ಕಂದಕದಲ್ಲಿ ಲಾರಿ ಸಿಲುಕಿ ಸಂಚಾರ ಅಸ್ತವ್ಯಸ್ತ

ತಿತಿಮತಿ-ಮೈಸೂರು ರಾಜ್ಯ ಹೆದ್ದಾರಿ ಬದಿಯಲ್ಲಿದ್ದ ಕಂದಕದಲ್ಲಿ  ಸಿಲುಕಿದ್ದ ಲಾರಿ.
ತಿತಿಮತಿ-ಮೈಸೂರು ರಾಜ್ಯ ಹೆದ್ದಾರಿ ಬದಿಯಲ್ಲಿದ್ದ ಕಂದಕದಲ್ಲಿ ಸಿಲುಕಿದ್ದ ಲಾರಿ.
Published on

ಗೋಣಿಕೊಪ್ಪ:

ತಿತಿಮತಿ-ಮೈಸೂರು ರಾಜ್ಯ ಹೆದ್ದಾರಿ ಬದಿಯಲ್ಲಿದ್ದ ಕಂದಕದಲ್ಲಿ ಲಾರಿ ಸಿಲುಕಿದ್ದರಿಂದ ಸುಮಾರು ಎಂಟು ಗಂಟೆಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಶನಿವಾರ ರಾತ್ರಿ ಸುಮಾರು 10.30ರ ವೇಳೆಗೆ ಮೈಸೂರಿನಿಂದ ಕಡಪಕಲ್ಲು ತುಂಬಿಕೊಂಡು ಕೇರಳಕ್ಕೆ ತೆರಳುತ್ತಿದ್ದ ಲಾರಿಯನ್ನು ತಪಾಸಣೆ ಗೇಟ್‌ನ ಸಿಬ್ಬಂದಿ ತಡೆದು, ಕೇರಳದ ಕಡೆಗೆ ತೆರಳಲು ಅವಕಾಶ ನೀಡದೆ ವಾಪಸ್ ಮೈಸೂರು ಕಡೆಗೆ ತೆರಳುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಅದರಂತೆ ಚಾಲಕ ಲಾರಿ ತಿರುಗಿಸುವ ವೇಳೆ ರಸ್ತೆ ಬದಿಯಲ್ಲಿದ್ದ ಕಂದಕದಲ್ಲಿ ಲಾರಿ ಸಿಲುಕಿಕೊಂಡಿದೆ. ಕೆಲ ಕ್ಷಣಗಳಲ್ಲಿ ಅದೇ ಮಾರ್ಗದಲ್ಲಿ ಬಂದ ಮತ್ತೊಂದು ಲಾರಿ, ಮೊದಲ ಲಾರಿ ಸಿಲುಕಿರುವುದನ್ನು ಗಮನಿಸದೆ ಮುನ್ನುಗ್ಗಿದ್ದರಿಂದ ಕೆಸರಿನಲ್ಲಿ ಸಿಲುಕಿಕೊಂಡಿದೆ. ಇದರಿಂದ ಹೆದ್ದಾರಿಯ ಎರಡೂ ಬದಿಯಲ್ಲಿ ವಾಹನಗಳ ಸಾಲುಗಟ್ಟಿ ನಿಂತಿದ್ದರಿಂದ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು.
ಲಾರಿಗಳು ರಸ್ತೆಯಲ್ಲಿ ಸಿಲುಕಿಕೊಂಡಿದ್ದರಿಂದ ಮೈಸೂರಿನಿಂದ ಕೊಡಗಿಗೆ, ಕೊಡಗಿನಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಪ್ರಯಾಣಿಕರು ಗಂಟೆಗಟ್ಟಲೆ ವಾಹನಗಳಲ್ಲೇ ಕಾಯಬೇಕಾಯಿತು. ಸುಮಾರು ಎಂಟು ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರವಾಸಿಗರು, ಸಾರ್ವಜನಿಕರು ಹಾಗೂ ಸರಕು ಸಾಗಣೆ ವಾಹನಗಳ ಚಾಲಕರು ತೊಂದರೆ ಅನುಭವಿಸಿದರು. ಭಾನುವಾರ ಬೆಳಗ್ಗೆ 6.30ರ ವೇಳೆಗೆ ಕ್ರೇನ್ ಸಹಾಯದಿಂದ ಲಾರಿಗಳನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net