಿಯಾನ ಹಾಗೂ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಶನಿವಾರ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಮ್ಯಾರಥಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮ್ಯಾರಥಾನ್ ಅಂತಹ ಕ್ರೀಡಾ ಚಟುವಟಿಕೆಗಳ ಮೂಲಕ ಯುವಜನರಲ್ಲಿ ಎಚ್‌ಐವಿ/ಏಡ್ಸ್ ಕುರಿತು ಜಾಗೃತಿ ಮೂಡಿಸುವುದು. ಎಚ್‌ಐವಿ ಸೋಂಕಿನ ಹರಡುವಿಕೆ ತಡೆಗಟ್ಟುವ ಕ್ರಮಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ಎಚ್‌ಐವಿ/ಏಡ್ಸ್ ಸಂಬಂಧಿತ ಲಭ್ಯವಿರುವ ಸೇವೆಗಳ ಕುರಿತು ಮಾಹಿತಿ ನೀಡುವುದು. ಈ ತೀವ್ರಗೊಳಿಸಿದ ಐಇಸಿ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ತರಬೇತುದಾರ ಆಂಟನಿ ಡಿಸೋಜಾ ಮಾತನಾಡಿ, ಯುವಜನರು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಂಡು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಹಾಕಿ ದಿಗ್ಗಜ ಮೇಜರ್ ಧ್ಯಾನ್‌ಚಂದ್ ಸಾಧನೆಯನ್ನು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ವಿಸ್ಮಯಾ ಚಕ್ರವರ್ತಿ, ತಾಲೂಕು ಆರೋಗ್ಯಾಧಿಕಾರಿ ಡಾ.ಸುನಿಲ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ರೆಡ್‌ಕ್ರಾಸ್‌ನ ಧನಂಜಯ, ಉತ್ತಯ್ಯ, ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಪಟು ಜ್ಯೋತಿ ಸೋಮಯ್ಯ ಮೊದಲಾದವರು ಇದ್ದರು.
ಮ್ಯಾರಥಾನ್ ವಿಜೇತರು: ಬಾಲಕರ ವಿಭಾಗ ಎಚ್.ಜಿ.ಪ್ರಸನ್ನ(ಪ್ರ), ದರ್ಶನ್(ದ್ವಿ), ಸುಮನ್ ಬೆಳ್ಳಿಯಪ್ಪ(ತೃ) ಸ್ಥಾನ ಪಡೆದರೆ, ಬಾಲಕಿಯರ ವಿಭಾಗದಲ್ಲಿ ಕೆ.ಎಸ್.ದೀಪಾ(ಪ್ರ), ಎ.ಆರ್.ರಶ್ಮಿತಾ(ದ್ವಿ), ಚಶಿಮಿತಾ(ತೃ) ಸ್ಥಾನ ಪಡೆದರು.