7 ವರ್ಷವಾದರೂ ಸಿಗದ ಮಂಜುಳಾ ಶವ

ಮಂಜುಳಾ ನಾಪತ್ತೆ ಆದ ಸ್ಥಳದಲ್ಲಿ ಅಂತ್ಯ ಸಂಸ್ಕಾರದ ವಿದಿ ವಿಧಾನ ನಡೆಸಿದ್ದ ಸಂದರ್ಭ
ಮಂಜುಳಾ ನಾಪತ್ತೆ ಆದ ಸ್ಥಳದಲ್ಲಿ ಅಂತ್ಯ ಸಂಸ್ಕಾರದ ವಿದಿ ವಿಧಾನ ನಡೆಸಿದ್ದ ಸಂದರ್ಭ
Published on

ಪ್ರಮುಖ ಮುಖ್ಯಾಂಶಗಳು

  • 2018ರ ಪ್ರಾಕೃತಿಕ ವಿಕೋಪದಲ್ಲಿ ದುರಂತ
  • ಕೊಚ್ಚಿಹೋದ ಮನೆ ಜತೆ ಮಂಜುಳಾ ನಾಪತ್ತೆ
  • ಜತೆಯಲ್ಲಿದ್ದವರ ಶವ ಸಿಕ್ಕಿದರೂ ಸಿಗದ ಮಂಜುಳಾ ಶವ
ಮಡಿಕೇರಿ:
ಪಶ್ಚಿಮಘಟ್ಟದ ಸೆರಗಿನಲ್ಲಿ ಇರುವ ಪುಟ್ಟ ಜಿಲ್ಲೆ ಕೊಡಗಿಗೆ ಮಳೆ ಮತ್ತು ಅದರಿಂದಾಗುವ ತೊಂದರೆಗಳು ಹೊಸದೇನಲ್ಲ. ಆದರೆ 2018ರಲ್ಲಿ ಸುರಿದ ವರ್ಷಧಾರೆ ಮತ್ತು ನಂತರದ ಪ್ರಾಕೃತಿಕ ವಿಕೋಪ ಹಲವರ ಬದುಕಿನಲ್ಲಿ ಮರೆಯಲಾರದ ದುಃಸ್ವಪ್ನವಾಗಿ ಇಂದಿಗೂ ಕಾಡುತ್ತಿದೆ. ಬೆಟ್ಟತ್ತೂರು ಗ್ರಾಮದ ಕೆ.ಎ. ಸೋಮಯ್ಯ ಇಂಥವರಲ್ಲಿ ಒಬ್ಬರು. ಅಂದು ಜೋಡುಪಾಲದಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಕೊಚ್ಚಿ ಹೋದವರ ಪೈಕಿ ಇವರ ಮಗಳು ಮಂಜುಳಾ ಕೂಡ ಸೇರಿದ್ದು ಆಕೆಯ ಮೃತದೇಹವೂ ಸಿಗದೇ ಅದೇ ಕೊರಗಿನಲ್ಲಿ ಇವರ ಕುಟುಂಬ ಜೀವನ ಸಾಗಿಸುತ್ತಿದೆ.
2018ರ ಬೇಸಿಗೆಯಲ್ಲಿ ಬಿರುಬಿಸಿಲಿಗೆ ಕಾದು, ನದಿಯೆಲ್ಲಾ ಒಣಗಿ ಬಹುತೇಕ ಬರಡುಭೂಮಿಯಂತಾಗಿದ್ದ ಕೊಡಗಿನಲ್ಲಿ ಆಗಸ್ಟ್ ಮೊದಲ ವಾರದ ತನಕವೂ ಮಳೆಗಾಲ ಶುರುವಾಗುವ ಲಕ್ಷಣಗಳೇ ಕಾಣುತ್ತಿರಲಿಲ್ಲ. ಆದರೆ ಆ.13ರ ನಂತರ ಏಕಾಏಕಿ ವಾತಾವರಣ ಬದಲಾಯಿತು. ಬಿಟ್ಟೂ ಬಿಡದೇ ಮಳೆಯೂ ಶುರುವಾಯಿತು. ಯಾವುದೋ ದುರಂತದ ನೆನಪನ್ನು ಉಳಿಸಿ ಹೋಗುವ ರೀತಿಯಲ್ಲೇ ಶುರುವಾದ ಮಳೆಯ ಅಬ್ಬರ ಆ. 14 ನಂತರ ಬಿರುಸು ಪಡೆಯಿತು. ವರ್ಷ ಪೂರ್ತಿ ಬರುವಷ್ಟು ಪ್ರಮಾಣದ ಮಳೆ 1-2 ದಿನಗಳಲ್ಲೇ ಸುರಿದು ದಾಖಲೆ ನಿರ್ಮಿಸಿತು. ಇದೆಲ್ಲದರ ಪರಿಣಾಮ ಎಂಬAತೆ ಸೋಮವಾರಪೇಟೆ ಮತ್ತು ಮಡಿಕೇರಿ ತಾಲೂಕಿನ ವಿವಿಧ ಭಾಗಗಳಲ್ಲಿ ಭೂಕುಸಿತದ ವರದಿಗಳು ಬರಲಾರಂಭಿಸಿದವು. ಆ.15, 16, 17 ಕೊಡಗಿನವರು ಮರೆಯಲಾರದ ಕಹಿಘಟನೆಗಳನ್ನು ಉಳಿಸಿ ಹೋದ ದಿನಗಳಾಗಿ ಅಚ್ಚಾಗಿಬಿಟ್ಟಿತ್ತು.
ಮಳೆಯ ರಭಸಕ್ಕೆ ಬೆಚ್ಚಿ ಮನೆಯೊಳಗಡೆಯೇ ಇದ್ದ ಜೋಡುಪಾಲದ ಬಸಪ್ಪ-ಗೌರಮ್ಮ ದಂಪತಿಗೆ ಏನಾಗುತ್ತಿದೆ ಎಂದು ಅರಿವಾಗುವುದರ ಮೊದಲೇ ಅ.17 ಬೆಳಗ್ಗೆ 8.40ರ ಸುಮಾರಿಗೆ ಈ ವ್ಯಾಪ್ತಿಯಲ್ಲಿ ಉಂಟಾದ ಗುಡ್ಡಕುಸಿತದಿಂದ ಪುತ್ರಿ ಕೆ.ಬಿ. ಮೋನಿಷಾ ಮತ್ತು ಗೌರಮ್ಮ ಸಹೋದರ ಕೆ.ಎ. ಸೋಮಯ್ಯ ಪುತ್ರಿ ಮಂಜುಳಾ ಸಹಿತ ಮನೆಯೊಂದಿಗೆ ಭಾರಿ ಪ್ರಮಾಣದ ಕೆಸರಿನೊಂದಿಗೆ ಕೊಚ್ಚಿಹೋಗಿದ್ದರು. ಕೂಡಲೇ ಶುರುವಾದ ಕಾರ್ಯಾಚರಣೆ ಸಂದರ್ಭ ಅದೇ ದಿನ ಬಸಪ್ಪ ಅವರ ಮೃತ ದೇಹ ಪತ್ತೆಯಾದರೆ, ಅ.18ಕ್ಕೆ ಮೋನಿಷಾ ಮೃತದೇಹ ಸಿಕ್ಕಿತ್ತು. ಗೌರಮ್ಮ ಮೃತ ದೇಹ ಆ.24ಕ್ಕೆ ಮನೆ ಇದ್ದ ಸ್ಥಳದಿಂದ 2 ಕಿಮೀ ದೂರದಲ್ಲಿ ಮಡಿಕೇರಿ-ಮಂಗಳೂರು ಹೆದ್ದಾರಿ ಬಳಿಯ ಪಯಶ್ವಿನಿ ನದಿಯಲ್ಲಿ ಕಂಡುಬAದಿತ್ತು. ಆದರೆ ಎಷ್ಟು ಹುಡುಕಿದರೂ ಮಂಜುಳಾ ಮೃತದೇಹ ಮಾತ್ರ ಸಿಗಲಿಲ್ಲ.
ಬೆಟ್ಟತ್ತೂರು ಗ್ರಾಮದ ಬಲೆಕಂಡಿ ಹಾಡಿ ಅಧ್ಯಕ್ಷ ಕೆ.ಎ. ಸೋಮಯ್ಯ ಪುತ್ರಿ ಮಂಜುಳಾ ಪ್ರತಿಭಾವಂತೆ. ಮದೆನಾಡು ಗ್ರಾಮದ ಮದೆ ಮಹದೇಶ್ವರ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಈಕೆ ಪ್ರತಿಭಾವಂತ ವಿದ್ಯಾರ್ಥಿನಿ. ಅತ್ಯುತ್ತಮ ಥ್ರೋಬಾಲ್ ಆಟಗಾರ್ತಿ ಆಗಿಯೂ ಶಾಲೆಯಲ್ಲಿ ಗುರುತಿಸಿಕೊಂಡಿದ್ದಳು. ದುರಂತಕ್ಕೂ ಹಿಂದಿನ ವರ್ಷ ಉಡುಪಿಯಲ್ಲಿ ನಡೆದಿದ್ದ ವಿಭಾಗಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಗಮನಾರ್ಹ ಸಾಧನೆಯನ್ನೂ ಮಾಡಿದ್ದಳು. ಇಂಥ ಪ್ರತಿಭಾವಂತೆಯ ಮನೆ ಶಾಲೆಯಿಂದ ಸುಮಾರು 15 ಕಿ.ಮೀ. ದೂರದ ದುರ್ಗಮ ಪ್ರದೇಶದಲ್ಲಿತ್ತು. ಇವರ ಗ್ರಾಮಕ್ಕೆ ಬರುತ್ತಿದ್ದದ್ದು ಒಂದೇ ಒಂದು ಕೆಎಸ್‌ಆರ್‌ಟಿಸಿ ಬಸ್. ಈ ಬಸ್‌ಗೆ ಹತ್ತಬೇಕಾದರೂ ಮನೆಯಿಂದ 1.5 ಕಿಮೀ ದೂರ ನಡೆಯಬೇಕಿತ್ತು. ಬಹುತೇಕ ಸಂದರ್ಭಗಳಲ್ಲಿ ಬಸ್ ಬರದಿದ್ದಾಗ 15 ಕಿಮೀ ನಡೆದಿದ್ದೂ ಇದೆ.
ಕಲಿಯುವ ಉತ್ಸಾಹ ಹೊಂದಿದ್ದ ಮಗಳು ಶಾಲೆಗೆ ತೆರಳಲು ಪಡುತ್ತಿದ್ದ ಕಷ್ಟ ನೋಡಿದ ಸೋಮಯ್ಯ ಜೋಡುಪಾಲದಲ್ಲಿರುವ ತಮ್ಮ ಅಕ್ಕ ಗೌರಮ್ಮ ಮನೆಯಿಂದ ಮಂಜುಳಾ ಶಾಲೆಗೆ ಓಡಾಡಿದರೆ ಸುಲಭವಾಗುತ್ತದೆ ಎನ್ನುವ ಕಾರಣಕ್ಕೆ ಗೌರಮ್ಮ ಮನೆಯಲ್ಲಿ ಬಿಟ್ಟಿದ್ದರು. ಈ ನಿರ್ಧಾರ ಮಗಳನ್ನೇ ತಮ್ಮಿಂದ ದೂರ ಮಾಡುತ್ತದೆ ಎನ್ನುವುದು ಸೋಮಯ್ಯ ಅವರಿಗೆ ಗೊತ್ತಿದ್ದರೆ ಎಷ್ಟು ಕಷ್ಟವಾದರೂ ತಮ್ಮ ಮನೆಯಿಂದಲೇ ಶಾಲೆಗೆ ಹೋಗಿ ಬರಲಿ ಎಂದು ಸುಮ್ಮನಿದ್ದುಬಿಡುತ್ತಿದ್ದರೋ ಏನೋ...ಆದರೆ 2018ರ ಪ್ರಾಕೃತಿಕ ದುರಂತಕ್ಕೆ ಮಂಜುಳಾ ಬಲಿಯಾಗಿದ್ದಳು. ಈಕೆಯ ಜತೆ ಕೊಚ್ಚಿಹೋಗಿದ್ದ ಮೂವರ ಮೃತ ದೇಹ ಸಿಕ್ಕಿದರೂ ಮಂಜುಳಾ ಮೃತದೇಹ ಮಾತ್ರ ಸಿಗಲೇ ಇಲ್ಲ.
ದುರ್ಘಟನೆ ನಡೆದು 7 ವರ್ಷ ಕಳೆದರೂ ಸೋಮಯ್ಯ ಕುಟುಂಬಕ್ಕೆ ಮಂಜುಳಾ ನೆನಪು ಆಗಾಗ್ಗೆ ಕಾಡುತ್ತಲೇ ಇರುತ್ತದೆ. ದುರಂತದಲ್ಲಿ ನಾಪತ್ತೆಯಾದ ಮಂಜುಳಾ ಮೃತದೇಹ ಸಿಗದಿರುವ ಕಾರಣಕ್ಕೆ ಸರ್ಕಾರಿ ದಾಖಲೆಗಳ ಪ್ರಕಾರ ಆಕೆ ಇನ್ನೂ ನಾಪತ್ತೆ ಆದವರ ಪಟ್ಟಿಯಲ್ಲೇ ಇದ್ದಾಳೆ. ಹಾಗಾಗಿ ಇನ್ನೂ ಕೂಡ ಮರಣ ಪ್ರಮಾಣ ಪತ್ರ ಮಂಜುಳಾ ಕುಟುಂಬಕ್ಕೆ ಸಿಕ್ಕಿಲ್ಲ. ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ಹೊರತುಪಡಿಸಿದರೆ ಪ್ರಾಕೃತಿಕ ವಿಕೋಪದಲ್ಲಿ ಮೃತಪಟ್ಟರೆ ಕುಟುಂಬಕ್ಕೆ ಸಿಗಬೇಕಾದ ಯಾವ ಸೌಲಭ್ಯವೂ ಮರಣ ಪ್ರಮಾಣ ಪತ್ರ ಇಲ್ಲ ಎನ್ನುವ ಕಾರಣಕ್ಕೆ ಇವರಿಗೆ ಇನ್ನೂ ಬಂದಿಲ್ಲ.
ತಾನು ಓದಿ ವಿದ್ಯಾವಂತೆಯಾಗಿ ಪೋಷಕರನ್ನು ಉತ್ತಮವಾಗಿ ಸಲಹುವುದಾಗಿ ಮಂಜುಳಾ ಆಗಾಗ್ಗೆ ಹೇಳುತ್ತಿದ್ದಳು. ಅವಳಿದ್ದಿದ್ದರೆ ಈಗ ಅವಳ ವಿದ್ಯಾಭ್ಯಾಸ ಮುಗಿದು ಖಂಡಿತ ಕುಟುಂಬಕ್ಕೆ ಆಸರೆ ಆಗುತ್ತಿದ್ದಳು. ಆದರೆ ವಿಧಿಯಾಟ ಎಲ್ಲಾ ಹಾಳುಮಾಡಿಬಿಟ್ಟಿತು ಎಂದು ಕಣ್ಣೀರಾಗುತ್ತಾರೆ ಕೆ.ಎ. ಸೋಮಯ್ಯ. ಈಗಲಾದರೂ ಮರಣಪ್ರಮಾಣ ಪತ್ರ ಒದಗಿಸಿ ಕಾನೂನು ಪ್ರಕಾರ ಬರಬೇಕಾದ ಸವಲತ್ತುಗಳನ್ನು ಸರ್ಕಾರ ಕೊಡಲಿ ಎನ್ನುವುದು ಅವರ ಮನವಿ
ಮಂಜುಳಾ ಮೃತ ದೇಹ ಸಿಗದ ಕಾರಣ ಆಕೆಯ ಕುಟುಂಬಸ್ಥರು 2018ರ ಅಕ್ಟೋಬರ್‌ನಲ್ಲಿ ಮಂಜುಳಾಳ ಪ್ರತಿರೂಪ ತಯಾರಿಸಿ ಅದಕ್ಕೆ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಮೋಕ್ಷ ದೊರಕಿಸುವ ಪ್ರಯತ್ನ ಮಾಡಿದ್ದರು. ಮಗಳ ಪ್ರತಿರೂಪವನ್ನು ಭತ್ತದ ಹುಲ್ಲು, ಅಡಿಕೆ ಹಾಳೆ ಬಳಸಿ ಮಂಜುಳಾ ತಂದೆ ಸೋಮಯ್ಯ ಖುದ್ದು ತಯಾರಿಸಿ, ಹೆಣ್ಣಿನ ರೂಪ ಕೊಟ್ಟು ಅದಕ್ಕೆ ರೇಷ್ಮೆ ಸೀರೆ ತೊಡಿಸಿ, ಅಲಂಕಾರ ಮಾಡಿ ಆಕೆಯ ಇಷ್ಟದ ವ್ಯಾನಿಟಿ ಬ್ಯಾಗ್ ಮತ್ತು ಆಕೆ ಥ್ರೋಬಾಲ್ ಕ್ರೀಡೆಯಲ್ಲಿ ಗೆದ್ದ ಪದಕ ತೊಡಿಸಿ ಪ್ರತಿರೂಪವನ್ನು ಮದುಮಗಳಂತೆ ಸಿಂಗರಿಸಿದ್ದರು. ನಂತರ ಕುಡಿಯ ಜನಾಂಗದ ಸಂಪ್ರದಾಯದAತೆ ಮದುವೆ ಶಾಸ್ತ್ರವನ್ನೂ ಮಾಡಿದ್ದರು. ಇದಾದ ಮಂಜುಳಾ ನಾಪತ್ತೆಯಾದ ಸ್ಥಳದಲ್ಲೇ ಅಂತ್ಯ ಸಂಸ್ಕಾರದ ವಿದಿ ವಿಧಾನಗಳನ್ನು ನೆರವೇರಿಸಿ ಹುಟ್ಟೂರು ಬೆಟ್ಟತ್ತೂರುವಿಗೆ ಕೊಂಡೊಯ್ದು ಕುಟುಂಬಕ್ಕೆ ಸೇರಿದ ಸ್ಮಶಾನದಲ್ಲಿ ಮಣ್ಣು ಮಾಡಲಾಗಿತ್ತು.
"

ನನ್ನ ಮಗಳು ಮಂಜುಳಾ 2018ರ ಆ.17ರಂದು ಜೋಡುಪಾಲದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಕೆಸರಿನೊಂದಿಗೆ ಕೊಚ್ಚಿಹೋಗಿದ್ದಳು. ಈಕೆಯೊಂದಿಗೆ ದುರಂತಕ್ಕೆ ಸಿಲುಕಿದ ಇತರ ಮೂವರ ಮೃತ ದೇಹ ಸಿಕ್ಕಿದರೂ ಮಂಜುಳಾ ಮೃತದೇಹ ಸಿಕ್ಕಿರಲಿಲ್ಲ. ಹಾಗಾಗಿ ಈಕೆ ಇನ್ನೂ ನಾಪತ್ತೆ ಎಂದು ಪರಿಗಣಿಸಿರುವುದರಿಂದ ನಮಗೆ ಮರಣ ಪ್ರಮಾಣ ಪತ್ರವೂ ದೊರೆಯುತ್ತಿಲ್ಲ. ಇದರಿಂದಾಗಿ ಪ್ರಾಕೃತಿಕ ವಿಕೋಪ ಸಂದರ್ಭ ಸರ್ಕಾರದಿಂದ ಸಿಗುವ ಪರಿಹಾರಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾವು ಅರಣ್ಯದೊಳಗೆ ಅರಣ್ಯ ಹಕ್ಕುಪತ್ರ ಪಡೆದುಕೊಂಡು ಬದುಕುತ್ತಿದ್ದು, ಸರ್ಕಾರದ ಇತರ ಸೌಲಭ್ಯಗಳಿಂದಲೂ ವಂಚಿತರಾಗಿದ್ದೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net