ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರ ಗುಣಮಟ್ಟ ಕಾಪಾಡಿ

ಇಂದಿರಾ ಕ್ಯಾಂಟೀನ್‌
ಇಂದಿರಾ ಕ್ಯಾಂಟೀನ್‌
Published on
ಸೋಮವಾರಪೇಟೆ: ಇಂದಿರಾ ಗಾಂಧಿ ಅಭಿಮಾನಿಗಳ ಸಂಘದ ಹಲವು ವರ್ಷಗಳ ಹೋರಾಟದಿಂದ ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನ್ ಪ್ರಾರಂಭವಾಗಿ ಒಂದು ವರ್ಷಗಳನ್ನು ಪೂರೈಸಿದ್ದು, ಮುಂದಿನ ದಿನಗಳಲ್ಲಿ ಗುಣಮಟ್ಟದ ಆಹಾರವನ್ನು ಜನರು ಆಪೇಕ್ಷೆ ಪಡುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಎಚ್.ಎ.ನಾಗರಾಜ್ ಹೇಳಿದರು.
ಇತ್ತೀಚಿನ ದಿನಗಳಲ್ಲಿ ಆಹಾರದ ಗುಣಮಟ್ಟ ಕುಸಿದಿದೆ. ರುಚಿಕರವಾದ ಆಹಾರವನ್ನು ನೀಡುತ್ತಿಲ್ಲ. ಇದರಿಂದ ನಿರಾಶೆಯಾಗಿದೆ. ಒಂದು ಊಟಕ್ಕೆ ರಾಜ್ಯ ಸರ್ಕಾರ 65 ರೂ.ಗಳನ್ನು ನೀಡುತ್ತಿದೆ ಎಂದು ಹೇಳಲಾಗಿದೆ. ಸರ್ಕಾರ ನೀಡುವ ಹಣಕ್ಕೆ ಸೂಕ್ತವಾದ ಆಹಾರವನ್ನು ಕಡ್ಡಾಯವಾಗಿ ನೀಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶಾಸಕರಾದ ಡಾ.ಮಂತರ್‌ಗೌಡ ಸೇರಿದಂತೆ ಆನೇಕರ ಸಹಕಾರದಿಂದ ಇಂದಿರಾ ಕ್ಯಾಂಟಿನ್ ಪ್ರಾರಂಭವಾಗಿದೆ. ಪಂಚಾಯಿತಿ ಅಧಿಕಾರಿಗಳು ಪ್ರತಿದಿನ ಆಹಾರದ ಗುಣಮಟ್ಟವನ್ನು ಪರಿಶೀಲಿಸಬೇಕು. ಈ ಬಗ್ಗೆ ಶಾಸಕರು ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಮಾದಾಪುರ ಸಮೀಪದ ಕುಂಬೂರು ಪೈಸಾರಿಯಲ್ಲಿ ನಿವೇಶನ ರಹಿತ ಕಾರ್ಮಿಕರು ಮನೆಯ ನಿವೇಶನಕ್ಕಾಗಿ ಕಳೆದ 18 ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಆದರೆ ಸರ್ಕಾರ ಮಾನವೀಯ ದೃಷ್ಟಿಯಿಂದ ಸ್ಪಂದಿಸುತ್ತಿಲ್ಲ. ಕೂಡಲೆ ಧರಣಿ ನಿರತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಬೇಳೂರು ಬಾಣೆಯಲ್ಲಿ ಸರ್ಕಾರಿ ಭೂಮಿ ಒತ್ತುವರಿಯಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿತ್ತು. ಸರ್ಕಾರ ಕೂಡಲೆ ಜಾಗದ ಸರ್ವೇ ಮಾಡಿಸಿ, ಒತ್ತುವರಿ ತೆರವುಗೊಳಿಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಎಚ್.ಬಿ.ರಾಜಪ್ಪ, ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ) ತಾಲೂಕು ಅಧ್ಯಕ್ಷ ಎ.ಯು.ಸಂತೋಷ್, ಖಜಾಂಚಿ ಶಿವರಾಮ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net