ಸೌಕರ್ಯವಿಲ್ಲದೆ ಮಲ್ಲಳ್ಳಿ ಗ್ರಾಮ ಅನಾಥ

ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಗ್ರಾಮದ ರಸ್ತೆಯ ದುಸ್ಥಿತಿ.
ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಗ್ರಾಮದ ರಸ್ತೆಯ ದುಸ್ಥಿತಿ.
Published on

ಪ್ರಮುಖ ಮುಖ್ಯಾಂಶಗಳು

  • ಡಾಂಬರು ರಸ್ತೆಯಿಲ್ಲದ ಕುಗ್ರಾಮ
  • ಊರು ತೊರೆಯುತ್ತಿವೆ ಕುಟುಂಬಗಳು
ಸೋಮವಾರಪೇಟೆ: ಕೊಡಗು ಜಿಲ್ಲೆಯ ಮಟ್ಟಿಗೆ ಅತಿ ಹೆಚ್ಚಿನ ಪ್ರವಾಸಿಗರನ್ನು ನೈಸರ್ಗಿಕ ಮಲ್ಲಳ್ಳಿ ಜಲಪಾತ ಆಕರ್ಷಿಸುತ್ತದೆ. ಆದರೆ ಮಲ್ಲಳ್ಳಿ ಎಂಬ ಕುಗ್ರಾಮ ಇವತ್ತಿಗೂ ಮೂಲ ಸೌಕರ್ಯಗಳಿಂದ ವಂಚಿತವಾಗಿರುವುದು ದುರಂತ.
ಮಲ್ಲಳ್ಳಿ ಜಲಪಾತದವರೆಗೆ ಮಾತ್ರ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಆದರೆ ಕೃಷಿಕರು ವಾಸಿಸುತ್ತಿರುವ ಗ್ರಾಮಕ್ಕೆ ರಸ್ತೆಯಾಗಿಲ್ಲ. ಮಲ್ಲಳ್ಳಿ ಗ್ರಾಮ ಕಾಫಿ, ಕಾಳುಮೆಣಸು, ಅಡಕೆ, ಭತ್ತ ಬೆಳೆಯಲು ಸೂಕ್ತವಾಗಿದೆ. ಅತಿವೃಷ್ಟಿ ಸಂಭವಿಸದಿದ್ದರೆ ಉತ್ತಮ ಫಸಲು ಸಿಗುತ್ತದೆ. ಆದರೆ ಮೂಲ ಸೌಕರ್ಯವಿಲ್ಲದೆ, ಕೃಷಿ ಮಾಡಲಾಗದೆ ಬಹುತೇಕ ಕುಟುಂಬಗಳು ಪಟ್ಟಣಕ್ಕೆ ತೆರಳಿದ್ದಾರೆ. ಅದರಲ್ಲೂ ಯುವಕ, ಯುವತಿಯರು ಮೈಸೂರು, ಬೆಂಗಳೂರಿನತ್ತ ಉದ್ಯೋಗ ಅರಸಿ ಹೋಗಿದ್ದಾರೆ.
ಮಲ್ಲಳ್ಳಿ ಗ್ರಾಮದಲ್ಲಿ 20 ಕುಟುಂಬಗಳು ವಾಸಿಸುತ್ತಿದ್ದವು. ಇತ್ತೀಚಿನ ವರ್ಷಗಳಲ್ಲಿ 12 ಕುಟುಂಬಗಳು ಮನೆ ತೊರೆದು ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಎರಡು ದಶಕಗಳ ಹಿಂದೆ ಒಂದೂವರೆ ಕಿ.ಮೀ. ರಸ್ತೆಯನ್ನು ಡಾಂಬರೀಕರಣಗೊಳಿಸಿದ್ದರೆ, ಇವತ್ತಿಗೆ ಮಲ್ಲಳ್ಳಿ ಗ್ರಾಮ ಮುಂದುವರಿದ ಕೃಷಿ ಗ್ರಾಮವಾಗಿರುತ್ತಿತ್ತು. ಆದರೆ ಆಡಳಿತ ವ್ಯವಸ್ಥೆಯ ಇಚ್ಛಾಶಕ್ತಿಯ ಕೊರತೆಯಿಂದ ಇವತ್ತಿಗೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ.
ಮಲ್ಲಳ್ಳಿ ಜಲಪಾತಕ್ಕೆ ಮಂತ್ರಿಗಳು, ಹಿರಿಯ ಅಧಿಕಾರಿಗಳು ಹತ್ತಾರು ಬಾರಿ ಭೇಟಿ ನೀಡಿದ್ದಾರೆ. ಆದರೆ ರಸ್ತೆಯಿಲ್ಲ ಎಂಬ ಕಾರಣಕ್ಕೆ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಮಲ್ಲಳ್ಳಿ ಗ್ರಾಮಕ್ಕೆ ಭೇಟಿ ನೀಡಿಲ್ಲ. ಜನರ ಸಮಸ್ಯೆ ಆಲಿಸಿಲ್ಲ. ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಐದು ವರ್ಷಗಳ ಹಿಂದೆ ಅಂದಿನ ಜಿಲ್ಲಾಧಿಕಾರಿ ಅನೀಸ್ ಕಣ್ಮಿನಿ ಜಾಯ್ ಮಲ್ಲಳ್ಳಿ ಜಲಪಾತಕ್ಕೆ ಬಂದಿದ್ದಾಗ, ಗ್ರಾಮಸ್ಥರು ರಸ್ತೆ ಬೇಡಿಕೆಯನ್ನು ಮುಂದಿಟ್ಟಿದರು. ಮಾರನೇ ದಿನವೇ ಇಂಜಿನಿಯರ್ ಗ್ರಾಮಕ್ಕೆ ಕಳುಹಿಸಿ, ಅಂದಾಜು ಪಟ್ಟಿ ತಯಾರಿಸಿ, ರಸ್ತೆಗೆ ಅನುದಾನ ನೀಡುವ ಭರವಸೆ ನೀಡಿದ್ದರು. ನಂತರ ಜಿಲ್ಲಾಧಿಕಾರಿ ವರ್ಗಾವಣೆ ಆಯಿತು. ಮಲ್ಲಳ್ಳಿ ಗ್ರಾಮ ಮತ್ತೊಮ್ಮೆ ಅನಾಥವಾಯಿತು ಎಂದು ಅಲ್ಲಿನ ನಿವಾಸಿಗಳು ಹೇಳಿದರು.
ಪ್ರವಾಸೋದ್ಯಮ ಇಲಾಖೆಯ ಮೂಲಕ ಮಲ್ಲಳ್ಳಿ ಜಲಪಾತ ಜಲಪಾತ ಅಭಿವೃದ್ಧಿಗೆ ರಾಜ್ಯ ಸರ್ಕಾರ 4 ಕೋಟಿ ರೂ.ಅನುದಾನವನ್ನು ಬಿಡುಗಡೆಗೊಳಿಸಿ, ಒಂದು ಕಿ.ಮೀ.ನಷ್ಟು ರಸ್ತೆಯನ್ನು ಕಾಂಕ್ರೀಟ್ ಹಾಕಿಸಿದೆ. ಆದರೆ ಮಲ್ಲಳ್ಳಿ ಗ್ರಾಮಕ್ಕೆ ತೆರಳುವ ಒಂದು ಕಿ.ಮೀ.ರಸ್ತೆಗೆ ಇದುವರೆಗೆ ನಯಾಪೈಸೆ ಅನುದಾನ ನೀಡಿಲ್ಲ. ಇವತ್ತಿಗೂ 700 ಮೀಟರ್ ರಸ್ತೆಗೆ ಕಾಂಕ್ರೀಟ್ ಹಾಕಿಸಿದರೆ ಗ್ರಾಮಕ್ಕೆ ವಾಹನಗಳು ಹೋಗಬಹುದು. ರಸ್ತೆಯಾದರೆ ತನ್ನಷ್ಟಕ್ಕೆ ಮೂಲ ಸೌಕರ್ಯಗಳು ದೊರೆಯುತ್ತವೆ. ಗ್ರಾಮದ ಹೊರಗೆಯಿರುವ ಕೃಷಿಕರು ಗ್ರಾಮಕ್ಕೆ ವಾಪಸ್ಸಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಾರೆ ಎಂಬುದು ನಿವಾಸಿಗಳ ಅನಿಸಿಕೆಯಾಗಿದೆ.
ಮಲ್ಲಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಸರಾಸರಿ 200 ರಿಂದ 400 ಇಂಚು ವಾರ್ಷಿಕ ಮಳೆ ಬೀಳುತ್ತದೆ. ಅಕಾಲಿಕ ಮಳೆ, ಕಾಡಾನೆ, ಕಾಡುಕೋಣ ಸೇರಿದಂತೆ ಇತರ ಕಾಡುಪ್ರಾಣಿಗಳ ಕಾಟವಿದ್ದರೂ, ಕೃಷಿಯೂ ಕೈಹಿಡಿಯುತ್ತದೆ. ಸ್ವಾತಂತ್ರ್ಯ ಸಿಕ್ಕಿ 77 ವರ್ಷ ಕಳೆದರೂ ಗ್ರಾಮಕ್ಕೆ ರಸ್ತೆಯಿಲ್ಲ ಎಂಬುದೇ ದುರಂತ. ಸರ್ಕಾರಕ್ಕೆ ಇದೊಂದು ಕಪ್ಪುಚುಕ್ಕೆ ಎನ್ನುತ್ತಾರೆ ಗ್ರಾಮದ ನಿವಾಸಿ ಸತೀಶ್.
ವಧು ಸಿಗುತ್ತಿಲ್ಲ:
ಮಲ್ಲಳ್ಳಿಗೆ ರಸ್ತೆಯಾಗಿಲ್ಲ, ಅಭಿವೃದ್ಧಿಯಾಗಿಲ್ಲ ಎಂಬ ಕಾರಣಕ್ಕೆ ಈ ಗ್ರಾಮದ ಯುವಕರಿಗೆ ಹೆಣ್ಣು ಕೊಡಲು ಹಿಂದೇಟು ಹಾಕುತ್ತಾರೆ. ಯುವತಿಯರನ್ನು ಮದುವೆ ಮಾಡಲು ಕಷ್ಟವಾಗುತ್ತಿದೆ ಎಂದು ಹಿರಿಯರು ನೊಂದು ಹೇಳುತ್ತಾರೆ. ಈ ಕಾರಣದಿಂದ ಯುವಕ-ಯುವತಿಯರು ಗ್ರಾಮ ತೊರೆದು ನಗರ ಪ್ರದೇಶಗಳಲ್ಲಿ ಸಣ್ಣಪುಟ್ಟ ನೌಕರಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಈಗ ಯುವತಿ, ಯುವಕರಿಲ್ಲದ ಗ್ರಾಮವೆಂದೇ ಕರೆಸಿಕೊಂಡಿದೆ.
ಕಂದಾಯ ಇಲಾಖೆಯ ನಿರ್ಲಕ್ಷ್ಯ ಹಾಗೂ ಕೆಲ ತಾಂತ್ರಿಕ ಕಾರಣಗಳಿಂದ ಇಲ್ಲಿನ ಹೆಚ್ಚಿನ ಕುಟುಂಬಗಳಿಗೆ ಆಸ್ತಿ ದಾಖಲಾತಿ ಸಿಕ್ಕಿಲ್ಲ. ಮಳೆಯಿಂದ ಹಾನಿಯಾದರೆ ಪರಿಹಾರ ಪಡೆಯಲು ಸಾಧ್ಯವಾಗುತ್ತಿಲ್ಲ. ಅರ್ಜಿ ಕೊಟ್ಟರು ಕಂದಾಯ ಇಲಾಖೆಯಿಂದ ಹಾಗೂ ಫಸಲು ಹಾನಿಯಾದರೂ ಪರಿಹಾರ ಸಿಗುತ್ತಿಲ್ಲ. ಪ್ರಕೃತಿ ವಿಕೋಪ, ಅತಿವೃಷ್ಟಿಯಿಂದ ಆಸ್ತಿಪಾಸ್ತಿ, ಫಸಲು ಕಳೆದುಕೊಂಡವರಿಗೆ ಪರಿಹಾರ ಸಿಗುತ್ತಿಲ್ಲ.
ಮಲ್ಲಳ್ಳಿ ಗ್ರಾಮಕ್ಕೆ ರಸ್ತೆ ಮಾಡಿಕೊಟ್ಟರೆ, ಕೆಲ ಸಮಸ್ಯೆಗಳು ಬಗೆಹರಿಯುತ್ತದೆ. ಈಗ ಮಕ್ಕಳನ್ನು ನೆಂಟರಿಷ್ಟರ ಮನೆಯಲ್ಲಿ ಬಿಟ್ಟು ವಿದ್ಯಾಭ್ಯಾಸ ಕೊಡಿಸಬೇಕಾಗಿದೆ. ಮಳೆಗಾಲದ ನಾಲ್ಕು ತಿಂಗಳು ವಿದ್ಯುತ್ ಇರಲ್ಲ. ನಮ್ಮ ನೋವನ್ನು ಯಾರು ಕೇಳುತ್ತಿಲ್ಲ. ಬೈಕ್ ಮತ್ತು ಕಾರುಗಳು ಗ್ರಾಮಕ್ಕೆ ಬರುವುದಿಲ್ಲ. ಮಳೆಗಾಲದಲ್ಲಿ ವಾಹನ ಸಂಚಾರವಿರುವುದಿಲ್ಲ ಎಂದು ಗ್ರಾಮ ನಿವಾಸಿ ಗಣೇಶ್ ಹೇಳಿದರು.
ಮಲ್ಲಳ್ಳಿ ಜಲಪಾತ ಸ್ಥಳದಿಂದ ಒಂದು ಕಿ.ಮೀ. ರಸ್ತೆಯನ್ನು ಕಾಂಕ್ರೀಟೀಕರಣಗೊಳಿಸಬೇಕು. ಈಗ ಪರಿಸರ ಸೂಕ್ಷ್ಮ ವಲಯ, ಸಿ ಮತ್ತು ಡಿ ಭೂಮಿ ನೆಪದಲ್ಲಿ ಕೃಷಿಕರಿಗೆ ಅನ್ಯಾಯ ಮಾಡಬಾರದು. ಆಸ್ತಿಯ ಹಕ್ಕುಪತ್ರ ನೀಡದಿದ್ದರೆ, ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತೇವೆ. ಕಂದಾಯ ಇಲಾಖೆ ನಿಯಮಗಳನ್ನು ಸರಳೀಕರಣಗೊಳಿಸಿ ಆಸ್ತಿಯ ಹಕ್ಕುಪತ್ರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಗ್ರಾಮದ ಧಾರ್ಮಿಕ ಹಿನ್ನೆಲೆ
ಮಲ್ಲಳ್ಳಿ ಗ್ರಾಮಸ್ಥರಿಗೂ ಪ್ರಕೃತಿಗೂ ಅವಿನಾಭಾವ ಸಂಬಂಧವಿದೆ. ಮರದ ಬುಡದಲ್ಲಿ ಕಲ್ಲುಗಳನ್ನಿಟ್ಟು ಚೌಡಿ ಹೆಸರಿನಲ್ಲಿ ಪೂಜೆ ಸಲ್ಲಿಸುತ್ತಾರೆ. ಕುಮಾರಳ್ಳಿ ಗ್ರಾಮದಲ್ಲಿ ವಾರ್ಷಿಕವಾಗಿ ಆಚರಿಸುವ ಶ್ರೀ ಸಬ್ಬಮ್ಮ ದೇವಿ ಸುಗ್ಗಿಯನ್ನು ಬಹಳ ಕಟ್ಟುನಿಟ್ಟಾಗಿ ಆಚರಿಸುತ್ತಾರೆ. 15ದಿನಗಳ ಕಾಲ ಕಟ್ಟುನಿಟ್ಟಿನ ಪೂಜಾ ಕಾರ್ಯಗಳೊಂದಿಗೆ ಸುಗ್ಗಿ ಆಚರಿಸುತ್ತಾರೆ. ಈ ದಿನಗಳಲ್ಲಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದಂತೆ ಎಚ್ಚರ ವಹಿಸುತ್ತಾರೆ. ‘ಸುಗ್ಗಿ ಸಾರು‘ ಪ್ರಾರಂಭವಾದಂತೆ ರೈತರು ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ. ಹಸಿ ಕಡಿಯಬಾರದು ಒಣಗು ಮುರಿಯಬಾರದು ಎಂಬ ಕಟ್ಟುಪಾಡು ಇರುತ್ತದೆ. ಮನೆಯಲ್ಲಿ ಹೆಂಚಿನಲ್ಲಿ ರೊಟ್ಟಿ ಸುಡುವಂತಿಲ್ಲ. ಸೂರ್ಯ ಉದಯಿಸಿ, ಸಂಜೆ ನಕ್ಷತ್ರಗಳು ಕಾಣುವ ತನಕ ಈ ನಿಯಮ ಚಾಲ್ತಿಯಲ್ಲಿರುತ್ತದೆ. ಊರಿನ ಹೊರಗೆ ಯಾವುದೇ ವಸ್ತುಗಳು ಸೇರಿದಂತೆ ದಿನಸಿಯನ್ನು ಖರೀದಿಸುವಂತಿಲ್ಲ. ಮನೆಯವರು ಬೇರೆಯವರನ್ನು ಮುಟ್ಟುವಂತಿಲ್ಲ. ಅತಿಥಿಗಳು ಮನೆಗೆ ಬಂದರೆ, ಮನೆ ಪ್ರವೇಶ ನಿಷಿದ್ಧ, ನಕ್ಷತ್ರ ಕಂಡ ನಂತರ ಮಾಮೂಲಿ ಆತಿಥ್ಯ. ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ಗ್ರಾಮದ ನಿವಾಸಿಗಳ ಮನೆದೇವರಾಗಿರುತ್ತದೆ. ಮಕರ ಸಂಕ್ರಾಂತಿಯಂದು ಶ್ರೀ ಕುಮಾರಲಿಂಗೇಶ್ವರ ಜಾತ್ರೋತ್ಸವದಲ್ಲಿ ಗ್ರಾಮಸ್ಥರು ಭಾಗವಹಿಸಿ, ಮಹಾರಥೋತ್ಸವದಲ್ಲಿ ಭಾಗಿಯಾಗುತ್ತಾರೆ.

ಕೃಷಿ ಮಾಡಲು ಮಣ್ಣಿನ ಫಲವತ್ತತೆ ಇದೆ. ಕಾಫಿ. ಕಾಳುಮೆಣಸು ಬೆಳೆಯಬಹುದು. ಆದರೆ ಕಾಫಿ ಮಂಡಳಿ, ತೋಟಗಾರಿಕೆ ,ಕೃಷಿ ಇಲಾಖೆಯಿಂದ ಸೌಲಭ್ಯಗಳು ಸಿಗುತ್ತಿಲ್ಲ. ಆಸ್ತಿ ದಾಖಲೆಗಳನ್ನು ಕೇಳುತ್ತಾರೆ. ಎಲ್ಲ ಇಲಾಖೆಗಳು ಮಲ್ಲಳ್ಳಿ ಗ್ರಾಮವನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸಬೇಕು.

ಕುಟುಂಬ ನಿರ್ವಹಣೆಗೆ ಭತ್ತ ಬೆಳೆಯಬೇಕು. ಅಕಾಲಿಕ ಮಳೆಯಿಂದ ಭತ್ತ ಬೆಳೆಯುವುದು ಕಷ್ಟವಾಗುತ್ತಿದೆ. ಯಂತ್ರೋಪರಣಗಳಿಂದ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಭತ್ತ ಬೆಳೆಯುವುದಕ್ಕೆ ಎಕರೆಗೆ 20 ಸಾವಿರ ಸಹಾಯಧನ ನೀಡಬೇಕು. ನಿರ್ಲಕ್ಷ್ಯ ಮಾಡಿದರೆ, ಭತ್ತದ ಗದ್ದೆಗಳನ್ನು ಪಾಳು ಬಿಡಬೇಕಾದ ಅನಿವಾರ್ಯತೆ ಒದಗಲಿದೆ. 5 ಲಕ್ಷ, 2ಲಕ್ಷ ರೂ.ಗಳ ಅನುದಾನದಿಂದ ಏನೂ ಪ್ರಯೋಜನವಿಲ್ಲ. ಒಂದೂವರೆ ಕೋಟಿ ಅನುದಾನವನ್ನು ಸರ್ಕಾರ ಕೊಡಲಿ.— ರಂಜನ್ ಕುಮಾರ್ ಕೃಷಿಕ, ಮಲ್ಲಳ್ಳಿ ನಿವಾಸಿ

ಸುಮಾರು 200 ವರ್ಷಗಳಿಂದ ಮಲ್ಲಳ್ಳಿ ಗ್ರಾಮದಲ್ಲಿ ಕೃಷಿಕರು ನೆಲೆಸಿದ್ದರು ಎಂದು ಹಿರಿಯರು ಹೇಳುತ್ತಾರೆ. ಮೂರು ದಶಕಗಳ ಹಿಂದೆಯೇ ಮಲ್ಲಳ್ಳಿ ಗ್ರಾಮಕ್ಕೆ ರಸ್ತೆಯಾಗಿದ್ದರೆ, ಯಾರು ಗ್ರಾಮ ತೊರೆಯುತ್ತಿರಲಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಊರನ್ನೇ ತೊರೆದಿದ್ದಾರೆ. ಸರ್ಕಾರದ ನಿರ್ಲಕ್ಷ್ಯದಿಂದ ಇಂತಹ ಸಂಕಷ್ಟಕ್ಕೆ ಸಿಲುಕಿದ್ದೇವೆ. ಮಲ್ಲಳ್ಳಿ ವೀಕ್ಷಣ ಸ್ಥಳದಿಂದ 150 ಮೀಟರ್ ಕಾಂಕ್ರೀಟ್ ರಸ್ತೆಯಾಗಿದೆ. ಉಳಿದ 700ಮೀಟರ್ ನಷ್ಟು ಕಾಂಕ್ರೀಟ್ ರಸ್ತೆಯಾದರೆ ಮಲ್ಲಳ್ಳಿ ಗ್ರಾಮಕ್ಕೆ ವಾಹನಗಳು ಹೋಗುತ್ತವೆ.

ಮಲ್ಲಳ್ಳಿ ಗ್ರಾಮಸ್ಥರು ರಸ್ತೆ ಬಗ್ಗೆ ಚರ್ಚಿಸಿದ್ದಾರೆ. ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ತೆರಳಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸುತ್ತೇನೆ. ರಸ್ತೆ ಮಾಡಿ ಕೊಡುವುದು ನನ್ನ ಜವಾಬ್ದಾರಿ. ಖಾಸಗಿ ಕಂಪನಿಯವರು ಮಲ್ಲಳ್ಳಿಯಲ್ಲಿ ಕೇಬಲ್ ಕಾರ್ ಯೋಜನೆಗೆ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿದ್ದಾರೆ. ಯೋಜನೆ ಕಾರ್ಯಗತಗೊಂಡರೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಗ್ರಾಮಸ್ಥರು ಸ್ವಯಂ ಉದ್ಯೋಗದೊಂದಿಗೆ ಆರ್ಥಿಕ ಪ್ರಗತಿ ಕಾಣಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net