ಮೂರ್ನಾಡಿನಲ್ಲಿ ಹಿಂದೂ ಬಾಲ ಸಂಸ್ಕಾರ ಕೇಂದ್ರದ ಉದ್ಘಾಟನೆ ಸಂದರ್ಭ ಮಕ್ಕಳು ಮತ್ತು ಪಾಲಕರು ಇದ್ದರು.
Published on:
Copied
Follow Us
ಮಡಿಕೇರಿ:ಬಾಲ್ಯದಿಂದಲೇ ಹಿಂದೂ ಸಂಸ್ಕಾರವನ್ನು ಮನವರಿಕೆ ಮಾಡಿಕೊಡುವ ಮತ್ತು ಧರ್ಮ ಬೋಧನೆಯನ್ನು ಸಕ್ರಿಯಗೊಳಿಸುವ ಉದ್ದೇಶದಿಂದ ಮೂರ್ನಾಡಿನಲ್ಲಿ ಹಿಂದೂ ಬಾಲ ಸಂಸ್ಕಾರ ಕೇಂದ್ರ ಆರಂಭವಾಗಿದೆ.
ಮಕರ ಸಂಕ್ರಾಂತಿ ಸಂದರ್ಭದಲ್ಲಿ ಮೂರ್ನಾಡಿನ ಶಿಕ್ಷಕರು ಹಾಗೂ ಅರ್ಚಕರಾದ ಶ್ರೀಹರಿ ಮತ್ತು ಮಮತಾ ಶ್ರೀಹರಿ ಅವರ ನಿವಾಸದ ಪೂಜಾ ಕೇಂದ್ರದಲ್ಲಿ ದೀಪ ಬೆಳಗಿಸಿ ಮಕ್ಕಳು ಮತ್ತು ಪಾಲಕರು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕೇಂದ್ರವನ್ನು ಗುರುವಾರ ಉದ್ಘಾಟಿಸಲಾಯಿತು. ನಂತರ ಮಕ್ಕಳಿಗೆ ಧರ್ಮ ಬೋಧನೆಯನ್ನು ನೀಡಿ ಸಂಸ್ಕಾರ ಪಾಠ ಮಾಡಲಾಯಿತು.
ಶ್ರೀಹರಿ ಮಾತನಾಡಿ, ಹಾದಿ ತಪ್ಪಿ ಖಿನ್ನತೆಗೆ ಒಳಗಾಗುತ್ತಿರುವ ಮತ್ತು ದುಶ್ಚಟಗಳಿಗೆ ಬಲಿಯಾಗುತ್ತಿರುವ ಇಂದಿನ ಮಕ್ಕಳಲ್ಲಿ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ. ಪಾಲಕರ ಒತ್ತಡದ ಜೀವನದ ನಡುವೆ ಮಕ್ಕಳಿಗೆ ಎದುರಾಗುತ್ತಿರುವ ಸಮಸ್ಯೆಗಳನ್ನು ಮನಗಂಡು ಹಾಗೂ ಹಿಂದೂ ಧರ್ಮ ಬೋಧನೆಯನ್ನು ವ್ಯಾಪಕಗೊಳಿಸುವ ಉದ್ದೇಶದಿಂದ ಹಿಂದೂ ಬಾಲ ಸಂಸ್ಕಾರ ಕೇಂದ್ರವನ್ನು ಆರಂಭಿಸಲಾಗಿದೆ. ಮುಂದಿನ ದಿನಗಳಲಿ ವಿವಿಧೆಡೆ ಕೇಂದ್ರ ಆರಂಭಗೊಳ್ಳಲಿದೆ ಎಂದರು.
ಮೊದಲ ದಿನ 26ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ಕೇಂದ್ರದ ಚಟುವಟಿಕೆಯಲ್ಲಿ ತೊಡಗಿಸಿಕೊಂಡರು. ಸಂಕ್ರಾಂತಿ ಪ್ರಯುಕ್ತ ನೆರೆದಿದ್ದವರಿಗೆ ಎಳ್ಳು-ಬೆಲ್ಲ ಮತ್ತು ಸಿಹಿ ಹಂಚಿ ಸಂಭ್ರಮಿಸಲಾಯಿತು.