ಸೋಮವಾರಪೇಟೆ:ಕೃಷಿ ಇಲಾಖೆಯಿಂದ ರೈತರಿಗೆ ಬೋರ್‌ವೆಲ್ ಕೊರೆಸಲು 25 ಸಾವಿರ ರೂ. ಸಹಾಯಧನ ನೀಡುವ ಯೋಜನೆಯ ಫಲಾನುಭವಿಗಳಿಗೆ ಶಾಸಕ ಡಾ. ಮಂತರ್ ಗೌಡ ಕಾರ್ಯಾದೇಶ ಪತ್ರವನ್ನು ಮಂಗಳವಾರ ವಿತರಿಸಿದರು.
ಶಾಸಕರ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 31 ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ವಿತರಿಸಲಾಯಿತು. ಬಳಿಕ ಮಾತನಾಡಿ, ಕೃಷಿ ಕಾರ್ಯಗಳಿಗೆ ನೀರಾವರಿ ಅಗತ್ಯವಾಗಿದ್ದು, ಇದಕ್ಕಾಗಿ ಬೋರ್‌ವೆಲ್ ಕೊರೆಸಲು ಇಲಾಖೆಯಿಂದ ಸಹಾಯಧನ ನೀಡಲಾಗುತ್ತಿದೆ. ಕೃಷಿಕರು ಸರ್ಕಾರದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೃಷಿ ಸಿಂಚಯ ಯೋಜನೆಯ ಇತರ ಕಾರ್ಯಕ್ರಮದಡಿ ಫಲಾನುಭವಿಗಳಿಗೆ 25 ಸಾವಿರ ರೂ.ಸಹಾಯಧನ ಒದಗಿಸಲಾಗುತ್ತಿದೆ. ಕೇಂದ್ರ ಸರ್ಕಾರ ಶೇ. 60 ಹಾಗೂ ರಾಜ್ಯ ಸರ್ಕಾರ ಶೇ.40ರ ಅನುಪಾತದಲ್ಲಿ ಯೋಜನೆಯನ್ನು ಕೃಷಿ ಇಲಾಖೆ ಮೂಲಕ ಅನುಷ್ಠಾನಗೊಳಿಸುತ್ತಿದೆ ಎಂದು ತಿಳಿಸಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೀರಣ್ಣ, ಕೃಷಿ ಅಧಿಕಾರಿ ಕವಿತಾ, ಪ್ರಮುಖರಾದ ಬಿ.ಬಿ. ಸತೀಶ್, ವಿ.ಎ. ಲಾರೆನ್ಸ್, ಡಿ.ಯು. ಕಿರಣ್, ವಿನಿ, ಮಂಜುನಾಥ್ ಇತರರು ಇದ್ದರು.